ದೀಪಾವಳಿ ಪ್ರವಾಸಕ್ಕೆ ಹೇಳಿ ಮಾಡಿಸಿದ ಭಾರತದ ಪ್ರಸಿದ್ಧ ತಾಣಗಳಿವು, ಜೀವನದಲ್ಲಿ ಒಮ್ಮೆಯಾದ್ರೂ ಇಲ್ಲಿನ ಬೆಳಕಿನ ಹಬ್ಬದ ಸಂಭ್ರಮ ಕಣ್ತುಂಬಿಕೊಳ್ಳಿ
Oct 19, 2024 10:55 AM IST
ಬೆಳಕಿನ ಹಬ್ಬದ ಸಂಭ್ರಮವನ್ನು ಸವಿಯಲು ಭಾರತದ ಈ ಜಾಗಗಳಿಂತ ಬೆಸ್ಟ್ ಬೇರಿಲ್ಲ
- ಬೆಳಕಿನ ಹಬ್ಬ ಎಂದೇ ಖ್ಯಾತಿ ಪಡೆದಿರುವ ದೀಪಾವಳಿ ಭಾರತದಲ್ಲಿ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದು. ಭಾರತದ ವಿವಿಧ ಭಾಗಗಳಲ್ಲಿ ದೀಪಾವಳಿಯನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ. ದೀಪಾವಳಿ ನಿಜವಾದ ಸಂಭ್ರಮವನ್ನು ಕಣ್ತುಂಬಿಕೊಳ್ಳಬೇಕು ಎಂದರೆ ಭಾರತ ಈ 7 ಜಾಗಗಳಿಗೆ ಭೇಟಿ ನೀಡಬೇಕು. ಈ ದೀಪಾವಳಿಗೆ ನೀವು ಪ್ರವಾಸ ಮಾಡಬೇಕು ಎಂದುಕೊಂಡಿದ್ದರೆ ಇಲ್ಲೊಮ್ಮೆ ಗಮನಿಸಿ.
ಭಾರತದಾದ್ಯಂತ ಬೆಳಕಿನ ಹಬ್ಬದ ಸಂಭ್ರಮ ಶುರುವಾಗಿದೆ. ಸಂಪ್ರದಾಯ, ಸಂತೋಷಕ್ಕೆ ಸಾಕ್ಷಿಯಾಗಿರುವ ಈ ಹಬ್ಬವು ನಮ್ಮ ದೇಶದಲ್ಲಿ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದು. ಭಾರತದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ನಿಜವಾದ ದೀಪಾವಳಿಯ ಸಂಭ್ರಮವನ್ನು ನೀವು ನೋಡಲು ಬಯಸಿದರೆ ಈ 7 ಜಾಗಗಳಿಗೆ ಭೇಟಿ ನೀಡಬೇಕು. ಇಲ್ಲಿಗೆ ಭೇಟಿ ನೀಡಿದರೆ ಬೆಳಕಿನ ಹಬ್ಬ ನಿಮ್ಮ ಪಾಲಿನ ಸಾರ್ಥಕ ಕ್ಷಣ ಎನ್ನಿಸುವಂತೆ ಮಾಡುತ್ತದೆ. ಈ ವರ್ಷದ ದೀಪಾವಳಿಗೆ ಪ್ರವಾಸ ಮಾಡುವ ಯೋಚನೆ ಇದ್ದರೆ ಈ ಸ್ಥಳಗಳನ್ನು ನಿಮ್ಮ ಪಟ್ಟಿಯಲ್ಲಿ ಸೇರಿಸಿಕೊಳ್ಳಿ.
ವಾರಾಣಸಿ, ಉತ್ತರಪ್ರದೇಶ
ಭಾರತದ ಆಧ್ಯಾತ್ಮಿಕ ತಾಣಗಳಲ್ಲಿ ಒಂದಾಗಿರುವ ವಾರಣಸಿಯು ದೀಪಾವಳಿ ಸಮಯದಲ್ಲಿ ಮಾಂತ್ರಿಕ ಸ್ಥಳವಾಗಿ ಬದಲಾಗುತ್ತದೆ, ಅಂದರೆ ಅಲ್ಲಿನ ದೀಪಾಲಂಕಾರವು ನಿಮ್ಮ ಕಣ್ಮನ ಸೆಳೆಯುವಂತೆ ಮಾಡುತ್ತದೆ. ಗಂಗಾನದಿಯ ತಟವು ನೂರಾರು ದೀಪಗಳಿಂದ ಅಲಂಕೃತವಾಗಿರುತ್ತದೆ. ದೀಪಗಳು, ಆಕಾಶದೆತ್ತರದಲ್ಲಿ ಪಟಾಕಿಗಳ ಚಿತ್ತಾರ ಎಂಥವರನ್ನು ಮಂತ್ರಮುಗ್ಧಗೊಳಿಸುತ್ತದೆ. ಗಂಗಾ ಆರತಿ, ಭಕ್ತಿಗೀತೆಗಳು, ಸಂಗೀತ ಮತ್ತು ಪ್ರಾರ್ಥನೆಗಳು ನಿಮ್ಮನ್ನು ಸಂಭ್ರಮದ ಜೊತೆಗೆ ಭಕ್ತಿಯಲ್ಲೂ ಮಿಂದೇಳುವಂತೆ ಮಾಡುತ್ತದೆ. ಅಲ್ಲಿನ ಬೀದಿ ಬೀದಿಗಳು ವರ್ಣರಂಜಿತ ರಂಗೋಲಿ, ದೀಪಾಲಂಕಾರಗಳಿಂದ ಗಮನಸೆಳೆಯುವಂತಿರುತ್ತವೆ.
ಜೈಪುರ, ರಾಜಸ್ತಾನ್
ಪಿಂಕ್ ಸಿಟಿ ಎಂದೇ ಖ್ಯಾತಿ ಪಡೆದಿರುವ ಜೈಪುರ ದೀಪಾವಳಿ ಸಮಯದಲ್ಲಿ ಇಂದ್ರನ ರಾಜ್ಯದಂತೆ ದೀಪಗಳ ಬೆಳಕಿನಲ್ಲಿ ಜಗಮಗಿಸುತ್ತದೆ. ಬೀದಿಗಳು, ಮಾರುಕಟ್ಟೆಗಳು ಮತ್ತು ಐತಿಹಾಸಿಕ ಸ್ಮಾರಕಗಳನ್ನು ದೀಪಗಳಿಂದ ಸುಂದರವಾಗಿ ಅಲಂಕರಿಸಲಾಗಿರುತ್ತದೆ. ಜೋಹಾರಿ ಬಜಾರ್ ಮತ್ತು ಬಾಪು ಬಜಾರ್‌ನಂತಹ ಜನಪ್ರಿಯ ಮಾರುಕಟ್ಟೆಗಳು ಇನ್ನಷ್ಟು ಪ್ರವಾಸಿಗರನ್ನು ಸೆಳೆಯತ್ತವೆ. ಹವಾ ಮಹಲ್ ಮತ್ತು ನಹರ್‌ಗಢ್ ಕೋಟೆಯಂತಹ ಐಕಾನಿಕ್ ಹೆಗ್ಗುರುತುಗಳು ಕೂಡ ದೀಪಾವಳಿಯ ಬೆಳಕಿನಲ್ಲಿ ಅಂದವಾಗಿ ಕಾಣುತ್ತದೆ. ಸಾಂಪ್ರದಾಯಿಕ ಸಿಹಿತಿಂಡಿಗಳು, ಪಟಾಕಿಯ ಸದ್ದು, ರಾತ್ರಿಯಲ್ಲಿ ನಿಜಕ್ಕೂ ಇದು ಸ್ವರ್ಗದಂತೆ ಕಾಣುವುದರಲ್ಲಿ ಅನುಮಾನವಿಲ್ಲ.
ಅಮೃತ್‌ಸರ್, ಪಂಜಾಬ್
ಶ್ರೀಮಂತ ಸಿಖ್ ಸಂಪ್ರದಾಯಕ್ಕೆ ಹೆಸರುವಾಸಿಯಾಗಿರುವ ಅಮೃತ್‌ಸರ್‌ದಲ್ಲಿ ದೀಪಾವಳಿ ಹಬ್ಬವನ್ನು ಬಹಳ ವಿಭಿನ್ನವಾಗಿ ಆಚರಿಸಲಾಗುತ್ತದೆ. ಇಲ್ಲಿ ದೀಪಾವಳಿಯು ಬಂದಿ ಛೋರ್ ದಿವಾಸ್‌ನೊಂದಿಗೆ ಸೇರಿಕೊಳ್ಳುತ್ತದೆ, ಇದು ಗುರು ಹರಗೋವಿಂದ್ ಸಿಂಗ್ ಅವರನ್ನು ಮೊಘಲ್ ಸೆರೆಮನೆಯಿಂದ ಬಿಡುಗಡೆ ಮಾಡುವುದನ್ನು ನೆನಪಿಸುವ ದಿನವಾಗಿದೆ. ಸಾವಿರಾರು ದೀಪಗಳಿಂದ ಸುಂದರವಾಗಿ ಪ್ರಕಾಶಿಸಲ್ಪಟ್ಟಿರುವ ಗೋಲ್ಡನ್ ಟೆಂಪಲ್, ಪವಿತ್ರ ಕೊಳವು ಅದ್ಭುತವಾದ ಪ್ರತಿಬಿಂಬವನ್ನು ಬಿತ್ತರಿಸುತ್ತದೆ, ಇಲ್ಲಿ ರಾತ್ರಿಯಿಡಿ ಪಟಾಕಿಗಳನ್ನು ಸಿಡಿಸುವ ಮೂಲಕ ಆಕಾಶದಲ್ಲಿ ಚಿತ್ತಾರ ಮೂಡಿಸಲಾಗುತ್ತದೆ.
ಅಯೋಧ್ಯ, ಉತ್ತರಪ್ರದೇಶ
ರಾಜಜನ್ಮ ಭೂಮಿ ಅಯೋಧ್ಯಯೆಲ್ಲೂ ದೀಪಾವಳಿಯನ್ನ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ದೀಪಾವಳಿಯು ರಾಮನು ವನವಾಸದಿಂದ ಅಯೋಧ್ಯೆಗೆ ಮರಳಿದ ದಿನ ಎಂದೂ ಹೇಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಮೊದಲ ಬಾರಿ ದೀಪಾವಳಿ ಆಚರಿಸಲಾಯಿತು ಎಂಬ ನಂಬಿಕೆಯೂ ಇದೆ. ಇಲ್ಲಿ ದೀಪಾವಳಿಯಲ್ಲಿ ಲಕ್ಷಾಂತರ ದೀಪಗಳನ್ನು ಬೆಳಗಿಸುವ ಮೂಲಕ ದೀಪೋತ್ಸವ ಆಚರಿಸಲಾಗುತ್ತದೆ. ಭಗವಾನ್ ರಾಮನ ಪುನರಾಗಮನದ ಕಥೆಯನ್ನು ನಿರೂಪಿಸುವ ಸಾಂಸ್ಕೃತಿಕ ಪ್ರದರ್ಶನಗಳು ಪ್ರೇಕ್ಷಕರನ್ನು ಆಕರ್ಷಿಸುತ್ತವೆ, ಇಲ್ಲಿಯ ಸರಯೂ ನದಿಯ ತಟವು ಕೂಡ ದೀಪಗಳ ಅಲಂಕಾರದಲ್ಲಿ ಕಂಗೊಳಿಸುತ್ತದೆ.
ಮುಂಬೈ, ಮಹಾರಾಷ್ಟ್ರ
ಭಾರತದ ಆರ್ಥಿಕ ರಾಜಧಾನಿ ಎಂದು ಕರೆಸಿಕೊಳ್ಳುವ ಮುಂಬೈ ಕೂಡ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ನಗರಿ. . ಕ್ವೀನ್ಸ್ ನೆಕ್ಲೇಸ್ ಎಂದು ಕರೆಯಲ್ಪಡುವ ಮರೈನ್ ಡ್ರೈವ್ ಅನ್ನು ನೀವು ದೀಪಾವಳಿ ಸಮಯದಲ್ಲಿ ನೋಡಲೇಬೇಕು. ಮುಂಬೈನ ನಗರಿಗಳು ದೀಪಾವಳಿ ಸಮಯದಲ್ಲಿ ಪಟಾಕಿಗಳು ಮತ್ತು ವರ್ಣರಂಜಿತ ದೀಪಗಳಿಂದ ಮಿಂಚುತ್ತವೆ ಮತ್ತು ಅದ್ಭುತ ನೋಟವನ್ನು ಸೃಷ್ಟಿಸುತ್ತವೆ. ಕ್ರಾಫರ್ಡ್ ಮಾರುಕಟ್ಟೆ ಮತ್ತು ಝವೇರಿ ಬಜಾರ್‌ನಂತಹ ಜನಪ್ರಿಯ ಮಾರುಕಟ್ಟೆಗಳು ಶಾಪರ್‌ಗಳಿಂದ ಗದ್ದಲದಿಂದ ಕೂಡಿದ್ದು, ಅದ್ಭುತವಾದ ದೀಪಾವಳಿ ಶಾಪಿಂಗ್ ಅನುಭವವನ್ನು ನೀಡುತ್ತವೆ. ಗೇಟ್‌ವೇ ಆಫ್ ಇಂಡಿಯಾ ಮತ್ತು ಇತರ ಹೆಗ್ಗುರುತುಗಳು ದೀಪಗಳ ಬೆಳಕಿನಲ್ಲಿ ಇನ್ನಷ್ಟು ಸುಂದರವಾಗಿ ಕಾಣುತ್ತವೆ.
ಕೋಲ್ಕತ್ತಾ, ಪಶ್ಚಿಮ ಬಂಗಾಳ
ಕೋಲ್ಕತ್ತಾದಲ್ಲಿ ದೀಪಾವಳಿಯನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತದೆ. ಇಲ್ಲಿ ದೀಪಾವಳಿಯು ಕಾಳಿ ಪೂಜೆಗೆ ಸಮರ್ಪಿತವಾಗಿದೆ. ಈ ಆಚರಣೆಗಳಲ್ಲಿ ನಗರದ ಶ್ರೀಮಂತ ಕಲಾತ್ಮಕ ಸಂಸ್ಕೃತಿಯು ಹೊಳೆಯುತ್ತದೆ. ಮನೆಗಳು ಮತ್ತು ದೇವಾಲಯಗಳು ದೀಪಗಳು ಹಾಗೂ ವಿದ್ಯುದಲಂಕಾರಗಳಿಂದ ಕಂಗೊಳಿಸುತ್ತವೆ. ಭಕ್ತರು ಕಾಳಿ ದೇವಿಯನ್ನು ಪ್ರಾರ್ಥಿಸುತ್ತಾರೆ, ಅವಳ ಸಮೃದ್ಧಿ ಮತ್ತು ರಕ್ಷಣೆಯ ಆಶೀರ್ವಾದವನ್ನು ಕೇಳುತ್ತಾರೆ. ಹಬ್ಬದ ಸಂಭ್ರಮವು ಪಟಾಕಿಗಳು ಮತ್ತು ಸಾಂಸ್ಕೃತಿಕ ಪ್ರದರ್ಶನಗಳಿಂದ ತುಂಬಿರುತ್ತದೆ.
ಉದಯ್‌ಪುರ್, ರಾಜಸ್ತಾನ್
ಸುಂದರವಾದ ಸರೋವರಗಳು ಮತ್ತು ಅರಮನೆಗಳೊಂದಿಗೆ ರಾಯಲ್ ಸಿಟಿ ಎಂದು ಕರೆಯಲ್ಪಡುವ ಉದಯಪುರವು ದೀಪಾವಳಿಯನ್ನು ಆಕರ್ಷಕ ರೀತಿಯಲ್ಲಿ ಆಚರಿಸುತ್ತದೆ. ಉತ್ಸವದ ಸಮಯದಲ್ಲಿ ಅದ್ಭುತವಾದ ವಾಸ್ತುಶಿಲ್ಪವು ಪ್ರಕಾಶಮಾನವಾಗಿ ಹೊಳೆಯುತ್ತದೆ, ಪ್ರವಾಸಿಗರನ್ನು ಆಕರ್ಷಿಸುವ ಕಾಲ್ಪನಿಕ ಕಥೆಯ ವೈಬ್ ಅನ್ನು ಸೃಷ್ಟಿಸುತ್ತದೆ. ದೀಪಗಳು ಪಟಾಕಿಗಳಿಂದ ಇಲ್ಲಿನ ಸರೋವರಗಳು ಹಾಗೂ ಬೀದಿಗಳು ಕಂಗೊಳಿಸುತ್ತವೆ.