logo
ಕನ್ನಡ ಸುದ್ದಿ  /  ಜೀವನಶೈಲಿ  /  Cruise Travel: ಕ್ರೂಸ್‌ ಪ್ರವಾಸವೆಂಬ ವಿಭಿನ್ನ ಪ್ರಯಾಣ, 5 ದಿನ 3 ದೇಶ ಸುತ್ತಾಟ, 12 ಮಹಡಿ ಹಡಗಿನಲ್ಲಿ ಹೀಗಿತ್ತು ನಮ್ಮ ಅನುಭವ

Cruise travel: ಕ್ರೂಸ್‌ ಪ್ರವಾಸವೆಂಬ ವಿಭಿನ್ನ ಪ್ರಯಾಣ, 5 ದಿನ 3 ದೇಶ ಸುತ್ತಾಟ, 12 ಮಹಡಿ ಹಡಗಿನಲ್ಲಿ ಹೀಗಿತ್ತು ನಮ್ಮ ಅನುಭವ

Praveen Chandra B HT Kannada

Dec 02, 2024 07:43 AM IST

google News

ಜರ್ಮನಿಯಿಂದ ನಾರ್ವೆ, ಸ್ವೀಡನ್‌ ಮತ್ತು ಡೆನ್ಮಾರ್ಕ್‌ಗೆ ಕ್ರೂಸ್‌ ಹಡಗಿನಲ್ಲಿ ಪ್ರಯಾಣಿಸಿದ ಅನುಭವ

    • Cruise travel: ಜರ್ಮನಿಯಲ್ಲಿ ಇತ್ತೀಚೆಗೆ AIDA ಕ್ರೂಸ್ ಹಡಗಿನಲ್ಲಿ ಐದು ದಿನಗಳ ಪ್ರವಾಸ ಕೈಗೊಂಡ ಬೆಂಗಳೂರು ಬಾಷ್‌ ಕಂಪನಿಯ ಉದ್ಯೋಗಿ ರಜನೀಶ್‌ ತಮ್ಮ ಅನುಭವವನ್ನು ಎಚ್‌ಟಿ ಕನ್ನಡದ ಜತೆ ಹಂಚಿಕೊಂಡಿದ್ದಾರೆ.
ಜರ್ಮನಿಯಿಂದ ನಾರ್ವೆ, ಸ್ವೀಡನ್‌ ಮತ್ತು ಡೆನ್ಮಾರ್ಕ್‌ಗೆ ಕ್ರೂಸ್‌ ಹಡಗಿನಲ್ಲಿ ಪ್ರಯಾಣಿಸಿದ ಅನುಭವ
ಜರ್ಮನಿಯಿಂದ ನಾರ್ವೆ, ಸ್ವೀಡನ್‌ ಮತ್ತು ಡೆನ್ಮಾರ್ಕ್‌ಗೆ ಕ್ರೂಸ್‌ ಹಡಗಿನಲ್ಲಿ ಪ್ರಯಾಣಿಸಿದ ಅನುಭವ

Cruise travel: ಭಾರತದಲ್ಲಿ ಕ್ರೂಸ್‌ ಪ್ರವಾಸೋದ್ಯಮ ಇತ್ತೀಚೆಗೆ ಜನಪ್ರಿಯತೆ ಪಡೆಯತ್ತಿದೆ. ಅಮೆರಿಕ, ಜರ್ಮನಿ ಸೇರಿದಂತೆ ಹಲವು ದೇಶಗಳಲ್ಲಿ ಕ್ರೂಸ್‌ ಹಡಗುಗಳು ಅಲ್ಲಿನ ಪ್ರವಾಸೋದ್ಯಮದ ಪ್ರಮುಖ ಭಾಗ ಎಂದರೆ ತಪ್ಪಾಗದು. ವಿಲಾಸಿ ಕ್ರೂಸ್‌ಗಳಲ್ಲಿ ಹಲವು ದಿನಗಳ ಕಾಲ ಸಮುದ್ರದಲ್ಲಿ ಪ್ರಯಾಣಿಸಿ ವಿವಿಧ ದೇಶಗಳಿಗೆ ಹೋಗಿ ಬರುವ ಅನುಭವವನ್ನು ಇಂತಹ ಹಡಗುಗಳು ನೀಡುತ್ತವೆ. ಜರ್ಮನಿಯಲ್ಲಿ ಉದ್ಯೋಗ ನಿಮಿತ್ತ ನೆಲೆಸಿರುವ ಬೆಂಗಳೂರಿನ ಬಾಷ್‌ ಕಂಪನಿಯ ಉದ್ಯೋಗಿ ರಜನೀಶ್‌ ಅವರು ತನ್ನ ಕುಟುಂಬದ ಜತೆ ಜರ್ಮನಿಯಿಂದ AIDA Cruises ಮೂಲಕ ಐದು ದಿನಗಳ ಕಾಲ ಪ್ರವಾಸ ಕೈಗೊಂಡಿದ್ದಾರೆ. ಆ ಪ್ರವಾಸದ ಅನುಭವ ಹೇಗಿತ್ತು ಎಂದು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಓದುಗರ ಜತೆ ಹಂಚಿಕೊಂಡಿದ್ದಾರೆ.

ಕ್ರೂಸ್‌ ಪ್ರವಾಸದ ಅನುಭವ

"AIDA ಹಡಗು ಪ್ರಯಾಣವು ಒಂದು ವಿಭಿನ್ನವಾದ ಅನುಭವ. ಈ ಪ್ರಯಾಣವು ನಮ್ಮನ್ನು ಬೇರೆಯ ಲೋಕಕ್ಕೆ ಕರೆದೊಯ್ಯುತ್ತದೆ. ಇದು ಪಾಶ್ಚಾತ್ಯ ದೇಶಗಳಲ್ಲಿ ಬೇಸಿಗೆ ರಜೆಯನ್ನು ಕಳೆಯುವ ಒಂದು ಪ್ರಮುಖ ಬಗೆ. ನಾವು ಈ ಪ್ರಯಾಣವನ್ನು ಸುಮಾರು ಒಂದು ವರ್ಷದ ಹಿಂದೆಯೇ ಪ್ಲ್ಯಾನ್‌ ಮಾಡಿ ಟಿಕೆಟ್‌ ಬುಕ್‌ ಮಾಡಿ ಕ್ರೂಸ್‌ ಪ್ರಯಾಣಕ್ಕಾಗಿ ಕಾತರದಿಂದ ಕಾಯುತ್ತಿದ್ದೇವು. ನನ್ನ ಮಗ ಅದ್ವಿಕ್‌ ಅಂತೂ ಯೂಟ್ಯೂಬ್‌ನಲ್ಲಿ ಕ್ರೂಸ್‌ ಹಡಗುಗಳನ್ನು ನೋಡುತ್ತ ರೋಮಾಂಚನಗೊಳ್ಳುತ್ತಿದ್ದ. ಪತ್ನಿ ರೇಷ್ಮಾ ಕೂಡ ತುಂಬಾ ಆಸೆಯಿಂದ ಕಾಯುತ್ತಿದ್ದಳು. ಭಾರತದಲ್ಲಿಯೂ ಈಗ ಇಂತಹ ಕ್ರೂಸ್‌ ಹಡಗುಗಳು ಇವೆ. ಆದರೆ, ಇಲ್ಲಿನಷ್ಟು ಫೇಮಸ್‌ ಆಗಿಲ್ಲ. ಮುಂದೆ ಭಾರತದಲ್ಲಿಯೂ ಒಮ್ಮೆ ಇಂತಹ ಪ್ರವಾಸ ಕೈಗೊಳ್ಳಲೇಬೇಕು ಎಂಬ ಆಸೆಯನ್ನು ನಮ್ಮ ಜರ್ಮನಿಯ ಕ್ರೂಸ್‌ ಪ್ರವಾಸ ಹುಟ್ಟಿಸಿತ್ತು.

ಮೂರು ದೇಶಗಳಿಗೆ ಪ್ರವಾಸ

ಇದರಲ್ಲಿ ತುಂಬಾ ತರಹದ ಪ್ಲ್ಯಾನ್‌ಗಳು ಇರುತ್ತವೆ. ಮತ್ತೆ ವಿವಿಧ ಪ್ಯಾಕೇಜ್‌ಗಳು ಲಭ್ಯವಿರುತ್ತದೆ. ಅಂದರೆ, ಬೇರೆಬೇರೆ ದೇಶಗಳನ್ನು ಕನೆಕ್ಟ್‌ ಮಾಡುವಂತಹ, ಒಂದು ವಾರದ ಅಥವಾ ಎರಡು ವಾರದ ಪ್ಯಾಕೇಜ್‌ ಇತ್ಯಾದಿಗಳು ಇರುತ್ತವೆ. ನಾವು ಅದರಲ್ಲಿ ನಾರ್ತ್‌ ಯುರೋಪ್‌ ಪ್ಯಾಕೇಜ್‌ ಅನ್ನು ಆಯ್ಕೆ ಮಾಡಿಕೊಂಡೆವು. ಇದು ಐದು ದಿನಗಳ ಪ್ರಯಾಣ. ಅಂದರೆ, ಜರ್ಮನಿಯಲ್ಲಿ ಪ್ರಾರಂಭವಾಗಿ ನಾರ್ವೆ, ಸ್ವೀಡನ್‌ ಮತ್ತು ಡೆನ್ಮಾರ್ಕ್‌ ದೇಶಕ್ಕೆ ಹೋಗಿ ತಿರುಗಿ ಜರ್ಮನಿಗೆ ಬರುವಂತಹ ಪ್ರಯಾಣ.

ಕ್ರೂಸ್‌ ಹಡಗಿನೊಳಗೆ.

ಇದರಲ್ಲಿ ರೂಂ ಬುಕ್‌ಮಾಡುವಾಗ 3 ತರಹದ ಆಯ್ಕೆಗಳು ಇರುತ್ತವೆ.

1. ಒಳಬದಿಯ ಕೊಠಡಿ: ಇದರಲ್ಲಿ ಪ್ರಯಾಣ ಸಂದರ್ಭದಲ್ಲಿ ಸಮುದ್ರ ವೀಕ್ಷಣೆ ಸಾಧ್ಯವಿಲ್ಲ.

2. ಸಮುದ್ರ ವೀಕ್ಷಣೆ ಕೊಠಡಿ: ಕೋಣೆಯ ಕಿಟಕಿಯಿಂದ ಸಮುದ್ರ ವೀಕ್ಷಿಸಬಹುದು.

3. ಸಮುದ್ರ ವೀಕ್ಷಣೆ ಮತ್ತು ಬಾಲ್ಕನಿ ಸೌಲಭ್ಯ: ಇದರಲ್ಲಿ ನಾವು ನಮ್ಮ ಕೊಠಡಿಯ ಬಾಲ್ಕನಿಯಲ್ಲಿ ಕುಳಿತು ಸಮುದ್ರ ನೋಟವನ್ನು ಆನಂದಿಸಬಹುದು.

ನಾವು ಬಾಲ್ಕನಿ ಕೊಠಡಿ ಬುಕ್‌ ಮಾಡಿದ್ದೇವು.

ಪ್ರಯಾಣದ ಆರಂಭ

ಸಮುದ್ರದಲ್ಲಿ ಐದು ದಿನಗಳ ಕಾಲ ಪ್ರಯಾಣಿಸುವುದು, ಮನರಂಜನೆ ಪಡೆಯುವುದು.. ಒಟ್ಟಾರೆ ಹೊಸ ಅನುಭವ ಪಡೆಯಲು ನಾವು ಕಾಯುತ್ತಿದ್ದ ದಿನ ಕೊನೆಗೂ ಬಂತು. ನಮ್ಮ ಪ್ರಯಾಣವು ಆಗಸ್ಟ್‌ 19ರಂದು ಸಂಜೆ 4 ಗಂಟೆಗೆ ಆರಂಭವಾಯಿತು. ಮೊದಲಿಗೆ ಹಡಗಿಗೆ ಬೋರ್ಡಿಂಗ್‌ ಪ್ರಕ್ರಿಯೆ ಇರುತ್ತದೆ. ನಮ್ಮ ಪಾಸ್‌ಪೋರ್ಟ್‌/ ವೀಸಾ ವೇರಿಫಿಕೇಷನ್‌ ಇತ್ಯಾದಿಗಳನ್ನು ಮುಗಿಸಿ ಕೊಠಡಿ ಅಲೋಟ್‌ಮೆಂಟ್‌ ಮಾಡುತ್ತಾರೆ. ಬಳಿಕ ಸೇಫ್ಟಿ ತರಬೇತಿ ನೀಡುತ್ತಾರೆ. ಜತೆಗೆ, ಅಂದು ರಾತ್ರಿಯ ಪ್ಲ್ಯಾನ್‌ ಶೀಟ್‌ ನೀಡುತ್ತಾರೆ. ಅದರಲ್ಲಿ ಅಂದು ರಾತ್ರಿ ಯಾವ ರೀತಿಯ ಕಾರ್ಯಕ್ರಮ ಇರುತ್ತದೆ. ಊಟದ ಸಮಯ, ಇತರೆ ಮಾಹಿತಿಗಳು ಇರುತ್ತವೆ.

ಕ್ರೂಸ್‌ ಹಡಗಿನಲ್ಲಿ ಮನರಂಜನೆ ಕಾರ್ಯಕ್ರಮಗಳು

ನಾವು ಹೋಟೆಲ್‌ ಬುಕ್‌ ಮಾಡಿದಾಗ ಏನೆಲ್ಲ ಸೌಕರ್ಯ ಇರುತ್ತದೆಯೋ ಅಂತಹ ಎಲ್ಲಾ ಸೌಕರ್ಯಗಳು ಕೊಠಡಿಯಲ್ಲಿ ಇರುತ್ತವೆ. ಬೆಡ್‌, ಟಿವಿ, ಏಸಿ, ಬಾತ್‌ರೂಂ, ಟಾಯ್ಲೆಟ್‌, ವಾರ್ಡ್‌ ರೋಬ್‌ ಇತ್ಯಾದಿ ಎಲ್ಲವೂ ಇರುತ್ತದೆ. ಬಾಲ್ಕನಿಯಲ್ಲಿ ಬೀಚ್‌ ಕುರ್ಚಿಗಳು ಇರುತ್ತವೆ. ನಾವು ಅಲ್ಲಿ ಕುಳಿತು ಚಿಲ್‌ ಮಾಡಬಹುದು.

12 ಮಹಡಿಯ ಹಡಗಿನಲ್ಲಿ ಪ್ರವಾಸ

ನಾವು ಪ್ರಯಾಣಿಸಿದ ಕ್ರೂಸ್‌ನಲ್ಲಿ ಒಟ್ಟು 2800 ಪ್ರಯಾಣಿಕರಿದ್ದೇವು. ಸರಿಸುಮಾರು 700 ಕೆಲಸಗಾರರಿದ್ದರು. ಅದರಲ್ಲಿ ಒಟ್ಟು 12 ಮಹಡಿಗಳಿದ್ದು, 3 ರೆಸ್ಟೂರೆಂಟ್‌ಗಳು ಇದ್ದವು. ಅದರಲ್ಲಿ ಎರಡು ಕಾಂಟಿನೆಂಟಲ್‌ ಮತ್ತೆ ಒಂದು ಏಷ್ಯಾ ಫುಡ್‌ ರೆಸ್ಟೂರೆಂಟ್‌ಗಳು ಇದ್ದವು.

ಸಂಜೆ ಆರು ಗಂಟೆಗೆ ಆರಂಭಿಕ ಕಾರ್ಯಕ್ರಮ ನಡೆಯಿತು. ಜತೆಗೆ, ಸಂಗೀತ, ಡ್ಯಾನ್ಸ್‌, ಬಿಯರ್‌ ಬಾರ್ಟಿ ಇತ್ತು. ಬೀರಬಲ್ಲರೆಲ್ಲರು ನಾನ್‌ಸ್ಟಾಪ್‌ ಹೊಟ್ಟೆಗಿಳಿಸುತ್ತಿದ್ದರು. ಆಮೇಲೆ 9 ಗಂಟೆಗೆ ಊಟ ಮಾಡಿದ್ವಿ. ಪ್ರತಿಯೊಂದು ಹೋಟೆಲ್‌ನಲ್ಲೂ 100ಕ್ಕೂ ಹೆಚ್ಚಿನ ತಿಂಡಿ ತಿನಿಸುಗಳು ಇದ್ದವು. ಎಲ್ಲವೂ ಅನ್‌ಲಿಮಿಟೆಡ್. ಬಿಯರ್‌ ಮತ್ತು ವೈನ್‌ ಕೂಡ ಅನ್‌ಲಿಮಿಟೆಡ್‌.

ಅದಾದ ಮೇಲೆ ಡಿಜೆ ಆರಂಭವಾಯಿತು. ನಾವು ಎಲ್ಲರ ಜತೆ ಜಾಯಿನ್‌ ಆದೆವು. ನನ್ನ ಮಗ ಅದ್ವಿಕ್‌ ಅಂತೂ ಪಾರ್ಟಿ ತುಂಬಾ ಎಂಜಾಯ್‌ ಮಾಡಿದೆ. ಈ ಪಾರ್ಟಿ ಬೆಳಗ್ಗೆ 2 ಗಂಟೆಯವರೆಗೂ ಮುಂದುವರೆಯಿತು.

AIDA ಕ್ರೂಸ್‌ ಹಡಗಿನಲ್ಲಿ ರಾತ್ರಿ ಮನರಂಜನೆ ಕಾರ್ಯಕ್ರಮಗಳು ನಡೆಯುತ್ತವೆ.

ನಮ್ಮ ಹಡಗು ಮಾರನೆ ದಿನ ಹಗಲು ಹಾಗೂ ರಾತ್ರಿ ನಿರಂತರ ಪ್ರಯಾಣ ಮಾಡಿತು. ಅಂದರೆ, ಒಂದು ಹಗಲು ಪೂರ್ತಿ ಸಮುದ್ರದ ನಡುವೆಯೇ ನಾವಿದ್ದೆವು. ಬೆಳಗ್ಗೆ ತಿಂಡಿ, ರಾತ್ರಿ ಊಟ ಎಲ್ಲವೂ ಅಲ್ಲಿಯೇ ಆಯಿತು. ಆಮೇಲೆ ಕೊನೆಯ ಮಹಡಿಯಲ್ಲಿ ಸ್ವಿಮ್ಮಿಂಗ್‌ ಪೂಲ್‌ಮತ್ತೆ ಗೇಮ್ಸ್‌ ಏರಿಯಾ ಇತ್ತು. ಅಲ್ಲೂ ಟೈಮ್‌ ಸ್ಪೆಂಡ್‌ ಮಾಡಿದ್ವಿ. ಅದರಲ್ಲಿಯೂ ಶಾಪಿಂಗ್‌ ಮಾಲ್‌ ಕೂಡ ಇರುತ್ತದೆ.

ಹೀಗೆ ಎರಡು ರಾತ್ರಿ ಒಂದು ಹಗಲಿನ ಪ್ರಯಾಣದ ನಂತರ ಮೂರನೇ ದಿನ ಬೆಳಗ್ಗೆ 6 ಗಂಟೆಗೆ ನಾರ್ವೆ ಬಂದರು ತಲುಪಿದೆವು. ಹಡಗಿನಲ್ಲಿಯೇ ಬೆಳಗ್ಗಿನ ಉಪಹಾರ ಮುಗಿಸಿ ಸಿಟಿ ರೌಂಡ್‌ಗೆ ಹೊರಗೆ ಬಂದೆವು. ಪ್ರತಿಯೊಂದು ಪೋರ್ಟ್‌ನಲ್ಲಿಯೂ ಹಡಗು ಸಂಜೆವರೆಗೂ ನಿಲ್ಲುತ್ತದೆ. ನಾವು ಆ ಸಮಯದಲ್ಲಿ ಸಿಟಿ ರೌಂಡ್‌ ಮಾಡಬಹುದು. ಪೋರ್ಟ್‌ ಟು ಸಿಟಿ ಕನೆಕ್ಟ್‌ ಬಸ್‌ಗಳು ಇರುತ್ತವೆ. ನಾವು ಎಲ್ಲಾ ಕಡೆ ಸುತ್ತಾಡಿ ಸಂಜೆ ಐದು ಗಂಟೆಗೆ ವಾಪಸ್‌ ಬಂದೆವು. ಆರು ಗಂಟೆಗೆ ಹಡಗು ಅಲ್ಲಿಂದ ಪ್ರಯಾಣ ಪ್ರಾರಂಭಿಸುತ್ತದೆ.

ಕ್ರೂಸ್‌ ಹಡಗಿನ ಮೇಲಿನ ಮಹಡಿ

ಪ್ರತಿದಿನ ರಾತ್ರಿ ವಿವಿಧ ರೀತಿಯ ಮನೋರಂಜನೆ ಇವೆಂಟ್‌ ನಡೆಯುತ್ತದೆ. ಮರುದಿನ ನಾವು ಬೆಳಗ್ಗೆ ಆರು ಗಂಟೆಗೆ ಸ್ವೀಡನ್‌ ದೇಶದ ಗೋಥನ್ಬರ್ಗ್ ತಲುಪಿದೆವು. ಅಲ್ಲೂ ಸಿಟಿ ರೌಂಡ್ಸ್‌ ಮಾಡಿದೆವು. ರಾತ್ರಿ ಹೊರಟು ನಂತರದ ದೇಶವಾದ ಡೆನ್ಮಾರ್ಕ್‌ಗೆ ಬಂದ್ವಿ. ಆ ದಿನ ರಾತ್ರಿ ತುಂಬಾ ಗಾಳಿ ಇದ್ದು ಹಡಗು ತುಂಬಾನೆ ಅಲ್ಲಾಡ್ತಾ ಇತ್ತು. ನಿದ್ದೆ ಮಾಡೋಕ್ಕೆ ಆಗ್ತಾ ಇರಲಿಲ್ಲ. ನಾವು ಸ್ವಲ್ಪ ಭಯದಲ್ಲಿಯೇ ಅವತ್ತು ರಾತ್ರಿ ಕಳೆದೆವು.

ಮರುದಿನ ನಮ್ಮ ಮುಂದಿನ ಯೋಜನೆಯಲ್ಲಿದ್ದ ಬಂದರು (aurus)ಗೆ ಹೋಗಲು ಸಾಧ್ಯವಾಗಲಿಲ್ಲ. ಯಾಕೆಂದರೆ, ಅಲ್ಲಿ ವಿಪರೀತ ಗಾಳಿ ಇದ್ದು, ಹಡಗು ಲಂಗರು ಹಾಕುವುದು ಕಷ್ಟವಾಗಿತ್ತು. ಅದಕ್ಕೆ ಅದೇ ದೇಶದ ಇನ್ನೊಂದು ಪೋರ್ಟ್‌ಗೆ (ಕೂಪೆನ್‌ಹೆಗನ್‌) ಹೋದೆವು. ಅಲ್ಲೂ ಸಿಟಿ ರೌಂಡ್‌ ಹಾಕಿದೆವು. ಅಂದು ನಮ್ಮ AIDA ಕ್ರೂಸ್‌ ಪ್ರವಾಸದ ಕೊನೆಯ ರಾತ್ರಿಯಾಗಿತ್ತು. ಅಂದು, ತುಂಬಾ ವಿಶೇಷವಾದ ವಿದಾಯ ಸಮಾರಂಣ ನಡೆಯಿತು. ಕೇಕ್‌ ಕಟ್ಟಿಂಗ್‌ ಎಲ್ಲಾ ಇತ್ತು. ತಡವಾಗಿ ಊಟ ಮಾಡಿ ಮಲಗಿದೆವು.

ಕ್ರೂಸ್‌ ಪ್ರವಾಸ

ಮರುದಿನ ಅಂದರೆ ಆಗಸ್ಟ್‌ 24ರಂದು ನಾವು ಜರ್ಮನಿ ತಲುಪಿದೆವು. ಬೆಳಗ್ಗೆ ತಿಂಡಿ ತಿಂದು ಪರಿಚಯವಾದ ಹೋಟೆಲ್‌ ಕೆಲಸಗಾರರಿಗೆ ವಿದಾಯ ಹೇಳಿ ಸೆಲ್ಫಿ ಎಲ್ಲಾ ತೆಗೆದುಕೊಂಡು (ಭಾರತದ ಸಾಕಷ್ಟು ಕೆಲಸಗಾರರು ಅದರಲ್ಲಿದ್ದರು) ರೂಂಗೆ ಬಂದೆವು. ಛೇ, ಇನ್ನೂ ಸ್ವಲ್ಪ ದಿನ ಇಲ್ಲೇ ಇರಬೇಕಿತ್ತು ಅಂದುಕೊಳ್ಳುತ್ತಾ ಬಟ್ಟೆ ಎಲ್ಲಾ ಪ್ಯಾಕ್‌ಮಾಡಿ 9 ಗಂಟೆಗೆ ಹಡಗಿನಿಂದ ಚೆಕ್‌ಔಟ್‌ ಆದೆವು.

ಕ್ರೂಸ್‌ ಹಡಗು ಪ್ರಯಾಣ

ಪ್ರವಾಸ ಇಷ್ಟಪಡುವವರು ವಿಶೇಷವಾಗಿ ಸಮುದ್ರದ ಕುರಿತು ವಿಶೇಷ ಕುತೂಹಲ ಇರುವವರು ಕ್ರೂಸ್‌ ಹಡಗು ಪ್ರವಾಸ ಮಾಡುವ ಅವಕಾಶ ಸಿಕ್ಕರೆ ಮಿಸ್‌ ಮಾಡಿಕೊಳ್ಳಬೇಡಿ. ನಗರದ ಜಂಜಾಟ, ಮಾಲಿನ್ಯ, ಎಲ್ಲಾ ಒತ್ತಡ ಜಂಜಾಟಗಳಿಂದ ದೂರವಿದ್ದು ಸಮುದ್ರದ ನಡುವೆ ಪಾರ್ಟಿ, ಪ್ರಯಾಣ ಕೈಗೊಳ್ಳುವುದು ವಿಭಿನ್ನ ಅನುಭವ ನೀಡುತ್ತದೆ.
ಲೇಖನ: ರಜನೀಶ್‌, ಬೆಂಗಳೂರು ಬಾಷ್‌ ಉದ್ಯೋಗಿ

___________

ಗಮನಿಸಿ: ಓದುಗರು ತಮ್ಮ ಪ್ರವಾಸ ಅನುಭವ, ಪ್ರವಾಸ ಕಥನಗಳನ್ನು ಎಚ್‌ಟಿ ಕನ್ನಡಕ್ಕೆ ಕಳುಹಿಸಬಹುದು. ಕನ್ನಡದಲ್ಲಿ ಯೂನಿಕೋಡ್‌ನಲ್ಲಿ ಟೈಪ್‌ ಮಾಡಿ ಕಳುಹಿಸಬೇಕಾದ ಇಮೇಲ್‌ ವಿಳಾಸ: htkannadanews@gmail.com


ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ