Google Map Update: ಗೂಗಲ್ ಮ್ಯಾಪ್ ಬಳಕೆದಾರರಿಗೆ ಸಿಹಿಸುದ್ದಿ; ಇಂಟರ್‌ನೆಟ್ ಇಲ್ಲದೆ ಇದ್ರೂ ಗಮ್ಯ ತಲುಪಿಸುತ್ತೆ ಜಿಪಿಎಸ್
Apr 23, 2024 04:39 PM IST
ಗೂಗಲ್ ಮ್ಯಾಪ್ ಬಳಕೆದಾರರಿಗೆ ಸಿಹಿಸುದ್ದಿ; ಇಂಟರ್‌ನೆಟ್ ಇಲ್ಲದೆ ಇದ್ರೂ ಗಮ್ಯ ತಲುಪಿಸುತ್ತೆ ಜಿಪಿಎಸ್
- ಗೂಗಲ್ ಮ್ಯಾಪ್ ಬೀಟಾ ತನ್ನ ಬಳಕೆದಾರರಿಗೆ ಹೊಸ ವೈಶಿಷ್ಟ್ಯವೊಂದನ್ನು ನೀಡಲಿದೆ. ಇನ್ನು ಮುಂದೆ ಮಾರ್ಗ ಮಧ್ಯದಲ್ಲಿ ಸಂಪರ್ಕ ಕಡಿತವಾಗಿದೆಯೆಂದು ಚಿಂತಿಸುವ ಅಗತ್ಯವಿಲ್ಲ. ಗೂಗಲ್ ಮ್ಯಾಪ್ ಬಳಕೆದಾರರಿಗೆ ಸ್ಥಳವನ್ನು ನವೀಕರಿಸಬಹುದಾದ ವೈಶಿಷ್ಟ್ಯ ನೀಡಲಿದೆ. ನೆಟ್‌ವರ್ಕ್ ಇಲ್ಲದ ಪ್ರದೇಶಗಳಲ್ಲೂ ಈ ವೈಶಿಷ್ಟ್ಯ ಬಳಸಬಹುದಾಗಿದೆ. (ಬರಹ: ಅರ್ಚನಾ ವಿ. ಭಟ್)
ಡಿಜಿಟಲ್ ಯುಗದಲ್ಲಿ ಸಂಪರ್ಕ ಎನ್ನುವುದು ಅತ್ಯಂತ ಮುಖ್ಯ. ಸಂಪರ್ಕವಿಲ್ಲದಿದ್ದರೆ ಏನನ್ನೂ ಸಾಧಿಸಲು ಆಗುವುದಿಲ್ಲ. ಹಾಗಾಗಿಯೇ ತಂತ್ರಜ್ಞಾನ ದೈತ್ಯ ಕಂಪನಿಗಳು ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಲೇ ಇವೆ. ಇತ್ತೀಚಿನ ಹೊಸ ಬೆಳವಣಿಗೆಗಳಲ್ಲಿ ಸಂಪರ್ಕಕ್ಕೆ ಹೆಚ್ಚು ಒತ್ತು ಕೊಡಲಾಗುತ್ತಿದೆ. 2ಜಿ, 3ಜಿ, 4ಜಿ, 5ಜಿ ಗಳನ್ನು ಬಳಕೆ ಮಾಡಿದ್ದೇವೆ, ಈಗೇನಿದ್ದರೂ ಸ್ಯಾಟಲೈಟ್‌ಗಳ ಕಾಲ. ಇತ್ತೀಚಿನ ಮೊಬೈಲ್‌ಗಳು ಸ್ಯಾಟಲೈಟ್ ಕನೆಕ್ಟಿವಿಟಿ (ಉಪಗ್ರಹದ ಮೂಲಕ ಸಂಪರ್ಕ) ಯನ್ನು ಬೆಂಬಲಿಸುತ್ತವೆ. ಇತ್ತಿಚಿನ ಬೆಳವಣಿಗೆಯೆಂದರೆ ಗೂಗಲ್ (Google)ಉಪಗ್ರಹದ ಮೂಲಕ ಸಂಪರ್ಕ ಹೊಂದಿರುವ ಬಳಕೆದಾರರಿಗೆ ಗೂಗಲ್ ಮ್ಯಾಪ್ (Google Map)ನಲ್ಲಿ ಸ್ಥಳವನ್ನು ನವೀಕರಿಸಬಹುದಾದ ಆಯ್ಕೆಯನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ.
ಜನಪ್ರಿಯ ತಂತ್ರಜ್ಞಾನ ಮಾಹಿತಿದಾರರಾದ ಅಸೆಂಬಲ್‌ಡಿಬಗ್ ಇದನ್ನು ಬಹಿರಂಗಪಡಿಸಿದೆ. ಗೂಗಲ್ ಮ್ಯಾಪ್ ಬೀಟಾ v11.125 ಆವೃತ್ತಿಯು ಸ್ಯಾಟಲೈಟ್ ಮೂಲಕ ಸಂಪರ್ಕ ಸಾಧಿಸುವ ಬಳಕೆದಾರರಿಗೆ ತಮ್ಮ ಸ್ಥಳವನ್ನು ನವೀಕರಿಸಬಹುದಾದ ವೈಶಿಷ್ಟ್ಯವನ್ನು ನೀಡಲಿದೆ. ಈ ಬೆಳವಣಿಗೆಯು ಗಮನಾರ್ಹವಾಗಿದೆ. ಏಕೆಂದರೆ ಈ ವೈಶಿಷ್ಟ್ಯವು ನೆಟ್‌ವರ್ಕ್ ವ್ಯಾಪ್ತಿಯ ಹೊರಗಿನ ಪ್ರದೇಶದವರಿಗೆ ಬಹಳ ಉಪಯುಕ್ತವಾಗಿದೆ.
ಹೊಸ ಫೀಚರ್‌ನ ವೈಶಿಷ್ಟ್ಯವೇನು?
ಗೂಗಲ್ ನಕ್ಷೆಯಲ್ಲಿ ಕೆಲವು ಬಳಕೆದಾರರು ತಮ್ಮ ಸ್ಥಳವನ್ನು ನವೀಕರಿಸಬಹುದಾದ ವೈಶಿಷ್ಟ್ಯವನ್ನು ಸದ್ಯದಲ್ಲೇ ಬಳಸಿಕೊಳ್ಳಬಹುದಾಗಿದೆ. ಉಪಗ್ರಹ ಸಂಪರ್ಕ ಹೊಂದಿರುವ ಸಾಧನಗಳಲ್ಲಿ 15 ನಿಮಿಷಗಳ ಅಂತರದಲ್ಲಿ, ದಿನಕ್ಕೆ 5 ಬಾರಿ ಗೂಗಲ್ ಮ್ಯಾಪ್‌ನಲ್ಲಿ ತಮ್ಮ ಸ್ಥಳವನ್ನು ನವೀಕರಿಸಬಹುದಾಗಿದೆ. ಸಾಂಪ್ರದಾಯಿಕ ಸೆಲ್ಯುಲಾರ್ ನೆಟ್‌ವರ್ಕ್‌ಗಳು ಅಂದರೆ 4ಜಿ, 5ಜಿ ಗಳು ಲಭ್ಯವಿಲ್ಲದ ಅಥವಾ ಉತ್ತಮ ನೆಟ್‌ವರ್ಕ್ ಇಲ್ಲದ ಸನ್ನಿವೇಶಗಳಲ್ಲಿ ಈ ವೈಶಿಷ್ಟ್ಯವು ಅಮೂಲ್ಯವಾಗಿದೆ ಎಂಬುದನ್ನು ಸಾಬೀತುಪಡಿಸಬಹುದು.
ಭವಿಷ್ಯದ ನಿರೀಕ್ಷೆಗಳು
ಗೂಗಲ್ ಈ ಹೊಸ ವೈಶಿಷ್ಟ್ಯವನ್ನು ಇನ್ನೂ ಅಧಿಕೃತವಾಗಿ ದೃಢೀಕರಿಸದಿದ್ದರೂ, ಗೂಗಲ್‌ನ ಬಹು ನಿರೀಕ್ಷಿತ ಮೊಬೈಲ್ ಆದ ಗೂಗಲ್ ಪಿಕ್ಸೆಲ್ 9 ಸೇರಿದಂತೆ ಮುಂಬರುವ ಪ್ರಮುಖ ಆಂಡ್ರಾಯ್ಡ್ ಮೊಬೈಲ್‌ಗಳಲ್ಲಿ ಈ ವೈಶಿಷ್ಟ್ಯ ಬಳಕೆದಾರರಿಗೆ ಸಿಗಲಿದೆ ಎಂಬುದನ್ನು ಬಲವಾಗಿ ಹೇಳಲಾಗುತ್ತಿದೆ. ಗೂಗಲ್ ಮತ್ತು ಉಪಗ್ರಹ ಸಂಪರ್ಕದ ಜೋಡಣೆಯು ಅದರ ಕಾರ್ಯತಂತ್ರದ ವಿಧಾನವನ್ನು ಸೂಚಿಸುತ್ತದೆ. ಇದು ಬಳಕೆದಾರರಿಗೆ ಉಪಗ್ರಹ ಸಂಪರ್ಕದ ವ್ಯವಸ್ಥೆಯನ್ನು ಗರಿಷ್ಠ ಪ್ರಮಾಣದಲ್ಲಿ ಉಪಯೋಗಿಸಿಕೊಳ್ಳುವಂತೆ ಮಾಡುವ ಗುರಿಯನ್ನು ಹೊಂದಿದೆ. ಜಗತ್ತಿನಲ್ಲಿ ತಡೆರಹಿತ ಸಂಹವನವನ್ನು ಉತ್ತೇಜಿಸುವ ಉದ್ಯಮಗಳು ಹೆಚ್ಚುತ್ತಿವೆ. ಗೂಗಲ್ ಮ್ಯಾಪ್‌ಗಳು ಉಪಗ್ರಹ ಸಂಪರ್ಕವನ್ನು ಸಮರ್ಥವಾಗಿ ಬಳಸಲು ಸಿದ್ಧವಾಗಿರುವುದರಿಂದ ಬಳಕೆದಾರರು ವಿಶ್ವಾಸಾರ್ಹ ಬಳಕೆಯನ್ನು ನಿರೀಕ್ಷಿಸಬಹುದಾಗಿದೆ. ತಂತ್ರಜ್ಞಾನದಲ್ಲಿ ಹೊಸ ಹೊಸ ಬೆಳವಣಿಗೆಗಳು ಮತ್ತು ದೈನಂದಿನ ಸಂಪರ್ಕದಲ್ಲಿ ಉಪಗ್ರಹ ಸೇವೆಗಳ ವಿಕಸನಗಳು ಸಂಪರ್ಕ ಕ್ಷೇತ್ರದಲ್ಲಿ ಹೆಚ್ಚಿನ ವೈಶಿಷ್ಟ್ಯವನ್ನು ಕುತೂಹಲದಿಂದ ಕಾಯುವಂತೆ ಮಾಡುತ್ತಿದೆ.