ಕನ್ನಡ ಸುದ್ದಿ  /  ಜೀವನಶೈಲಿ  /  Relationship Tips: ಸುಖ ದಾಂಪತ್ಯಕ್ಕೆ 10 ಸೂತ್ರಗಳು; ಜಗಳವಿಲ್ಲದೇ ದಾಂಪತ್ಯ ಕಲಹ ದೂರಾಗಿಸಲು ಹೆಂಡತಿಗೆ ಸಲಹೆ

Relationship Tips: ಸುಖ ದಾಂಪತ್ಯಕ್ಕೆ 10 ಸೂತ್ರಗಳು; ಜಗಳವಿಲ್ಲದೇ ದಾಂಪತ್ಯ ಕಲಹ ದೂರಾಗಿಸಲು ಹೆಂಡತಿಗೆ ಸಲಹೆ

ಗಂಡ-ಹೆಂಡತಿಯ ನಡುವೆ ಜಗಳ ಸಾಮಾನ್ಯ. ಸಂಸಾರ ಎಂದ ಮೇಲೆ ಸಮಸ್ಯೆಗಳೂ ಸಹಜ. ಆದರೆ ಸಮಸ್ಯೆಗಳ ಪರಿಹಾರಕ್ಕೆ ದಾರಿ ಹುಡುಕಲು ಜಗಳವೇ ಮೂಲವಾಗಬಾರದು. ಸುಖ ಸಂಸಾರದ ನೌಕೆಯನ್ನು ಸಾಗಿಸಲು ಹೆಂಡತಿಗೆ ಇಲ್ಲಿದೆ 10 ಸೂತ್ರಗಳು. (ಬರಹ: ಡಾ. ರೂಪಾ ರಾವ್‌, ಆಪ್ತಸಮಾಲೋಚಕಿ)

ಜಗಳವಿಲ್ಲದೇ ದಾಂಪತ್ಯ ಕಲಹ ದೂರಾಗಿಸಲು ಹೆಂಡತಿಗೆ ಸಲಹೆ
ಜಗಳವಿಲ್ಲದೇ ದಾಂಪತ್ಯ ಕಲಹ ದೂರಾಗಿಸಲು ಹೆಂಡತಿಗೆ ಸಲಹೆ

ದಾಂಪತ್ಯದಲ್ಲಿ ಸಂವಾದ: ಸಂಸಾರ ಎಂದ ಮೇಲೆ ಜಗಳ ಸಹಜ. ದಾಂಪತ್ಯದಲ್ಲಿನ ವಿರಸವನ್ನು ಮಾತಿನಿಂದಲೇ ಪರಿಹರಿಸಿಕೊಳ್ಳಬೇಕು ಹೊರತು ಮಾತಿಗೆ ಮಾತು ಬೆಳೆಸಿ, ಇನ್ನಷ್ಟು ಸಂಕೀರ್ಣವಾಗಿಸುವುದಲ್ಲ. ದಾಂಪತ್ಯದಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಜಗಳ ಖಂಡಿತ ಮದ್ದಲ್ಲ. ಜಗಳ-ವಿರಸವಿಲ್ಲದೇ ದಾಂಪತ್ಯದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಹೆಂಡತಿಗೆ 10 ಸರಳ ಸೂತ್ರಗಳ ಬಗ್ಗೆ ತಿಳಿಸಿದ್ದಾರೆ ಆಪ್ತಸಮಾಲೋಚಕಿ ರೂಪಾ ರಾವ್‌.

ಟ್ರೆಂಡಿಂಗ್​ ಸುದ್ದಿ

ಎಲ್ಲರೂ ಅಂದುಕೊಳ್ಳುವುದು ಸಾಮಾನ್ಯವಾಗಿ ದಾಂಪತ್ಯದಲ್ಲಿನ ಜಗಳಕ್ಕೆ ಕಾರಣ, ಒಂದು ಕಡೆಯ ನಿರೀಕ್ಷೆ ಈಡೇರದೇ ಇದ್ದಾಗ ಅಥವಾ ಒಬ್ಬರಲ್ಲಿ ತಪ್ಪುಗಳು ಕಂಡುಬಂದಾಗ ಎಂದು. ಆದರೆ ನಿಜವಾದ ಸಮಸ್ಯೆ ಇರುವುದು ಈ ಈಡೇರದ ನಿರೀಕ್ಷೆಗಳು ಅಥವಾ ತಪ್ಪುಗಳಲ್ಲ. ಅದನ್ನು ಪರಸ್ಪರ ಸಂವಹಿಸುವ ರೀತಿಯಲ್ಲಿ.‌ ನಿಮಗೆಲ್ಲಾ ಗೊತ್ತಿರುವ ರೀತಿ‌ ಗಂಡು ಮತ್ತು ಹೆಣ್ಣಿನ ಮೆದುಳಿನ ರಚನೆ ಬೇರೆ ಬೇರೇ; ಅಂತೆಯೇ ಆಲೋಚನಾ ದಾಟಿ ಹಾಗು ವಿಷಯಗಳನ್ನು ಗ್ರಹಿಸುವ ರೀತೀ ಎಲ್ಲವೂ ಬೇರೆ ಬೇರೆ. ಈ ಭಿನ್ನತೆಯೇ ಸಾಮಾನ್ಯವಾಗಿ ಜಗಳಕ್ಕೆ ಕಾರಣ. ನನಗೊಬ್ಬರು ಜಗಳವಾಡದೇ‌ ಗಂಡ‌ ಹೆಂಡತಿಯರ ನಡುವಿನ ಸಮಸ್ಯೆಯನ್ನು‌ ಹೇಗೆ ಪರಿಹರಿಸುವುದು ಎಂದು ಕೇಳಿದ್ದರು.

ಈಗ ನಾನು ಮೊದಲು ಹೆಂಡತಿಗೆ ಟಿಪ್ಸ್ ಕೊಡುತ್ತಿರುವೆ. ‌ನಂತರ ಮುಂದಿನ ಪೋಸ್ಟ್‌ನಲ್ಲಿ ಗಂಡಸರಿಗೆ ಟಿಪ್ಸ್‌ ಇದೆ.

ದಾಂಪತ್ಯ ಸಂವಹನಕ್ಕೆ 10 ಸೂತ್ರಗಳು

1) ಸರಿಯಾದ ಸಮಯ ಗುರುತಿಸಿ: ಗಂಡಸರು ಸಾಮಾನ್ಯವಾಗಿ ಇತರ ಕೆಲಸಗಳನ್ನು ಮಾಡುತ್ತಿರುವಾಗ ಪ್ರಮುಖ ವಿಷಯಗಳನ್ನು ಚರ್ಚಿಸಲು ಬಯಸುವುದಿಲ್ಲ. ನಿಮ್ಮ ಪತಿ ರಿಲ್ಯಾಕ್ಸ್‌ ಮೂಡ್‌ನಲ್ಲಿ ಇರುವಾಗ ಅಥವಾ ಒತ್ತಡವಲ್ಲದ ಸಮಯದಲ್ಲಿ ನೀವು ಹೇಳಬೇಕು ಎಂದುಕೊಂಡಿರುವ ವಿಷಯಗಳನ್ನು ಪ್ರಸ್ತಾಪಿಸಿ. ಇದಕ್ಕೆ ಕಾರಣ ಅವರ (ಗಂಡು) ಮಿದುಳು‌, ಅದು ಒಂದಕ್ಕಿಂತ ಹೆಚ್ಚು ಒತ್ತಡವನ್ನು ಸಹಿಸಲಾರದು.

ಗಂಡ ಟ್ರಾಫಿಕ್‌ನಲ್ಲಿಯೋ, ಕೆಲಸದಲ್ಲಿ ಇರುವಾಗಲೋ, ಇಲ್ಲ ಡ್ಯೂಟಿಗೆ ಹೊರಡುವಾಗಲೋ, ಕೆಲಸದಿಂದ ಬಂದು ಕೂಡಲೇ ಈ ಸಂದರ್ಭಗಳಲ್ಲಿ ನೀವು ಹೇಳಲು ಪ್ರಾರಂಭಿಸಿದರೆ, ಕೇಳುವ ಮನಸು ಹಾಗೂ ತಾಳ್ಮೆ ಎರಡೂ ಅವರಲ್ಲಿ ಇರುವುದಿಲ್ಲ. ಅದಕ್ಕೆ ಅತ್ಯುತ್ತಮ ನಡೆ ಎಂದರೆ ನಾನು‌ ಈಗ ನಿನ್ನ ಜೊತೆ‌ ಒಂದು ಮುಖ್ಯ ವಿಷಯ ಮಾತಾಡಬೇಕು, ಯಾವಾಗ‌ ಮಾತಾಡೋಣ? ಎಂದು ಕೇಳುವುದು.

2) ಕಿರುಚಬೇಡಿ, ವೇಗವಾಗಿ ಮಾತಾಡಬೇಡಿ, ನಿಂದಿಸಬೇಡಿ: ಗಂಡಸರಿಗಿರಲಿ ಅಥವಾ ಯಾರಿಗೇ ಇರಲಿ ಜೋರಾಗಿ ಕೋಪಗೊಂಡೋ, ಅಳುತ್ತಲೋ ಮಾತಾಡಿದರೆ ಮಾತು ಕೇವಲ ಶಬ್ಧವಾಗಿರುತ್ತಷ್ಟೇ ಹೊರತು ಮಾತುಗಳ ಅರ್ಥವನ್ನು ಮಿದುಳು ಗ್ರಹಿಸುವುದಿಲ್ಲ, ಅಂತಹ ಮಾತು ಮಿದುಳಿನಲ್ಲಿ ಉಳಿಯುವುದು ಇಲ್ಲ. ಆ ಅಳು, ಕಿರುಚಾಟಕ್ಕೆ ಬರುವ ಪ್ರತಿಕ್ರಿಯೆ ಫೈಟ್, ಫ್ಲೈಟ್ ಅಥವಾ ಫ್ರೀಜ್ (ಅಂದರೆ ಸಂಘರ್ಷ, ಅಥವಾ ಅಲ್ಲಿಂದ ಎದ್ದು ಹೋಗಿ ಬಿಡುವುದು, ಅಥವಾ ಇದ್ದಲ್ಲಿಯೇ ಮೌನವಾಗಿಬಿಡುವುದು). ಇವ್ಯಾವುದು ಕೂಡ‌ ಪರಿಹಾರಕ್ಕೆ ದಾರಿಯಲ್ಲ.

3) ಮಾತುಗಳನ್ನು ನೇರವಾಗಿ ಮತ್ತು ಸಂಕ್ಷಿಪ್ತವಾಗಿಸಿ: ಪುರುಷರು ಸಾಮಾನ್ಯವಾಗಿ ಸುತ್ತಿ ಬಳಸಿ ಆಡುವ ಮಾತುಗಳನ್ನು ಇಷ್ಟಪಡುವುದಿಲ್ಲ. ನೇರವಾದ ಮಾತನ್ನು ನಿರೀಕ್ಷಿಸುತ್ತಾರೆ (ಅವರ ಮಿದುಳು ಹೆಚ್ಚಿನ ಹಾಗೂ ಮುಖ್ಯವಲ್ಲದ ಮಾತುಗಳನ್ನು ಸುಲಭವಾಗಿ ನಿರ್ಲಕ್ಷ್ಯ ಮಾಡುತ್ತದೆ). ನಿಮ್ಮ ಕಳವಳಗಳನ್ನು ಸ್ಪಷ್ಟವಾಗಿ ಮತ್ತು ಕಡಿಮೆ ಸಾಲಿನಲ್ಲಿ ಹೇಳಲು ಪ್ರಯತ್ನಿಸಿ. ಅಸ್ಪಷ್ಟ ಅಥವಾ ಒಗಟು ಭಾಷೆಯನ್ನು ತಪ್ಪಿಸಿ. ಉದಾಹರಣೆಗೆ ನಾನು ನಿನ್ನನ್ನು ನಂಬಿ ಬಂದಿದ್ದೆ, ನೀನು ನನ್ನ ಮಾತನ್ನು ನಿರ್ಲಕ್ಷ್ಯ ಮಾಡ್ತೀಯ ಅಂತ ಗೊತ್ತು, ಆದರೂ ‌ಹೇಳ್ತಿದ್ದೀನಿ, ನಾನು‌‌ ಸ್ಟುಪಿಡ್... ಅಂತೆಲ್ಲಾ ಮಾತು ಶುರು ಮಾಡಿದರೆ ಅವರಲ್ಲಿ ಕೇಳುವ ಆಸಕ್ತಿಯೇ ಇರುವುದಿಲ್ಲ.

4) ಸಮಸ್ಯೆಗಳನ್ನು ಗುಡ್ಡೆ ಹಾಕುವುದಕ್ಕಿಂತ ಪರಿಹಾರದ ಮೇಲೆ ಗಮನ ಕೇಂದ್ರೀಕರಿಸಿ: ಗಂಡಸರ ಮಿದುಳು ಸಾಮಾನ್ಯವಾಗಿ ಪರಿಹಾರ ಕೇಂದ್ರಿತವಾಗಿರುತ್ತದೆ. ಆದ್ದರಿಂದ ಗಂಡಸರು ಸಾಮಾನ್ಯವಾಗಿ ರಚನಾತ್ಮಕ ಪರಿಹಾರಗಳನ್ನು ಕೊಡುವ ಚರ್ಚೆಗಳನ್ನು ಬಯಸುತ್ತಾರೆ. ಆದ್ದರಿಂದ ಸಮಸ್ಯೆಯ ಮೇಲೆ ಮಾತ್ರ ಕೇಂದ್ರೀಕರಿಸದೇ ಒಟ್ಟಿಗೆ ಪರಿಹಾರಗಳನ್ನು ಕಂಡುಹಿಡಿಯುವ ಬಗ್ಗೆ ಮಾತನಾಡುವುದರ ಚೌಕಟ್ಟಿನಲ್ಲಿ ನಿಮ್ಮ ಮಾತನ್ನು ರೂಪಿಸಿ. ಉದಾಹರಣೆಗೆ ನಮ್ಮ‌ ದಾಂಪತ್ಯದಲ್ಲಿ ಆಗೋ‌ ಜಗಳವನ್ನು ತಪ್ಪಿಸಲು ಕೆಲವೊಂದು ಸೊಲ್ಯೂಷನ್ಸ್ ಹುಡುಕೋಣʼ ಹೀಗೆ ನೇರವಾಗಿ, ಸ್ವಷ್ಪವಾಗಿ ಮಾತನಾಡಿ.

5) ಅವರ ದೃಷ್ಟಿಕೋನವನ್ನು ಗೌರವಿಸಿ: ನಿಮ್ಮ ಪತಿಯ ದೃಷ್ಟಿಕೋನವನ್ನು ವಿಮರ್ಶೆ ಮಾಡಿ. ಹಾಗೆಂದು ಅವರ ಯೋಚನೆಗಳನ್ನು ಅಥವಾ ಭಾವನೆಗಳನ್ನು ನಿರ್ಲಕ್ಷ್ಯ ಮಾಡಬೇಡಿ. ನೀವು ಅವರ ದೃಷ್ಟಿಕೋನವನ್ನು ಒಪ್ಪದಿದ್ದರೂ ಸಹ ಅದನ್ನು ಗೌರವಿಸಿ ಮತ್ತು ಅದನ್ನು ಅರ್ಥ ಮಾಡಿಕೊಂಡಿದ್ದೀರಿ ಎಂದು ತೋರ್ಪಡಿಸಿ. ಉದಾ‌: 'ನೀವು ಇಷ್ಟೆಲ್ಲಾ ಮಾಡುತ್ತಿರುವುದು ‌ನಮ್ಮ ಸಂಸಾರಕ್ಕಾಗಿ ಅಂತ‌‌ ಗೊತ್ತಿದೆʼ ಎಂದು ಹೇಳಿ.

6) ನಾನು ಎನ್ನುವ ಬದಲು ನಾವು ಎನ್ನಿ: ನಾನು ಅನ್ನುವ ಬದಲು ʼನಾವುʼ ಬಳಸಿ. ʼನಾವುʼ ಮತ್ತು ʼನಮ್ಮʼ ಎಂತಹ ಪದಗಳ ಸೇರ್ಪಡೆಯ ಮೂಲಕ ನೀವು ಇಬ್ಬರೂ ಸೇರಿ ಸಮಸ್ಯೆಯನ್ನು ಎದುರಿಸುತ್ತಿದ್ದೀರಿ ಎಂಬುದನ್ನು ಒತ್ತಿ ಹೇಳಿ. ಈ ಸಮಸ್ಯೆ ಇಬ್ಬರಿಗೂ‌ ಸೇರಿದ್ದು ‌ಹಾಗೆಯೇ ಪರಿಹಾರಕ್ಕೆ ಸಹಕಾರದ ಅಗತ್ಯವಿದೆ ಎಂಬ ಭಾವನೆಯನ್ನು ಬೆಳೆಸುತ್ತದೆ. ಉದಾ ʼಈ ಪ್ರಸ್ತುತ ಸಮಸ್ಯೆಯನ್ನು ನಾವಿಬ್ಬರೂ ಜೊತೆಯಾಗಿ ಖಂಡಿತ ಪರಿಹಾರ ಕಂಡುಕೊಳ್ಳಬಲ್ಲೆವು ಅಂತ‌ ನಮಗಿಬ್ಬರಿಗೂ ಗೊತ್ತಿದೆʼ, ಹೀಗೆ ಮಾತನಾಡಿ.

7) ಧನಾತ್ಮಕ ಅಂಶಗಳನ್ನು ಹೈಲೈಟ್ ಮಾಡಿ: ಈ ವಿಷಯಕ್ಕೆ ಸಂಬಂಧಿಸಿದ ನಿಮ್ಮ ಪತಿಯ ಧನಾತ್ಮಕ ಗುಣಗಳನ್ನು ಅಥವಾ ಕ್ರಮಗಳನ್ನು ಒಪ್ಪಿಕೊಳ್ಳುವ ಮೂಲಕ ಮಾತನಾಡಲು ಪ್ರಾರಂಭಿಸಿ. ಇದು ಪಾಸಿಟಿವ್ ಧಾಟಿಯನ್ನು ಕಾಪಾಡಿಕೊಳ್ಳಲು ಮತ್ತು ಕಿರಿಕಿರಿ ಭಾವವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ʼನಿಮ್ಮ‌ ಕೆಲಸ‌, ನಿಮ್ಮ‌ ತನ್ಮಯತೆ ನಿಜಕ್ಕೂ ಮೆಚ್ಚಬೇಕಾದ್ದುʼ ಇಂತಹ ಮೆಚ್ಚುಗೆ ಮಾತುಗಳನ್ನು ಹೇಳಿ.

8) ಸಂದರ್ಭ ಮತ್ತು ಉದಾಹರಣೆಗಳನ್ನು ಒದಗಿಸಿ: ಸಮಸ್ಯೆ ಎದುರಾದ ನಿರ್ದಿಷ್ಟ ಉದಾಹರಣೆಗಳನ್ನು ಅಥವಾ ಸಂದರ್ಭಗಳನ್ನು ಒದಗಿಸುವ ಮೂಲಕ ನಿಮ್ಮ ಕಳವಳಗಳ ಸಂದರ್ಭವನ್ನು ಅರ್ಥಮಾಡಲು ಪತಿಗೆ ಸಹಾಯ ಮಾಡಿ. ಇದರಿಂದ ಅವರಿಗೆ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ.

9) ತಾಳ್ಮೆಯಿಂದ ಕಾಯುವುದು ಬಹಳ ಮುಖ್ಯ: ನೀವು ಹೇಳಿದ ‌ವಿಷಯವನ್ನು ಅರ್ಥ ಮಾಡಿಕೊಂಡು ಅದನ್ನು ಪ್ರತಿಕ್ರಿಯಿಸಲು ನಿಮ್ಮ ಪತಿಗೆ ಸಮಯ ನೀಡಿ. ಈಗಲೇ ನನಗೆ ಎಲ್ಲಾ ನಿರ್ಧಾರ ತಗೋಬೇಕು ಅಂತೆಲ್ಲಾ ಒತ್ತಾಯಿಸದಿರಿ. ಏಕೆಂದರೆ ಪುರುಷರಿಗೆ ತಮ್ಮ ಯೋಚನೆಗಳನ್ನು ಹಂಚಿಕೊಳ್ಳುವ ಮೊದಲು ಅಂತರ್ಮನನ ಮಾಡಿಕೊಂಡು ಅದನ್ನು ಯೋಚನೆ ಮಾಡಿ ಮಾತಿನ ರೂಪಕ್ಕೆ ತರಲು ಸಮಯ ಬೇಕಾಗಬಹುದು. ಅವರು ಮಾತನಾಡಲು ಸಿದ್ಧವಾಗುವವರೆಗೆ ತಾಳ್ಮೆಯಿಂದ ಕಾಯಿರಿ.

10) ಪತಿಯ ಆಯ್ಕೆಯನ್ನು ಗೌರವಿಸಿ, ಪ್ರೀತಿ-ಬೆಂಬಲ ಸೂಚಿಸಿ: ನಿಮ್ಮ ಪತಿ ಮತ್ತು ಅವರು ದಾಂಪತ್ಯಕ್ಕೆ ನೀಡಿದ ಕೊಡುಗೆಗಳನ್ನು ವ್ಯಕ್ತಪಡಿಸಿ. ಕಷ್ಟದ ವಿಷಯಗಳನ್ನು ಚರ್ಚಿಸುವಾಗಲೂ ಸಹ ಮುಕ್ತ ಸಂವಹನದಲ್ಲಿ ತೊಡಗಿಸಿಕೊಳ್ಳಲು ಅವರ ಆಯ್ಕೆಯನ್ನು ಗೌರವಿಸಿ. ನಿಮ್ಮ ಪ್ರೀತಿ ಮತ್ತು ಬೆಂಬಲ ಅವರಿಗೆ ಯಾವಾಗಲೂ ಇದೆ‌ ಎಂದು ಹೇಳುವ ಮೂಲಕ ಮಾತನಾಡುವುದನ್ನು ಮುಗಿಸಿ. ನಿಮ್ಮ ಉದ್ದೇಶ ಟೀಕೆ ಮಾಡುವುದು ಅಥವಾ ಅವನಿಗೆ ನೋವುಂಟು ಮಾಡುವುದು ಅಲ್ಲ, ಆದರೆ ಪ್ರಾಮಾಣಿಕ ಸಂವಹನದ ಮೂಲಕ ನಿಮ್ಮ ಸಂಬಂಧವನ್ನು ಬಲಪಡಿಸುವುದು ಎಂದು ಖಾತ್ರಿಪಡಿಸಿ.

ಕಾಳಜಿ ಅಂಕಣ. ಡಾ ರೂಪಾ ರಾವ್
ಕಾಳಜಿ ಅಂಕಣ. ಡಾ ರೂಪಾ ರಾವ್

ಡಾ ರೂಪಾ ರಾವ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ ರೂಪಾ ರಾವ್‌ ಬೆಂಗಳೂರು ವಾಸಿ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ವಿಶ್ವ ಮಾನ್ಯ ಐಸಿಎಫ್ ಸಂಸ್ಥೆಯಿಂದ ಕೋಚಿಂಗ್‌ನಲ್ಲಿ ಪಿಸಿಸಿ ಕ್ರೆಡೆನ್ಷಿಯಲ್ ಪಡೆದಿದ್ದಾರೆ. ಎನ್‌ಜೆನ್ ಸಾಫ್ಟ್ ಸಲ್ಯೂಶನ್ ಮತ್ತು ನೊಬೆಲ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಅನೂಹ್ಯ ಬೇಸಿಗೆ ಶಿಬಿರ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. 20 ವರ್ಷಗಳ ವೃತ್ತಿಜೀವನದಲ್ಲಿ ವೃತ್ತಿಪರರು, ತರಬೇತುದಾರರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹತ್ತಾರು ಸಾವಿರ ಜನರಿಗೆ ತರಬೇತಿ, ಕೌನ್ಸೆಲಿಂಗ್ ನೀಡಿದ ಅನುಭವ ಇವರದು. ಸಂಪರ್ಕ ಸಂಖ್ಯೆ: 97408 66990

ವಿಭಾಗ