Technology: UPI ಐಡಿಯಿಂದ ಹಣ ವರ್ಗಾವಣೆ ಮಾಡುವಾಗ ಫೇಲ್/ಸ್ಟ್ರಕ್ ಆಯ್ತಾ? ಈ 5 ಅಂಶಗಳು ಕಾರಣವಿರಬಹುದು ಗಮನಿಸಿ
Technology: ಯುಪಿಐ ಐಡಿ ಮೂಲಕ ಹಣ ಟ್ರಾನ್ಸ್‌ಫರ್ ಮಾಡುವಾಗ ಎಷ್ಟೋ ಬಾರಿ ಅದು ಸ್ಟ್ರಕ್ ಆಗಿರುವುದುಂಟು, ಕೆಲವು ಬಾರಿ ಫೇಲ್ ಕೂಡಾ ಆಗಿರುತ್ತದೆ. ಇದಕ್ಕೆ ಸಾಕಷ್ಟು ಕಾರಣಗಳಿವೆ ಒಂದು ವೇಳೆ ನೀವೂ ಈ ಸಮಸ್ಯೆ ಎದುರಿಸುತ್ತಿದ್ದರೆ ಇಲ್ಲಿ ತಿಳಿಸಿರುವ ಮಾಹಿತಿಯನ್ನು ಅನುಸರಿಸಿ.
Technology: ಪ್ರತಿದಿನ ಒಂದಲ್ಲಾ ಒಂದು ರೀತಿ ಹಣ ವರ್ಗಾವಣೆ ಮಾಡುತ್ತೇವೆ. ಅಂಗಡಿಗೆ ಹೋಗಿ ಏನಾದರೂ ಕೊಳ್ಳಬೇಕೆಂದರೆ, ರೀಚಾರ್ಜ್ ಮಾಡಿಸಬೇಕೆಂದರೆ, ಮತ್ತೊಬ್ಬರಿಗೆ ಹಣ ವರ್ಗಾವಣೆ ಮಾಡಬೇಕಾದರೆ ಯುಪಿಐ ಐಡಿ ಬಳಸುತ್ತೇವೆ. ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ ನಮ್ಮ ಪ್ರತಿದಿನದ ಹಣ ವರ್ಗಾವಣೆ ಕಾರ್ಯವನ್ನು ಬಹಳ ಸರಾಗಗೊಳಿಸಿದೆ.
ಮಾಲ್‌ನಲ್ಲಿ ಶಾಪಿಂಗ್ ಮಾಡುತ್ತಿರಲಿ, ಪೆಟ್ರೋಲ್ ಪಂಪ್‌ನಲ್ಲಿ ವಾಹನಕ್ಕೆ ಇಂಧನ ತುಂಬಿಸಿಕೊಳ್ಳಲು ಒಂದೇ ಒಂದು ಟ್ಯಾಪ್ ಮೂಲಕ ಹಣ ಪಾವತಿಸಬಹುದು. ಆದರೆ ಕೆಲವೊಮ್ಮೆ ಸಂದಿಗ್ಧ ಪರಿಸ್ಥಿತಿಯಲ್ಲಿ ಯುಪಿಐ ಕೆಲಸ ಮಾಡುವುದಿಲ್ಲ. ಹಣ ವರ್ಗಾವಣೆ ಮಾಡಬೇಕೆನ್ನುವ ಸಮಯದಲ್ಲಿ ಇದ್ದಕ್ಕಿದ್ದಂತೆ ಸ್ಟ್ರಕ್ ಆಗಿ ಹೋಗುತ್ತದೆ. ಆ ಸಮಯದಲ್ಲಿ ಬಹಳ ಮುಜುಗರವಾಗುತ್ತದೆ. ಆದರೆ ಬ್ಯಾಂಕ್ ಅಕೌಂಟ್‌ನಲ್ಲಿ ಹಣ ಇದ್ದರೂ ಈ ರೀತಿ ಟ್ರಾನ್ಸಾಕ್ಷನ್ ಏಕೆ ಹೀಗೆ ಸ್ಟ್ರಕ್ ಆಗುತ್ತದೆ ಅನ್ನೋದು ಎಲ್ಲರನ್ನೂ ಕಾಡುವ ಪ್ರಶ್ನೆ. ಇದಕ್ಕೆ ಕಾರಣಗಳು ಈ ರೀತಿ ಇರಬಹುದು.
ನಿಮ್ಮ ದೈನಂದಿನ ಯುಪಿಐ ಪಾವತಿ ಲಿಮಿಟ್ ಪರಿಶೀಲಿಸಿ
ಹೆಚ್ಚಿನ ಬ್ಯಾಂಕ್‌ಗಳು ಯುಪಿಐ ದೈನಂದಿನ ವರ್ಗಾವಣೆ ಮಿತಿಯನ್ನು ಸೀಮಿತಗೊಳಿಸಿವೆ. NPCI ಮಾರ್ಗಸೂಚಿಗಳ ಪ್ರಕಾರ, ಒಂದು ಯುಪಿಐ ವಹಿವಾಟಿನಲ್ಲಿ ವರ್ಗಾವಣೆ ಮಾಡಬಹುದಾದ ಗರಿಷ್ಠ ಮೊತ್ತ 1 ಲಕ್ಷ ರೂ. ಆದ್ದರಿಂದ ನೀವು ದೈನಂದಿನ ಹಣ ವರ್ಗಾವಣೆ ಮಿತಿಯನ್ನು ದಾಟಿದ್ದರೆ ಅಥವಾ ಸುಮಾರು 10 ಯುಪಿಐ ವಹಿವಾಟುಗಳನ್ನು ಮಾಡಿದ್ದರೆ, ನಿಮ್ಮ ದೈನಂದಿನ ಮಿತಿಯನ್ನು ನವೀಕರಿಸಲು ನೀವು 24 ಗಂಟೆಗಳ ಕಾಲ ಕಾಯಬೇಕಾಗುತ್ತದೆ. ಒಂದು ವೇಳೆ ಹಣ ವರ್ಗಾವಣೆ ಮಾಡುವುದು ಅನಿವಾರ್ಯವಾದರೆ ಬೇರೆ ಬ್ಯಾಂಕ್ ಖಾತೆ ಅಥವಾ ಪಾವತಿ ವಿಧಾನದ ಮೂಲಕ ಟ್ರಾನ್ಸಾಕ್ಷನ್ ಮಾಡಿ.
ಯುಪಿಐ ಐಡಿಯೊಂದಿಗೆ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡಿ
ಯುಪಿಐ ಫೇಲ್ ಆಗಲು ಅಥವಾ ಟ್ರಾನ್ಷಾಕ್ಷನ್ ಫೇಲ್ ಆಗಲು ಬ್ಯಾಂಕ್ ಸರ್ವರ್‌ಗಳು ಬ್ಯುಸಿ ಇರುವುದು ಮತ್ತೊಂದು ಕಾರಣವಾಗಿರಬಹುದು. ಆದ್ದರಿಂದ ಅದನ್ನು ತಪ್ಪಿಸಲು, ನಿಮ್ಮ ಯುಪಿಐ ಐಡಿಗೆ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡುವುದು ಉತ್ತಮ. ಹೀಗೆ ಮಾಡುವುದರಿಂದ ನಿಮ್ಮ ಬ್ಯಾಂಕಿನ ಸರ್ವರ್‌ಗಳಲ್ಲಿ ಒಂದು ಡೌನ್ ಆಗಿದ್ದರೆ, ಇನ್ನೊಂದು ಬ್ಯಾಂಕ್ ಖಾತೆಯ ಮೂಲಕ ನೀವು ಪಾವತಿ ಮಾಡಬಹುದು.
ಹಣ ಪಡೆಯುವವರ ವಿವರಗಳನ್ನು ಪರಿಶೀಲಿಸಿ
ಹಣ ವರ್ಗಾವಣೆ ಮಾಡುವಾಗ ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಸ್ವೀಕರಿಸುವವರ ಬ್ಯಾಂಕ್‌ನ ಐಎಫ್‌ಎಸ್‌ಸಿ ಕೋಡ್ ಪರಿಶೀಲಿಸಿ. ಹಣವನ್ನು ಕಳುಹಿಸುವಾಗ ಕಳುಹಿಸುವವರು ತಪ್ಪಾದ ಐಎಫ್‌ಎಸ್‌ಸಿ ಕೋಡ್ ಅಥವಾ ಖಾತೆ ಸಂಖ್ಯೆಯನ್ನು ಕೊಟ್ಟಿದ್ದರೆ ನೀವು ಮಾಡಿದ ಟ್ರಾನ್ಷಾಕ್ಷನ್ ಫೇಲ್ ಆಗಬಹುದು.
ಸರಿಯಾದ ಯುಪಿಐ ಪಿನ್ ನಮೂದಿಸಿ
ಮೊಬೈಲ್, ಲ್ಯಾಪ್‌ಟಾಪ್, ಬ್ಯಾಂಕ್ ಖಾತೆ, ಎಟಿಎಂ ಸೇರಿದಂತೆ ಅನೇಕ ಪಾಸ್‌ವರ್ಡ್‌ಗಳನ್ನು ನಾವು ನೆನಪಿನಲ್ಲಿಡುತ್ತೇವೆ. ಆದ್ದರಿಂದ ನೀವು ಯುಪಿಐ ಪಿನ್ ಮರೆಯುವ ಸಾಧ್ಯತೆ ಇದೆ. ಆ ಸಮಯದಲ್ಲಿ ಕೂಡಾ ವರ್ಗಾವಣೆ ಸಾಧ್ಯವಾಗದೆ ಇರಬಹುದು. ಆದ್ದರಿಂದ ನಿಮ್ಮ ಯೂಸರ್ ನೇಮ್ ಹಾಗೂ ಪಾಸ್‌ವರ್ಡ್‌ಗಳನ್ನು ಒಂದೆಡೆ ರಹಸ್ಯವಾಗಿ ಸೇವ್ ಮಾಡಿಕೊಳ್ಳಿ.
ಇಂಟರ್‌ನೆಟ್ ಸಂಪರ್ಕವನ್ನು ಪರಿಶೀಲಿಸಿ
ಯುಪಿಐ ಪಾವತಿ ಸ್ಥಗಿತಗೊಳ್ಳಲು ಅಥವಾ ವಿಫಲಗೊಳ್ಳಲು ನೆಟ್‌ವರ್ಕ್ ಸಂಪರ್ಕವು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಡಾಟಾ ಇನ್ನೂ ಇದ್ದರೂ ಕೆಲವೊಮ್ಮೆ ನೆಟ್‌ವರ್ಕ್ ಸಮಸ್ಯೆಯಿಂದ ಸಂಪರ್ಕ ಕಡಿತಗೊಳ್ಳುತ್ತದೆ. ಹೀಗೆ ಆದರೆ ಒಮ್ಮೆ ಮೊಬೈಲ್ ಸ್ವಿಚ್ ಆಫ್ ಮಾಡಿ ಅಥವಾ ಏರ್‌ಪ್ಲೇನ್ ಮೋಡ್ ಆನ್ ಮಾಡಿ ಒಂದೆರಡು ನಿಮಿಷದ ನಂತರ ಆನ್ ಮಾಡಿ.
ಯುಪಿಐ ಲೈಟ್ ಪ್ರಯತ್ನಿಸಿ
ಹಣ ವರ್ಗಾವಣೆಯಲ್ಲಿ ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುವ ಕಾರಣ ಕಳೆದ ವರ್ಷ ಎಪಿಸಿಐ, ಯುಪಿಐ ಲೈಟ್ ಪರಿಚಯಿಸಿತು. ಇದರಲ್ಲಿ ನೀವು 200 ರೂವರೆಗೆ ಇನ್ಸ್ಟಂಟ್ ಪೇಮೆಂಟ್ ಮಾಡಬಹುದು. ದಿನಕ್ಕೆ 2 ಬಾರಿಯಂತೆ ಯುಪಿಐ ಪಿನ್ ಇಲ್ಲದೆ 4 ಸಾವಿರದವರೆಗೂ ಹಣ ವರ್ಗಾವಣೆ ಮಾಡಬಹುದು. ಪ್ರಸ್ತುತ ಯುಪಿಐ ಲೈಟ್ ಸೇವೆಯು Paytm ಮತ್ತು PhonePe ನಲ್ಲಿ ಲಭ್ಯವಿದೆ ಮತ್ತು ಶೀಘ್ರದಲ್ಲೇ ಇತರ ಅಪ್ಲಿಕೇಶನ್‌ಗಳಲ್ಲಿ ಲಭ್ಯವಿರುತ್ತದೆ.