Night face mask for summer: ಬೇಸಿಗೆಯಲ್ಲಿ ಅಂದ ಹೆಚ್ಚಬೇಕೆ? ರಾತ್ರಿ ಮಲಗುವ ಮುನ್ನ ಈ ಫೇಸ್‌ಪ್ಯಾಕ್ ಹಚ್ಚಿ
Night face mask for summer: ಬೇಸಿಗೆಯಲ್ಲಿ ದೇಹಕ್ಕೆ ಸಾಕಷ್ಟು ನೀರು ಒದಗಿಸುವುದು ಮಾತ್ರವಲ್ಲ, ಚರ್ಮದಲ್ಲಿ ತೇವಾಂಶ ಇರುವಂತೆ ನೋಡಿಕೊಳ್ಳುವುದು ಮುಖ್ಯ. ಬಿಸಿಲಿನ ತಾಪಕ್ಕೆ ಹಲವು ರೀತಿಯ ಸಮಸ್ಯೆಗಳು ಚರ್ಮವನ್ನು ಬಾಧಿಸುತ್ತದೆ. ಅವುಗಳ ನಿವಾರಣೆಗೆ ಮನೆಯಲ್ಲೇ ಇರುವ ವಸ್ತುಗಳನ್ನು ಫೇಸ್ ಮಾಸ್ಕ್ ರೀತಿ ಬಳಸಬಹುದು.
ಬೇಸಿಗೆಯಲ್ಲಿ ರಾತ್ರಿ ಮಲಗುವ ಮೊದಲು ಫೇಸ್‌ಮಾಸ್ಕ್ ಧರಿಸಿ ಮಲಗುವುದರಿಂದ ಹಲವು ರೀತಿಯ ಚರ್ಮದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಈ ಮಾಸ್ಕ್ ಚರ್ಮದ ಕಾಂತಿ ಹೆಚ್ಚಿಸುವ ಜೊತೆಗೆ, ಆರೋಗ್ಯವನ್ನು ಕಾಪಾಡುತ್ತದೆ. ಅಲ್ಲದೆ ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯ ಉತ್ಪನ್ನಗಳಿಗೆ ಹಣ ಖರ್ಚು ಮಾಡಬೇಕು ಎಂದೂ ಇಲ್ಲ. ಮನೆಯಲ್ಲಿ ಇರುವ ವಸ್ತುಗಳಿಂದ ಫೇಸ್ ಮಾಸ್ಕ್ ತಯಾರಿಸುವುದು ಹೇಗೆ, ಅವುಗಳ ಉಪಯೋಗಗಳೇನು?
ತೆಂಗಿನೆಣ್ಣೆಯ ಮಾಸ್ಕ್
ತೆಂಗಿನೆಣ್ಣೆ ಹಚ್ಚುವುದರಿಂದ ಚರ್ಮಕ್ಕೆ ತೇವಾಂಶ ಸಿಗುತ್ತದೆ, ಇದು ಒಣ ಚರ್ಮ ಹಾಗೂ ಚರ್ಮದ ಕಿರಿಕಿರಿಯನ್ನು ನಿವಾರಿಸುತ್ತದೆ. ಇದು ಚರ್ಮದ ಉರಿಯನ್ನು ಕಡಿಮೆ ಮಾಡುತ್ತದೆ. ತೇವಾಂಶ ಇರುವಂತೆ ನೋಡಿಕೊಳ್ಳುತ್ತದೆ, ಸೂರ್ಯನ ಕಿರಣಗಳಿಂದ ಉಂಟಾಗುವ ಹಾನಿಗಳಿಂದಲೂ ರಕ್ಷಿಸುತ್ತದೆ, ಅಲ್ಲದೆ ಸೋಂಕಿನ ವಿರುದ್ಧವೂ ಹೋರಾಡುತ್ತದೆ. ಆದರೆ ಎಣ್ಣೆ ಚರ್ಮ ಹಾಗೂ ಮೊಡವೆ ಇರುವವರು ತೆಂಗಿನೆಣ್ಣೆಯಿಂದ ಕೊಂಚ ದೂರ ಇರುವುದು ಉತ್ತಮ.
ಬಳಸುವುದು ಹೇಗೆ: ತೆಂಗಿನೆಣ್ಣೆಗೆ ಕೊಂಚ ಆಲಿವ್ ಎಣ್ಣೆ ಸೇರಿಸಿ ಮಿಶ್ರಣ ಮಾಡಿ ಈ ಮಿಶ್ರಣವನ್ನು ಮುಖ ಹಾಗೂ ಕುತ್ತಿಗೆಯ ಭಾಗಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಬೇಕು. ರಾತ್ರಿಯಿಡಿ ಹಾಗೇ ಬಿಟ್ಟು, ಮರುದಿನ ಬೆಳಿಗ್ಗೆ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಬೇಕು.
ಕಲ್ಲಂಗಡಿ ಮಾಸ್ಕ್
ಇದು ಚರ್ಮಕ್ಕೆ ಚೈತನ್ಯ ನೀಡುವುದು ಮಾತ್ರವಲ್ಲ, ಹೊಳಪನ್ನು ಹೆಚ್ಚಿಸುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿರುವ ಲೈಕೋಪಿನ್ ಎಂಬ ಅಂಶ ಫ್ರಿ ರಾಡಿಕಲ್ಸ್‌ಗಳಿಂದ ಚರ್ಮಕ್ಕೆ ಉಂಟಾಗುವ ಹಾನಿಯನ್ನು ತಡೆಯುತ್ತದೆ.
ಬಳಸುವ ವಿಧಾನ: ಕಲ್ಲಂಗಡಿ ಹಣ್ಣಿನ ತಿರುಳನ್ನು ರುಬ್ಬಿ ರಸ ತಯಾರಿಸಿಕೊಳ್ಳಿ. ಈ ರಸವನ್ನು ಹತ್ತಿಯಲ್ಲಿ ಅದ್ದಿಯಲ್ಲಿ ಮುಖಕ್ಕೆ ಹಚ್ಚಿ ಒಣಗಲು ಬಿಡಿ, ನಂತರ ಮಲಗಿ ಮರುದಿನ ಬೆಳಿಗ್ಗೆ ತೊಳೆಯಿರಿ.
ಹಾಲು ಅರಿಸಿನದ ಫೇಸ್ ಪ್ಯಾಕ್
ಅರಿಸಿನ ಚರ್ಮದ ಹಲವು ರೀತಿಯ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ಇದು ಸೋಂಕು ನಿವಾರಕ ಹಾಗೂ ಇದರಲ್ಲಿನ ಉತ್ಕರ್ಷಣ ವಿರೋಧಿಗುಣ ಚರ್ಮವನ್ನು ಬ್ಯಾಕ್ಟೀರಿಯಾಗಳಿಂದ ಕಾಪಾಡುತ್ತದೆ. ಇದರಲ್ಲಿನ ಆಂಟಿಆಕ್ಸಿಡೆಂಟ್ ಅಂಶ ಮೊಡವೆಯ ನಿವಾರಣೆಗೂ ಸಹಕಾರಿ. ಹಾಲಿನಲ್ಲಿನ ಲ್ಯಾಟ್ಟಿಕ್ ಅಂಶ ಚರ್ಮದ ಕಾಂತಿ ಹೆಚ್ಚಿಸುವ ಜೊತೆಗೆ ನಿಶ್ಚಲವಾಗಿರುವಂತೆ ನೋಡಿಕೊಳ್ಳುತ್ತದೆ.
ಬಳಕೆ: ಹಸಿಹಾಲಿಗೆ ಅರ್ಧ ಚಮಚ ಅರಿಸಿನ ಪುಡಿ ಸೇರಿಸಿ ತೆಳ್ಳನೆಯ ಮಿಶ್ರಣ ಮಾಡಿ, ಇದನ್ನು ಹತ್ತಿ ಉಂಡೆಯ ಸಹಾಯದಿಂದ ಮುಖಕ್ಕೆ ಹಚ್ಚಿ. ಒಣಗಿದ ಮೇಲೆ ಮಲಗಿ, ಮರುದಿನ ತೊಳೆಯಿರಿ. ಅರಿಸಿನ ಹಾಸಿಗೆ, ದಿಂಬಿಗೆ ಅಂಟದಂತೆ ನೋಡಿಕೊಳ್ಳಿ.
ಸೌತೆಕಾಯಿ ಮಾಸ್ಕ್
ಬೇಸಿಗೆಯಲ್ಲಿ ಸೌತೆಕಾಯಿ ದೇಹ ನಿರ್ಜಲೀಕರಣ ಉಂಟಾಗದಂತೆ ತಡೆಯುವುದು ಮಾತ್ರವಲ್ಲ, ಇದರಿಂದ ಚರ್ಮಕ್ಕೂ ಹಲವು ಬಗೆಯ ಉಪಯೋಗಳಗಳಿವೆ. ಇದು ಬಿಸಿಲಿನಿಂದ ಚರ್ಮಕ್ಕೆ ಉಂಟಾಗುವ ದಾಹವನ್ನು ನೀಗಿಸಿ, ತಣ್ಣಗಿರಿಸುತ್ತದೆ. ಇದು ಚರ್ಮದ ಉರಿಯೂತವನ್ನು ಕಡಿಮೆ ಮಾಡುತ್ತದೆ, ನೆರಿಗೆ ಮೂಡುವುದನ್ನು ತಡೆದು, ಕಾಂತಿಯನ್ನು ಹೆಚ್ಚಿಸುತ್ತದೆ.
ಬಳಸುವುದು: ಸೌತೆಕಾಯಿಯನ್ನು ರುಬ್ಬಿ ರಸ ಹಿಂಡಿ, ಈ ರಸವನ್ನು ಮುಖಕ್ಕೆ ಹಾಗೂ ಕುತ್ತಿಗೆಯ ಭಾಗಕ್ಕೆ ಹಚ್ಚಿ, ಮರುದಿನ ತೊಳೆಯಿರಿ.
ಲೋಳೆರಸದ ಮಿಶ್ರಣ
ಲೋಳೆಸರ ವಿಟಮಿನ್ ಎ, ಸಿ ಹಾಗೂ ಇ ಅಂಶಗಳನ್ನು ಹೊಂದಿದ್ದು, ಆಂಟಿಆಕ್ಸಿಡೆಂಟ್ ಗುಣವನ್ನು ಹೊಂದಿದೆ. ಇದರಲ್ಲಿ ಅಮಿನೊ ಆಸಿಡ್, ಸ್ಯಾಲಿಸಿಲಿಕ್ ಆಸಿಡ್, ಲಿಗ್ನಿನ್ ಹಾಗೂ ಕಣ್ವಗಳ ಪ್ರಮಾಣ ಅಧಿಕವಾಗಿದೆ. ಇದು ಉರಿಯೂತ, ಕೊಲಾಜನ್ ಕಾರಣದಿಂದ ಉಂಟಾಗುವ ಸಮಸ್ಯೆಗಳು, ಯುವಿ ಕಿರಣಗಳಿಂದ ಉಂಟಾಗುವ ಚರ್ಮದ ಹಾನಿಯನ್ನು ತಡೆಯುತ್ತದೆ.
ವಿಟಮಿನ್ ಇ ಮಾತ್ರೆಯನ್ನು ಲೋಳೆಸರದ ತಿರುಳಿಗೆ ಹಿಂಡಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಮುಖ ಹಾಗೂ ಕುತ್ತಿಗೆಯ ಭಾಗಕ್ಕೆ ಹಚ್ಚಿ.
ಗ್ರೀನ್ ಟೀ ಆಲೂಗೆಡ್ಡೆ ಪ್ಯಾಕ್
ಗ್ರೀನ್ ಟೀಯಲ್ಲಿ ಪಾಲಿಫೆನಾಲ್ ಅಂಶವಿದೆ. ಯುವಿ ಕಿರಣಗಳಿಂದ ಉಂಟಾಗುವ ಉರಿಯೂತವನ್ನು ಇದು ತಡೆಯುತ್ತದೆ. ಚರ್ಮದ ಆಕ್ಸಿಡೇಟಿವ್ ಒತ್ತಡವನ್ನು ನಿಯಂತ್ರಿಸುತ್ತದೆ. ಆಲೂಗೆಡ್ಡೆ ರಸ ಎಣ್ಣೆ ಚರ್ಮದ ಸಮಸ್ಯೆ ಇದ್ದವರಿಗೆ ಬಹಳ ಉತ್ತಮ. ಇದು ಚರ್ಮದ ದದ್ದನ್ನು ನಿವಾರಿಸುತ್ತದೆ. ಮೊಡವೆಯ ಕಲೆಗಳನ್ನು ಸ್ವಚ್ಛಗೊಳಿಸಿ, ಚರ್ಮಕ್ಕೆ ಚೈತನ್ಯ ಸಿಗುವಂತೆ ಮಾಡುತ್ತದೆ.
ಬಳಸುವ ರೀತಿ: ಹಸಿ ಆಲೂಗೆಡ್ಡೆ ರಸಕ್ಕೆ, ಕುದಿಸಿ, ತಣಿಸಿದ ಗ್ರೀನ್ ಟೀ ಸೇರಿಸಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ. ಇದನ್ನು ಇಡಿ ರಾತ್ರಿ ಹಾಗೇ ಬಿಟ್ಟು ಮರುದಿನ ತೊಳೆಯಿರಿ.
ಬಾದಾಮಿ ಎಣ್ಣೆಯ ಮಾಸ್ಕ್
ನೈಸರ್ಗಿಕ ತೈಲಗಳು ಚರ್ಮಕ್ಕೆ ತೇವಾಂಶ ನೀಡುವುದರ ಜೊತೆಗೆ ಚರ್ಮದ ತಡೆಗೋಡೆಗಳನ್ನು ಸರಿಪಡಿಸುವ ಎಮೋಲಿಯಂಟ್‌ಗಳಾಗಿ ಕೆಲಸ ಮಾಡುತ್ತವೆ. ಬಾದಾಮಿ ಎಣ್ಣೆಯಲ್ಲಿರುವ ಸ್ಲೈರೋಸೆಂಟ್ ಗುಣ ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ ಜೊತೆಗೆ ಕಾಂತಿ ಹೆಚ್ಚಲು ಸಹಾಯ ಮಾಡುತ್ತದೆ. ಲೋಳೆಸರದ ತಿರುಳಿನೊಂದಿಗೆ ಬಾದಾಮಿ ಎಣ್ಣೆಯನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ, ಒಣಗಿದ ಮೇಲೆ ಮಲಗಬೇಕು.
ವಿಭಾಗ