logo
ಕನ್ನಡ ಸುದ್ದಿ  /  ಜೀವನಶೈಲಿ  /  Immune Thrombocytopenia: ಬೇಗ ಗಾಯವಾಗಿ ವಿಪರೀತ ರಕ್ತಸ್ರಾವವಾಗುತ್ತಿದೆಯೆ? ಇದು ಈ ರೋಗದ ಲಕ್ಷಣ..

Immune Thrombocytopenia: ಬೇಗ ಗಾಯವಾಗಿ ವಿಪರೀತ ರಕ್ತಸ್ರಾವವಾಗುತ್ತಿದೆಯೆ? ಇದು ಈ ರೋಗದ ಲಕ್ಷಣ..

HT Kannada Desk HT Kannada

Sep 23, 2022 12:02 PM IST

google News

ಸಾಂದರ್ಭಿಕ ಚಿತ್ರ

    • ಪ್ಲೇಟ್‍ಲೆಟ್ ಎಣಿಕೆಯು ವಿಪರೀತ ಕಡಿಮೆಯಾದಾಗ ಇಮ್ಯುನ್ ಥ್ರಾಂಬೋಸೈಟೋಪೀನಿಯ (ಐಟಿಪಿ) ಏರ್ಪಡುವ ಸಾಧ್ಯತೆಯಿದ್ದು ಇದು ವಯಸ್ಸಾಗುತ್ತಿದ್ದಂತೆ ವೃದ್ಧಿಸುತ್ತದೆ ಮತ್ತು ಸ್ವಲ್ಪಹೆಚ್ಚಾಗಿ ಮಹಿಳೆಯರಲ್ಲಿ ಕಾಣಸಿಕೊಳ್ಳುತ್ತದೆ. ಸುಲಭವಾಗಿ ಬೇಗ ಗಾಯವಾಗುತ್ತಿದ್ದು, ವಿಪರೀತ ರಕ್ತಸ್ರಾವವಾಗುತ್ತಿದ್ದರೆ ಇದು ಇಮ್ಯುನ್ ಥ್ರಾಂಬೋಸೈಟೋಪೀನಿಯ ಎಂದು ಕರೆಯಲ್ಪಡುವ ರೋಗದ ಲಕ್ಷಣವಾಗಿರಬಹುದು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪ್ಲೇಟ್‍ಲೆಟ್ ಎಣಿಕೆಯು ವಿಪರೀತ ಕಡಿಮೆಯಾದಾಗ ಇಮ್ಯುನ್ ಥ್ರಾಂಬೋಸೈಟೋಪೀನಿಯ (ಐಟಿಪಿ) ಏರ್ಪಡುವ ಸಾಧ್ಯತೆಯಿದ್ದು ಇದು ವಯಸ್ಸಾಗುತ್ತಿದ್ದಂತೆ ವೃದ್ಧಿಸುತ್ತದೆ ಮತ್ತು ಸ್ವಲ್ಪ ಹೆಚ್ಚಾಗಿ ಮಹಿಳೆಯರಲ್ಲಿ ಕಾಣಸಿಕೊಳ್ಳುತ್ತದೆ. ಇದೊಂದು ದೀರ್ಘಾವಧಿ ಕಾಯಿಲೆಯಾಗಿದ್ದು ರೋಗಿಗಳು ಜೀವನಪರ್ಯಂತ ಚಿಕಿತ್ಸೆ ತೆಗೆದುಕೊಳ್ಳಬೇಕಾಗಿರುವುದರಿಂದ, ಅದರ ಸೂಕ್ತ ನಿರ್ವಹಣೆಯ ಪ್ರಾಮುಖ್ಯತೆಯನ್ನು ತಜ್ಞರು ಒತ್ತಿಹೇಳುತ್ತಾರೆ. ಸುಲಭವಾಗಿ ಬೇಗ ಗಾಯವಾಗುತ್ತಿದ್ದು, ವಿಪರೀತ ರಕ್ತಸ್ರಾವವಾಗುತ್ತಿದ್ದರೆ ಇದು ಇಮ್ಯುನ್ ಥ್ರಾಂಬೋಸೈಟೋಪೀನಿಯ ಎಂದು ಕರೆಯಲ್ಪಡುವ ರೋಗದ ಲಕ್ಷಣವಾಗಿರಬಹುದು.

ಐಟಿಪಿಯಲ್ಲಿ ನಿರೋಧಕ ವ್ಯವಸ್ಥೆಯು, ರಕ್ತ ಹೆಪ್ಪುಗಟ್ಟುವುದಕ್ಕೆ ನೆರವಾಗುವ ಜೀವಕೋಶಗಳಾದ ಪ್ಲೇಟ್‍ಲೆಟ್‍ಗಳ ಮೇಲೆ ದಾಳಿ ನಡೆಸಿ ಅವುಗಳ ಎಣಿಕೆ ಕಡಿಮೆಯಾಗುವಂತೆ ಮಾಡುತ್ತದೆ. ಸಾಮಾನ್ಯ ಪ್ಲೇಟ್‍ಲೆಟ್ ಎಣಿಕೆಯು 1,50,000ದಿಂದ 4,50,000ವರೆಗಿನ ಶ್ರೇಣಿಯಲ್ಲಿರುತ್ತದೆ. ಆದರೆ ಐಟಿಪಿ ಏರ್ಪಟ್ಟಿದ್ದಾಗ ಈ ಸಂಖ್ಯೆಯು 1,00,000ಕ್ಕಿಂತ ಕಡಿಮೆ ಇರುತ್ತದೆ. ಈ ಕಡಿಮೆ ಪ್ಲೇಟ್‍ಲೆಟ್‍ಗಳ ಎಣಿಕೆಯು ರಕ್ತ ಸರಿಯಾಗಿ ಹೆಪ್ಪುಗಟ್ಟುವುದನ್ನು ತಡೆಗಟ್ಟಿ ಸುಲಭವಾಗಿ ರಕ್ತಸ್ರಾವ ಮತ್ತು ಗಾಯ ಆಗುವಂತೆ ಮಾಡುತ್ತದೆ.

ಬೆಂಗಳೂರಿನ ಎಚ್‍ಸಿಜಿ ಕಾಂಪ್ರಿಹೆನ್ಸಿವ್ ಕ್ಯಾನ್ಸರ್ ಹಾಸ್ಪಿಟಲ್‍ನ ಡಾ. ಸಚಿನ್ ಸುರೇಶ್ ಹೇಳುವ ಪ್ರಕಾರ ರೋಗಿಯ ನಿರೋಧಕ ವ್ಯವಸ್ಥೆಯು ಅವರ ಪ್ಲೇಟ್‍ಲೆಟ್‍ಗಳನ್ನು ಹಾಳುಮಾಡುವಂತಹ ಐಟಿಪಿ ಸ್ಥಿತಿಯಲ್ಲಿ ಅದು ದೀರ್ಘಕಾಲಿಕವಾಗುವ ಅಪಾಯ ಹೆಚ್ಚಾಗಿರುತ್ತದೆ. ಮೂಗು, ದವಡೆಗಳಲ್ಲಿ ರಕ್ತಸ್ರಾವ ಅಥವಾ ತ್ವಚೆಯ ಮೇಲೆ ಕಪ್ಪುಕಲೆಗಳೇರ್ಪಡುವುದು ರೋಗದ ಆರಂಭಿಕ ಲಕ್ಷಣವಾಗಿದ್ದು ಇದು ಬಹಳ ತಡವಾಗುವವರೆಗೂ ಮುಂದುವರಿಯುತ್ತವೆ. ಸಮಯಕ್ಕೆ ಸರಿಯಾಗಿ ಸೂಕ್ತವಾದ ಚಿಕಿತ್ಸೆಯನ್ನು ಆರಂಭಿಸಿ ಕನಿಷ್ಟ 2 ವರ್ಷಗಳವರೆಗೆ ಚಿಕಿತ್ಸೆಯನ್ನು ಮುಂದುವರೆಸಿದರೆ ರಕ್ತಸ್ರಾವದ ಈ ಆರಂಭಿಕ ಸಂದರ್ಭಗಳು ಸಾಮಾನ್ಯವಾಗಿ ಕಡಿಮೆಯಾಗುತ್ತವೆ ಎಂದು ಅವರು ಹೇಳುತ್ತಾರೆ.

ಐಟಿಪಿಯನ್ನು ಪತ್ತೆಹಚ್ಚುವುದಕ್ಕೆ ಬೋನ್ ಮ್ಯಾರೋ ಪರೀಕ್ಷೆ ಬಹಳ ಮುಖ್ಯವಾದದ್ದು ಮತ್ತು ಇತ್ತೀಚಿನ ದಿನಗಳಲ್ಲಿ ಚಿಕಿತ್ಸೆಯನ್ನು ಕಟ್ಟುನಿಟ್ಟಾಗಿ ಅನುಸರಿಸದಿದ್ದರೆ ಉಂಟಾಗುವ ತೊಂದರೆಗಳನ್ನು ರೋಗಿಗಳು ಅರ್ಥಮಾಡಿಕೊಂಡಿದ್ದಾರೆ ಮತ್ತು ಅವುಗಳ ಬಗ್ಗೆ ಅರಿವು ಹೆಚ್ಚಾಗಿದೆ. ಆದ್ದರಿಂದ ನಮ್ಮ ವೈದ್ಯಕೀಯ ಅಭ್ಯಾಸಗಳಲ್ಲಿ ನಾವು ಜನರು ಸಕ್ರಿಯವಾಗಿ ನಿಯಮಿತ ರಕ್ತಪರೀಕ್ಷೆಗಳಿಗೆ ಒಳಗಾಗುವುದನ್ನು ಕಾಣುತ್ತಿದ್ದೇವೆ ಮತ್ತು ಇದರ ಮೂಲಕ ನಾವು ಕಡಿಮೆ ಪ್ಲೇಟ್‍ಲೆಟ್‍ಗಳಿಗೆ ಇರಬಹುದಾದ ಇತರ ಕಾರಣಗಳನ್ನು ತಳ್ಳಿಹಾಕಿ ಐಟಿಪಿಯನ್ನು ಪತ್ತೆ ಹಚ್ಚುವುದು ಸಾಧ್ಯವಾಗುತ್ತಿದೆ ಎಂದು ಹೇಳುತ್ತಾರೆ.

ಐಟಿಪಿಯನ್ನು ಪತ್ತೆ ಹಚ್ಚುವುದಕ್ಕಾಗಿ, ರಕ್ತಪರೀಕ್ಷೆಯ ಮೂಲಕ ಪ್ಲೇಟ್‍ಲೆಟ್‍ಗಳ ಮಟ್ಟಗಳನ್ನು ಪರೀಕ್ಷಿಸಿ ತಿಳಿದುಕೊಳ್ಳಲಾಗುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ಅನೇಕ ವೇಳೆ ರೋಗಿಗಳು ವೈದ್ಯರುಗಳನ್ನು ಬದಲಾಯಿಸುವುದರಿಂದ ಚಿಕಿತ್ಸೆಯಲ್ಲಿ ಮುಂದುವರಿಕೆ ಇರುವುದಿಲ್ಲ. ಅಸ್ಥಿರವಾದ ಪ್ಲೇಟ್‍ಲೆಟ್‍ಗಳ ಎಣಿಕೆಯಿಂದಾಗಿ ಆತಂಕಗೊಂಡು ರೋಗಿಗಳು ತಮಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರನ್ನು ಕೂಡ ಬದಲಾಯಿಸಿಕೊಳ್ಳುತ್ತಾರೆ.

ಮುಂಬೈನ ಗ್ಲೋಬಲ್ ಹಾಸ್ಪಿಟಲ್‍ನ ಹೆಮಟಾಲಜಿ ಮತ್ತು ಬೋನ್ ಮ್ಯಾರೋ ಟ್ರಾನ್ಸ್‍ಪ್ಲಾಂಟ್(ಬಿಎಮ್‍ಟಿ) ವಿಭಾಗದ ಸಮಾಲೋಚಕರಾದ ಡಾ. ಶ್ರೀನಾಥ್ ಕ್ಷೀರ್ ಸಾಗರ್, “ಐಟಿಪಿ ದೀರ್ಘಾವಧಿ ಕಾಯಿಲೆಯಾಗಿದ್ದು ರೋಗಿಗಳು ಜೀವನಪರ್ಯಂತ ಚಿಕಿತ್ಸೆ ತೆಗೆದುಕೊಳ್ಳುತ್ತಿರಬೇಕು. ನಿಯಮಿತವಾಗಿ ರಕ್ತ ಎಣಿಕೆ ಮೌಲ್ಯಮಾಪನ ಮಾಡಿಸಿಕೊಳ್ಳುವುದು ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದಕ್ಕೆ ನೆರವಾಗುತ್ತದೆ ಮತ್ತು ನಮಗೂ ಅತ್ಯುತ್ತಮ ಚಿಕಿತ್ಸಾ ವಿಧಾನವನ್ನು ಶಿಫಾರಸು ಮಾಡುವುದಕ್ಕೆ ನೆರವಾಗುತ್ತದೆ. ಒಬ್ಬ ರೋಗಿಯಲ್ಲಿ ಒಂದು ನಿರ್ದಿಷ್ಟ ಲಕ್ಷಣವು ಬೇರೆ ಇತರ ಲಕ್ಷಣಗಳಿಗಿಂತ ತೀವ್ರವಾಗಿರುವ ಸಂದರ್ಭಗಳೂ ಇದ್ದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ರೋಗ ನಿರ್ವಹಣೆಯಲ್ಲಿ ಇವುಗಳನ್ನು ಪರಿಗಣಿಸಬೇಕಾಗುತ್ತದೆ”ಎಂದು ಹೇಳುತ್ತಾರೆ.

ಸಾಮಾನ್ಯವಾಗಿ ಐಟಿಪಿದ ಚಿಕಿತ್ಸೆ ಬಾಯಿಯ ಮೂಲಕ ತೆಗೆದುಕೊಳ್ಳುವ ಔಷಧವನ್ನು ಒಳಗೊಂಡಿರುತ್ತದೆ. ಗಂಭೀರವಾದ ಸಂದರ್ಭಗಳಲ್ಲಿ, ಪ್ಲೇಟ್‍ಲೆಟ್ ಮರುಪೂರೈಕೆ ಮತ್ತು ಇಂಟ್ರಾವೀನಸ್ ಇಮ್ಯುನ್ ಗ್ಲಾಬ್ಯುಲಿನ್ (ಐವಿಐಜಿ) ಶಿಫಾರಸು ಮಾಡಲಾಗುತ್ತದೆ. ಹಾಗೆ ನೋಡಿದರೆ ಐಟಿಪಿ ಪ್ರಾಣಾಂತಿಕವಾದ ಪರಿಸ್ಥಿತಿಯೇನೂ ಅಲ್ಲ ಮತ್ತು ಬಹುತೇಕ ರೋಗಿಗಳು ಸಾಮಾನ್ಯ ಜೀವನ ನಡೆಸಬಲ್ಲವರಾಗಿರುತ್ತಾರೆ. ಕೆಲವು ಜೀವನಶೈಲಿ ಬದಲಾವಣೆಗಳು ಮತ್ತು ಸೂಕ್ತವಾದ ಚಿಕಿತ್ಸೆಯಿಂದ ಅದನ್ನು ಉತ್ತಮವಾಗಿ ನಿಭಾಯಿಸಬಹುದು. ಕೆಲವು ಸಂದರ್ಭಗಳಲ್ಲಿ, ಪ್ಲೇಟ್‍ಲೆಟ್‍ಗಳ ಮೇಲೆ ಪ್ರಭಾವ ಬೀರುವ ಕೆಲವು ಔಷಧಗಳನ್ನು ವರ್ಜಿಸುವಂತೆ ವೈದ್ಯರು ಸೂಚಿಸಬಹುದು. ಇನ್ನೂ ಕೆಲವು ಮಿತವಾದ ಪರಿಸ್ಥಿತಿಗಳಿಗೆ ನಿಯಮಿತವಾದ ಮೇಲುಸ್ತುವಾರಿ ಅಗತ್ಯವಾಗುತ್ತದೆಯೇ ಹೊರತು ಯಾವುದೇ ಚಿಕಿತ್ಸೆ ಬೇಕಾಗುವುದಿಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ