logo
ಕನ್ನಡ ಸುದ್ದಿ  /  ಜೀವನಶೈಲಿ  /  ಮಕ್ಕಳ ಮೇಲೆ ಈ 5 ಸಂದರ್ಭಗಳಲ್ಲಿ ಗದರಲೇಬೇಡಿ; ಮಧುರ ಬಾಂಧವ್ಯಕ್ಕೆ ನಿಮ್ಮ ಬೈಗುಳವೇ ಮುಳುವಾಗಬಹುದು

ಮಕ್ಕಳ ಮೇಲೆ ಈ 5 ಸಂದರ್ಭಗಳಲ್ಲಿ ಗದರಲೇಬೇಡಿ; ಮಧುರ ಬಾಂಧವ್ಯಕ್ಕೆ ನಿಮ್ಮ ಬೈಗುಳವೇ ಮುಳುವಾಗಬಹುದು

Jayaraj HT Kannada

Nov 13, 2024 06:00 AM IST

google News

ಮಕ್ಕಳ ಮೇಲೆ ಈ 5 ಸಂದರ್ಭಗಳಲ್ಲಿ ಗದರಬೇಡಿ; ಮಧುರ ಬಾಂಧವ್ಯಕ್ಕೆ ಬೈಗುಳವೇ ಮುಳುವಾಗಬಹುದು

    • Parenting: ಮಕ್ಕಳ ಮೇಲೆ ಎಲ್ಲಾ ಸಂದರ್ಭಗಳಲ್ಲೂ ಬೈಯುವುದು, ಗದರುವುದು ಅವರ ಮೇಲೆ ಗಂಭೀರ ಪರಿಣಾಮ ಬೀರಬಹುದು. ಮಕ್ಕಳ ಹಾಗೂ ಪೋಷಕರ ನಡುವಿನ ಮಧುರ ಬಾಂಧವ್ಯಕ್ಕೂ ನಿಮ್ಮ ಮಾತುಗಳು ಮುಳುವಾಗಬಹುದು. ಈ 5 ಸಂದರ್ಭಗಳಲ್ಲಿ ಮಕ್ಕಳ ಮೇಲೆ ದೊಡ್ಡ ಧ್ವನಿಯಲ್ಲಿ ಗದರುವುದನ್ನು ತಪ್ಪಿಸಿ. 
ಮಕ್ಕಳ ಮೇಲೆ ಈ 5 ಸಂದರ್ಭಗಳಲ್ಲಿ ಗದರಬೇಡಿ; ಮಧುರ ಬಾಂಧವ್ಯಕ್ಕೆ ಬೈಗುಳವೇ ಮುಳುವಾಗಬಹುದು
ಮಕ್ಕಳ ಮೇಲೆ ಈ 5 ಸಂದರ್ಭಗಳಲ್ಲಿ ಗದರಬೇಡಿ; ಮಧುರ ಬಾಂಧವ್ಯಕ್ಕೆ ಬೈಗುಳವೇ ಮುಳುವಾಗಬಹುದು (Pexel)

ಮಕ್ಕಳಿಗೆ ಬೈಯುವುದು ಕೆಲವೊಂದು ಪೋಷಕರ ಸಾಮಾನ್ಯ ಅಭ್ಯಾಸ. ಇಂಥಾ ಬೈಗುಳಗಳು ಮಕ್ಕಳ ಮೇಲೆ ಭಾರಿ ಪರಿಣಾಮ ಬೀರುತ್ತವೆ. ಮಕ್ಕಳು ತಪ್ಪು ಮಾಡಿದಾಗ ಅವರಿಗೆ ಬುದ್ಧಿ ಹೇಳಲು, ಅವರ ತಪ್ಪುಗಳನ್ನು ಸರಿಪಡಿಸಲು ಇದು ಸಾಮಾನ್ಯ ವಿಧಾನವೆಂದು ಪೋಷಕರು ಭಾವಿಸುತ್ತಾರೆ. ಈ ವಿಧಾನದಿಂದ ಮಕ್ಕಳನ್ನು ಸುಲಭವಾಗಿ ನಿಯಂತ್ರಿಸಬಹುದು ಎಂಬುವುದು ಪೋಷಕರ ಅಭಿಪ್ರಾಯ. ತಮ್ಮ ಮಗುವಿನ ನಡವಳಿಕೆಯನ್ನು ರೂಪಿಸಲು ಬೈಯುವುದು ಸೂಕ್ತ ವಿಧಾನ ಎಂದು ಪೋಷಕರು ಅಂದುಕೊಳ್ಳುತ್ತಾರೆ. ಗದರುವ ಮೂಲಕ ತಮ್ಮ ಮಗುವನ್ನು ಜವಾಬ್ದಾರಿಯುತ ನಡವಳಿಕೆಯತ್ತ ಮಾರ್ಗದರ್ಶನ ಮಾಡುತ್ತಿದ್ದೇವೆ ಎಂದರೆ ಹೆಚ್ಚಿನ ಸಂದರ್ಭಗಳಲ್ಲಿ ಇದು ತಪ್ಪು. ಮಕ್ಕಳಿಗೆ ನಿರಂತರ ಗದರುವುದುರಿಂದ ಆತಂಕ ಸೇರಿದಂತೆ ಮಕ್ಕಳಲ್ಲಿ ನಕಾರಾತ್ಮಕ ಪರಿಣಾಮ ಬೀರಬಹುದು.

ಈ ಸಂದರ್ಭಗಳಲ್ಲಿ ಮಕ್ಕಳ ಮೇಲೆ ಗದರಿಸಿದರೆ ಅವರ ಮೇಲೆ ಗಂಭೀರ ಪರಿಣಾಮ ಬೀರಬಹುದು. ಅಲ್ಲದೆ ಮಕ್ಕಳ ಹಾಗೂ ಪೋಷಕರ ನಡುವಿನ ಸಂಬಂಧದಲ್ಲೂ ವ್ಯತ್ಯಾಸಗಳಾಗಬಹುದು.

ಸಹೋದರರ ನಡುವಿನ ಗಲಾಟೆ ವೇಳೆ ಮಧ್ಯಪ್ರವೇಶಿಸುವಾಗ ಎಚ್ಚರ

ಒಡಹುಟ್ಟಿದವರು ಪರಸ್ಪರ ಜಗಳವಾಡಿದಾಗ, ಪೋಷಕರ ತುರ್ತು ಪ್ರತಿಕ್ರಿಯೆಗಳು ಆ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು. ಮಕ್ಕಳ ನಡುವಿನ ಗಲಾಟೆ ವೇಳೆ ಬೈಯುವುದು ಅಥವಾ ಆಕ್ರಮಣಕಾರಿ ರೀತಿಯಿಂದ ಮಧ್ಯಪ್ರವೇಶಿಸುವುದು ಒಳ್ಳೆಯದಲ್ಲ. ಇದು ಮಕ್ಕಳ ಸಂಘರ್ಷವನ್ನು ಹೆಚ್ಚಿಸಬಹುದು. ಅವರ ಭಾವನೆಗಳನ್ನು ಕೆರಳಿಸಬಹುದು. ಅಲ್ಲದೆ ಮಕ್ಕಳ ಹಾಗೂ ನಿಮ್ಮ ಸಂಬಂಧವನ್ನು ಹಾಳುಮಾಡಬಹುದು. ಅದರ ಬದಲಾಗಿ ಮಕ್ಕಳನ್ನು ಶಾಂತವಾಗಿ ಸಮಾಧಾನ ಮಾಡಿ. ಆರೋಗ್ಯಕರ ಸಂವಹನ ಕಲಿಸಿ.

ಸಾರ್ವಜನಿಕವಾಗಿ ಶಿಸ್ತು ಕ್ರಮ

ಮಗುವಿಗೆ ಸಾರ್ವಜನಿಕವಾಗಿ ಅಥವಾ ಬೇರೆ ಜನರ ಮುಂದೆ ಬುದ್ಧಿ ಹೇಳಲು ಹೋದರೆ, ಮಕ್ಕಳಿಗೆ ಮುಜುಗರದ ಭಾವನೆ ಬರುತ್ತದೆ. ಹೊರಗಡೆ ಹೋದಾಗ ನಾಲ್ಕು ಜನರ ಮುಂದೆ ಮಗುವಿಗೆ ಶಿಸ್ತುಪಾಠ ಹೇಳುತ್ತೇನೆ ಎಂದರೆ ಪೋಷಕರು ಹಾಗೂ ಮಕ್ಕಳ ಬಾಂಧವ್ಯದ ಮೇಲೆ ತೀವ್ರವಾಗಿ ಪರಿಣಾಮ ಬೀರಬಹುದು. ಅವಮಾನ ಮತ್ತು ಮುಜುಗರದಂಥಾ ಭಾವನೆಯಿಂದ ಮಕ್ಕಳಿಗೆ ಅಸಮಾಧಾನ ತರುತ್ತದೆ. ಹೀಗಾಗಿ ಮಕ್ಕಳನ್ನು ಖಾಸಗಿಯಾಗಿ ಸೌಮ್ಯ ಮಾತುಗಳಿಂದ ತಿದ್ದುವ ಪ್ರಯತ್ನ ಮಾಡಿ.

ಮಕ್ಕಳು ಏನಾದರೂ ಒಡೆದು ಹಾಕಿದಾಗ ಅಥವಾ ಹಾಳು ಮಾಡಿದಾಗ

ಮಕ್ಕಳು ತಮಗೆ ಅರಿವಿಲ್ಲದಂತೆ ಏನಾದರೂ ತಪ್ಪು ಮಾಡುತ್ತಾರೆ. ವಸ್ತುಗಳನ್ನು ಹಾಳು ಮಾಡಿದಾಗ, ಏನಾದರೂ ಕೆಳಕ್ಕೆ ಚೆಲ್ಲಿದಾಗ ಅಥವಾ ಮನೆಯ ವಸ್ತುಗಳನ್ನು ಮುರಿದಾಗ ದೊಡ್ಡ ಸ್ವರದಲ್ಲಿ ಗದರುವುದು ಅಥವಾ ಬೈಯುವುದನ್ನು ತಪ್ಪಿಸಿ. ಇದು ಅವರಲ್ಲಿ ಭಯ ಮತ್ತು ಆತಂಕವನ್ನು ಹುಟ್ಟುಹಾಕುತ್ತದೆ. ಅವರ ಭಾವನಾತ್ಮಕ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಅದರ ಬದಲಿಗೆ, ಶಾಂತವಾಗಿ ಮಾತನಾಡಿ. “ಇಂಥಾ ತಪ್ಪುಗಳು ಆಗುತ್ತವೆ. ಅಪಘಾತಗಳು ಸಂಭವಿಸುವುದು ಸಾಮಾನ್ಯ. ಚಿಂತೆ ಮಾಡಬೇಡ” ಎನ್ನಿ.

ನಿಮ್ಮ ಹತಾಶೆಗೆ ಮಕ್ಕಳನ್ನು ಬಲಿಪಶು ಮಾಡದಿರಿ

ಮಕ್ಕಳನ್ನು ಅತಿಯಾಗಿ ಬೈಯುವುದು ಅವರ ಸಂಕಟವನ್ನು ಉಲ್ಬಣಗೊಳಿಸುತ್ತದೆ. ಅಲ್ಲದೆ ಇದು ಪೋಷಕರು ಹಾಗೂ ಮಕ್ಕಳ ಬಾಂಧವ್ಯನ್ನು ಹಾಳು ಮಾಡುತ್ತದೆ. ನೀವು ಯಾವುದೇ ಒತ್ತಡ ಅಥವಾ ಹತಾಶೆಯಲ್ಲಿದ್ದರೂ ಅದನ್ನು ಮಕ್ಕಳ ಮೇಲೆ ತೋರಿಸಬೇಡಿ. ಕಟುವಾದ ಮಾತುಗಳು ಅವರಲ್ಲಿ ಆತಂಕ, ಭಯ ಮತ್ತು ಅಸಹಾಯಕತೆಯ ಭಾವನೆಗಳನ್ನು ಹೆಚ್ಚಿಸುತ್ತವೆ ಹೀಗಾಗಿ ಯಾವುದೇ ಸಂದರ್ಭದಲ್ಲೂ ಶಾಂತವಾಗಿ ಪ್ರತಿಕ್ರಿಯಿಸಿ.

ಎಳೆಯ ಮಕ್ಕಳನ್ನು ಬೈಯುವುದು

ಅಂಬೆಗಾಲಿಡುವ ಮತ್ತು 1ರಿಂದ 3 ವರ್ಷಗಳ ಮಕ್ಕಳನ್ನು ಬೈಯುವುದು ಮಕ್ಕಳ ಮನಸಿನ ಮೇಲೆ ಹಾನಿ ಉಂಟುಮಾಡುತ್ತದೆ. ಇದು ಪೋಷಕರು ಮತ್ತು ಮಕ್ಕಳ ನಡುವಿನ ಸಂಬಂಧವನ್ನು ದೊಡ್ಡ ಪ್ರಮಾಣದಲ್ಲಿ ಹಾನಿಗೊಳಿಸುತ್ತದೆ. ಪುಟ್ಟ ಮಕ್ಕಳು ದೊಡ್ಡವರು ಹೇಳುವ ಪ್ರತಿಯೊಂದು ಪದ ಮತ್ತು ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ದೊಡ್ಡವರು ಬಳಸುವ ಕಠಿಣ ಬೈಗುಳದ ಪದಗಳು ಮತ್ತು ದೊಡ್ಡ ಸ್ವರವು ಅವರಲ್ಲಿ ಶಾಶ್ವತ ಭಯ, ಆತಂಕ ಸೃಷ್ಟಿಸುತ್ತದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ