Travel: ಈ ಪ್ರವಾಸಿ ತಾಣಗಳು ಅಷ್ಟೇನೂ ಫೇಮಸ್ ಅಲ್ಲದಿದ್ರೂ ಇವುಗಳ ಸೌಂದರ್ಯಕ್ಕೆ ನೀವು ಮಾರು ಹೋಗೋದು ಪಕ್ಕಾ
Dec 28, 2023 06:19 AM IST
ಭಾರತದ ಸುಂದರ ಪ್ರವಾಸಿ ತಾಣಗಳು
Travel: ಶಿಮ್ಲಾ, ಮನಾಲಿಯಂತಹ ಪ್ರವಾಸಿ ತಾಣಗಳ ಬಗ್ಗೆ ಕೇಳಿದ್ದೇವೆ. ಈಗಾಗಲೇ ಅನೇಕರು ಈ ಸ್ಥಳಕ್ಕೆ ಪ್ರವಾಸ ಕೂಡ ಮಾಡಿದ್ದಾರೆ. ಪ್ರತಿ ಬಾರಿ ಒಂದೇ ಸ್ಥಳಕ್ಕೆ ಪ್ರವಾಸಕ್ಕೆ ತೆರಳುವ ಬದಲು ಹೆಚ್ಚು ಪ್ರಸಿದ್ಧಿಯನ್ನು ಪಡೆಯದೇ ಇದ್ದರೂ ತನ್ನದೇ ಆದ ನೈಸರ್ಗಿಕ ಸೌಂದರ್ಯವನ್ನು ಹೊಂದಿರುವ ಈ ಐದು ಸ್ಥಳಗಳಿಗೆ ನೀವು ಟೂರ್ಗೆ ತೆರಳಬಹುದಾಗಿದೆ.
Travel: ಪ್ರವಾಸಿ ಪ್ರಿಯರು ತಮ್ಮ ಪ್ರತಿ ಪಯಣದಲ್ಲೂ ಹೊಸ ಹೊಸ ಸ್ಥಳಗಳನ್ನು ಅನ್ವೇಷಿಸೋಕೆ ಇಷ್ಟಪಡುತ್ತಾರೆ. ಆದರೆ ಕೆಲವೊಂದು ಸ್ಥಳಗಳು ಎಷ್ಟು ಇಷ್ಟವಾಗಿಬಿಡುತ್ತವೆ ಎಂದರೆ ಮತ್ತೆ ಮತ್ತೆ ಮತ್ತೆ ಅಲ್ಲಿಗೆ ಹೋಗಬೇಕು ಎಂದೆನಿಸುತ್ತೆ. ಪ್ರತಿ ವರ್ಷ ನೀವು ಇಲ್ಲಿಗೆ ಹೋದರೂ ನಿಮಗೆ ಬೇಸರ ಎನಿಸುವುದಿಲ್ಲ. ಬೇಸಿಗೆ ಕಾಲ ಬಂತು ಎಂದಾಕ್ಷಣ ಋಷಿಕೇಶ, ಶಿಮ್ಲಾ ನೆನಪಾದರೆ ಚಳಿಗಾದಲ್ಲಿ ಜೈಪುರ ನೆನಪಾಗುತ್ತದೆ.
ಭಾರತವು ವೈವಿಧ್ಯಮಯ ಪ್ರದೇಶಗಳನ್ನು ಒಳಗೊಂಡಿರುವ ದೇಶ. ಇಲ್ಲಿ ನಿಮಗೆ ಅಸಂಖ್ಯಾತ ಪ್ರವಾಸಿ ಸ್ಥಳಗಳು ನೋಡೋಕೆ ಸಿಗುತ್ತವೆ. ಆದರೆ ಕೆಲವೊಂದು ಸ್ಥಳಗಳು ಸುಂದರವಾಗಿದ್ದರೂ ಹೆಚ್ಚು ಪ್ರಸಿದ್ಧಿಯಾಗಿರುವುದಿಲ್ಲ. ಹೀಗಾಗಿ ಹೋಗಿರುವ ಸ್ಥಳಕ್ಕೆ ಮತ್ತೆ ಮತ್ತೆ ಭೇಟಿ ನೀಡುವ ಬದಲು ನೀವು ಇನ್ಮುಂದೆ ನಿಮ್ಮ ಪ್ರವಾಸಿ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಈ ಪ್ರದೇಶಗಳ ಕಡೆಗೂ ಗಮನ ನೀಡಬಹುದಾಗಿದೆ.
ತವಾಂಗ್
ಭಾರತ ಈಶಾನ್ಯ ಭಾಗದಲ್ಲಿ ಬರುವ ಈ ಸ್ಥಳವು ಪೂರ್ವ ಹಿಮಾಲಯದಿಂದ ಸುತ್ತುವರಿದುಕೊಂಡಿರುವ ಒಂದು ಅತ್ಯಾಕರ್ಷಣ ಪಟ್ಟಣ ಎನಿಸಿದೆ. ಇಲ್ಲಿನ ನೈಸರ್ಗಿಕ ಸೌಂದರ್ಯವನ್ನು ಕಣ್ತುಂಬಿಕೊಂಡವರೇ ಪುಣ್ಯವಂತರು. ಐತಿಹಾಸಿಕವಾದ ಬೌದ್ಧ ಮಠಗಳಿವೆ. ಹಿಮದಿಂದ ಆವೃತವಾದ ಶಿಖರಗಳು ಸಿಗುತ್ತವೆ. ಅಲ್ಲದೇ ತವಾಂಗ್ನಲ್ಲಿ ನಿಮಗೆ ಭಾರತದ ಅತೀ ದೊಡ್ಡ ಬೌದ್ಧ ಮಠ ಕೂಡ ನೋಡಲು ಸಿಗಲಿದೆ.
ಮುನ್ಸಿಯಾರಿ
ಉತ್ತರಾಖಂಡ್ನ ಪಿಥೋರಗಢ ಜಿಲ್ಲೆಯಲ್ಲಿರುವ ಮುನ್ಸಿಯಾರಿ ಅತೀ ಸಣ್ಣ ಪಟ್ಟಣ. ಪ್ರಕೃತಿ ಪ್ರಿಯರ ಪಾಲಿಗೆ ಇದೊಂದು ಸ್ವರ್ಗ ಎಂದು ಹೇಳಿದರೂ ಸಹ ತಪ್ಪಾಗುವುದಿಲ್ಲ. ಇಲ್ಲಿ ನಿಮಗೆ ಹಿಮದಿಂದ ಆವೃತವಾದ ಶಿಖರಗಳು, ಮನೋಹರವಾದ ಜಲಪಾತಗಳು ಹಾಗೂ ಅತ್ಯಧ್ಭುತ ಹಿಮನದಿಗಳನ್ನು ಕಾಣಬಹುದಾಗಿದೆ. ಹಿಮಾಲಯದ ಅತೀ ದೊಡ್ಡ ಹಿಮನದಿಗಳ ಪೈಕಿ ಒಂದಾದ ಮಿಲಾಮ್ ಗ್ಲೇಸಿಯರ್ ಕೂಡ ಇದೇ ಪಟ್ಟಣದಲ್ಲಿ ಹಾದು ಹೋಗುತ್ತದೆ.
ಝನ್ಸ್ಕಾರ್ ಕಣಿವೆ
ಲಡಾಖ್ನಲ್ಲಿರುವ ಈ ಕಣಿವೆಯು ನೀಲಿ ನದಿಗಳಿಗೆ ಹೆಚ್ಚು ಹೆಸರುವಾಸಿಯಾಗಿದೆ. ಇಲ್ಲಿನ ಕಡಿದಾದ ಕಣಿವೆಗಳನ್ನು ನೋಡುವುದೇ ಒಂದು ಅಂದ. ರಿವರ್ ರಾಫ್ಟಿಂಗ್, ಟ್ರೆಕ್ಕಿಂಗ್ ಹಾಗೂ ಕ್ಯಾಂಪಿಂಗ್ನಂತಹ ರೋಮಾಂಚಕ ಚಟುವಟಿಕೆಗಳನ್ನು ನೀವು ಎಂಜಾಯ್ ಮಾಡಬಹುದಾಗಿದೆ.
ಸಂದಕ್ಪು
ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯಲ್ಲಿರುವ ಅತ್ಯಂತ ಸುಂದರ ಸ್ಥಳ ಇದಾಗಿದೆ. ಇಲ್ಲಿ ನಿಮಗೆ ಪಶ್ಚಿಮ ಬಂಗಾಳದ ಅತೀ ಎತ್ತರದ ಶಿಖರ ಕೂಡ ಕಾಣಲು ಸಿಗಲಿದೆ. ನೀವು ಚಾರಣಗಳನ್ನು ಇಷ್ಟಪಡುವವರಾಗಿದ್ದರೆ ಈ ಸ್ಥಳಕ್ಕೆ ಪ್ರವಾಸಕ್ಕೆ ತೆರಳಬಹುದಾಗಿದೆ. ಹಚ್ಚ ಹಸಿರಿನ ಕಾಡುಗಳು ಹಾಗೂ ಬಣ್ಣ ಬಣ್ಣದ ರೋಡೋಡೆಂಡ್ರಾನ್ ಹೂವುಗಳು ನಿಮಗೆ ಉತ್ತಮ ಸ್ವಾಗತ ನೀಡೋದಂತೂ ಪಕ್ಕಾ
ನುಬ್ರಾ ಕಣಿವೆ
ಲಡಾಖ್ನಲ್ಲಿರುವ ಈ ಪ್ರದೇಶ ಹಚ್ಚ ಹಸಿರಿನ ಕಣಿವೆಗಳು ಹಾಗೂ ಮರಳು ದಿಬ್ಬಗಳನ್ನು ಹೊಂದಿದೆ. ನುಬ್ರಾ ಕಣಿವೆಯಲ್ಲಿ ನಿಮಗೆ ಅತ್ಯಂತ ಪುರಾತನ ಹಾಗೂ ಭವ್ಯವಾದ ಡಿಸ್ಕಿತ್ ಮಠ ಕೂಡ ಕಾಣಲು ಸಿಗಲಿದೆ. ಈ ಮಠದ ವಾಸ್ತು ಶಿಲ್ಪವು ನಿಮ್ಮನ್ನು ಮಂತ್ರಮುಗ್ಧಗೊಳಿಸಲಿದೆ.
ಈ ಸುಂದರ ಪ್ರದೇಶಗಳಿಗೆ ಒಮ್ಮೆ ನಿಮ್ಮವರೊಂದಿಗೆ ಹೋಗಿ ಬನ್ನಿ.