ಕಾನೂನು ಜ್ಞಾನ: ಸ್ಮಾರ್ಟ್‌ಫೋನ್‌ನಲ್ಲಿ ಅಶ್ಲೀಲ ವಿಡಿಯೋ ನೋಡಬಹುದೇ? ವಾಟ್ಸಪ್‌ನಲ್ಲಿ ಹಂಚಬಹುದೇ? ಪಾರ್ನ್ ವಿಡಿಯೋ ಸಂಗ್ರಹ, ಹಂಚಿಕೆ ನಿಯಮಗಳು
Sep 23, 2024 02:04 PM IST
ಅಶ್ಲೀಲ ವಿಡಿಯೋ ವೀಕ್ಷಣೆ ಕುರಿತು ಭಾರತದ ಕಾನೂನು ಏನು ಹೇಳುತ್ತದೆ? ಕಾನೂನು ಜ್ಞಾನ ಮಾಹಿತಿ
- ಕಾನೂನು ಜ್ಞಾನ: ಮಕ್ಕಳ ಅಶ್ಲೀಲ ಕಂಟೆಂಟ್‌ಗೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್‌ನ ಇತ್ತೀಚಿನ ತೀರ್ಪು ಬಂದಿದೆ. ಇದೇ ಸಮಯದಲ್ಲಿ ಸ್ಮಾರ್ಟ್‌ಫೋನ್‌ನಲ್ಲಿ ಅಶ್ಲೀಲ ವಿಡಿಯೋ ನೋಡಬಹುದೇ? ಅಶ್ಲೀಲ ವಿಡಿಯೋವನ್ನು ಮೊಬೈಲ್‌ನಲ್ಲಿ ಒಬ್ಬರಿಂದ ಒಬ್ಬರಿಗೆ ಹಂಚಬಹುದೇ? ಈ ಕುರಿತು ಭಾರತದ ಕಾನೂನು ಏನು ಹೇಳುತ್ತದೆ ಎಂದು ತಿಳಿಯೋಣ.
ಈಗ ಎಲ್ಲರ ಕೈಯಲ್ಲಿ ಸ್ಮಾರ್ಟ್‌ಫೋನ್ ಎಂಬ ಕಂಪ್ಯೂಟರ್ ಇದೆ. ಕೈಯಲ್ಲಿರುವ ಸ್ಮಾರ್ಟ್‌ಫೋನ್‌ನಲ್ಲೇ ಒಟಿಟಿ ಸಿನಿಮಾಗಳನ್ನು ನೋಡಬಹುದು. ಇಂಟರ್‌ನೆಟ್ ಜಾಲಾಡಬಹುದು. ಕಂಪ್ಯೂಟರ್‌ನಲ್ಲಿ ಮಾಡುವ ಕೆಲವು ಕೆಲಸಗಳನ್ನು ಸ್ಮಾರ್ಟ್‌ಫೋನ್‌ನಲ್ಲೇ ಮಾಡಬಹುದು. ಮನೆಯಲ್ಲಿ ಟಿವಿ ಇಲ್ಲದೆ ಇದ್ದರೂ ಟಿವಿ ಸೀರಿಯಲ್‌ಗಳನ್ನು, ಟಿವಿ ಕಾರ್ಯಕ್ರಮಗಳನ್ನು ಸ್ಮಾರ್ಟ್‌ಫೋನ್‌ನಲ್ಲಿ ನೋಡಬಹುದು. ಇದೇ ಸಮಯದಲ್ಲಿ ಸ್ಮಾರ್ಟ್‌ಫೋನ್‌ನಲ್ಲಿ ಸಾಕಷ್ಟು ಜನರು ಅಶ್ಲೀಲ ಸಿನಿಮಾ ನೋಡುತ್ತಾರೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಕೆಲವರ ಮೊಬೈಲ್ ಫೋನ್ ಹುಡುಕಾಟ ನಡೆಸಿದರೆ ಪಾರ್ನ್ ವಿಡಿಯೋಗಳ ಫೋಲ್ಡರ್‌ಗಳೇ ಸಿಗಬಹುದು. ಸಾಕಷ್ಟು ಜನರಿಗೆ ಅಶ್ಲೀಲ ವಿಡಿಯೋಗೆ ಸಂಬಂಧಪಟ್ಟಂತೆ ಭಾರತದ ಕಾನೂನು ಏನು ಹೇಳುತ್ತದೆ ಎಂದು ತಿಳಿದಿಲ್ಲ. ವಿಶೇಷವಾಗಿ ಅಶಿಕ್ಷಿತರಿಗೆ ಇದರ ಕುರಿತು ಏನೂ ಅರಿವಿಲ್ಲ. ಯಾರೋ ಶೇರ್ ಮಾಡಿದ್ರು ಎಂದು ಅಶ್ಲೀಲ ವಿಡಿಯೋಗಳನ್ನು ತಮ್ಮ ಮೊಬೈಲ್‌ನಲ್ಲಿ ಇಟ್ಟುಕೊಳ್ಳುತ್ತಾರೆ. ಕೆಲವು ಮೊಬೈಲ್ ಅಂಗಡಿಯವರು ಕಾನೂನುಬಾಹಿರವಾಗಿ ಇಂತಹ ವಿಡಿಯೋಗಳನ್ನು ಜಿಬಿಗೆ ಇಂತಿಷ್ಟು ಎಂದು ಇಂತಹ ಮೊಬೈಲ್ ಬಳಕೆದಾರರಿಗೆ ಮಾರಾಟ ಮಾಡುವುದೂ ಇದೆ. ಪಾರ್ನ್ ವಿಡಿಯೋವನ್ನು ಸ್ಮಾರ್ಟ್‌ಫೋನ್‌ನಲ್ಲಿ ಇಟ್ಟುಕೊಳ್ಳಬಹುದೇ? ಸ್ಮಾರ್ಟ್‌ಫೋನ್‌ನಲ್ಲಿ ಅಶ್ಲೀಲ ವಿಡಿಯೋ ನೋಡಬಹುದೇ? ಅಶ್ಲೀಲ ವಿಡಿಯೋವನ್ನು ಮೊಬೈಲ್‌ನಲ್ಲಿ ಒಬ್ಬರಿಂದ ಒಬ್ಬರಿಗೆ ಹಂಚಬಹುದೇ? ಈ ಕುರಿತು ಭಾರತದ ಕಾನೂನು ಏನು ಹೇಳುತ್ತದೆ ಎಂದು ತಿಳಿಯೋಣ.
ಮಕ್ಕಳ ಅಶ್ಲೀಲ ವಿಡಿಯೋ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಮಕ್ಕಳ ಅಶ್ಲೀಲ ವಿಡಿಯೋವನ್ನು ವೀಕ್ಷಣೆ ಮಾಡುವುದು ಪೋಕ್ಸೊ ಕಾನೂನಿನಡಿ ಅಪರಾಧ ಎಂದು ಸುಪ್ರೀಂ ಕೋರ್ಟ್ ಸೋಮವಾರ (ಸೆಪ್ಟೆಂಬರ್ 23) ತೀರ್ಪು ನೀಡಿದೆ. ಮಕ್ಕಳ ಅಶ್ಲೀಲ ವಿಡಿಯೋ ವೀಕ್ಷಣೆ ಮಾಡುವುದು ಪೋಕ್ಸೋ, ಐಟಿ ಕಾಯ್ದೆಯಡಿ ಅಪರಾಧವಲ್ಲ ಎಂದು ಮದ್ರಾಸ್ ಹೈಕೋರ್ಟ್ ನೀಡಿರುವ ತೀರ್ಪಿಗೆ ಎದುರಾಗಿ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿತ್ತು. ಇದೇ ಸಮಯದಲ್ಲಿ ಮಕ್ಕಳ ಅಶ್ಲೀಲ ವಿಡಿಯೋ ಕಂಟೆಂಟ್ ರಚಿಸುವುದು, ಡೌನ್‌ಲೋಡ್ ಮಾಡುವುದು, ಪ್ರಕಟಿಸುವುದು, ಹಂಚಿಕೊಳ್ಳುವುದು ಅಪರಾಧ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಇದೇ ಸಮಯದಲ್ಲಿ ಮಕ್ಕಳ ಅಶ್ಲೀಲತೆಯನ್ನು ಮಕ್ಕಳ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆಯ ವಸ್ತು ಎಂದು ತಿದ್ದುಪಡಿ ಮಾಡುವಂತೆ ಕೇಂದ್ರ ಸರಕಾರಕ್ಕೆ ಕೋರ್ಟ್ ತಿಳಿಸಿದೆ.
ಇದೇ ಸಮಯದಲ್ಲಿ ಸ್ಮಾರ್ಟ್‌ಫೋನ್‌ನಲ್ಲಿ ಅಶ್ಲೀಲ ವಿಡಿಯೋ ನೋಡುವವರು ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಭಾರತದ ಕಾನೂನು ಸ್ಮಾರ್ಟ್‌ಫೋನ್‌ನಲ್ಲಿ ಅಶ್ಲೀಲ ವಿಡಿಯೋ ನೋಡುವುದಕ್ಕೆ ಸಂಬಂಧಪಟ್ಟಂತೆ ಏನು ನಿಯಮ ಹೊಂದಿದೆ ಎಂದು ತಿಳಿದುಕೊಳ್ಳುವುದು ಅತ್ಯಂತ ಅಗತ್ಯ. ಇದಕ್ಕೆ ಸಂಬಂಧಪಟ್ಟಂತೆ ಭಾರತದ ಮೂರು ಪ್ರಮುಖ ಕಾನೂನು, ಕಾಯ್ದೆಗಳ ಅರಿವಿರಬೇಕು.
1. ಭಾರತೀಯ ಮಾಹಿತಿ ತಂತ್ರಜ್ಞಾನ ಕಾಯ್ದೆ (ಐಟಿ), 2000
2. ಐಪಿಸಿ
3. ಪೋಸ್ಕೋ ಕಾಯಿದೆ, 2012
ಖಾಸಗಿಯಾಗಿ ಅಶ್ಲೀಲ ವಿಡಿಯೋ ನೋಡುವುದು ತಪ್ಪೇ?
ಇದಕ್ಕೆ ಉತ್ತರ ಇಲ್ಲ. ಭಾರತದಲ್ಲಿ ಅಶ್ಲೀಲ ವಿಡಿಯೋವನ್ನು ಖಾಸಗಿ ಕೊಠಡಿಯಲ್ಲಿ ಅಥವಾ ಖಾಸಗಿಯಾಗಿ ನೋಡುವುದು ಕಾನೂನುಬಾಹಿರವಲ್ಲ. ಭಾರತೀಯ ಸಂವಿಧಾನದ ಆರ್ಟಿಕಲ್ 21ರ ಅನ್ವಯ ವ್ಯಕ್ತಿಯೊಬ್ಬರು ಖಾಸಗಿಯಾಗಿ ಪಾರ್ನ್ ವಿಡಿಯೋ ನೋಡುವುದು ಕಾನೂನುಬಾಹಿರವಲ್ಲ, ಅದು ವ್ಯಕ್ತಿಯ ಖಾಸಗಿ ಸ್ವಾತಂತ್ರ್ಯದಡಿ ಬರುತ್ತದೆ ಎಂದು ಸುಪ್ರೀಂಕೋರ್ಟ್ ಮೌಖಿಕವಾಗಿ ತಿಳಿಸಿತ್ತು. ಆದರೆ, ಖಾಸಗಿಯಾಗಿ ನೋಡುವ ಅಶ್ಲೀಲ ಕಂಟೆಂಟ್‌ಗಳಿಗೂ ನಿಯಮಗಳಿವೆ. ಆ ಕಂಟೆಂಟ್‌ಗಳು ಮಕ್ಕಳ ಅಶ್ಲೀಲ ವಿಡಿಯೋ ಆಗಿರಬಾರದು, ಅತ್ಯಾಚಾರ ಅಥವಾ ಮಹಿಳೆಯ ವಿರುದ್ಧದ ಲೈಂಗಿಕ ದೌರ್ಜನ್ಯ ಅಥವಾ ಬಲವಂತದ ವಿಡಿಯೋ ಆಗಿರಬಾರದು.
ಭಾರತದಲ್ಲಿ ಫೋರ್ನೊಗ್ರಫಿಗೆ ನಿಷೇಧ ಹೇರಲಾಗಿದೆ. ಹೀಗಿದ್ದರೂ ಖಾಸಗಿಯಾಗಿ ನೋಡುವುದು ತಪ್ಪು ಎಂದು ಹೇಳಲಾಗಿಲ್ಲ. ಇಂಟರ್‌ನೆಟ್ ಸೇವಾ ಪೂರೈಕೆದಾರರ ಮೂಲಕ ಇಂತಹ ವಿಡಿಯೋಗಳು ಅಥವಾ ಇಂತಹ ವಿಡಿಯೋಗಳ ವೆಬ್‌ಸೈಟ್‌ಗಳು ಓಪನ್ ಆಗದಂತೆ ನೋಡಿಕೊಳ್ಳಲಾಗಿದೆ. ಆದರೆ, ವಿಪಿಎಸ್ ಇತ್ಯಾದಿಗಳ ಮೂಲಕ ಇಂತಹ ವೆಬ್‌ಸೈಟ್‌ಗಳನ್ನು ತೆರೆಯದಂತೆನೋಡಿಕೊಳ್ಳಲಾಗಿಲ್ಲ. ಇದೇ ಸಮಯದಲ್ಲಿ ಮಕ್ಕಳ ಪೋರ್ನೊಗ್ರಫಿ ಮತ್ತು ಮಹಿಳೆಯ ವಿರುದ್ಧದ ದೌರ್ಜನ್ಯ ತಡೆಗಟ್ಟುವ ಪ್ರಮುಖ ಉದ್ದೇಶದಿಂದ ಭಾರತದಲ್ಲಿ ಅಶ್ಲೀಲ ಕಂಟೆಂಟ್ ಬ್ಯಾನ್ ಮಾಡಲಾಗಿದೆ. ಹೀಗಾಗಿ, ಖಾಸಗಿಯಾಗಿ ನೀವು ಮಕ್ಕಳು ಅಥವಾ ಮಹಿಳೆಯರ ವಿರುದ್ಧದ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಪಡದ ವಿಡಿಯೋ ನೋಡಿದ್ರೆ ಸೇಫ್, ಇಲ್ಲವಾದರೆ ನಿಮಗೆ ಜೈಲು ಶಿಕ್ಷೆ ಖಾತ್ರಿ.
ನೆನಪಿಟ್ಟುಕೊಳ್ಳಿ, ಖಾಸಗಿಯಾಗಿ ಅಶ್ಲೀಲ ವಿಡಿಯೋ ನೋಡುವುದು ಅಪರಾಧವಲ್ಲ. ಆದರೆ, ಅಶ್ಲೀಲ ವಿಡಿಯೋವನ್ನು ಸ್ಮಾರ್ಟ್‌ಫೋನ್‌ನಲ್ಲಿ ಸಂಗ್ರಹಿಸಿಡುವುದು ಮತ್ತು ಹಂಚಿಕೆ ಮಾಡುವುದು ಭಾರತದ ಕಾನೂನಿನ ಪ್ರಕಾರ ಅಪರಾಧ. ಪೊಲೀಸರು ನಿಮ್ಮ ಸ್ಮಾರ್ಟ್‌ಫೋನ್ ಜಪ್ತಿ ಮಾಡಿದ ಸಮಯದಲ್ಲಿ ಅಶ್ಲೀಲ ವಿಡಿಯೋ ಸಿಕ್ಕರೆ ಶಿಕ್ಷೆ ಖಾತ್ರಿ. ಹೀಗಾಗಿ, ವಾಟ್ಸಪ್ ಮುಂತಾದ ಕಡೆ ಇತರರಿಗೆ ಅಶ್ಲೀಲ ವಿಡಿಯೋ ಹಂಚಿಕೊಳ್ಳುವ ಮುನ್ನ ಇನ್ನೊಮ್ಮೆ ಯೋಚಿಸಿ.