Garlic Rasam: ಬೇಸಿಗೆಯಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಈ ಬೆಳ್ಳುಳ್ಳಿ ರಸಂ: ಪುಡಿ ಮಾಡಿಟ್ಟುಕೊಂಡ್ರೆ ದಿಢೀರ್ ಅಂತ ತಯಾರಿಸಬಹುದು
Apr 06, 2024 07:00 AM IST
ಬೇಸಿಗೆಯಲ್ಲಿ ಸೇವಿಸಬಹುದಾದ ಆರೋಗ್ಯಕರ ಬೆಳ್ಳುಳ್ಳಿ ರಸಂ
Garlic Rasam Recipe: ಬೇಸಿಗೆಕಾಲದಲ್ಲಿ ವಿಪರೀತ ಸೆಖೆಯಿಂದಾಗಿ ರೋಗ ರುಜಿನಗಳು ನಮ್ಮ ದೇಹವನ್ನು ವಕ್ಕರಿಸುತ್ತದೆ. ಆದರೆ ಬೇಸಿಗೆಗಾಲದಲ್ಲಿಯೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡು ಎಲ್ಲಾ ಆರೋಗ್ಯ ಸಮಸ್ಯೆಗಳಿಂದ ಪಾರಾಗಲು ಈ ಬೆಳ್ಳುಳ್ಳಿ ರಸಂ ಸೇವಿಸಿ.
ಬೆಳ್ಳುಳ್ಳಿ ರಸಂ ರೆಸಿಪಿ: ಬೇಸಿಗೆ ಕಾಲ ಬಂತು ಎಂದರೆ ಸಾಕು ಅನೇಕ ರೋಗ ರುಜಿನಗಳು ನಮ್ಮನ್ನು ಕಾಡುತ್ತವೆ. ಹೀಗಾಗಿ ಯಾವುದೇ ಕಾಯಿಲೆಗಳು ದೇಹಕ್ಕೆ ತೊಂದರೆ ನೀಡದಂತೆ ನಾವು ಮೊದಲೇ ಸಿದ್ಧರಾಗಿರಬೇಕು . ಹೀಗೆ ಮಾಡಬೇಕು ಎಂದರೆ ರೋಗನಿರೋಧಕ ಶಕ್ತಿ ಹೆಚ್ಚಿಸುವಂತಹ ಪದಾರ್ಥಗಳನ್ನು ಆಗಾಗ ಸೇವಿಸುತ್ತಲೇ ಇರಬೇಕು. ಇದಕ್ಕಾಗಿ ನೀವು ಹೆಚ್ಚೇನು ಯೋಚಿಸಬೇಕಿಲ್ಲ. ವಾರದಲ್ಲಿ 4-5 ಬಾರಿ ಬೆಳ್ಳುಳ್ಳಿ ರಸಂ ಸೇವನೆ ಮಾಡುವ ಮೂಲಕ ಯಾವುದೇ ಕಾಯಿಲೆಗಳು ನಿಮ್ಮ ಹತ್ತಿರವೂ ಬರದಂತೆ ತಡೆಯಬಹುದು.
ಹಾಗಾದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಬೆಳ್ಳುಳ್ಳಿ ರಸಂನ್ನು ತಯಾರಿಸುವುದು ಹೇಗೆ..? ಎಂಬುದನ್ನು ತಿಳಿದುಕೊಳ್ಳೋಣ.
ಬೇಕಾಗುವ ಸಾಮಗ್ರಿಗಳು
ಬೆಳ್ಳುಳ್ಳಿ ಎಸಳು 15,
ಟೊಮೆಟೋ 2,
ಮೆಣಸಿನಕಾಯಿ 2,
ಟೊಮೆಟೋ 1,
ಹುಣಸೆಹಣ್ಣು ನಿಂಬೆ ಗಾತ್ರದ್ದು,
ಜೀರಿಗೆ ಅರ್ಧ ಚಮಚ,
ಕಾಳು ಮೆಣಸು 2,
ಸಾಸಿವೆ ಅರ್ಧಚಮಚ,
ಉಪ್ಪು ರುಚಿಗೆ ತಕ್ಕಷ್ಟು,
ಧನಿಯಾ ಪುಡಿ 3 ಚಮಚ,
ನೀರು ಅಳತೆಗೆ ತಕ್ಕಷ್ಟು,
ಖಾರದ ಪುಡಿ ಅರ್ಧ ಚಮಚ,
ಅರಿಶಿಣ 1/4 ಚಮಚ,
ಕರಿ ಬೇವು ಸ್ವಲ್ಪ,
ಮೆಂತ್ಯೆ 1/4 ಚಮಚ,
ಎಳ್ಳು ಒಂದು ಚಮಚ,
ಶೇಂಗಾ 2 ಚಮಚ,
ಕೊತ್ತಂಬರಿ ಸೊಪ್ಪು 1/4 ಕಪ್,
ಇಂಗು ಸ್ವಲ್ಪ
ಮಾಡುವ ವಿಧಾನ
- ಬೆಳ್ಳುಳ್ಳಿ ರಸಂ ತಯಾರಿಸುವ ಮುನ್ನ ನೀವು ಮೊದಲು ಮಸಾಲೆಗೆ ಪುಡಿ ತಯಾರಿಸಿಕೊಳ್ಳಬೇಕು. ಇದಕ್ಕೆ ನೀವು ಒಲೆಯ ಮೇಲೆ ಒಂದು ಬಾಣಲೆಯನ್ನು ಇಟ್ಟು ಬಿಸಿ ಮಾಡಿ. ಇದಕ್ಕೆ ಮೆಂತ್ಯ, ಜೀರಿಗೆ, ಕೊತ್ತಂಬರಿ, ಶೇಂಗಾ ಹಾಗೂ ಎಳ್ಳನ್ನು ಸೇರಿಸಿ ಚೆನ್ನಾಗಿ ಹುರಿದುಕೊಳ್ಳಿ.
- ಇವುಗಳಿಂದ ಹಸಿ ವಾಸನೆ ಹೋದ ಬಳಿಕ ಸ್ಟೌವ್ ಆಫ್ ಮಾಡಿ ತಣ್ಣಗಾಗಲು ಬಿಡಿ. ಅದಾದ ಬಳಿಕ ಮಿಕ್ಸಿ ಜಾರಿಗೆ ಈ ಎಲ್ಲಾ ಹುರಿದ ಪದಾರ್ಥಗಳನ್ನು ಹಾಕಿ ನುಣ್ಣಗೆ ಪೌಡರ್ ಮಾಡಿಕೊಂಡು ಪಕ್ಕಕ್ಕೆ ಎತ್ತಿಟ್ಟುಕೊಳ್ಳಿ. ಈಗ ಬೆಳ್ಳುಳ್ಳಿ ರಸಂಗೆ ಬೇಕಾದ ಮಸಾಲೆ ತಯಾರಾಗದಂತೆ.
- ಈಗ ನೀವು ಹುಣಸೆ ಹಣ್ಣನ್ನು ನೀರಿನಲ್ಲಿ ನೆನೆಸಿಡಿ. ಟೊಮೆಟೊ ಹಣ್ಣುಗಳನ್ನು ಬೇಯಿಸಿಕೊಂಡು ಬಳಿಕ ಸಿಪ್ಪೆ ತೆಗೆದು ಮಿಕ್ಸಿಗೆ ಹಾಕಿ ಪ್ಯೂರಿ ಮಾಡಿಕೊಳ್ಳಿ . ಈಗ ಹಸಿ ಮೆಣಸಿನಕಾಯಿಯನ್ನೂ ಕೂಡ ರುಬ್ಬಿಕೊಂಡು ಎತ್ತಿಟ್ಟುಕೊಳ್ಳಿ. ಬೆಳ್ಳುಳ್ಳಿ ಎಸಳುಗಳನ್ನು ಜಜ್ಜಿಕೊಳ್ಳಿ.
- ಈಗ ಒಂದು ಒಲೆಯ ಮೇಲೆ ಪಾತ್ರೆ ಇಟ್ಟು ಅದಕ್ಕೆ ಎಣ್ಣೆಯನ್ನು ಹಾಕಿ. ಎಣ್ಣೆ ಬಿಸಿಯಾದ ಬಳಿಕ ಸಾಸಿವೆ , ಜೀರಿಗೆ ಹಾಗೂ ಕಾಳು ಮೆಣಸನ್ನು ಹಾಕಿಕೊಂಡು ಹುರಿಯಿರಿ. ಇದಕ್ಕೆ ಕರಿಬೇವಿನ ಸೊಪ್ಪು ಹಾಗೂ ಇಂಗನ್ನು ಸೇರಿಸಿ.
- ಈಗ ಜಜ್ಜಿಕೊಂಡಿದ್ದ ಬೆಳ್ಳುಳ್ಳಿ ಎಸಳನ್ನು ಹಾಕಿ ಫ್ರೈ ಮಾಡಿಕೊಳ್ಳಿ . ಬೆಳ್ಳುಳ್ಳಿಯನ್ನು ಹುರಿಯುವಾಗ ನಿಮಗೆ ಒಳ್ಳೆಯ ಪರಿಮಳ ಬರುತ್ತದೆ. ನಂತರ ಅರಿಶಿಣ, ಮೆಣಸಿನಕಾಯಿ ಹಾಗೂ ಉಪ್ಪು ಸೇರಿಸಿ. ನೆನೆಸಿಟ್ಟ ಹುಣಸೆಹಣ್ಣಿನ ರಸವನ್ನು ಸೇರಿಸಿ.
- ಈಗಾಗಲೇ ಸಿದ್ಧಪಡಿಸಿಕೊಂಡಿದ್ದ ಮಸಾಲೆಯನ್ನೂ ಸೇರಿಸಿ. ಅಳತೆಗೆ ತಕ್ಕಷ್ಟು ನೀರನ್ನು ಹಾಕಿ. ಮಧ್ಯಮ ಉರಿಯಲ್ಲಿ ಸರಿ ಸುಮಾರು ಅರ್ಧ ಗಂಟೆಗಳ ಕಾಲ ಕುದಿಸಿ.
- ನೀವು ಹಾಕಿದ ನೀರು ಅರ್ಧಕ್ಕೆ ಬರುವವರೆಗೂ ಕುದಿಸುತ್ತಲೇ ಇರಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಉದುರಿಸಿ ರುಚಿ ರುಚಿಯಾದ ಬೆಳ್ಳುಳ್ಳಿ ರಸಂ ಸವಿಯಲು ಸಿದ್ಧ .
ಇದನ್ನೂ ಓದಿ: ಸೇಬು, ಸಪೋಟಾ ಬಳಸಿ ಮನೆಯಲ್ಲೇ ತಯಾರಿಸಿ ಬಾಯಲ್ಲಿ ನೀರೂರಿಸುವ ರುಚಿ ರುಚಿಯಾದ ಐಸ್‌ಕ್ರೀಮ್
ಬೆಳ್ಳುಳ್ಳಿ ರಸಂ ಬೆಳ್ತಿಗೆ ಅಕ್ಕಿಯಿಂದ ತಯಾರಿಸಿದ ಅನ್ನದ ಜೊತೆಯಲ್ಲಿ ತಿನ್ನಲು ತುಂಬಾನೇ ರುಚಿಕರವಾಗಿರುತ್ತದೆ. ಬೆಳ್ಳುಳ್ಳಿಯಲ್ಲಿ ಎಲ್ಲಾ ಋತುಮಾನದ ರೋಗಗಳನ್ನು ಕಡಿಮೆ ಮಾಡುವ ಶಕ್ತಿಯಿದೆ. ಇದು ಚಳಿಗಾಲ ಮಾತ್ರವಲ್ಲದೇ ಬೇಸಿಗೆಕಾಲದಲ್ಲಿಯೂ ಕೂಡ ವಿವಿಧ ರೋಗಗಳನ್ನು ವಾಸಿ ಮಾಡುತ್ತದೆ. ಇವುಗಳಲ್ಲಿ ವಿಟಮಿನ್ ಎ, ವಿಟಮಿನ್ ಬಿ ಸಮೃದ್ಧವಾಗಿರುತ್ತದೆ. ಇವುಗಳು ಉತ್ತಮ ಆಂಟಿ ಆಕ್ಸಿಡಂಟ್ ಗುಣಗಳನ್ನು ಹೊಂದಿದೆ. ಜೊತೆಯಲ್ಲಿ ಕೊಬ್ಬನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿ ಯಾರು ಅಧಿಕ ತೂಕವನ್ನು ಹೊಂದಿರುತ್ತಾರೋ ಅವರು ಬೆಳ್ಳುಳ್ಳಿಯಿಂದ ತಯಾರಿಸಿದ ಆಹಾರಗಳನ್ನು ಹೆಚ್ಚೆಚ್ಚು ಸೇವಿಸಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.
ವಿಭಾಗ