logo
ಕನ್ನಡ ಸುದ್ದಿ  /  ಜೀವನಶೈಲಿ  /  ಚಳಿಗಾಲದಲ್ಲಿ ಬೆಳಗ್ಗೆ ಎದ್ದ ಕೂಡಲೇ ಚಹಾ, ಕಾಫಿ ಕುಡಿಯುವ ಅಭ್ಯಾಸವಿದ್ದರೆ ಬಿಟ್ಟುಬಿಡಿ: ಉಗುರುಬೆಚ್ಚಗಿನ ನೀರು ಕುಡಿಯಿರಿ, ಪ್ರಯೋಜನ ಪಡೆಯಿರಿ

ಚಳಿಗಾಲದಲ್ಲಿ ಬೆಳಗ್ಗೆ ಎದ್ದ ಕೂಡಲೇ ಚಹಾ, ಕಾಫಿ ಕುಡಿಯುವ ಅಭ್ಯಾಸವಿದ್ದರೆ ಬಿಟ್ಟುಬಿಡಿ: ಉಗುರುಬೆಚ್ಚಗಿನ ನೀರು ಕುಡಿಯಿರಿ, ಪ್ರಯೋಜನ ಪಡೆಯಿರಿ

Priyanka Gowda HT Kannada

Dec 21, 2024 12:11 PM IST

google News

ಚಳಿಗಾಲದಲ್ಲಿ ಬೆಳಗ್ಗೆ ಎದ್ದ ಕೂಡಲೇ ಚಹಾ, ಕಾಫಿ ಕುಡಿಯುವ ಅಭ್ಯಾಸವಿದ್ದರೆ ಬಿಟ್ಟುಬಿಡಿ: ಉಗುರುಬೆಚ್ಚಗಿನ ನೀರು ಕುಡಿಯಿರಿ, ಪ್ರಯೋಜನ ಪಡೆಯಿರಿ

  • ಚಳಿಗಾಲದಲ್ಲಿ ಜನರು ಕಡಿಮೆ ನೀರು ಕುಡಿಯುತ್ತಾರೆ. ತಮ್ಮ ದಿನವನ್ನು ಬಿಸಿ ಬಿಸಿ ಚಹಾ ಅಥವಾ ಕಾಫಿಯೊಂದಿಗೆ ಪ್ರಾರಂಭಿಸುತ್ತಾರೆ. ಆದರೆ ಇವುಗಳ ಬದಲಿಗೆ, ಬೆಳಗ್ಗೆ ನೀರು ಕುಡಿಯುವುದು ಹೆಚ್ಚು ಪ್ರಯೋಜನಕಾರಿಯಾಗಿದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎಷ್ಟು ನೀರು ಕುಡಿಯಬೇಕು ಎಂಬಿತ್ಯಾದಿ ಬಗ್ಗೆ ಮಾಹಿತಿ ಇಲ್ಲಿದೆ.

ಚಳಿಗಾಲದಲ್ಲಿ ಬೆಳಗ್ಗೆ ಎದ್ದ ಕೂಡಲೇ ಚಹಾ, ಕಾಫಿ ಕುಡಿಯುವ ಅಭ್ಯಾಸವಿದ್ದರೆ ಬಿಟ್ಟುಬಿಡಿ: ಉಗುರುಬೆಚ್ಚಗಿನ ನೀರು ಕುಡಿಯಿರಿ, ಪ್ರಯೋಜನ ಪಡೆಯಿರಿ
ಚಳಿಗಾಲದಲ್ಲಿ ಬೆಳಗ್ಗೆ ಎದ್ದ ಕೂಡಲೇ ಚಹಾ, ಕಾಫಿ ಕುಡಿಯುವ ಅಭ್ಯಾಸವಿದ್ದರೆ ಬಿಟ್ಟುಬಿಡಿ: ಉಗುರುಬೆಚ್ಚಗಿನ ನೀರು ಕುಡಿಯಿರಿ, ಪ್ರಯೋಜನ ಪಡೆಯಿರಿ (PC: Canva)

ಚಳಿಗಾಲದಲ್ಲಿ ಬಾಯಾರಿಕೆ ಕಡಿಮೆ ಇರುವುದರಿಂದ ಬಹುತೇಕರು ನೀರು ಕಡಿಮೆ ಕುಡಿಯುತ್ತಾರೆ. ಬೆಳಗ್ಗೆ ಎದ್ದ ನಂತರ ನೀರು ಕುಡಿಯುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ದೈನಂದಿನ ದಿನಚರಿಯಲ್ಲಿ ಕೆಲವು ಆರೋಗ್ಯಕರ ಅಭ್ಯಾಸಗಳನ್ನು ಸೇರಿಸಿಕೊಳ್ಳಬೇಕು. ಬೆಳಗ್ಗೆದ್ದು ಬಹುತೇಕರು ಚಹಾ ಅಥವಾ ಕಾಫಿ ಸೇವನೆ ಮಾಡುತ್ತಾರೆ. ಇದು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ. ಅದರಲ್ಲೂ ಬೆಡ್ ಟೀ ಅಥವಾ ಕಾಫಿ ಕುಡಿಯುವವರೂ ಇದ್ದಾರೆ. ಇದು ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೀಗಾಗಿ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳುವುದು ಬಹಳ ಮುಖ್ಯ. ಬೆಳಗ್ಗೆ ಎದ್ದ ಕೂಡಲೇ ಮೊದಲು ನೀರು ಕುಡಿಯಬೇಕು. ಚಳಿಗಾಲವಿರಲಿ, ಬೇಸಿಗೆಯಿರಲಿ ಬೆಳಗ್ಗೆ ಉಗುರು ಬೆಚ್ಚನೆಯ ನೀರು ಕುಡಿದರೆ ಹೊಟ್ಟೆ ಮತ್ತು ದೇಹ ಎರಡನ್ನೂ ಆರೋಗ್ಯವಾಗಿಡುತ್ತದೆ. ನೀರಿನಿಂದ ದಿನವನ್ನು ಪ್ರಾರಂಭಿಸುವುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಚಳಿಗಾಲದಲ್ಲಿ ತಣ್ಣೀರು ಕುಡಿಯದಿರಿ. ಆದಷ್ಟು ಬಿಸಿನೀರು ಸೇವನೆ ಮಾಡುವುದು ಉತ್ತಮ.

ಚಳಿಗಾಲದಲ್ಲಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರನ್ನು ಕುಡಿಯಬೇಕು. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಬೆಳಿಗ್ಗೆ ನೀರು ಕುಡಿಯುವುದರಿಂದ ದೇಹದಲ್ಲಿ ಸಂಗ್ರಹವಾಗಿರುವ ಟಾಕ್ಸಿನ್ ತೆಗೆದುಹಾಕುತ್ತದೆ ಮತ್ತು ಅದನ್ನು ನಿರ್ವಿಷಗೊಳಿಸುತ್ತದೆ. ಆದ್ದರಿಂದ ಬೆಳಗ್ಗೆ ನೀರು ಕುಡಿಯುವುದನ್ನು ರೂಢಿಸಿಕೊಳ್ಳಿ.

ಚಳಿಗಾಲದಲ್ಲಿ ಬೆಳಗ್ಗೆ ಎಷ್ಟು ಲೋಟ ನೀರು ಕುಡಿಯಬೇಕು?

ಚಳಿಗಾಲದಲ್ಲಿ, ಜನರು ದಿನವಿಡೀ ಕಡಿಮೆ ನೀರು ಕುಡಿಯಬಹುದು. ಇದಕ್ಕೆ ಕಾರಣ ಕಡಿಮೆ ಬಾಯಾರಿಕೆಯಾಗುವುದು. ನೀವು ಇದೇ ರೀತಿ ಕಡಿಮೆ ನೀರು ಕುಡಿಯುತ್ತೀರಾ? ಬೆಳಗ್ಗೆ 2 ರಿಂದ 3 ಲೋಟ ಉಗುರು ಬೆಚ್ಚಗಿನ ನೀರನ್ನು ಕುಡಿಯಬೇಕು ಎಂಬುದನ್ನು ನೆನಪಿನಲ್ಲಿಡಿ. ಬೆಡ್ ಚಹಾ, ಕಾಫಿ ಕುಡಿಯುವುದರ ಬದಲು ನೀರು ಕುಡಿಯಿರಿ. ಹಲ್ಲುಗಳನ್ನು ಉಜ್ಜಿದ ನಂತರವೂ ನೀವು ನೀರು ಕುಡಿಯಬಹುದು. ಕನಿಷ್ಠ 2 ರಿಂದ 3 ಲೋಟ ನೀರು ಕುಡಿಯಲು ಪ್ರಯತ್ನಿಸಿ. ಆರಂಭದಲ್ಲಿ ಒಂದೇ ಬಾರಿಗೆ ಇಷ್ಟು ನೀರು ಕುಡಿಯಲು ನಿಮಗೆ ಕಷ್ಟವಾಗಬಹುದು. ಹೀಗಾಗಿ ನಿಮ್ಮ ದಿನವನ್ನು 1 ಲೋಟ ಉಗುರು ಬೆಚ್ಚಗಿನ ನೀರಿನಿಂದ ಪ್ರಾರಂಭಿಸಿ, ಕ್ರಮೇಣ ಹೆಚ್ಚಿಸಿ.

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜೇನುತುಪ್ಪದ ನೀರು

ಉಗುರು ಬೆಚ್ಚಗಿನ ನೀರಿಗೆ 1 ಚಮಚ ಜೇನುತುಪ್ಪವನ್ನು ಸೇರಿಸಿ, ಬೆಳಗ್ಗೆ ಅದನ್ನು ಕುಡಿಯಬಹುದು. ಇದು ನಿಮಗೆ ಸಾಕಷ್ಟು ಶಕ್ತಿಯನ್ನು ನೀಡುತ್ತದೆ. ನಿಂಬೆ ಪಾನಕವನ್ನು ಸಹ ಕುಡಿಯಬಹುದು. ಆದರೆ, ನಿಂಬೆ ಪಾನಕ ಕುಡಿದು ಅರ್ಧ ಗಂಟೆಯ ಬಳಿಕ ಚಹಾ ಕುಡಿಯಬೇಕು. ಜೇನುತುಪ್ಪದ ನೀರು ಕುಡಿದು 10 ರಿಂದ 15 ನಿಮಿಷಗಳ ನಂತರ ನೀವು ಚಹಾವನ್ನು ಕುಡಿಯಬಹುದು. ಇದು ನಿಮ್ಮ ತೂಕವನ್ನು ಕಳೆದುಕೊಳ್ಳಲು ಕೂಡ ಸಹಾಯಕವಾಗಿದೆ. ಮುಖ್ಯವಾಗಿ ಬೆಳಗ್ಗೆ ನೀರು ಕುಡಿಯುವುದು ಬಹಳ ಮುಖ್ಯ.

ಬೆಳಗ್ಗೆ ಉಗುರುಬೆಚ್ಚಗಿನ ನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳು

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರುಬೆಚ್ಚನೆಯ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ನೀರಿನ ಕೊರತೆಯನ್ನು ಬೆಳಗ್ಗೆಯೇ ಪೂರೈಸಬಹುದು. ಇದರಿಂದ ನೀವು ದಿನವಿಡೀ ಚೈತನ್ಯದಿಂದ ಇರುತ್ತೀರಿ. ಚಳಿಗಾಲದಲ್ಲಿ ಬೆಳಗ್ಗೆ ಬೆಚ್ಚಗಿನ ನೀರು ಕುಡಿಯುವುದರಿಂದ ದೇಹವು ತೇವಾಂಶದಿಂದ ಕೂಡಿರುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ಚಯಾಪಚಯವನ್ನು ವೇಗಗೊಳಿಸುತ್ತದೆ. ಇದು ದೇಹ ಮತ್ತು ಮೆದುಳಿಗೆ ಆಮ್ಲಜನಕದ ಪೂರೈಕೆಯನ್ನು ಸುಧಾರಿಸುತ್ತದೆ. ಮೆದುಳು ಸಕ್ರಿಯವಾಗುತ್ತದೆ. ಬೆಳಗ್ಗೆ ನೀರು ಕುಡಿಯುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ ಮತ್ತು ಹೊಟ್ಟೆಯನ್ನು ಶುದ್ಧಗೊಳಿಸುತ್ತದೆ. ಇದು ಯಕೃತ್ತು ಮತ್ತು ಮೂತ್ರಪಿಂಡಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ತ್ವಚೆಯು ಹೊಳೆಯುತ್ತದೆ.

(ಗಮನಿಸಿ: ಈ ಲೇಖನವು ಸಾಮಾನ್ಯ ಮಾಹಿತಿಗಾಗಿ, ದಯವಿಟ್ಟು ಯಾವುದೇ ಪರಿಹಾರವನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ.)

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ