ವೈರಲ್ ಆಗ್ತಿದೆ ಪಪ್ಪಾಯ ಎಲೆಯ ಫೇಸ್‌ಪ್ಯಾಕ್; ತ್ವಚೆಯ ಅಂದ, ಆರೋಗ್ಯ ಹೆಚ್ಚಲು ಇದು ನಿಜಕ್ಕೂ ಪರಿಣಾಮಕಾರಿಯೇ, ಇಲ್ಲಿದೆ ತಜ್ಞರ ಉತ್ತರ
Oct 09, 2024 10:59 AM IST
ತ್ವಚೆಯ ಅಂದ ಹೆಚ್ಚಿಸುವ ಪಪ್ಪಾಯ ಎಲೆಯ ಫೇಸ್‌ಪ್ಯಾಕ್
- ಪಪ್ಪಾಯ ಹಣ್ಣಿನಿಂದ ಚರ್ಮದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿರುವುದನ್ನು ಕೇಳಿದ್ದೇವೆ. ಆದರೆ ಪಪ್ಪಾಯ ಎಲೆಯಿಂದಲೂ ತ್ವಚೆಗೆ ಹಲವು ಪ್ರಯೋಜನಗಳಿವೆ, ಇದರ ಫೇಸ್‌ಪ್ಯಾಕ್ ಚರ್ಮದ ಅದ್ಭುತ ಬದಲಾವಣೆಗೆ ಕಾರಣವಾಗುತ್ತದೆ ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹಾಗಾದರೆ ಪಪ್ಪಾಯ ಎಲೆ ನಿಜಕ್ಕೂ ಅಂದ ಹೆಚ್ಚಿಸುತ್ತಾ, ಇಲ್ಲಿದೆ ತಜ್ಞರ ಉತ್ತರ.
ಇಂದಿನ ಒತ್ತಡದ ಜೀವನಶೈಲಿ, ಕಲುಷಿತ ವಾತಾವರಣ, ಅಸಮರ್ಪಕ ಆಹಾರಪದ್ಧತಿಯ ನಡುವೆ ಚರ್ಮದ ಆರೋಗ್ಯ ಕಾಪಾಡಿಕೊಳ್ಳುವುದು ಸವಾಲಾಗಿರುವುದು ಸುಳ್ಳಲ್ಲ. ಇದಕ್ಕಾಗಿ ಹಲವು ಹೊಸ ಹೊಸ ಮಾರ್ಗಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಇತ್ತೀಚಿನ ದಿನಗಳಲ್ಲಿ ಪಪ್ಪಾಯ ಎಲೆಯ ಫೇಸ್‌ಪ್ಯಾಕ್ ಕುರಿತ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ಇದು ಬೋಟಕ್ಸ್‌ಗಿಂತಲೂ ಮಿಲಿಯನ್ ಪಟ್ಟು ಪರಿಣಾಮಕಾರಿ ಎಂದು ಹೇಳಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಜನರು ಮನೆಮದ್ದಿನ ಮೇಲೆ ಹೆಚ್ಚು ಒಲವು ತೋರುತ್ತಿರುವ ಕಾರಣ ಇಂತಹ ವಿಚಾರಗಳು ಸಾಕಷ್ಟು ವೈರಲ್ ಆಗುತ್ತವೆ. ಆದರೆ ಒಂದು ವಿಚಾರ ನೆನಪಿಡಿ, ಮನೆಮದ್ದುಗಳಿಂದ ಅಡ್ಡಪರಿಣಾಮಗಳೇ ಇಲ್ಲ ಎಂಬುದನ್ನು ನಂಬಲು ಆಗುವುದಿಲ್ಲ. ಆದರೆ ಇದು ಎಲ್ಲರ ಚರ್ಮದ ಮೇಲೂ ಒಂದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂಬುದನ್ನ ನಾವು ಮರೆಯಬಾರದು.
ಯೋಗ ತರಬೇತುದಾರ ಮಾನ್ಸಿ ಗುಲಾಟಿ ಎನ್ನುವವರು ‘ಪಪ್ಪಾಯ ಎಲೆಯ ಬೊಟೊಕ್ಸ್‌ಗಿಂತ ಮಿಲಿಯನ್ ಪಟ್ಟು ಪ್ರಬಲವಾಗಿದೆ‘ ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ತ್ವಚೆಗೆ ಪಪ್ಪಾಯ ಎಲೆ ಪ್ರಯೋಜನಗಳು
ಪಪ್ಪಾಯ ಎಲೆಯ ಫೇಸ್‌ಪ್ಯಾಕ್ ಬಳಸುವುದರಿಂದ ಚರ್ಮದ ಮೇಲಿನ ಸುಕ್ಕು ಹಾಗೂ ಸೂಕ್ಷ್ಮ ರೇಖೆಗಳು ತಕ್ಷಣಕ್ಕೆ ನಿವಾರಣೆಯಾಗುತ್ತವೆ. ಇದು ಮೊಡವೆ, ಚರ್ಮದ ಟೋನ್ ಸಮಸ್ಯೆ ಹಾಗೂ ಪಿಗ್ಮಂಟೇಷನ್ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ ಎಂದು ಗುಲಾಟಿ ಹೇಳಿದ್ದಾರೆ.
ಪಪ್ಪಾಯ ಎಲೆಯ ಫೇಸ್‌ಪ್ಯಾಕ್ ತಯಾರಿಸುವುದು
ಪಪ್ಪಾಯಿ ಎಲೆಗಳನ್ನು 15 ನಿಮಿಷಗಳ ಕಾಲ ನೀರಿನಲ್ಲಿ ಅದ್ದಿ. ನಂತರ ಅದನ್ನು ನುಣ್ಣಗೆ ಪೇಸ್ಟ್ ಮಾಡಿ. ಅದಕ್ಕೆ ಮೊಸರು ಹಾಗೂ ಚಿಟಿಕೆ ಅರಿಸಿನ ಸೇರಿಸಿ. ಇದನ್ನು ಬಳಸುವುದರಿಂದ ನಿಮ್ಮ ತ್ವಚೆಯಲ್ಲಿ ಅದ್ಭುತ ಬದಲಾವಣೆಯಾಗುತ್ತದೆ‘ ಎಂದು ಗುಲಾಟಿ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಈ ಫೇಸ್‌ಪ್ಯಾಕ್ ನಿಜಕ್ಕೂ ಪರಿಣಾಮಕಾರಿಯೇ?
‘ಪಪ್ಪಾಯ ಎಲೆಯ ಫೇಸ್‌ಪ್ಯಾಕ್‌ಗೂ ಬೊಟೊಕ್ಸ್‌ಗೂ ಹೋಲಿಕೆ ಸರಿಯಲ್ಲ, ಏಕೆಂದರೆ ಈ ಎರಡೂ ಭಿನ್ನ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ‘ ಎಂದು ನವದೆಹಲಿಯ ಕಾಸ್ಮೆಟಿಕ್ ಸ್ಕಿನ್ ಮತ್ತು ಹೋಮಿಯೋ ಕ್ಲಿನಿಕ್ ರಜೌರಿ ಗಾರ್ಡನ್‌ನ ಸೌಂದರ್ಯಶಾಸ್ತ್ರದ ವೈದ್ಯೆ ಮತ್ತು ಕಾಸ್ಮೆಟಾಲಜಿಸ್ಟ್ ಡಾ ಕರುಣಾ ಮಲ್ಹೋತ್ರಾ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಏನಿದು ಬೊಟೊಕ್ಸ್?
ಕಾರ್ಯವಿಧಾನ: ಬೊಟೊಕ್ಸ್ (ಬೊಟುಲಿನಮ್ ಟಾಕ್ಸಿನ್) ಸ್ನಾಯುಗಳನ್ನು ತಾತ್ಕಾಲಿಕವಾಗಿ ಮರಗಟ್ಟಿಸುವ ಮೂಲಕ ನೀಡುವ ಚಿಕಿತ್ಸಾ ವಿಧಾನವಾಗಿದೆ. ಕಾಸ್ಮೆಟಿಕ್ ಡರ್ಮಟಾಲಜಿಯಲ್ಲಿ ಸಾಮಾನ್ಯವಾಗಿ ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳ ನೋಟವನ್ನು ಕಡಿಮೆ ಮಾಡಲು ಸ್ನಾಯುವಿನ ಸಂಕೋಚನವನ್ನು ತಡೆಗಟ್ಟಲು ಈ ವಿಧಾನವನ್ನು ಬಳಸಲಾಗುತ್ತದೆ.
ಬೊಟೊಕ್ಸ್ ಪರಿಣಾಮ: ಬೊಟೊಕ್ಸ್ ತ್ವರಿತ, ತಾತ್ಕಾಲಿಕ ಫಲಿತಾಂಶಗಳನ್ನು ಒದಗಿಸುತ್ತದೆ, ಸಾಮಾನ್ಯವಾಗಿ 3-6 ತಿಂಗಳುಗಳವರೆಗೆ ಇರುತ್ತದೆ, ಡೈನಾಮಿಕ್ ಸುಕ್ಕುಗಳಲ್ಲಿ ಗಮನಾರ್ಹ ಬದಲಾವಣೆ ಗೋಚರವಾಗುತ್ತದೆ ಎಂದು ಡಾ. ಮಲ್ಹೋತ್ರಾ ಹೇಳುತ್ತಾರೆ.
ತ್ವಚೆಗೆ ಪಪ್ಪಾಯ ಎಲೆ ಪ್ರಯೋಜನ
ಕಾರ್ಯವಿಧಾನ: ಹಸಿರು ಪಪ್ಪಾಯಿಯು ಪಪೈನ್, ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಎ, ಸಿ ಮತ್ತು ಇ ನಂತಹ ಕಿಣ್ವಗಳಲ್ಲಿ ಸಮೃದ್ಧವಾಗಿದೆ. ಈ ಘಟಕಗಳು ಚರ್ಮದ ಆರೋಗ್ಯ ವೃದ್ಧಿಗೆ ಸಹಾಯ ಮಾಡುತ್ತವೆ.
ಪಪ್ಪಾಯ ಎಲೆ ಫೇಸ್‌ಪ್ಯಾಕ್‌ನ ಪರಿಣಾಮ
ಎಕ್ಸ್‌ಫೋಲಿಯೇಶನ್: ಪಾಪೈನ್ ನಿರ್ಜೀವ ಚರ್ಮದ ಕೋಶಗಳನ್ನು ತೊಡೆದು ಹಾಕುತ್ತದೆ ಮತ್ತು ಒಳಗಿನಿಂದ ಹೊಸ ಚರ್ಮದ ಕೋಶ ಅಭಿವೃದ್ಧಿಯಾಗಲು ಸಹಾಯ ಮಾಡುತ್ತದೆ.
ಉತ್ಕರ್ಷಣ ನಿರೋಧಕ ಪರಿಣಾಮಗಳು: ವಿಟಮಿನ್ ಸಿ ಮತ್ತು ಇತರ ಉತ್ಕರ್ಷಣ ನಿರೋಧಕಗಳು ಚರ್ಮ ವಯಸ್ಸಾದಂತೆ ಕಾಣುವಂತೆ ಮಾಡುವ ಫ್ರಿ ರಾಡಿಕಲ್‌ಗಳ ವಿರುದ್ಧ ಹೋರಾಡುತ್ತದೆ.
ಹೈಡ್ರೇಷನ್ ಹಾಗೂ ಹೊಳಪು: ಇದರ ಪೋಷಕಾಂಶಗಳು ಚರ್ಮದ ರಚನೆ, ಜಲಸಂಚಯನ ಮತ್ತು ಹೊಳಪನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಪರಿಣಾಮಗಳು: ಪಪ್ಪಾಯ ಎಲೆಯ ಫೇಸ್‌ಪ್ಯಾಕ್‌ನಿಂದ ತ್ವಚೆಗೆ ಹಲವು ಪ್ರಯೋಜನಗಳಿರುವುದು ನಿಜ. ಆದರೆ ಅದರ ಪರಿಣಾಮಗಳು ಕಾಲಾನಂತರದಲ್ಲಿ ಸೂಕ್ಷ್ಮ ಮತ್ತು ಸಂಚಿತವಾಗಿರುತ್ತವೆ. ಆದರೆ ಇದು ಆಳವಾದ ಸುಕ್ಕುಗಳಿಂದ ಪರಿಹಾರ ನೀಡುವುದಿಲ್ಲ ಹಾಗೂ ಬೊಟೊಕ್ಸ್‌ನಂತೆ ತಕ್ಷಣದ ಫಲಿತಾಂಶ ಸಿಗಲು ಸಾಧ್ಯವಿಲ್ಲ‘ ಎಂದಿದ್ದಾರೆ.
ಪಪ್ಪಾಯ ಎಲೆಗಳು ನೈಸರ್ಗಿಕ ಎಕ್ಸ್‌ಫೋಲಿಯೇಟಿಂಗ್ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದ ಆರೋಗ್ಯಕರ ಚರ್ಮವನ್ನು ಕಾಪಾಡಿಕೊಳ್ಳಲು ಅತ್ಯುತ್ತಮವಾಗಿದ್ದರೂ, ಅವು ಬೊಟೊಕ್ಸ್‌ನಂತೆ ಕಾರ್ಯನಿರ್ವಹಿಸುವುದಿಲ್ಲ ಮತ್ತು ವೈದ್ಯಕೀಯ ವಿಧಾನಗಳಿಗೆ ಬದಲಿಯಾಗಿಲ್ಲ. ಬೊಟೊಕ್ಸ್ ಸ್ನಾಯು ಚಲನೆ-ಸಂಬಂಧಿತ ಸುಕ್ಕುಗಳನ್ನು ಗುರಿಯಾಗಿಸುತ್ತದೆ, ಆದರೆ ಪಪ್ಪಾಯಿ ಎಲೆಗಳು ಒಟ್ಟಾರೆ ಚರ್ಮದ ಆರೋಗ್ಯ ಮತ್ತು ನೋಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ‘ ಎಂದು ಡಾ ಮಲ್ಹೋತ್ರಾ ಹೇಳುತ್ತಾರೆ.
(ಗಮನಿಸಿ: ಇದು ಸಾಮಾನ್ಯಜ್ಞಾನ ಹಾಗೂ ಮಾಹಿತಿಯನ್ನು ಆಧರಿಸಿದ ಬರಹ. ಚರ್ಮವು ತುಂಬಾ ಸೂಕ್ಷ್ಮವಾಗಿರುವ ಕಾರಣ ನಿಮ್ಮ ಚರ್ಮಕ್ಕೆ ಪಪ್ಪಾಯ ಫೇಸ್‌ಪ್ಯಾಕ್ ಬಳಸುವ ಮುನ್ನ ತಜ್ಞರನ್ನು ಸಂಪರ್ಕಿಸುವುದು ಉತ್ತಮ.)
ವಿಭಾಗ