Bangalore Millets Mela: ಬೆಂಗಳೂರಲ್ಲಿ ಜ 5 ರಿಂದ 3 ದಿನ ಸಿರಿಧಾನ್ಯ ವಾಣಿಜ್ಯ ಅಂತರಾಷ್ಟ್ರೀಯ ಮೇಳ:ಬಿಡುಗಡೆಯಾಯ್ತು ಸಿರಿಧಾನ್ಯ ಅರಿವು ಗೀತೆ
Jan 03, 2024 07:30 AM IST
ಮಂಡ್ಯಲ್ಲಿ ಸಿರಿಧಾನ್ಯ ಗೀತೆಯನ್ನು ಬಿಡುಗಡೆ ಮಾಡಲಾಯಿತು.
- Millets Meļa,song ಕರ್ನಾಟಕದಲ್ಲಿ ಸಿರಿಧಾನ್ಯ ಪ್ರೋತ್ಸಾಹಿಸಲು ಬೆಂಗಳೂರಿನಲ್ಲಿ ಮೂರು ದಿನ ಸಿರಿಧಾನ್ಯ ಅಂತರಾಷ್ಟ್ರೀಯ ವಾಣಿಜ್ಯ ಮೇಳ ನಡೆಯಲಿದೆ.
ಮಂಡ್ಯ: ಕರ್ನಾಟಕದಲ್ಲಿ ಸಿರಿಧಾನ್ಯ ಪ್ರೋತ್ಸಾಹಿಸಲು ಹಲವಾರು ಕಡೆಗಳಲ್ಲಿ ಮೇಳ, ಕಾರ್ಯಕ್ರಮಗಳು ನಡೆಯುತ್ತಿದ್ದು, ಬೆಂಗಳೂರಿನಲ್ಲಿಯೂ ಜನವರಿ 5 ರಿಂದ 7 ರವರೆಗೆ ಅಂತರಾಷ್ಟ್ರೀಯ ಸಾವಯವ ಸಿರಿಧಾನ್ಯ ವಾಣಿಜ್ಯ ಮೇಳ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಆಯೋಜನೆಗೊಂಡಿದೆ.
ಜ.5ರಂದು ಬೆಳಗ್ಗೆ 11 ಗಂಟೆಗೆ ಮೇಳ ಉದ್ಘಾಟನೆಯಾಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಕೇಂದ್ರ, ರಾಜ್ಯ ಸಚಿವರು ಪಾಲ್ಗೊಳ್ಳಲಿದ್ದಾರೆ.
ಮೇಳದಲ್ಲಿ ಏನೇನಿರಲಿದೆ
ಕರ್ನಾಟಕ ಕೃಷಿ ಇಲಾಖೆಯು ಹಲವಾರು ಇಲಾಖೆಗಳ ಸಹಯೋಗದಲ್ಲಿ ಅಂತರಾಷ್ಟ್ರೀಯ ಸಿರಿಧಾನ್ಯ ಸಾವಯವ ಮೇಳವನ್ನು ಆಯೋಜಿಸಿದ್ದು ದೇಶ ಹಾಗೂ ಹೊರ ದೇಶದಿಂದಲೂ ಸಾವಯವ ಬೆಳೆಗಾರರು, ಮಾರಾಟಗಾರರು, ಸಿರಿಧಾನ್ಯಕ್ಕೆ ಸಂಬಂಧಿಸಿದ ಸಂಸ್ಥೆಗಳು ಭಾಗಿಯಾಗಲಿವೆ. ಜರ್ಮನ್, ಸೌದಿ ಅರೇಬಿಯಾ, ಒಮನ್, ಆಸ್ಟ್ರೇಲಿಯಾ ಸೇರಿದಂತೆ ಏಳೆಂಟು ರಾಷ್ಟ್ರಗಳು ಮೇಳದಲ್ಲಿ ಪಾಲ್ಗೊಳ್ಳುತ್ತಿವೆ. ಅಲ್ಲದೆ ಆಂಧ್ರಪ್ರದೇಶ, ಕೇರಳ, ಒಡಿಶಾ, ಮೇಘಾಲಯ, ಉತ್ತರಪ್ರದೇಶ ಮೊದಲಾದ ರಾಜ್ಯಗಳು ಭಾಗವಹಿಸಲಿವೆ
ಕರ್ನಾಟಕದ ಪ್ರತೀ ಜಿಲ್ಲೆಯಲ್ಲೂ ಸಿರಿಧಾನ್ಯ ಅಡುಗೆ ಹಾಗೂ ಊಟದ ಸ್ಪರ್ಧೆಗಳನ್ನು ನಡೆಸಲಾಗಿದೆ. ಬಗೆಬಗೆಯ ಅಡುಗೆಗಳನ್ನು ಮಾಡಿದವರು ಬೆಂಗಳೂರಿನಲ್ಲಿ ನಡೆಯುವ ಅಂತರಾಷ್ಟ್ರೀಯ ಮೇಳದಲ್ಲೂ ಭಾಗಿಯಾಗಲಿದ್ದಾರೆ. ಭಾರೀ ಬಹುಮಾನಗಳನ್ನು ಸಿರಿಧಾನ್ಯ ಅಡುಗೆ ತಯಾರಿಸಿ ಪಡೆಯಲಿದ್ದಾರೆ. ಮೇಳದಲ್ಲಿ ಹತ್ತು ವಿವಿಧ ಸಿರಿಧಾನ್ಯ ಹೋಟೆಲ್‍ಗಳು ಇರಲಿದ್ದು, ವೈವಿಧ್ಯ ಮತ್ತು ರುಚಿಕರವಾದ ಸಿರಿಧಾನ್ಯ ಊಟ ಮತ್ತು ಉಪಹಾರ ಸವಿಯುವ ಅವಕಾಶವಿದೆ
ಸಿರಿಧಾನ್ಯವನ್ನು ಬೆಳೆಯುವುದಷ್ಟೇ ಅಲ್ಲ. ಮೌಲ್ಯವರ್ಧನೆ ಮಾಡಿ ರಫ್ತು ಮಾಡಬೇಕು. ಸಿರಿಧಾನ್ಯ ಉತ್ಪಾದನೆಯಲ್ಲಿ ರಾಜ್ಯ 4ನೇ ಸ್ಥಾನದಲ್ಲಿದ್ದು, ಮೊದಲ ಸ್ಥಾನಕ್ಕೆ ಬರಬೇಕೆಂಬುದು ನಮ್ಮ ಉದ್ದೇಶ ಎಂದು ಹೇಳಿದರು. ಕಳೆದ 2017ರಿಂದಲೂ ಸಿರಿಧಾನ್ಯ ಮತ್ತು ಸಾವಯವ ಮೇಳವನ್ನು ಆಯೋಜಿಸಲಾಗುತ್ತಿದೆ. ಈ ಬಾರಿಯ ಮೇಳಕ್ಕೆ 2 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ. 300 ಮಳಿಗೆಗಳನ್ನು ತೆರೆಯಲಾಗುತ್ತದೆ.
ಮೂರು ದಿನಗಳ ಕಾಲ ರಾಜ್ಯ, ಅಂತಾರಾಷ್ಟ್ರೀಯ ಮಟ್ಟದ ಚರ್ಚಾ ಗೋಷ್ಟಿಗಳು ನಡೆಯಲಿವೆ. ಸಿರಿಧಾನ್ಯಗಳ ಬಗ್ಗೆ ವಿಸ್ತೃತವಾಗಿ ತಿಳಿದುಕೊಳ್ಳುವ ಅವಕಾಶ ದೊರೆಯಲಿದೆ. ಸಾವಯವ ಸಿರಿಧಾನ್ಯಗಳು ಬೆಳೆಯುವುದರ ಜೊತೆಗೆ ಅವುಗಳ ಮೌಲ್ಯ ವರ್ಧನೆ ಮಾಡುವುದು, ಆಹಾರವಾಗಿ ಬಳಕೆ ಮಾಡುವುದು ಮೊದಲಾದ ವಿಚಾರಗಳ ಬಗ್ಗೆ ಮೇಳದಲ್ಲಿ ಬೆಳಕು ಚೆಲ್ಲಲಾಗುತ್ತದೆ 35ಕ್ಕೂ ಹೆಚ್ಚು ಪ್ರಖ್ಯಾತ ಉಪನ್ಯಾಸಕರು ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಾಹಿತಿ ನೀಡಲಿದ್ದಾರೆ. ರೈತರಿಗೂ ಕೃಷಿ ವಿವಿಯಿಂದ ಕಾರ್ಯಗಾರ ಆಯೋಜಿಸಲಾಗುತ್ತಿದೆ. ಸಾವಯವ ಮತ್ತು ಸಿರಿಧಾನ್ಯಗಳ ಉತ್ಪನ್ನಗಳಿಗೆ ಮಾರುಕಟ್ಟೆ ಸಂಪರ್ಕ ಕಲ್ಪಿಸಿಕೊಡಲು ಮೇಳದಲ್ಲಿ ಉತ್ಪಾದಕರ, ಮಾರುಕಟ್ಟೆದಾರರ ಸಮಾಲೋಚನೆ ಸಭೆಗಳನ್ನು ಏರ್ಪಡಿಸಲಾಗುತ್ತದೆ.
ಸಿರಿಧಾನ್ಯ ಗೀತೆ
ಇದರ ಭಾಗವಾಗಿಯೇ ಖ್ಯಾತ ಗಾಯಕ ವಾಸುಕಿ ವೈಭವ ಅವರು ಹಾಡಿರುವ ಸಿರಿಧಾನ್ಯ ಅರಿವು ಗೀತೆಯನ್ನು ರೂಪಿಸಲಾಗಿದ್ದು, ಮಂಡ್ಯದಲ್ಲಿ ಮಂಗಳವಾರ ಬಿಡುಗಡೆ ಮಾಡಲಾಗಿದೆ. ಹಾಡುಗಳನ್ನು ಆಲಿಸಿದ ಜನಪ್ರತಿನಿಧಿಗಳು, ರೈತರು ಖುಷಿಗೊಂಡರು.
ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಮಂಡ್ಯದಲ್ಲಿ ಸಿರಿಧಾನ್ಯ ಗೀತೆ ಲೋಕಾರ್ಪಣೆಗೊಳಿಸಿದರು.
ಸಾರ್ವಜನಿಕರು ಹೆಚ್ಚು ಸಾವಯವ ಹಾಗೂ ಸಿರಿಧಾನ್ಯ ಆಹಾರ ಹೆಚ್ಚು ಬಳಸಬೇಕು ಎಂಬ ಉದ್ದೇಶದಿಂದ ಸಿರಿಧಾನ್ಯ ಬೆಳೆಯಲು ರೈತರನ್ನು ಪ್ರೋತ್ಸಾಹಿಸಲಾಗುತ್ತಿದೆ. ಸಾವಯವ ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರಿಗೆ ಹತ್ತು ಸಾವಿರ ಸಹಾಯಧನ ನೀಡಲಾಗುತ್ತಿದೆ. ಸಿರಿಧಾನ್ಯದ ಬೇಡಿಕೆ ಹೆಚ್ಚಿಸಲು ಹೊರದೇಶಕ್ಕೆ ರಫ್ತು ಮಾಡಲು ಚಿಂತಿಸಲಾಗುತ್ತಿದೆ. ಸಿರಿಧಾನ್ಯ ಪ್ರೋತ್ಸಾಹಿಸಲು ಅಂತರಾಷ್ಟ್ರೀಯ ವಾಣಿಜ್ಯ ಮೇಳವೂ ನಡೆಯುತ್ತಿದೆ ಎನ್ನುವುದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರ ವಿವರಣೆ.
ಕೃಷಿ ಇಲಾಖೆ ವತಿಯಿಂದ ಸಿರಿಧಾನ್ಯ ಪ್ರೋತ್ಸಾಹಿಸಲು ಹಲವಾರು ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಸಿರಿಧಾನ್ಯ ಇತ್ತೀಚೆಗೆ ಸಾರ್ವಜನಿಕರಲ್ಲಿ ಉಂಟಾಗುವ ಖಾಯಿಲೆಗಳಿಗೆ ರಾಮಬಾಣ. ರೈತರಿಗೂ ಸಿರಿಧಾನ್ಯ ಬೆಳೆಯಲು ಹೆಚ್ಚು ನೀರಿನ ಅವಶ್ಯಕತೆ ಇಲ್ಲ. ರೋಗ ನಿರೋಧಕ ಶಕ್ತಿ ಹೆಚ್ಚಿದ್ದು, ಇದಕ್ಕೆ ಹೆಚ್ಚಿನ ಕೀಟನಾಶಕ, ರಾಸಾಯನಿಕ ಸಿಂಪರಣೆ ಮಾಡುವುದಿಲ್ಲ. ಆಗಾಗಿ ಸಿರಿಧಾನ್ಯ ರೈತ ಸ್ಬೇಹಿ ಬೆಳೆ ಎಂದರು
ಕಾರ್ಯಕ್ರಮದಲ್ಲಿ ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ಕೆ.ಎಂ.ಉದಯ್, ರವಿಕುಮಾರ್ ಪಿ, ಹೆಚ್.ಟಿ.ಮಂಜು,ದಿನೇಶ್ ಗೂಳಿಗೌಡ, ಮರಿತಿಬ್ಬೇಗೌಡ, ಕೃಷಿ ಇಲಾಖೆ ಆಯುಕ್ತ ವೈ.ಎಸ್.ಪಾಟೀಲ್, ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್, ಜಂಟಿ ಕೃಷಿ ನಿರ್ದೇಶಕ ಅಶೋಕ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
=========