ಶೈಕ್ಷಣಿಕ ಪ್ರವಾಸ ಹೊರಟಿದ್ದೀರಾ? ಕರ್ನಾಟಕದ ಈ ಪ್ರಮುಖ ಮೃಗಾಲಯಗಳು ನಿಮ್ಮ ಪ್ರವಾಸದ ಪಟ್ಟಿಯಲ್ಲಿ ಇರಲಿ
Nov 21, 2024 03:52 PM IST
ಮೈಸೂರು ಸೇರಿದಂತೆ ಕರ್ನಾಟಕದಲ್ಲಿ ಪ್ರಮುಖ ಮೃಗಾಲಯಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
- ನೀವೇನಾದರೂ ಶಾಲಾ-ಕಾಲೇಜಿನಲ್ಲಿ ಶೈಕ್ಷಣಿಕ ಪ್ರವಾಸದ ಪ್ಲಾನ್ ಮಾಡುತ್ತಿದ್ದರೆ ಕರ್ನಾಟಕದ ಪ್ರಮುಖ ಮೃಗಾಲಯಗಳಿಗೆ ಭೇಟಿ ನೀಡಬಹುದು. ನಿಮ್ಮಗಾಗಿ ಮೃಗಾಲಯಗಳಲ್ಲಿರುವ ಶುಲ್ಕ, ಸಮಯ, ನೋಡಬಹುದಾದ ಪ್ರಮುಖ ಪ್ರಾಣಿಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ.
ವಿದ್ಯಾರ್ಥಿಗಳ ಜ್ಞಾನಾರ್ಜನೆಗಾಗಿ ಶಾಲಾ-ಕಾಲೇಜುಗಳಲ್ಲಿ ಶೈಕ್ಷಣಿಕ ಪ್ರವಾಸಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಒಂದು ವೇಳೆ ನೀವೇನಾದರೂ ಕರ್ನಾಟಕದಲ್ಲಿನ ಪ್ರವಾಸಿ ತಾಣಗಳ ವೀಕ್ಷಣೆಗಾಗಿ ಶಾಲೆಯಿಂದ ಪ್ರವಾಸವನ್ನು ಕೈಗೊಂಡರೆ ವಿದ್ಯಾರ್ಥಿಗಳಿಗೆ ಇಲ್ಲಿ ನೀಡಿರುವ ಪ್ರಮುಖ ಮೃಗಾಲಯಗಳಿಗೆ ಭೇಟಿ ನೀಡುವುದನ್ನು ಮರೆಯಬೇಡಿ. ಮಕ್ಕಳ ವ್ಯಾಸಂಗಕ್ಕೂ ಇದು ನೆರವಾಗುತ್ತದೆ. ಪ್ರಮುಖ ಮೃಗಾಲಯಗಳು ಮತ್ತು ಅವುಗಳ ವಿವರವನ್ನು ಇಲ್ಲಿ ನೀಡಲಾಗಿದೆ.
ಮೈಸೂರು ಝೂ (ಶ್ರೀ ಜಯಚಾಮರಾಜೇಂದ್ರ ಝಿಯೋಲಾಜಿಕಲ್ ಗಾರ್ಡನ್ಸ್)
ಭಾರತದಲ್ಲಿರುವ ಪ್ರಮುಖ ಮೃಗಾಲಯಗಳಲ್ಲಿ ಮೈಸೂರಿನ ಝೂಗೆ ಪ್ರಮುಖ ಸ್ಥಾನವಿದೆ. ಇದನ್ನು ಅಧಿಕೃತವಾಗಿ ಶ್ರೀ ಚಾಮರಾಜೇಂದ್ರ ಝೂಲಾಜಿಕಲ್ ಗಾರ್ಡನ್ಸ್ ಎಂದು ಕರೆಯಲಾಗುತ್ತದೆ. ಮೈಸೂರು ಅರಮನೆಯಿಂದ ಸುಮಾರು 700 ಮೀಟರ್ ದೂರದಲ್ಲಿರುವ ಈ ಪ್ರಾಣಿಗಳ ಸಂಗ್ರಹಾಲಯ ಸುಮಾರು 157 ಎಕರೆ ವಿಸ್ತೀರ್ಣದಲ್ಲಿದೆ. ಇದನ್ನು ಭಾರತದ ಅತ್ಯಂತ ಹಳೆಯ ಮೃಗಾಲಯ ಅಂತಲೂ ಕರೆಯಲಾಗುತ್ತದೆ. ಆನೆ, ಹುಲಿ, ಸಿಂಹ, ಪಕ್ಷಿಗಳು ಸೇರಿದಂತೆ ವಿವಿಧ ಜಾತಿಗಳ ನೂರಾರು ಪ್ರಾಣಿ, ಪಕ್ಷಿಗಳು ಇಲ್ಲಿವೆ. ಪ್ರತಿನಿತ್ಯ ಸಾವಿರಾರು ಮಂದಿ ಮೈಸೂರು ಮೃಗಾಲಯಕ್ಕೆ ಬಂದು ಪ್ರಾಣಿ ಪಕ್ಷಿಗಳನ್ನು ಕಣ್ತುಂಬಿಕೊಳ್ಳುತ್ತಾರೆ.
ಹುಲಿ ಮತ್ತು ಸಿಂಹ ಸಫಾರಿ, ಶಿವಮೊಗ್ಗ
ಶಿವಮೊಗ್ಗದಿಂದ ಸುಮಾರು 10 ಕಿಲೋ ಮೀಟರ್ ದೂರದಲ್ಲಿರುವ ತ್ಯಾವರೆಕೊಪ್ಪ ಮೃಗಾಲಯದಲ್ಲಿ ಸಿಂಹ ಮತ್ತು ಸಿಂಹ ಸಫಾರಿ ಮಾಡಬಹುದು. 250 ಹೆಕ್ಟೇರ್ ವಿಸ್ತೀರ್ಣದಲ್ಲಿ ಮೃಗಾಲಯವಿದ್ದು, ಸಫಾರಿಯಲ್ಲಿ 4 ಸಿಂಹ ಹಾಗೂ 7 ಹುಲಿಗಳನ್ನು ಕಾಣಬಹುದು.
ಶುಕ ವನ, ಮೈಸೂರು
ಮೈಸೂರಿನಲ್ಲಿರುವ ಶುಕ ವನದಲ್ಲಿ ಪಕ್ಷಿಧಾಮ ಅಂತಲೂ ಕರೆಯಲಾಗುತ್ತದೆ. ಇಲ್ಲಿ ತುಂಬಾ ಅಪರೂಪದ, ವಿಲಕ್ಷಣ ಪಕ್ಷಿ ಪ್ರಭೇದಗಳನ್ನು ಕಾಣಬಹುದು. ಗಾಯಗೊಂಡ ಮತ್ತು ದೌರ್ಜನ್ಯಕ್ಕೊಳಗಾ ಪಕ್ಷಿಗಳಿಗೆ ಇದು ಪುನವರ್ಸತಿ ಕೇಂದ್ರವಾಗಿದೆ. ವಿಶೇಷವೆಂದರೆ ಇಲ್ಲಿ 450 ಹೆಚ್ಚು ಜಾತಿಯ ಗಿಳಿಗಳಿವೆ. ಶಾಲಾ ಮಕ್ಕಳ ಪ್ರವಾಶಕ್ಕೆ ಶುಕ ವನ ಪ್ರಮುಖವಾಗಿದೆ. ಬೆಳಗ್ಗೆ 9.30 ರಿಂದ 12.30 ಮತ್ತು ಮಧ್ಯಾಹ್ನ 3.30 ರಿಂದ ಸಂಜೆ 5 ರವರಿಗೆ ಶುಕ ವನದಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಗದಗ ಝೂ
ಗದಗ ತಾಲೂಕಿನ ಬಿಂಕದಕಟ್ಟಿಯಲ್ಲಿರುವ ಮಿನಿ ಮೃಗಾಲಯವನ್ನು 1972 ರಲ್ಲಿ ಸ್ಥಾಪಿಸಲಾಗಿದೆ. 16.01 ಹೆಕ್ಟರ್ ನಲ್ಲಿರುವ ಈ ಮೃಗಾಲಯದಲ್ಲಿ ಹುಲಿ, ಕರಡಿ, ಸಿಂಹ, ತೋಳ ಸೇರಿದಂತೆ ಹಲವು ರೀತಿಯ ಪ್ರಾಣಿಗಳಿವೆ. ಬಿಂಕದಕಟ್ಟಿ ಗ್ರಾಮದಿಂದ 1 ಕಿಲೋ ಮೀಟರ್ ದೂರದಲ್ಲಿ ಮೃಗಾಲಯವಿದೆ.
ಬರ್ಡ್ಸ್ ಆಫ್ ಪ್ಯಾರಡೈಸ್, ಬೆಂಗಳೂರು
ಕನಕಪುರ ರಸ್ತೆಯ ಆರ್ಟ್ ಆಫ್ ಲಿವಿಂಗ್ ಸಮೀಪದಲ್ಲಿರುವ ಬರ್ಡ್ಸ್ ಆಫ್ ಪ್ಯಾರಡೈಸ್ ಶಾಲಾ ವಿದ್ಯಾರ್ಥಿಗಳಿಗೆ ಹೇಳಿಮಾಡಿಸಿದಂತ ಪ್ರವಾಸಿ ತಾಣವಾಗಿದ್ದು, ಇಲ್ಲಿ ನೂರಾರು ಪಕ್ಷಿಗಳನ್ನು ಕಾಣಬಹುದು. ಮಂಗಳವಾರ ಹೊರತುಪಡಿಸಿ ವಾರದ ಆರು ದಿನಗಳ ಕಾಲ ಪಕ್ಷಿಗಳ ವೀಕ್ಷಣೆಗೆ ಬರ್ಡ್ಸ್ ಆಫ್ ಪ್ಯಾರಡೈಸ್ ಮುಕ್ತವಾಗಿದ್ದು, ವಾರದ ದಿನಗಳಲ್ಲಿ ವಯಸ್ಕರಿಗೆ 200 ರೂಪಾಯಿ, ವಿಶೇಷ ರಜಾ ದಿನಗಳು ಹಾಗೂ ವಾರಂತ್ಯದಲ್ಲಿ 250 ರೂಪಾಯಿ ಪ್ರವೇಶ ಶುಲ್ಕ ಇರುತ್ತದೆ. 3 ವರ್ಷ ಮೇಲ್ಪಟ್ಟವರಿಗೆ ಪೂರ್ಣ ಟಿಕೆಟ್ ದರವನ್ನು ನಿಗದಿ ಮಾಡಲಾಗಿದೆ. ಬೆಳಗ್ಗೆ 10.30 ರಿಂದ ಸಂಜೆ 4 ಗಂಟೆಯವರಿಗೆ ಬಡ್ರ್ಸ್ ಆಫ್ ಪ್ಯಾರಡೈಸ್ ತೆರೆದಿರುತ್ತವೆ. ವಿಶೇಷವಾಗಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಪ್ರವಾಸಕ್ಕೆ ಬರುವವರು ಪಕ್ಷಿಗಳ ಲೋಕವನ್ನು ಕಣ್ತುಂಬಿಕೊಳ್ಳಬಹುದು.
ಬನ್ನೇರುಘಟ್ಟ ಜೈವಿಕ ಉದ್ಯಾನವನ, ಬೆಂಗಳೂರು
ಭಾರತದ ಅತ್ಯಂತ ಪ್ರಸಿದ್ಧ ರಾಷ್ಟ್ರೀಯ ಉದ್ಯಾನವನಗಳಲ್ಲಿ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನ ಪ್ರಮುಖವಾದದ್ದು. ಇಲ್ಲಿ ಹಲವಾರು ಜಾತಿಯ ಪಕ್ಷಿಗಳು ಮತ್ತು ಪ್ರಾಣಿಗಳನ್ನು ಕಾಣಬಹುದು. ವಿಶೇಷವಾಗಿ ಹುಲಿ ಮತ್ತು ಸಿಂಹ ಸಫಾರಿಗೆ ಹೆಸರುವಾಸಿಯಾಗಿದೆ. 104.27 ಚದರ ಕಿಲೋ ಮೀಟರ್ ವಿಸ್ತಾರವಾದ ಪ್ರದೇಶದಲ್ಲಿ ಹರಡಿಕೊಂಡಿದೆ. ಪ್ರಾಣಿ ಪ್ರಿಯರು ಮತ್ತು ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ಬನ್ನೇರುಘಟ್ಟ ಜೈವಿಕ ಉದ್ಯಾನವನ ಹೇಳಿ ಮಾಡಿಸಿದಂತಿದೆ. ಬೆಂಗಳೂರಿನಿಂದ 22 ಕಿಲೋ ಮೀಟರ್ ದೂರದಲ್ಲಿದೆ.
ಕಿತ್ತೂರು ರಾಣಿ ಚೆನ್ನಮ್ಮ ಝೂ, ಭೂತರಾಮನಹಟ್ಟಿ
ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯ 31.68 ಹೆಕ್ಟರ್ ಪ್ರದೇಶದಲ್ಲಿ ಇದೆ. ಮೃಗಾಲಯವನ್ನು 1989 ರಲ್ಲಿ ಸ್ಥಾಪಿಸಲಾಗಿದ್ದು, ಬೆಳಗಾವಿ ನಗರದಿಂದ 12 ಕಿಲೋ ಮೀಟರ್ ದೂರದಲ್ಲಿದೆ. ವಯಸ್ಕರಿಗೆ 50 ರೂಪಾಯಿ ಪ್ರವೇಶ ಶುಲ್ಕ ವಿದ್ದು, 5 ರಿಂದ 12 ವರ್ಷದೊಳಗಿನ ಮಕ್ಕಳಿಗೆ 30 ರೂಪಾಯಿ ಶುಲ್ಕವಿದೆ. ಫೋಟೊಗ್ರಫಿಗೆ 20, ವಿಡಿಯೊಗ್ರಫಿಗೆ 50 ರೂಪಾಯಿ ಶುಲ್ಕವನ್ನು ನಿಗದಿ ಮಾಡಲಾಗಿದೆ. ಟೈಗರ ಸಫಾರಿಗೆ ವಯಸ್ಕರಿಗೆ 40 ರೂಪಾಯಿ, 5 ರಿಂದ 12 ವರ್ಷದೊಳಗಿನ ಮಕ್ಕಳಿಗೆ 20 ರೂಪಾಯಿ ನಿಗದಿ ಮಾಡಲಾಗಿದೆ. ಮಂಗಳವಾರ ಹೊರತುಪಡಿಸಿದ ವಾರದಲ್ಲಿ ಬುಧವಾರದಿಂದ ಸೋಮವಾರದವರಿಗೆ ಬೆಳಗ್ಗೆ 9.30 ರಿಂದ ಸಂಜೆ 5.30 ರವರಿಗೆ ಮೃಗಾಲಯ ಭೇಟಿಯ ಸಮಯವಾಗಿದೆ.
ಅಟಲ್ ಬಿಹಾರಿ ವಾಜಪೇಯಿ ಝೂಲಾಜಿಕಲ್ ಪಾರ್ಕ್, ಬಳ್ಳಾರಿ
ಬಳ್ಳಾರಿ ಜಿಲ್ಲೆಯಲ್ಲಿರುವ ಈ ಪ್ರಾಣಿಸಂಗ್ರಹಾಲಯ ಹಂಪಿಯಿಂದ 10 ಕಿಲೋ ಮೀಟರ್ ದೂರದಲ್ಲಿದೆ. 141 ಹೆಕ್ಟೇರ್ ಪ್ರದೇಶದ ಈ ಉದ್ಯಾನದಲ್ಲಿ ಹುಲಿ, ಸಿಂಹ, ಸ್ಟಾಟರ್ ಜಿಂಕೆ, ಸಾಂಬಾರ್, ಬಾರ್ಕಿಂಗ್ ಜಿಂಕೆ ಹಾಗೂ ಇತರೆ ಪ್ರಾಣಿಗಳನ್ನು ಹೊಂದಿದೆ. ಮೊಸಳೆ, ಕತ್ತೆಕಿರುಬ, ಚಿರತೆ, ಕಡಿಮೆ, ಆಮನೆ, ನರಿ ಹಾಗೂ ಲಾಂಗುರ್ ನಂತಹ ಹಲವಾರು ಪ್ರಾಣಿಗಳನ್ನು ಕಾಣಬಹುದು. ಈ ಮೃಗಾಲಯದಲ್ಲಿ ಸಫಾರಿಯಲ್ಲಿ 80 ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು, ನಾಲ್ಕು ಸಿಂಹಗಳು ಹಾಗೂ ಅನೇಕ ಹುಲಿಗಳನ್ನು ನೋಡಬಹುದು. ಮಾರ್ಚ್ ನಿಂದ ಜೂನ್ ವರಿಗೆ ಈ ಮೃಗಾಲಯವನ್ನು ನೋಡಲು ಉತ್ತಮ ಸಮಯವಾಗಿದೆ.
ಜೀವಾ ಪಾರ್ಕ್, ಬೆಂಗಳೂರು
ದೇವನಹಳ್ಳಿ ತಾಲೂಕಿನ ನಂದಿ ಬೆಟ್ಟದ ಸಮೀಪದಲ್ಲಿ ಜೀವಾ ಪಾರ್ಕ್ ಇದೆ. ಪಕ್ಷಿಗಳು, ಹಾವು, ಕೋಳಿ, ಕುರಿ, ಮೇಕೆ, ಧನಗಳು, ಕುದುರೆ, ಮೊಲ, ಆಮೆ ಸೇರಿದಂತೆ ವಿವಿಧ ಬಗ್ಗೆ ಪ್ರಾಣಿ, ಪಕ್ಷಿಗಳನ್ನು ಕಣ್ತುಂಬಿಕೊಳ್ಳಬಹುದು.
ಜೀವಾ ಪಾರ್ಕ್ ವಿವರ
ಜೀವಾ ಪಾರ್ಕ್, ನಂದಿ ಬೆಟ್ಟ ಸಮೀಪ, ಕೋಯಿರಾ, ದೇವನಹಳ್ಳಿ ತಾಲೂಕು, ಕರ್ನಾಟಕ
ಸಮಯ - ಬೆಳಗ್ಗೆ 8.30 ರಿಂದ ಸಂಜೆ 5.30 ರವರಿಗೆ
ಪ್ರವೇಶ ಶುಲ್ಕ - 2 ರಿಂದ 10 ವರ್ಷದೊಳಗಿನ ಮಕ್ಕಳಿಗೆ 200 ರೂಪಾಯಿ, 10 ವರ್ಷದಿಂದ ಮಲ್ಪಟ್ಟ ವಯಸ್ಕರಿಗೆ 250 ರೂಪಾಯಿ
ಬುಕಿಂಗ್ - ಬುಧವಾರದಿಂದ ಸೋಮವಾರದವರಿಗೆ
ಸಂಪರ್ಕಿಸಬೇಕಾದವರ ಮೊಬೈಲ್ ಸಂಖ್ಯೆ - 82776 69499