Summer Skin Care Tips: ಮುಖ ಕಪ್ಪಾಯ್ತು, ಚರ್ಮ ಸುಕ್ಕಾಯ್ತು ಎಂಬ ಚಿಂತೆ ಬೇಡ, ಬೇಸಿಗೆಯಲ್ಲಿ ತ್ವಚೆಯ ಆರೈಕೆ ಬಹಳ ಸುಲಭ; ಇಲ್ಲಿವೆ ಟಿಪ್ಸ್
Feb 20, 2024 12:25 PM IST
ಬೇಸಿಗೆಯಲ್ಲಿ ತ್ವಚೆಯ ಆರೈಕೆ ಬಹಳ ಸುಲಭ
Summer Skin Care Tips: ಬೇಸಿಗೆ ಕಾಲ ಬಂತು ಎಂದರೆ ಸಾಕು ತ್ವಚೆಯ ಆರೋಗ್ಯ ಹದಗೆಟ್ಟಿತು ಎಂದೇ ಲೆಕ್ಕ. ಸೂರ್ಯನ ಶಾಖದಿಂದ ತ್ವಚೆಯ ಮೇಲೆ ಉಂಟಾಗುವ ವ್ಯತಿರಿಕ್ತ ಪರಿಣಾಮಗಳಿಂದ ಪಾರಾಗಲು ನಾವು ಪಾಲಿಸಬಹುದಾದ ಸರಳ ಹಾಗೂ ಪರಿಣಾಮಕಾರಿಯಾದ ಸಲಹೆಗಳು ಇಲ್ಲಿದೆ.
ಬೇಸಿಗೆಯಲ್ಲಿ ತ್ವಚೆಯ ಕಾಳಜಿ: ಬೇಸಿಗೆಯಲ್ಲಿ ಸೂರ್ಯನ ಶಾಖ ಅತಿಯಾಗಿ ಇರುವುದರಿಂದ ಚರ್ಮ ಕಪ್ಪಾಗುವುದು, ಸುಕ್ಕು ಗಟ್ಟುವುದು, ಜಿಡ್ಡಿನಂಶ ಹೆಚ್ಚುವುದು ಹೀಗೆ ನಾನಾ ರೀತಿಯ ಸಮಸ್ಯೆಗಳು ಉಂಟಾಗುತ್ತದೆ. ನಿಗಿ ನಿಗಿ ಕೆಂಡ ಕಾರುವ ಸೂರ್ಯ ನಿರ್ಜಲೀಕರಣ ಸಮಸ್ಯೆಯನ್ನುಂಟು ಮಾಡುತ್ತಾನೆ.
ಬೇಸಿಗೆಯಲ್ಲಿ ಚರ್ಮದ ಆರೈಕೆ ಬಹಳ ಸುಲಭ
ಅನೇಕರಿಗೆ ಬೇಸಿಗೆ ಕಾಲದಲ್ಲಿ ತುರಿಕೆ, ಕಿರಿಕಿರಿ ಹಾಗೂ ಉರಿಯೂತದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಸೂಕ್ಷ್ಮವಾದ ಚರ್ಮ ಹೊಂದಿರುವವರಿಗೆ ಸೂರ್ಯನ ಕಿರಣಗಳಿಂದ ಹೆಚ್ಚು ತೊಂದರೆಯುಂಟಾಗುತ್ತದೆ. ಹೀಗಾಗಿ ಬೇಸಿಗೆ ಕಾಲದಲ್ಲಿ ನೀವು ಸರಿಯಾಗಿ ತ್ವಚೆಯ ಆರೈಕೆ ಮಾಡುವುದರ ಮೂಲಕ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.
ಬೇಸಿಗೆಯಲ್ಲಿಯೂ ನಿಮ್ಮ ತ್ವಚೆಯು ತಾಜಾ ಹಾಗೂ ಆರೋಗ್ಯಕರವಾಗಿ ಇರಬೇಕು ಎಂದರೆ ನೀವು ಇಲ್ಲಿ ನೀಡಲಾದ ಕೆಲವು ನೈಸರ್ಗಿಕ ಸಲಹೆಗಳನ್ನು ಅನುಸರಿಸಬೇಕಿದೆ. ಇವುಗಳು ನಿಮ್ಮ ಚರ್ಮದ ಆರೋಗ್ಯವನ್ನು ಕಾಪಾಡುತ್ತವೆ.
ಮೊದಲು ಮುಖ ಸ್ವಚ್ಛಗೊಳಿಸಿ
ನೀವು ಮನೆಯಿಂದ ಹೊರಗೆ ಹೋಗಿ ಬಂದ ಕೂಡಲೇ ಸೂರ್ಯನ ಶಾಖದಿಂದ ತ್ವಚೆಯು ಕಪ್ಪಾಗುವುದನ್ನು ತಪ್ಪಿಸಬೇಕು ಎಂದರೆ ಮೊದಲು ನೀವು ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆಯಬೇಕು. ಇದಾದ ಬಳಿಕ ಮೃದುವಾದ ಹತ್ತಿಯ ಟವೆಲ್ ಬಳಸಿ ಮುಖವನ್ನು ನಿಧಾನವಾಗಿ ಒರೆಸಿಕೊಳ್ಳಿ. ನಂತರ ಮುಖಕ್ಕೆ ಅಲೋವೆರಾ ಜೆಲ್ ಹಚ್ಚಿಕೊಳ್ಳಿ. ಸೌತೆಕಾಯಿಯನ್ನೂ ಬಳಸಬಹುದು. ಇವುಗಳನ್ನು ಮುಖಕ್ಕೆ ಲೇಪಿಸಿಕೊಳ್ಳುವ ಮೂಲಕ ಸೂರ್ಯನ ಕಿರಣಗಳಿಂದ ಚರ್ಮವು ಟ್ಯಾನ್ ಆಗುವುದನ್ನು ತಪ್ಪಿಸಬಹುದಾಗಿದೆ.
ಬಿಸಿಲಿನಲ್ಲಿ ಹಿಂತಿರುಗಿದಾಗ ನಿಮ್ಮ ಚರ್ಮವು ಕಪ್ಪಾಗುವುದರಿಂದ ತ್ವರಿತ ಪರಿಹಾರವಾಗಿ ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆಯಿರಿ. ನಂತರ ಮೃದುವಾದ ಟವೆಲ್‌ನಿಂದ ಒರೆಸಿ ನಂತರ ಅದರ ಮೇಲೆ ಅಲೋವೆರಾ ಜೆಲ್ ಹೆಚ್ಚಿ. ಅಲೋವೆರಾ ಮತ್ತು ಸೌತೆಕಾಯಿ ನೀರನ್ನು ಸಹ ಮುಖಕ್ಕೆ ಅನ್ವಯಿಸಬಹುದು. ಅಲೋವೆರಾ ಜೆಲ್ ಅನ್ನು ರೆಫ್ರಿಜರೇಟರ್‌ನ ಐಸ್ ಟ್ರೇನಲ್ಲಿ ಇರಿಸಿ, ಫ್ರೀಜ್ ಮಾಡಿ, ಯಾವಾಗ ಬೇಕಾದರೂ ಬಳಸಬಹುದು.
ಸ್ವಚ್ಛತೆ ಕಾಪಾಡಿಕೊಳ್ಳಿ
ಬೇಸಿಗೆ ಕಾಲದಲ್ಲಿ ಮುಖದ ಕಾಂತಿಯನ್ನು ಕಾಪಾಡಿಕೊಳ್ಳಲು ಸ್ವಚ್ಛತೆಯೇ ಮೊದಲ ಅಸ್ತ್ರವಾಗಿದೆ. ದಿನಕ್ಕೆ ಏನಿಲ್ಲವೆಂದರೂ 2-3 ಮೂರು ಬಾರಿ ಮುಖ ತೊಳೆಯಿರಿ. ಆಲ್ಕೋಹಾಲ್ ಮುಕ್ತ ಫೇಸ್‌ವಾಶ್‌ನಿಂದ ಮುಖವನ್ನು ತೊಳೆಯಬೇಕು ಹಾಗೂ ದಿನಕ್ಕೆ 2 ಬಾರಿ ಸ್ನಾನ ಮಾಡಬೇಕು.
ಸನ್‌ಸ್ಕ್ರೀನ್ ಮಾಯಿಶ್ಚರೈಸರ್ ಬಳಕೆ
ಸುಗಂಧಗ ಸೂಸುವ ಮಾಯಿಶ್ಚರೈಸರ್ ಬಳಸುವುದನ್ನು ತಪ್ಪಿಸಿ. ಪರಿಮಳವಿಲ್ಲದ ಲಘುವಾದ ಮಾಯಿಶ್ಚರೈಸರ್ ಬಳಕೆ ಮಾಡಿ. ಇದು ನಿಮ್ಮ ಚರ್ಮವನ್ನು ಸೂರ್ಯನಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಇದರ ಜೊತೆ ನಿಮ್ಮ ಚರ್ಮಕ್ಕೆ ಎಸ್‌ಪಿಎಫ್ 30 ಹೊಂದಿರುವ ಸನ್‌ಸ್ಕ್ರೀನ್‌ಗಳನ್ನು ಹಚ್ಚಬೇಕು. ನೀವು ಮನೆಯಿಂದ ಎಲ್ಲಿಯೂ ಹೊರ ಹೋಗುತ್ತಿಲ್ಲ. ಇಡೀ ದಿನ ಮನೆಯಲ್ಲಿಯೇ ಇರುತ್ತೀರಿ ಎನ್ನುವಾಗಲೂ ಸಹ ಸನ್‌ಸ್ಕ್ರೀನ್ ಬಳಕೆ ತಪ್ಪಿಸುವಂತಿಲ್ಲ.
ಸಾಕಷ್ಟು ನೀರು ಕುಡಿಯಿರಿ
ಬೇಸಿಗೆಯಲ್ಲಿ ತ್ವಚೆಯ ಆರೋಗ್ಯ ಕಾಪಾಡಿಕೊಳ್ಳಲು ನೀವು ಅನುಸರಿಬೇಕಾದ ಇನ್ನೊಂದು ಮಾರ್ಗವೆಂದರೆ ನೀರು ಕುಡಿಯುವುದು. ನೀವು ಎಷ್ಟು ನೀರು ಕುಡಿಯುತ್ತೀರೋ ಅಷ್ಟು ನಿಮ್ಮ ತ್ವಚೆ ಆರೋಗ್ಯಯುತವಾಗಿ ಇರಲಿದೆ. ಇದು ದೇಹದಲ್ಲಿ ಉಷ್ಣತೆಯನ್ನು ನಿಯಂತ್ರಿಸುತ್ತದೆ.
ಸನ್ ಗ್ಲಾಸ್, ಛತ್ರಿ ಬಳಸಿ
ಸನ್‌ಸ್ಕ್ರೀನ್ ಹಚ್ಚಿದ ಬಳಿಕವೂ ನೀವು ಸೂರ್ಯನಿಂದ ರಕ್ಷಣೆ ಪಡೆಯುವುದನ್ನು ಮುಂದುವರಿಸಬೇಕು. ಹೊರಗಡೆ ತೆರಳುವಾಗ ಛತ್ರಿ ಹಾಗೂ ಸನ್‌ಗ್ಲಾಸ್ ಬಳಕೆ ಮಾಡಬೇಕು. ಸಾಧ್ಯವಾದಷ್ಟು ತಿಳಿ ಹತ್ತಿ ಬಟ್ಟೆಗಳನ್ನು ಬಳಕೆ ಮಾಡಿ. ಕಪ್ಪು ಬಣ್ಣದ ಬಟ್ಟೆಯು ಶಾಖವನ್ನು ಹೆಚ್ಚಿಸುವುದರಿಂದ ಬೇಸಿಗೆಕಾಲದಲ್ಲಿ ಆದಷ್ಟು ಕಪ್ಪು ಬಣ್ಣದ ಬಟ್ಟೆಗಳ ಬಳಕೆಯನ್ನು ಕಡಿಮೆ ಮಾಡುವುದು ಉತ್ತಮ. ಈ ರೀತಿಯ ಎಲ್ಲಾ ಮಾರ್ಗಗಳನ್ನು ಅನುಸರಿಸುವ ಮೂಲಕ ನೀವು ಬೇಸಿಗೆಯಲ್ಲಿ ತ್ವಚೆಯ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ.