logo
ಕನ್ನಡ ಸುದ್ದಿ  /  ಜೀವನಶೈಲಿ  /  Relationship Guide: ಮದುವೆಯಾದ ಆರಂಭದ ದಿನಗಳಲ್ಲಿ ದಾಂಪತ್ಯ ಜೀವನ ಹೇಗಿರಬೇಕು? ಸುಖ ಸಂಸಾರಕ್ಕೆ ದಂಪತಿಗಳು ಪಾಲಿಸಬೇಕಾದ ನಿಯಮಗಳಿವು

Relationship guide: ಮದುವೆಯಾದ ಆರಂಭದ ದಿನಗಳಲ್ಲಿ ದಾಂಪತ್ಯ ಜೀವನ ಹೇಗಿರಬೇಕು? ಸುಖ ಸಂಸಾರಕ್ಕೆ ದಂಪತಿಗಳು ಪಾಲಿಸಬೇಕಾದ ನಿಯಮಗಳಿವು

Reshma HT Kannada

May 21, 2024 05:26 PM IST

google News

ಮದುವೆಯಾದ ಆರಂಭದ ದಿನಗಳಲ್ಲಿ ದಾಂಪತ್ಯ ಜೀವನ ಹೇಗಿರಬೇಕು? ಸುಖ ಸಂಸಾರಕ್ಕೆ ದಂಪತಿಗಳು ಪಾಲಿಸಬೇಕಾದ ನಿಯಮಗಳಿವು

    • ಪರಸ್ಪರರ ನಡುವೆ ಬಾಂಧವ್ಯ ವೃದ್ಧಿಸಿಕೊಳ್ಳುವುದರಿಂದ ಉತ್ತಮ ಸಂವಹನದವರೆಗೆ ನವವಿವಾಹಿತರು ಮದುವೆಯಾದ ಆರಂಭದ ದಿನಗಳಲ್ಲಿ ಈ ಕೆಲವು ನಿಯಮಗಳನ್ನು ತಪ್ಪದೇ ಅನುಸರಿಸಬೇಕು. ಆಗ ದಾಂಪತ್ಯದ ಬಂಡಿ ಆರಂಭದಿಂದಲೇ ಸುಗಮವಾಗಿ ಸಾಗುತ್ತದೆ. ನವವಿವಾಹಿತರು ಮದುವೆಯಾದ ಆರಂಭದಲ್ಲಿ ಪಾಲಿಸಲೇಬೇಕಾದ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ. 
ಮದುವೆಯಾದ ಆರಂಭದ ದಿನಗಳಲ್ಲಿ ದಾಂಪತ್ಯ ಜೀವನ ಹೇಗಿರಬೇಕು? ಸುಖ ಸಂಸಾರಕ್ಕೆ ದಂಪತಿಗಳು ಪಾಲಿಸಬೇಕಾದ ನಿಯಮಗಳಿವು
ಮದುವೆಯಾದ ಆರಂಭದ ದಿನಗಳಲ್ಲಿ ದಾಂಪತ್ಯ ಜೀವನ ಹೇಗಿರಬೇಕು? ಸುಖ ಸಂಸಾರಕ್ಕೆ ದಂಪತಿಗಳು ಪಾಲಿಸಬೇಕಾದ ನಿಯಮಗಳಿವು

ಮದುವೆ ಎಂಬುದು ಎರಡು ಮನಸ್ಸುಗಳನ್ನು ಸಂಧಿಸುವ ಶುಭಘಳಿಗೆ. ವೈವಾಹಿಕ ಸಂಬಂಧ ಅತ್ಯಂತ ಸುಂದರ ಸಂಬಂಧ ಎನ್ನುವುದರಲ್ಲಿ ಎರಡು ಮಾತಿಲ್ಲ. ಮದುವೆಯ ತಯಾರಿ, ಮದುವೆ ಕಾರ್ಯಕ್ರಮಗಳ ಸಂಭ್ರಮ, ಆ ಶಾಸ್ತ್ರಗಳು ಇವೆಲ್ಲವೂ ಮನಸ್ಸಿಗೆ ಅತ್ಯಂತ ಸಂತೋಷವನ್ನೇನೋ ನೀಡುತ್ತದೆ. ಆದರೆ ಮದುವೆಯ ಸಂಭ್ರಮ ಇಲ್ಲಿಗೆ ಮುಗಿಯುವುದಿಲ್ಲ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವವಿವಾಹಿತರು ಸಂಭ್ರಮದ ನಡುವೆಯೂ ಆರಂಭಿಕ ಹಂತದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ. ಮದುವೆಯ ಆರಂಭಿಕ ದಿನಗಳಲ್ಲಿ ಸಾಮಾನ್ಯವಾಗಿ ಸಂಗಾತಿಗಳು ಏಳುಬೀಳುಗಳನ್ನು ಎದುರಿಸುವುದು ಸರ್ವೇ ಸಾಮಾನ್ಯ. ತಮ್ಮ ಭವಿಷ್ಯದ ಭದ್ರಬುನಾದಿಯನ್ನು ನಿರ್ಮಿಸಬೇಕಾದ ಆರಂಭಿಕ ವರ್ಷಗಳಲ್ಲಿ ಹೊಂದಾಣಿಕೆಯ ವಿಚಾರದಲ್ಲಿ ಸಾಕಷ್ಟು ರಾಜಿಮಾಡಿಕೊಳ್ಳಬೇಕಾಗಿ ಬರುತ್ತದೆ. ಈ ಆರಂಭಿಕ ಹಂತದಲ್ಲಿ ಒಬ್ಬರನ್ನೊಬ್ಬರು ಹೇಗೆ ಅರ್ಥ ಮಾಡಿಕೊಳ್ಳುತ್ತಾರೆ..? ಪರಸ್ಪರರ ಅಭಿಪ್ರಾಯಗಳನ್ನು ಹೇಗೆ ಗೌರವಿಸುತ್ತಾರೆ..? ಎಂಬೆಲ್ಲ ವಿಚಾರಗಳು ಪ್ರಮುಖವಾಗಿರುತ್ತದೆ.

ನವ ವಿವಾಹಿತರು ತಮ್ಮ ವಿವಾಹದ ಸಂಬಂಧವನ್ನು ಉಳಿಸಿಕೊಳ್ಳಲು ಏನೆಲ್ಲ ಸಲಹೆಗಳನ್ನು ಪಾಲಿಸಬೇಕು ಎನ್ನುವುದಕ್ಕೆ ಮಾಹಿತಿ ಇಲ್ಲಿದೆ :

1. ಉತ್ತಮ ಸಂಭಾಷಣೆ: ಸಂಬಂಧ ಯಾವುದೇ ಇರಲಿ, ಅಲ್ಲಿ ಸಂವಹನ ಎನ್ನುವುದು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಯಾವುದೇ ಒಂದು ಸಂಬಂಧಕ್ಕೆ ಭದ್ರಬುನಾದಿ ಹಾಕುವುದರಲ್ಲಿ ಸಂವಹನ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ನೀವು ನಿಮ್ಮ ಸಂಗಾತಿಯ ಮಾತುಗಳನ್ನು ಆಲಿಸುವುದು ಹಾಗೂ ಅವರ ನಿರೀಕ್ಷೆಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ ಮತ್ತು ನಿಮ್ಮ ಇಷ್ಟ ಕಷ್ಟಗಳ ಬಗ್ಗೆ ಮುಕ್ತವಾಗಿ ಮಾತನಾಡಿ.

2. ನಿಮ್ಮ ಆದ್ಯತೆ ಸಂಗಾತಿಯೇ ಆಗಿರಲಿ: ನಿಮ್ಮ ಕೆಲಸದ ಒತ್ತಡದ ನಡುವೆಯೂ ಕ್ವಾಲಿಟಿ ಟೈಮ್‌ ಅನ್ನು ನಿಮ್ಮ ಸಂಗಾತಿಗೆಂದು ಮೀಸಲಿಡುವುದನ್ನು ಬಿಡಬಾರದು. ಕೆಲಸದ ಒತ್ತಡ ಹಾಗೂ ದಾಂಪತ್ಯ ಜೀವನವನ್ನು ಸಮತೋಲಿತಗೊಳಿಸುವುದು ಹೇಗೆ ಎಂಬುದನ್ನು ನೀವೇ ತಿಳಿದುಕೊಳ್ಳಬೇಕು. ಒಬ್ಬರಿಗೊಬ್ಬರು ಸಮಯ ಮೀಸಲಿಡುವುದು ಒಳ್ಳೆಯದು. ಇದು ನಿಮ್ಮ ನಡುವಿನ ಬಾಂಧವ್ಯವವನ್ನು ಬಲಪಡಿಸುತ್ತದೆ.

3. ಪರಸ್ಪರರ ಗುರಿಗಳನ್ನು ಗೌರವಿಸಿ: ಮದುವೆಯ ಆರಂಭಿಕ ತಿಂಗಳುಗಳಲ್ಲಿ ನೀವು ಗಮನಹರಿಸಬೇಕಾದ ಎರಡು ಪ್ರಮುಖ ಅಂಶಗಳೆಂದರೆ ವೃತ್ತಿ ಆಕಾಂಕ್ಷೆಗಳು ಹಾಗೂ ವೈಯಕ್ತಿಕ ಮಹತ್ವಾಕಾಂಕ್ಷೆಗಳನ್ನು ಗೌರವಿಸುವುದಾಗಿದೆ. ನಿಮ್ಮ ಕನಸುಗಳಿಗೆ ಪರಸ್ಪರ ನೀರೆರೆಯುವುದನ್ನು ರೂಢಿಸಿಕೊಳ್ಳಿ. ಈ ರೀತಿ ಮಾಡುವ ಮೂಲಕ ಇಬ್ಬರೂ ಒಂದಾಗಿ ಬಾಳಲು ಸಹಾಯ ಮಾಡುತ್ತದೆ.

4. ಪ್ರಣಯ ಜೀವನ: ವಿವಾಹ ಸಂಬಂಧ ಚೆನ್ನಾಗಿ ಇರಬೇಕು ಎಂದರೆ ನಿಮ್ಮ ನಡುವಿನ ಪ್ರಣಯ ಕೂಡ ಒಳ್ಳೆಯ ರೀತಿಯಲ್ಲಿ ಇರಬೇಕು. ಇದಕ್ಕಾಗಿ ನೀವೇನು ಆಕಾಶದಿಂದ ಚಂದ್ರನ ತುಂಡನ್ನು ತರಬೇಕೆಂದೆನಿಲ್ಲ. ನಿಮ್ಮ ಸಂಗಾತಿಗಾಗಿ ಆಗಾಗ ಹೂವು ತಂದರೂ ಸಾಕು. ಪರಸ್ಪರರ ಪ್ರೀತಿ ಹಾಗೂ ಪ್ರಣಯವನ್ನು ಇಬ್ಬರೂ ಅರ್ಥ ಮಾಡಿಕೊಳ್ಳಬೇಕು.

5. ತಾಳ್ಮೆ ಹಾಗೂ ಕ್ಷಮಾ ಗುಣ: ಮದುವೆ ಎಂಬ ಪಯಣದಲ್ಲಿ ಏರಿಳಿತಗಳನ್ನು ಕಾಣುವುದು ಸರ್ವೇ ಸಾಮಾನ್ಯ. ಪರಸ್ಪರರ ವಿಚಾರದಲ್ಲಿ ತಾಳ್ಮೆಯನ್ನು ಹೊಂದಿರಬೇಕು. ಇಬ್ಬರ ನಡುವೆ ಯಾರಿಂದಲೇ ತಪ್ಪಾದರೂ ಸಹ ಕ್ಷಮಿಸುವ ಗುಣ ಇರಬೇಕು. ಯಾವುದನ್ನೂ ಅತಿಯಾಗಿ ಮುಂದುವರಿಸಬಾರದು.

6. ಕೃತಜ್ಞತೆ: ಪರಸ್ಪರರ ಪ್ರಯತ್ನಗಳನ್ನು ಗೌರವಿಸುವುದು ಹಾಗೂ ಗುಣಗಳನ್ನು ಶ್ಲಾಘಿಸುವುದನ್ನು ರೂಢಿಸಿಕೊಳ್ಳಿ.

7. ಪ್ರೀತಿಯ ಜೊತೆ ಹಾಸ್ಯವೂ ಇರಲಿ: ನಗು ಯಾವುದೇ ಸಂಬಂಧವನ್ನು ಇನ್ನಷ್ಟು ಬಿಗಿಗೊಳಿಸುತ್ತದೆ. ಹೀಗಾಗಿ ಸಂಗಾತಿಯೊಂದಿಗೆ ತಮಾಷೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ಇಬ್ಬರನ್ನು ಪರಸ್ಪರ ಇನ್ನಷ್ಟು ಹತ್ತಿರಗೊಳಿಸುತ್ತದೆ.

8. ಇಬ್ಬರ ನಡುವೆ ಸಣ್ಣ ಗೆರೆ ಇರಲಿ: ನೀವು ಪತಿ ಪತ್ನಿಯೇ ಇರಬಹುದು. ಆದರೆ ಇಬ್ಬರೂ ಇಬ್ಬರ ವೈಯಕ್ತಿಕ ಜೀವನವನ್ನು ಗೌರವಿಸಲೇಬೇಕು. ಹೀಗಾಗಿ ಇಬ್ಬರ ಆತ್ಮೀಯತೆಯ ನಡುವೆಯೂ ಸಣ್ಣ ಗೆರೆ ಎಳೆದುಕೊಳ್ಳಿ. ಇಬ್ಬರ ನಡುವಿನ ಸ್ವಾತಂತ್ರ್ಯ ಮದುವೆಯ ಬಂಧದಿಂದ ಕೊನೆಯಾಗದಂತೆ ನೋಡಿಕೊಳ್ಳಿ.

ಮದುವೆಯ ಆರಂಭಿಕ ದಿನಗಳಲ್ಲಿ ಪರಸ್ಪರ ಹೊಂದಾಣಿಕೆಯನ್ನು ಸಾಧಿಸಲು ಎಲ್ಲರೂ ಕಷ್ಟಪಡುತ್ತಾರೆ. ಆದರೆ ನಿಮ್ಮ ಸಂಗಾತಿಯನ್ನು ನೀವು ಹೆಚ್ಚೆಚ್ಚು ತಿಳಿದುಕೊಂಡಷ್ಟೂ, ನಿಮ್ಮ ಸಂಬಂಧ ಸುಮಧುರವಾಗುತ್ತಾ ಹೋಗುತ್ತದೆ. ಇದು ನಿಮ್ಮ ಮದುವೆಗೆ ಬಲವಾದ ಅಡಿಪಾಯವನ್ನು ರಚಿಸುತ್ತದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ