National Farmers Day: ಡಿ. 23ರಂದೇ ರಾಷ್ಟ್ರೀಯ ರೈತರ ದಿನ ಆಚರಿಸುವ ಉದ್ದೇಶವೇನು; ಈ ದಿನದ ಇತಿಹಾಸ, ಮಹತ್ವ ತಿಳಿಯಿರಿ
Dec 23, 2024 10:25 AM IST
ರಾಷ್ಟ್ರೀಯ ರೈತರ ದಿನ
- ನಮ್ಮ ದೇಶದ ಬೆನ್ನೆಲುಬಾಗಿರುವ ರೈತರನ್ನು ಗುರುತಿಸಿ, ಗೌರವಿಸುವ ಉದ್ದೇಶದಿಂದ ಪ್ರತಿವರ್ಷ ಡಿಸೆಂಬರ್ 23ರಂದು ರಾಷ್ಟ್ರೀಯ ರೈತರ ದಿನವನ್ನು ಆಚರಿಸಲಾಗುತ್ತದೆ. ದೇಶದ ಅಭಿವೃದ್ಧಿಗಾಗಿ ಅವಿರತವಾಗಿ ಶ್ರಮಿಸುವವರಲ್ಲಿ ರೈತರ ಪಾತ್ರವು ದೊಡ್ಡದು. ಈ ದಿನದ ಇತಿಹಾಸ, ಮಹತ್ವ, ಡಿ.23ರಂದೇ ರಾಷ್ಟ್ರೀಯ ರೈತರ ದಿನ ಆಚರಿಸುವ ಉದ್ದೇಶದ ಕುರಿತ ಸಮಗ್ರ ಮಾಹಿತಿ ಇಲ್ಲಿದೆ.
ಭಾರತವು ಕೃಷಿ ಪ್ರಧಾನ ದೇಶ. ನಮ್ಮ ದೇಶದಲ್ಲಿ ಕೃಷಿಗೆ ವಿಶೇಷ ಪ್ರಾಧಾನ್ಯವಿದೆ. ಭಾರತವು ರೈತರನ್ನು ದೇಶದ ಬೆನ್ನೆಲುಬು ಎಂದು ಕರೆಯುತ್ತದೆ. ದೇಶದ ಅಭಿವೃದ್ಧಿಯಲ್ಲಿ ರೈತರ ಪಾಲು ಮಹತ್ತರವಾದದ್ದು. ದೇಶದ ಏಳಿಗೆಗಾಗಿ ನಿರಂತರವಾಗಿ, ಅವಿರತವಾಗಿರುವ ಶ್ರಮಿಸುವ ರೈತರನ್ನು ಗೌರವಿಸಿ, ಆಧರಿಸುವ ಸಲುವಾಗಿ ಒಂದು ದಿನವನ್ನು ಆಚರಿಸಲಾಗುತ್ತದೆ.
ಭಾರತದಲ್ಲಿ ಪ್ರತಿವರ್ಷ ಡಿಸೆಂಬರ್ 23ರಂದು ರಾಷ್ಟ್ರೀಯ ರೈತರ ದಿನ ಎಂದು ಆಚರಿಸಲಾಗುತ್ತದೆ. ಈ ದಿನ ರೈತರನ್ನು ಗೌರವಿಸುವ, ಆದರಿಸುವ, ರೈತರಿಗೆ ಸಂಬಂಧಪಟ್ಟ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ದಿನವು ರೈತ ಸಮುದಾಯವನ್ನು ಉನ್ನತೀಕರಿಸುವ ಕೃಷಿ ಸುಧಾರಣೆಗಳು ಮತ್ತು ನೀತಿಗಳನ್ನು ಪ್ರತಿಪಾದಿಸಿದ ಮಾಜಿ ಪ್ರಧಾನಿ ಮತ್ತು ಪ್ರಮುಖ ರೈತ ನಾಯಕ ಚೌಧರಿ ಚರಣ್ ಸಿಂಗ್ ಅವರ ಜನ್ಮ ವಾರ್ಷಿಕೋತ್ಸವವನ್ನು ಸ್ಮರಿಸುತ್ತದೆ. ಚರಣ್ ಸಿಂಗ್ ಅವರು ಭಾರತದ 5ನೇ ಪ್ರಧಾನಮಂತ್ರಿಯಾಗಿದ್ದರು. ರಾಷ್ಟ್ರೀಯ ರೈತರ ದಿನವನ್ನು ಕಿಸಾನ್ ದಿವಸ್ ಎಂದೂ ಕೂಡ ಕರೆಯಲಾಗುತ್ತದೆ.
ರಾಷ್ಟ್ರೀಯ ರೈತರ ದಿನದ ಇತಿಹಾಸ
1979 ರಿಂದ 1980ರವರೆಗೆ ಭಾರತದ ಪ್ರಧಾನಿಯಾಗಿದ್ದ, ರೈತರ ಸುಧಾರಣೆಗಳಿಗೆ ಹಲವು ನೀತಿಗಳನ್ನು ಜಾರಿಗೊಳಿಸಿದ್ದ ಚೌಧರಿ ಚರಣ್ ಸಿಂಗ್ ಅವರ ಜೀವನ ಮತ್ತು ಸಾಧನೆಗಳನ್ನು ಗೌರವಿಸಲು ಕಿಸಾನ್ ದಿವಸ್ ಅನ್ನು ಸ್ಥಾಪಿಸಲಾಯಿತು. ಅವರ ಅಧಿಕಾರಾವಧಿಯಲ್ಲಿ ಅವರು ಭೂ ಸುಧಾರಣೆಗಳು ಮತ್ತು ಕೃಷಿಯನ್ನು ಉತ್ತೇಜಿಸುವ ಉಪಕ್ರಮಗಳು ಸೇರಿದಂತೆ ರೈತರ ಜೀವನವನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ನೀತಿಗಳಿಗೆ ಆದ್ಯತೆ ನೀಡಿದರು. ರೈತರ ಸಮುದಾಯದ ಕಲ್ಯಾಣಕ್ಕಾಗಿ ಶ್ರಮಿಸಿದ ಆ ಮಹಾನ್ ವ್ಯಕ್ತಿಯ ಜನ್ಮದಿನದ ಹಿನ್ನೆಲೆಯಲ್ಲಿ ಡಿಸೆಂಬರ್ 23ರನ್ನು ರಾಷ್ಟ್ರೀಯ ರೈತರ ದಿನ ಎಂದು ಆಚರಿಸಲಾಗುತ್ತದೆ.
ರಾಷ್ಟ್ರೀಯ ರೈತರ ದಿನದ ಮಹತ್ವ
ರಾಷ್ಟ್ರೀಯ ರೈತರ ದಿನವು ಭಾರತದ ಆರ್ಥಿಕತೆ, ಗ್ರಾಮೀಣ ಅಭಿವೃದ್ಧಿ ಮತ್ತು ಆಹಾರ ಭದ್ರತೆಯನ್ನು ಉಳಿಸಿಕೊಳ್ಳುವಲ್ಲಿ ರೈತರು ವಹಿಸುವ ನಿರ್ಣಾಯಕ ಪಾತ್ರವನ್ನು ಎತ್ತಿ ತೋರಿಸುತ್ತದೆ. ನ್ಯಾಯಯುತ ಬೆಲೆ, ಹವಾಮಾನ ಬದಲಾವಣೆಯ ಹೊಂದಾಣಿಕೆ, ಸುಸ್ಥಿರ ಕೃಷಿ ಪದ್ಧತಿಗಳು ಮತ್ತು ಆಧುನಿಕ ತಂತ್ರಜ್ಞಾನಗಳಿಗೆ ಪ್ರವೇಶದಂತಹ ಪ್ರಮುಖ ವಿಷಯಗಳನ್ನು ಚರ್ಚಿಸಲು ಹಾಗೂ ರೈತರಿಗೆ ಈ ಬಗ್ಗೆ ಮಾಹಿತಿ ನೀಡಲು ಹಾಗೂ ರೈತರ ಕಾರ್ಯಗಳನ್ನು ಗುರುತಿಸಿ ಗೌರವ ನೀಡಲು ಈ ದಿನವು ಒಂದು ಅವಕಾಶವನ್ನು ಕಲ್ಪಿಸುತ್ತದೆ. ಇದು ರೈತರ ಜೀವನವನ್ನು ಸುಧಾರಿಸಲು ಸರ್ಕಾರದ ಯೋಜನೆಗಳು ಮತ್ತು ಸುಧಾರಣೆಗಳ ಬಗ್ಗೆ ಜಾಗೃತಿ ಮೂಡಿಸುವ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.
ರಾಷ್ಟ್ರೀಯ ರೈತರ ದಿನದ ಕಾರ್ಯಕ್ರಮಗಳು
ಈ ದಿನ ಕೃಷಿ ಕ್ಷೇತ್ರದ ವೈಜ್ಞಾನಿಕ ಮತ್ತು ತಾಂತ್ರಿಕ ಆವಿಷ್ಕಾರಗಳ ಬಗ್ಗೆ ಜನರಿಗೆ ಪರಿಚಯಿಸಲು ದೇಶಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ಕಾರ್ಯಕ್ರಮಗಳು ರೈತರು ಎದುರಿಸುತ್ತಿರುವ ಸವಾಲುಗಳನ್ನು ಚರ್ಚಿಸಲು ಮತ್ತು ಅವರ ಅಗತ್ಯಗಳು ಮತ್ತು ಆಕಾಂಕ್ಷೆಗಳನ್ನು ಅನ್ವೇಷಿಸಲು ವೇದಿಕೆಯನ್ನು ಒದಗಿಸುತ್ತವೆ.
ಚೌದರಿ ಚರಣ್ ಸಿಂಗ್ ಪರಿಚಯ
ಭಾರತದ ದೇಶದ 5ನೇ ಪ್ರಧಾನಿಯಾಗಿದ್ದ ಚೌದರಿ ಚರಣ್ ಸಿಂಗ್ ಅವರನ್ನು ರೈತರ ಹಕ್ಕುಗಳ ಚಾಂಪಿಯನ್ ಎಂದು ಕರೆಯಲಾಗುತ್ತದೆ. ಉತ್ತರ ಪ್ರದೇಶದ ನೂರ್‌ಪುರದ ಮಧ್ಯಮ ವರ್ಗದ ರೈತ ಕುಟುಂಬದಲ್ಲಿ ಜನಿಸಿದ ಅವರು ಭೌತಶಾಸ್ತ್ರ, ಕಾನೂನು ಹಾಗೂ ಸ್ನಾತಕೋತ್ತರ ಪದವಿಯನ್ನು ಆಗ್ರಾ ವಿಶ್ವವಿದ್ಯಾಲಯದಲ್ಲಿ ಮುಗಿಸುತ್ತಾರೆ.
1979ರಿಂದ 1980ರವರೆಗೆ ಚೌದರಿ ಅವರು ಭಾರತದ ಪ್ರಧಾನಿಯಾಗಿದ್ದ ಅವಧಿಯಲ್ಲಿ ರೈತರ ಜೀವನವನ್ನು ಸುಧಾರಿಸಲು ಹಲವು ಸುಧಾರಣೆಗಳನ್ನು ತರುತ್ತಾರೆ. ಅವರು ಹಲವಾರು ಶಾಸನಗಳನ್ನು ಅಂಗೀಕರಿಸುತ್ತಾರೆ. ರೈತರ ಹಿತಾಸಕ್ತಿಗಳನ್ನು ಕಾಪಾಡುವ ಗುರಿಯನ್ನು ಹೊಂದಿದ್ದ ಅವರು ಅದಕ್ಕಾಗಿ ಹಲವಾರು ಕ್ರಮಗಳನ್ನು ಜಾರಿಗೊಳಿಸುತ್ತಾರೆ.
ಜಮೀನ್ದಾರಿ ನಿರ್ಮೂಲನೆ, ಕೋ ಆಪರೇಟಿವ್ ಫಾರ್ಮಿಂಗ್ ಎಕ್ಸ್ ಸೇರಿದಂತೆ ರೈತರ ಹಿತಾಸಕ್ತಿ ಆಧರಿಸಿದ, ರೈತರ ಉನ್ನತಿಗೆ ಸಂಬಂಧಿಸಿದ ಹಲವು ಪುಸ್ತಕಗಳನ್ನು ಬರೆಯುತ್ತಾರೆ.
ಭಾರತದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಪರಿಚಯಿಸಿದ್ದ ‘ಜೈ ಜವಾನ್ ಜೈ ಕಿಸಾನ್‘ ಎಂಬ ಅಪ್ರತಿಮ ಘೋಷಣೆಯನ್ನು ಚರಣ್ ಸಿಂಗ್ ಜನಪ್ರಿಯಗೊಳಿಸಿದರು. ರೈತರ ಜೀವನವನ್ನು ಸುಧಾರಿಸಲು ಅವರ ಸಮರ್ಪಣೆಗೆ ಹೆಸರುವಾಸಿಯಾದ ಚರಣ್ ಸಿಂಗ್ ಅವರು ಭಾರತದ ಭೂ ಸುಧಾರಣೆಗಳು ಮತ್ತು ಗ್ರಾಮೀಣ ಸಾಲ ಕಡಿತದಲ್ಲಿ ದೊಡ್ಡ ಪಾತ್ರವನ್ನು ವಹಿಸಿದರು.