logo
ಕನ್ನಡ ಸುದ್ದಿ  /  ಜೀವನಶೈಲಿ  /  ಚಳಿಗಾಲದಲ್ಲಿ ಶೀತ, ನೆಗಡಿ ಗುಣವಾಗಲು ನಾವು ಅನುಸರಿಸುವ ಈ ಕ್ರಮಗಳು ಆರೋಗ್ಯವನ್ನು ಇನ್ನಷ್ಟು ಹದಗೆಡಿಸಬಹುದು, ಇರಲಿ ಎಚ್ಚರ

ಚಳಿಗಾಲದಲ್ಲಿ ಶೀತ, ನೆಗಡಿ ಗುಣವಾಗಲು ನಾವು ಅನುಸರಿಸುವ ಈ ಕ್ರಮಗಳು ಆರೋಗ್ಯವನ್ನು ಇನ್ನಷ್ಟು ಹದಗೆಡಿಸಬಹುದು, ಇರಲಿ ಎಚ್ಚರ

Reshma HT Kannada

Dec 04, 2024 09:38 AM IST

google News

ಚಳಿಗಾಲದಲ್ಲಿ ಮಾಡುವ ತಪ್ಪುಗಳು

    • ಚಳಿಗಾಲದಲ್ಲಿ ಬೇಡವೆಂದರೂ ಅನಾರೋಗ್ಯ ಕಾಡುತ್ತದೆ. ಶೀತ, ನೆಗಡಿಯಂತಹ ಸಮಸ್ಯೆಗಳು ಈ ಸಮಯದಲ್ಲಿ ಪದೇ ಪದೇ ಕಾಡುತ್ತವೆ. ಆದರೆ ಶೀತದ ಸಮಸ್ಯೆ ನಿವಾರಣೆಗೆ ನಾವು ಅನುಸರಿಸುವ ಕೆಲವು ವಿಧಾನಗಳು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎನ್ನಲಾಗುತ್ತಿದೆ. ಅಂತಹ ಕೆಲವು ಅಭ್ಯಾಸಗಳ ಬಗ್ಗೆ ಇಲ್ಲಿದೆ ಮಾಹಿತಿ.
ಚಳಿಗಾಲದಲ್ಲಿ ಮಾಡುವ ತಪ್ಪುಗಳು
ಚಳಿಗಾಲದಲ್ಲಿ ಮಾಡುವ ತಪ್ಪುಗಳು

ಚಳಿಗಾಲದಲ್ಲಿ ಒಂದಿಲ್ಲೊಂದು ಆರೋಗ್ಯ ಸಮಸ್ಯೆಗಳು ಕಾಡುವುದು ಸಹಜ. ಈ ಸಮಸ್ಯೆಗಳು ನಮ್ಮನ್ನು ಹೈರಾಣು ಮಾಡುತ್ತವೆ. ಶೀತ, ನೆಗಡಿ, ಜ್ವರದಂತಹ ಸಮಸ್ಯೆಗಳು ಪ್ರತಿ ನಿಮಿಷವೂ ಹೆಚ್ಚಾಗುವ ಸಾಧ್ಯತೆ ಇದೆ. ನೆಗಡಿಯಾದಾಗ ಹಲವು ಮನೆ ಮದ್ದುಗಳನ್ನು ಅನುಸರಿಸುತ್ತೇವೆ. ಆದರೆ ಇದರಲ್ಲಿ ಕೆಲವು ನಮ್ಮನ್ನ ಗುಣಪಡಿಸಲು ಸಹಾಯ ಮಾಡಿದರೆ ಇನ್ನೂ ಕೆಲವು ನಮ್ಮ ಆರೋಗ್ಯವನ್ನು ಇನ್ನಷ್ಟು ಹದಗೆಡಿಸಬಹುದು. ಹಾಗಾದರೆ ಚಳಿಗಾಲದಲ್ಲಿ ನಾವು ಮಾಡುವ ಯಾವ ತಪ್ಪುಗಳು ಆರೋಗ್ಯವನ್ನು ಹದೆಗೆಡಿಸಬಹುದು. 

ಅನಾದಿಕಾಲದಿಂದಲೂ ರೂಢಿಯಲ್ಲಿರುವ ಇಂತಹ ಅಭ್ಯಾಸಗಳು ಶೀತ, ನೆಗಡಿ, ಜ್ವರದಂತಹ ಚಳಿಗಾಲದಲ್ಲಿ ಹೆಚ್ಚು ಕಾಡುವ ಆರೋಗ್ಯ ಸಮಸ್ಯೆಗಳನ್ನು ಇನ್ನಷ್ಟು ಹದಗೆಡಿಸಬಹುದು. ಅಂತಹ ಅಭ್ಯಾಸಗಳನ್ನು ನೀವೂ ಪಾಲಿಸುತ್ತಿದ್ದರೆ ಇಂದೇ ದೂರಾಗಿ. 

ಸಮರ್ಪಕ ವಿಶ್ರಾಂತಿ ಪಡೆಯದೇ ಇರುವುದು

ಮನುಷ್ಯ ದೇಹಕ್ಕೆ ನಿದ್ದೆ ಬಹಳ ಮುಖ್ಯ. ಯಾವುದೇ ಆರೋಗ್ಯ ಸಮಸ್ಯೆ ಇದ್ದರೂ ಸರಿಯಾಗಿ ವಿಶ್ರಾಂತಿ ಪಡೆಯುವುದು ಬಹಳ ಅವಶ್ಯ. ವಿಶ್ರಾಂತಿ ಪಡೆಯದೇ ನೀವು ಎಷ್ಟೇ ಔಷಧಿ ಸೇವಿಸಿದ್ರೂ ಪ್ರಯೋಜನವಾಗುವುದಿಲ್ಲ. ಅದರಲ್ಲೂ ಚಳಿಗಾಲದಲ್ಲಿ ವಿಶ್ರಾಂತಿ ಪಡೆಯದೇ ಆರೋಗ್ಯ ಸರಿಯಾಗಬೇಕು ಎಂದರೆ ಖಂಡಿತ ಅದು ಸಾಧ್ಯವಿಲ್ಲ. ಅಧ್ಯಯನಗಳ ಪ್ರಕಾರ ಶೀತದ ಸಮಸ್ಯೆ ಇದ್ದಾಗ 7 ಗಂಟೆಗಿಂತ ಕಡಿಮೆ ನಿದ್ದೆ ಮಾಡುವುದು ಶೀತ ಅಪಾಯವನ್ನು ಮೂರು ಪಟ್ಟು ಹೆಚ್ಚಿಸುತ್ತದೆ. ಶೀತ, ನೆಗಡಿಯಿಂದ ರಾತ್ರಿ ಪದೇ ಪದೇ ಎಚ್ಚರವಾಗುತ್ತಿದ್ದರೆ ಮೊದಲೇ ಅಂದರೆ ಬೇಗ ಮಲಗುವ ಪ್ರಯತ್ನ ಮಾಡಿ. ಇದರಿಂದ ಹೆಚ್ಚುವರಿ ವಿಶ್ರಾಂತಿ ಸಿಗಲು ಸಾಧ್ಯ.

ಮದ್ಯಪಾನ, ಧೂಮಪಾನ

ಚಳಿಗಾಲದಲ್ಲಿ ಮದ್ಯಪಾನ ಮಾಡುವವರ ಸಂಖ್ಯೆ ಹೆಚ್ಚು. ಶೀತ, ನೆಗಡಿಯಂತಹ ಸಮಸ್ಯೆ ಸರಿಯಾಗಲು ಮದ್ಯಪಾನ ಮಾಡುವವರೂ ಇದ್ದಾರೆ. ಅತಿಯಾದ ಮದ್ಯಪಾನವು ನಿಮ್ಮ ಒಟ್ಟಾರೆ ಆರೋಗ್ಯವನ್ನು ಹದಗೆಡಿಸಬಹುದು. ಇದು ನಿಜರ್ಲೀಕರಣಕ್ಕೆ ಕಾರಣವಾಗುತ್ತದೆ. ಶೀತದಂತಹ ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ನಿಗ್ರಹಿಸುತ್ತದೆ. ಶೀತ, ನೆಗಡಿ, ಜ್ವರದಂತಹ ಔಷಧಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ವೈದ್ಯರ ಪ್ರಕಾರ ಧೂಮಪಾನ ಮಾಡುವರಿಗಿಂತ ಧೂಮಪಾನ ಮಾಡುವವರಿಗೆ ಹೆಚ್ಚು ಶೀತದ ಸಮಸ್ಯೆಗಳು ಹೆಚ್ಚು ಬಾಧಿಸುತ್ತವೆ ಮತ್ತು ಅವರಲ್ಲಿ ರೋಗಲಕ್ಷಣಗಳು ಕೆಟ್ಟದಾಗಿರುತ್ತವೆ. ಧೂಮಪಾನವು ಶ್ವಾಸಕೋಶದಲ್ಲಿನ ಕೋಶಗಳನ್ನು ಹಾನಿಗೊಳಿಸುತ್ತದೆ, ಶೀತದಿಂದ ಹೋರಾಡಲು ಕಷ್ಟವಾಗಿಸುತ್ತದೆ.

ಮೂಗಿಗೆ ಬೆಳುಳ್ಳಿ ಹಾಕುವುದು

ನಿಮ್ಮ ಮೂಗಿನ ಹೊಳ್ಳೆಗಳಲ್ಲಿ ಬೆಳ್ಳುಳ್ಳಿಯನ್ನು ತುಂಬುವುದರಿಂದ ಮೂಗು ಕಟ್ಟಿದಂತಹ ಸಮಸ್ಯೆಗಳನ್ನ ತ್ವರಿತವಾಗಿ ನಿವಾರಿಸಲು ಸಹಾಯ ಮಾಡುತ್ತದೆ ಎಂದು ಅನೇಕ ಜನರು ನಂಬುತ್ತಾರೆ. ಆದಾಗ್ಯೂ, ಕ್ಲೀವ್ಲ್ಯಾಂಡ್ ಕ್ಲಿನಿಕ್ ಇದು ತಪ್ಪುಕಲ್ಪನೆ ಎಂದು ಹೇಳುತ್ತದೆ. ಮೂಗಿನಲ್ಲಿ ಬೆಳುಳ್ಳಿ ತುಂಬುವುದರಿಂದ ಲೋಳೆಯ ಪೂರೆಗಳನ್ನು ನಿರ್ಮಿಸಲು ಕಿರಿಕಿರಿಯನ್ನು ಉಂಟು ಮಾಡುತ್ತದೆ. ಇದು ಸಿಂಬಳ ಬರುವುದನ್ನು ಹೆಚ್ಚಿಸುತ್ತದೆ.

ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ ಸೇವಿಸುವುದು

ವಿಟಮಿನ್ ಸಿ ನೆಗಡಿಯನ್ನು ಗುಣಪಡಿಸುತ್ತದೆ ಎಂದು ನಂಬಲಾಗಿದೆ. ಸಂಪೂರ್ಣವಾಗಿ ಸಾಬೀತಾಗದಿದ್ದರೂ ಸಹ, ದೊಡ್ಡ ಪ್ರಮಾಣದ ವಿಟಮಿನ್ ಸಿ ಅತಿಯಾದ ಸೇವನೆಯು ಶೀತವನ್ನ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಇದರೊಂದಿಗೆ ತೀವ್ರವಾದ ದೈಹಿಕ ಒತ್ತಡದಲ್ಲಿರುವ ಜನರ ಮೇಲೆ ವಿಟಮಿನ್ ಸಿ ವ್ಯತಿರಿಕ್ತ ಪರಿಣಾಮವನ್ನು ಬೀರಬಹುದು ಎಂದು ಅಧ್ಯಯನಗಳು ಹೇಳುತ್ತವೆ.

ಡಿಕೊಂಜೆಸ್ಟೆಂಟ್ ಸ್ಪ್ರೇಗಳನ್ನು ಅತಿಯಾಗಿ ಬಳಸುವುದು

ನಾಸಲ್ ಡಿಕೊಂಜೆಸ್ಟೆಂಟ್ ಸ್ಪ್ರೇಗಳೊಂದಿಗೆ ಜಾಗರೂಕರಾಗಿರಲು ವೈದ್ಯರು ಸಲಹೆ ನೀಡುತ್ತಾರೆ. ಇದರಿಂದ ನಿಮಲ್ಲಿ ಆರಾಮದ ಭಾವನೆ ಮೂಡಬಹುದು. ಆದರೆ ನೀವು ಅವುಗಳನ್ನು ಅತಿಯಾಗಿ ಬಳಸಿದರೆ ಅಥವಾ ಮೂರು ದಿನಗಳಿಗಿಂತ ಹೆಚ್ಚು ಕಾಲ ನಿರಂತರವಾಗಿ ಅನ್ವಯಿಸಿ ನಂತರ ಇದ್ದಕ್ಕಿದ್ದಂತೆ ಅದನ್ನು ಬಳಸುವುದನ್ನು ನಿಲ್ಲಿಸಿದಾಗ ಉಸಿರಗಟ್ಟಿದ ಅನುಭವವಾಗಬಹುದು. ಇದರಿಂದ ಚರ್ಮಕ್ಕೂ ಒಳ್ಳೆಯದಲ್ಲ. 

ಶೀತ, ನೆಗಡಿಯಂತಹ ಸಾಮಾನ್ಯ ಸಮಸ್ಯೆಯಿಂದ ಜ್ವರದವರೆಗೆ ಯಾವುದೇ ಆರೋಗ್ಯ ಸಮಸ್ಯೆ ಇದ್ದರೂ ತಜ್ಞರಿಂದ ಸಲಹೆ ಪಡೆದ ನಂತರವಷ್ಟೇ ಮನೆಮದ್ದು ಅಥವಾ ಹಿಂದೆ ಅನುಸರಿಸುತ್ತಿದ್ದ ಕ್ರಮಗಳನ್ನು ಪಾಲಿಸಿ. ಯಾವುದನ್ನೇ ಆಗಲಿ ಅತಿಯಾಗಿ ಬಳಸುವುದು ಆರೋಗ್ಯಕ್ಕೆ ಇನ್ನಷ್ಟು ಹಾನಿ ಮಾಡಬಹುದು. 

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ