logo
ಕನ್ನಡ ಸುದ್ದಿ  /  ಜೀವನಶೈಲಿ  /  ತಿಂಗಳಾದರೂ ಮನೆಗೆ ತಂದ ಈರುಳ್ಳಿ ಕೆಡದಂತೆ ಶೇಖರಿಸಿಡುವುದು ಹೇಗೆ: ಇಲ್ಲಿದೆ ಟಿಪ್ಸ್

ತಿಂಗಳಾದರೂ ಮನೆಗೆ ತಂದ ಈರುಳ್ಳಿ ಕೆಡದಂತೆ ಶೇಖರಿಸಿಡುವುದು ಹೇಗೆ: ಇಲ್ಲಿದೆ ಟಿಪ್ಸ್

Priyanka Gowda HT Kannada

Dec 20, 2024 01:09 PM IST

google News

ಈರುಳ್ಳಿ ಕೆಡದಂತೆ ಶೇಖರಿಸಿಡಲು ಇಲ್ಲಿದೆ ಟಿಪ್ಸ್

  • ಈರುಳ್ಳಿಯನ್ನು ಬಹುತೇಕ ಮಂದಿ ಪ್ರತಿನಿತ್ಯ ತಮ್ಮ ಅಡುಗೆಗಳಿಗೆ ಬಳಕೆ ಮಾಡುತ್ತಾರೆ. ಪ್ರತಿನಿತ್ಯ ಈರುಳ್ಳಿ ಬಳಸುವುದರಿಂದ ಹೆಚ್ಚಾಗಿ ಈರುಳ್ಳಿ ಬೇಕಾಗುತ್ತದೆ. ಹೀಗಾಗಿ ಬಹುತೇಕರು ಒಂದೇ ಬಾರಿಗೆ ಕೆ.ಜಿಗಟ್ಟಲೆ ಖರೀದಿಸುತ್ತಾರೆ. ಆದರೆ, ಕೆಲವೊಮ್ಮೆ ಇವು ಕೆಡಬಹುದು ಅಥವಾ ಮೊಳಕೆಯೊಡೆಯಬಹುದು. ಈರುಳ್ಳಿಗಳನ್ನು ಕೆಡದಂತೆ ಸಂಗ್ರಹಿಸಿಡಲು ಇಲ್ಲಿದೆ ಟಿಪ್ಸ್.

ಈರುಳ್ಳಿ ಕೆಡದಂತೆ ಶೇಖರಿಸಿಡಲು ಇಲ್ಲಿದೆ ಟಿಪ್ಸ್
ಈರುಳ್ಳಿ ಕೆಡದಂತೆ ಶೇಖರಿಸಿಡಲು ಇಲ್ಲಿದೆ ಟಿಪ್ಸ್ (PC: Freepik)

ಈರುಳ್ಳಿಯು ಹಲವಾರು ಖಾದ್ಯಗಳಿಗೆ ಬಹಳ ಮುಖ್ಯವಾಗಿ ಬಳಸಲಾಗುತ್ತದೆ. ಮಾಂಸಾಹಾರಕ್ಕಂತೂ ಈರುಳ್ಳಿ ಬೇಕೇ ಬೇಕು. ಬಹುತೇಕ ಮಂದಿ ಪ್ರತಿನಿತ್ಯ ಅಡುಗೆಗಳಿಗೆ ಈರುಳ್ಳಿ ಬಳಕೆ ಮಾಡುತ್ತಾರೆ. ಹೀಗಾಗಿ ಬಹುತೇಕರು ಮಾರುಕಟ್ಟೆಯಿಂದ ಈರುಳ್ಳಿ ಖರೀದಿಸುವಾಗ 2 ಕೆ.ಜಿ ಗಿಂತ ಹೆಚ್ಚಾಗಿ ಖರೀದಿಸುತ್ತಾರೆ. ಹಣದ ಉಳಿತಾಯವೂ ಒಂದು ಕಾರಣ. ಪ್ರತಿನಿತ್ಯ ಈರುಳ್ಳಿ ಬಳಸುವುದರಿಂದ ಹೆಚ್ಚಾಗಿ ಈರುಳ್ಳಿ ಬೇಕಾಗುತ್ತದೆ. ಹೀಗಾಗಿ ಒಂದೇ ಬಾರಿಗೆ ಕೆ.ಜಿಗಟ್ಟಲೆ ಖರೀದಿಸುತ್ತಾರೆ. ಆದರೆ, ಮನೆಗೆ ತಂದ ಈರುಳ್ಳಿಯನ್ನು ಸಂಗ್ರಹಿಸಿಡುವುದೇ ದೊಡ್ಡ ಚಿಂತೆಯಾಗಿರುತ್ತದೆ. ಯಾಕೆಂದರೆ ಕೆಲವೊಮ್ಮೆ ಇವು ಕೆಡಬಹುದು ಅಥವಾ ಮೊಳಕೆಯೊಡೆಯಬಹುದು. ಇದರಿಂದ ತಂದಿಟ್ಟ ಹಲವು ಈರುಳ್ಳಿ ವ್ಯರ್ಥವಾಗುತ್ತದೆ. ಈರುಳ್ಳಿಯನ್ನು ಕೆಡದಂತೆ ಹೇಗೆ ಸಂಗ್ರಹಿಸಿಡುವುದು ಅನ್ನೋ ಚಿಂತೆ ನಿಮಗೂ ಇರಬಹುದು. ಹಾಗಿದ್ದರೆ ಇಲ್ಲಿದೆ ಈರುಳ್ಳಿಗಳನ್ನು ಕೆಡದಂತೆ ಸಂಗ್ರಹಿಸಿಡುವ ಟಿಪ್ಸ್.

ಈರುಳ್ಳಿಗಳನ್ನು ಕೆಡದಂತೆ ಸಂಗ್ರಹಿಸಿಡಲು ಇಲ್ಲಿದೆ ಸಲಹೆ

ಉತ್ತಮ ಈರುಳ್ಳಿಯನ್ನು ಆರಿಸಿ: ಈರುಳ್ಳಿ ಕೊಳೆಯದಂತೆ ಉತ್ತಮವಾಗಿ ಸಂಗ್ರಹಿಸಲು, ಖರೀದಿಸುವಾಗ ಉತ್ತಮ ಈರುಳ್ಳಿಯನ್ನು ಆಯ್ಕೆ ಮಾಡಬೇಕು. ಕೆಲವೊಮ್ಮೆ ವ್ಯಾಪಾರಿಗಳು ತಾವೇ ಈರುಳ್ಳಿಯನ್ನು ತೂಕಕ್ಕೆ ಹಾಕಿ ಕೊಟ್ಟುಬಿಡುತ್ತಾರೆ. ಅಥವಾ ಗ್ರಾಹಕರು ಸರಿಯಾಗಿ ನೋಡದೆ ತಮಗೆಷ್ಟು ಬೇಕೋ ಅಷ್ಟು ಈರುಳ್ಳಿಯನ್ನು ತೆಗೆದುಕೊಂಡು ಬರುತ್ತಾರೆ. ಇದರಲ್ಲಿ ಕೆಲವೊಂದು ಈರುಳ್ಳಿ ಹಾಳಾಗಿರಬಹುದು. ಅವುಗಳನ್ನು ಗಮನಿಸದೆ ಇರಬಹುದು. ಹೀಗಾಗಿ ಕೊಳ್ಳುವಾಗ ಸರಿಯಾಗಿ ಆರಿಸುವುದು ಬಹಳ ಮುಖ್ಯ.

ತಂಪಾದ, ಶುಷ್ಕ ಸ್ಥಳದಲ್ಲಿ ಸಂಗ್ರಹಿಸಿ: ಈರುಳ್ಳಿ ಕೊಳೆಯದಂತೆ, ಬೂಸ್ಟ್ ಅಥವಾ ಶಿಲೀಂಧ್ರ, ಮೊಳಕೆಯೊಡೆಯದಂತೆ ಅವುಗಳನ್ನು ತಂಪಾದ, ಶುಷ್ಕ ವಾತಾವರಣದಲ್ಲಿ ಸಂಗ್ರಹಿಸಿಡಬೇಕು. ಅಂದರೆ ಸಾಮಾನ್ಯ ಕೋಣೆಯ ಉಷ್ಣಾಂಶದಲ್ಲಿ ತಂಪಾದ, ಶುಷ್ಕ ಹಾಗೂ ಕತ್ತಲೆ ಕೋಣೆಯಲ್ಲಿ ಈರುಳ್ಳಿಯನ್ನು ಶೇಖರಿಸಿಡುವುದು ಉತ್ತಮ ಮಾರ್ಗ. ಪರಿಸರದಲ್ಲಿನ ತೇವಾಂಶದ ಮೇಲೆ ಈರುಳ್ಳಿಯ ಜೀವಿತಾವಧಿಯ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ತೇವಾಂಶ ಕಡಿಮೆ ಇರುವ ಸ್ಟೋರ್ ರೂಂ ಅಥವಾ ಇತ್ಯಾದಿ ಕಡೆಗಳಲ್ಲಿ ಸಂಗ್ರಹಿಸುವುದು ಉತ್ತಮ ಮಾರ್ಗ. ಗಾಳಿಯಾಡದ ಬುಟ್ಟಿಯಲ್ಲಿ ಈರುಳ್ಳಿಯನ್ನು ಸಂಗ್ರಹಿಸಬಹುದು. ನೇರವಾಗಿ ಸೂರ್ಯನ ಬೆಳಕು ಬೀಳದಿರುವ ಕಡೆಗಳಲ್ಲಿ ಇರಿಸಿ. ಸೂರ್ಯನ ಬೆಳಕು ಈರುಳ್ಳಿ ಮೊಳಕೆಯೊಡೆಯಲು ಮತ್ತು ವೇಗವಾಗಿ ಹಾಳಾಗಲು ಕಾರಣವಾಗಬಹುದು. ಹೀಗಾಗಿ ತಂಪಾದ, ಶುಷ್ಕ ಹಾಗೂ ಕತ್ತಲೆ ಕೋಣೆಯಲ್ಲಿ ನೇರವಾಗಿ ಸೂರ್ಯನ ಬೆಳಕಿನಿಂದ ದೂರವಿರಿಸಿ.

ಈರುಳ್ಳಿಯನ್ನು ಚೆನ್ನಾಗಿ ಒಣಗಿಸಿ: ಮಾರುಕಟ್ಟೆಯಿಂದ ಈರುಳ್ಳಿ ಖರೀದಿಸಿ ತಂದ ನಂತರ ಅವುಗಳನ್ನು ಚೆನ್ನಾಗಿ ಒಣಗಿಸಿ. ಚೆನ್ನಾಗಿ ಗಾಳಿ ಇರುವ ಪ್ರದೇಶದಲ್ಲಿ ಕೆಲವು ಗಂಟೆಗಳ ಕಾಲ ಗಾಳಿಯಲ್ಲಿ ಒಣಗಿಸಲು ಬಿಡಿ. ಒಂದು ವೇಳೆ ಈರುಳ್ಳಿ ಒದ್ದೆಯಾಗಿದ್ದರೆ ಅವುಗಳನ್ನು ಮೊದಲಿಗೆ ಹತ್ತಿ ಬಟ್ಟೆಗೆ ಹಾಕಿ ಒಣಗಿಸಿ.

ಪ್ಲಾಸ್ಟಿಕ್ ಚೀಲದಲ್ಲಿ ಸಂಗ್ರಹಿಸದಿರಿ: ಯಾವುದೇ ಕಾರಣಕ್ಕೂ ಈರುಳ್ಳಿಯನ್ನು ಪ್ಲಾಸ್ಟಿಕ್ ಚೀಲದಲ್ಲಿ ಸಂಗ್ರಹಿಸದಿರಿ. ಇದರ ಬದಲು ಸರಿಯಾದ ಶೇಖರಣಾ ಪಾತ್ರೆಗಳನ್ನು ಬಳಸಿ. ಮೆಷ್ ಅಥವಾ ಬುಟ್ಟಿಗಳಲ್ಲಿ ಸಂಗ್ರಹಿಸಬಹುದು. ಇವುಗಳನ್ನು ಬಳಕೆ ಮಾಡುವುದರಿಂದ ತೇವಾಂಶ ಹಾಗೂ ಕೊಳೆಯುವಿಕೆಯನ್ನು ತಡೆಯುತ್ತದೆ. ಅಲ್ಲದೆ, ಇವುಗಳನ್ನು ತೆರೆದ ರಟ್ಟಿನ ಪೆಟ್ಟಿಗೆಗಳಲ್ಲಿ ಸಂಗ್ರಹಿಸಬಹುದು.

ಈರುಳ್ಳಿ ಸಂಗ್ರಹಿಸುವಾಗ ಹಣ್ಣು, ತರಕಾರಿಯನ್ನು ಒಟ್ಟಿಗೆ ಇಡಬಾರದು: ಈರುಳ್ಳಿ ಶೇಖರಿಸಿಡುವಾಗ ಮುಖ್ಯವಾಗಿ ನೆನಪಿಡಬೇಕಾದ ವಿಚಾರವೆಂದರೆ ಯಾವುದೇ ಹಣ್ಣು, ತರಕಾರಿಗಳೊಂದಿಗೆ ಅವುಗಳನ್ನು ಸಂಗ್ರಹಿಸಿಡಬಾರದು. ಈರುಳ್ಳಿಯನ್ನು ಪ್ರತ್ಯೇಕವಾಗಿ ಸಂಗ್ರಹಿಸಬೇಕು. ಯಾಕೆಂದರೆ ಕೆಲವು ಹಣ್ಣುಗಳು ಮತ್ತು ತರಕಾರಿಗಳು ತೇವಾಂಶ ಮತ್ತು ಅನಿಲವನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಈರುಳ್ಳಿ ವೇಗವಾಗಿ ಹಾಳಾಗುವ ಸಾಧ್ಯತೆ ಹೆಚ್ಚು. ಅದರಲ್ಲೂ ವಿಶೇಷವಾಗಿ ಆಲೂಗಡ್ಡೆಯಿಂದ ದೂರವಿರಿಸಿ. ಏಕೆಂದರೆ ಅವು ಈ ಪರಿಣಾಮಕ್ಕೆ ಹೆಚ್ಚು ಒಳಗಾಗುತ್ತವೆ. ಹೀಗಾಗಿ ಈರುಳ್ಳಿಯನ್ನು ಕೆಡದಂತೆ ಸಂರಕ್ಷಿಸಲು ಬೇರೆ-ಬೇರೆಯಾಗಿ ಸಂಗ್ರಹಿಸಿ.

ಹಾಳಾದ ಈರುಳ್ಳಿಯನ್ನು ಎಸೆಯಿರಿ: ಸಂಗ್ರಹಿಸಿಟ್ಟ ಈರುಳ್ಳಿಯನ್ನು ನಿಯಮಿತವಾಗಿ ಪರಿಶೀಲಿಸುತ್ತಿರಬೇಕು. ಯಾವುದಾದರೂ ಒಂದು ಈರುಳ್ಳಿ ಹಾಳಾಗಿದ್ದರೆ, ಅದು ಸಂಗ್ರಹಿಸಿಟ್ಟ ಇತರೆ ಈರುಳ್ಳಿಗಳ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಈರುಳ್ಳಿ ಕೆಟ್ಟಿದೆಯೇ ಎಂಬುದನ್ನು ಪರಿಶೀಲಿಸುತ್ತಿರುವುದು ಅತ್ಯಗತ್ಯ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ