logo
ಕನ್ನಡ ಸುದ್ದಿ  /  ಜೀವನಶೈಲಿ  /  Viral: ಓಣಂ ಪ್ರಯುಕ್ತ ಇಡ್ಲಿ ತಿನ್ನುವ ಸ್ಪರ್ಧೆ; ಕೇರಳದಲ್ಲಿ ಉಸಿರುಗಟ್ಟಿ 49 ವರ್ಷದ ವ್ಯಕ್ತಿ ಸಾವು

Viral: ಓಣಂ ಪ್ರಯುಕ್ತ ಇಡ್ಲಿ ತಿನ್ನುವ ಸ್ಪರ್ಧೆ; ಕೇರಳದಲ್ಲಿ ಉಸಿರುಗಟ್ಟಿ 49 ವರ್ಷದ ವ್ಯಕ್ತಿ ಸಾವು

Jayaraj HT Kannada

Sep 15, 2024 01:51 PM IST

google News

ಇಡ್ಲಿ ತಿನ್ನುವ ಸ್ಪರ್ಧೆ ವೇಳೆ ಕೇರಳದ 49 ವರ್ಷದ ವ್ಯಕ್ತಿ ಸಾವು (ಸಾಂದರ್ಭಿಕ ಚಿತ್ರ)

    • Kerala Viral News: ಕೇರಳದ ವಲಯಾರ್‌ನಲ್ಲಿ, ಇಡ್ಲಿ ತಿನ್ನುವ ಸ್ಪರ್ಧೆ ವೇಳೆ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾರೆ. ಬೇಗನೆ ಇಡ್ಲಿ ತಿನ್ನುವ ಭರದಲ್ಲಿ ಗಂಟಲಲ್ಲಿ ಇಡ್ಲಿ ಸಿಲುಕಿ ಉಸಿರಾಡಲು ಸಾಧ್ಯವಾಗದೆ 49 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ.
ಇಡ್ಲಿ ತಿನ್ನುವ ಸ್ಪರ್ಧೆ ವೇಳೆ ಕೇರಳದ 49 ವರ್ಷದ ವ್ಯಕ್ತಿ ಸಾವು (ಸಾಂದರ್ಭಿಕ ಚಿತ್ರ)
ಇಡ್ಲಿ ತಿನ್ನುವ ಸ್ಪರ್ಧೆ ವೇಳೆ ಕೇರಳದ 49 ವರ್ಷದ ವ್ಯಕ್ತಿ ಸಾವು (ಸಾಂದರ್ಭಿಕ ಚಿತ್ರ) (Pixabay)

ಕೇರಳದಲ್ಲಿ ಓಣಂ ಸಂಭ್ರಮದ ನಡುವೆ ಆಘಾತಕಾರಿ ಘಟನೆ ನಡೆದಿದೆ. ಓಣಂ ಆಚರಣೆ ಪ್ರಯುಕ್ತ ನಡೆದ ಇಡ್ಲಿ ತಿನ್ನುವ ಸ್ಪರ್ಧೆಯ ಸಮಯದಲ್ಲಿ ಉಸಿರುಗಟ್ಟಿ 49 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಕೇರಳದ ವಾಲಯಾರ್‌ನಲ್ಲಿ ಸೆಪ್ಟೆಂಬರ್‌ 14ರ ಶನಿವಾರ ದುರ್ಘಟನೆ ನಡೆದಿದೆ. ಪೊಲೀಸರು ಹೇಳುವ ಪ್ರಕಾರ, ಸ್ಥಳೀಯ ಕ್ಲಬ್ ಒಂದು ಇಡ್ಲಿ ತಿನ್ನುವ ಸ್ಪರ್ಧೆಯನ್ನು ಆಯೋಜಿಸಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸುರೇಶ್, ಇಡ್ಲಿ ತಿನ್ನುವಾಗ ಗಂಟಲಲ್ಲಿ ಸಿಕ್ಕಿಹಾಕಿಕೊಂಡು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಸ್ಥಳದಲ್ಲಿದ್ದ ಸಂಘಟಕರು ಹಾಗೂ ನೋಡುಗರು, ಸುರೇಶ್‌ ಗಂಟಲಲ್ಲಿ ಸಿಕ್ಕಿಕೊಂಡಿದ್ದ ಇಡ್ಲಿಯನ್ನು ಹೊರತೆಗೆಯುವ ಪ್ರಯತ್ನ ಮಾಡಿದ್ದಾರೆ. ಆದರೆ ಪ್ರಯತ್ನ ಯಶಸ್ವಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳದಲ್ಲಿ ಕುಸಿದು ಬಿದ್ದ ಸುರೇಶ್ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅದಾದ ಕೆಲವೇ ಸಮಯದಲ್ಲಿ ಪ್ರಾಣ ಚೆಲ್ಲಿದ್ದಾರೆ. ಘಟನೆ ಸಂಬಂಧ ವಾಲಯಾರ್ ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿದ್ದಾರೆ.

ಘಟನೆ ನೋಡಿದ ಪ್ರತ್ಯಕ್ಷದರ್ಶಿಯೊಬ್ಬರು ಸುದ್ದಿಸಂಸ್ಥೆ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಜೊತೆಗೆ ಮಾತನಾಡಿ, “ಸ್ಪರ್ಧೆ ವೇಳೆ ಸುಮಾರು 60 ಪ್ರೇಕ್ಷಕರು ಸೇರಿದ್ದರು. ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ನಾಲ್ಕು ಜನರು ಭಾಗವಹಿಸಿದ್ದರು. ಯಾವುದೇ ಸಾಂಬಾರ್‌ ಅಥವಾ ಸೈಡ್‌ ಡಿಶ್‌ ಇಲ್ಲದೆ ಸಾದಾ ಇಡ್ಲಿ ತಿನ್ನುವುದು ಸ್ಪರ್ಧೆಯಾಗಿತ್ತು. ಇತರ ಸ್ಪರ್ಧಿಗಳು ಆರಂಭದಲ್ಲಿ ಒಂದು ಇಡ್ಲಿಯನ್ನು ಮಾತ್ರ ತಿನ್ನುವ ಮೂಲಕ ಸ್ಪರ್ಧೆಯನ್ನು ಆರಂಭಿಸಿದರು. ಆದರೆ ಸುರೇಶ್ ಒಂದೇ ಬಾರಿಗೆ ಮೂರು ಇಡ್ಲಿಗಳನ್ನು ತಿನ್ನಲು ತೆಗೆದುಕೊಂಡರು. ಅದಾದ ಒಂದು ನಿಮಿಷದೊಳಗೆ ಉಸಿರುಗಟ್ಟಿದಂಥಾ ಅನುಭವವಾಗಿ ಅಸ್ವಸ್ಥತರಾಗಿ ಕುಸಿದುಬಿದ್ದರು”.

“ನಾವು ಅವರನ್ನು ಮೊದಲು ಹತ್ತಿರದ ಕ್ಲಿನಿಕ್‌ಗೆ ಕರೆದೊಯ್ದೆವು. ಅಲ್ಲಿಂದ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದೆವು. ಆದರೆ, ಅಲ್ಲಿನ ವೈದ್ಯರು ಅವರು ಅದಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದರು” ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ.

ತಾಯಿಯನ್ನು ಅಗಲಿದ ಮಗ

ಘಟನೆ ಸಂಬಂಧ ಪುದುಶ್ಶೇರಿ ಗ್ರಾಮ ಪಂಚಾಯತ್ ಸದಸ್ಯ ಪಿಬಿ ಗಿರೀಶ್ ಮಾತನಾಡಿ, ಸುರೇಶ್ ತುಂಬಾ ಸಕ್ರಿಯ ವ್ಯಕ್ತಿ. ದುರಂತ ಸಂಭವಿಸಿದಾಗ ಅಲಮಾರಂ ನಿವಾಸಿಗಳು ಓಣಂ ಆಚರಣೆಯ ಭಾಗವಾಗಿ ಸ್ಥಳೀಯರಿಗೆ ವಿವಿಧ ಆಟಗಳು ಮತ್ತು ಸ್ಪರ್ಧೆಗಳನ್ನು ನಡೆಸುತ್ತಿದ್ದರು. ಸುರೇಶ್‌ ಅವರು ಮಧ್ಯಾಹ್ನದ ಹೊತ್ತಿಗೆ ಉಸಿರುಗಟ್ಟಿ ಕುಸಿದುಬಿದ್ದರು. ಟ್ರಕ್ ಚಾಲಕನಾಗಿದ್ದ ಸುರೇಶ್‌, ತಾಯಿ ಕೊಲ್ಲಾಪುರ ಪಾಂಚಾಲಿ ಅವರೊಂದಿಗೆ ವಾಸಿಸುತ್ತಿದ್ದರು" ಎಂದು ಹೇಳಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ