logo
ಕನ್ನಡ ಸುದ್ದಿ  /  ಜೀವನಶೈಲಿ  /  ಋತುಬಂಧದಿಂದ ದೈಹಿಕ, ಮಾನಸಿಕ ಸಮಸ್ಯೆಗಳಷ್ಟೇ ಅಲ್ಲ ಈ ಪ್ರಯೋಜನಗಳೂ ಇವೆ; ಮುಟ್ಟು ನಿಂತ ಮಹಿಳೆಯರ ಬದುಕಿನಲ್ಲಾಗುವ ಬದಲಾವಣೆಗಳಿವು

ಋತುಬಂಧದಿಂದ ದೈಹಿಕ, ಮಾನಸಿಕ ಸಮಸ್ಯೆಗಳಷ್ಟೇ ಅಲ್ಲ ಈ ಪ್ರಯೋಜನಗಳೂ ಇವೆ; ಮುಟ್ಟು ನಿಂತ ಮಹಿಳೆಯರ ಬದುಕಿನಲ್ಲಾಗುವ ಬದಲಾವಣೆಗಳಿವು

Reshma HT Kannada

Oct 09, 2024 12:01 PM IST

google News

ಮುಟ್ಟು ನಿಂತ ಮೇಲೆ ಮಹಿಳೆಯರ ಬದುಕಿನಲ್ಲಾಗುವ ಬದಲಾವಣೆಗಳು

    • ಋತುಬಂಧ ಎಂದರೆ ಮುಟ್ಟು ನಿಲ್ಲುವ ಹಂತ. ಈ ಹಂತ ಮಹಿಳೆಯರ ಪಾಲಿಗೆ ಸವಾಲಾಗಿರುತ್ತದೆ, ಈ ಸಮಯದಲ್ಲಿ ದೈಹಿಕ ಹಾಗೂ ಮಾನಸಿಕವಾಗಿ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಾರೆ ಎಂದೆಲ್ಲಾ ಕೇಳಿದ್ದೇವೆ. ಆದರೆ ಮುಟ್ಟು ನಿಲ್ಲುವುದರಿಂದ ಮಹಿಳೆಯರಿಗೆ ಒಂದಿಷ್ಟು ಪ್ರಯೋಜನಗಳೂ ಇವೆ ಎನ್ನುತ್ತಿದೆ ಇತ್ತೀಚಿನ ಅಧ್ಯಯನ. 
ಮುಟ್ಟು ನಿಂತ ಮೇಲೆ ಮಹಿಳೆಯರ ಬದುಕಿನಲ್ಲಾಗುವ ಬದಲಾವಣೆಗಳು
ಮುಟ್ಟು ನಿಂತ ಮೇಲೆ ಮಹಿಳೆಯರ ಬದುಕಿನಲ್ಲಾಗುವ ಬದಲಾವಣೆಗಳು (PC: Canva)

ಮಹಿಳೆಯರು ಒಂದು ನಿರ್ದಿಷ್ಟ ವಯಸ್ಸಿಗೆ ಬಂದ ನಂತರ ಮುಟ್ಟಾಗುವುದು ನಿಲ್ಲುತ್ತದೆ, ಇದನ್ನು ಋತುಬಂಧ ಎಂದು ಕರೆಯಲಾಗುತ್ತದೆ. ಈ ಋತುಬಂಧದ ಸಮಯವು ಒಂದು ರೀತಿಯ ಆತಂಕ, ತಳಮಳ, ಹಲವು ಗೊಂದಲಗಳು ಸೇರಿದಂತೆ ಕೆಲವೊಂದು ದೈಹಿಕ ಸಮಸ್ಯೆಗಳನ್ನೂ ಉಂಟು ಮಾಡಬಹುದು. ಇಲ್ಲಿಯವರೆಗೆ ನಾವು ಋತುಬಂಧದ ಹಂತದ ಸಮಸ್ಯೆಗಳ ಬಗ್ಗೆ ಕೇಳಿದ್ದೇವೆ. ಆದರೆ ಋತುಬಂಧದಿಂದ ಪ್ರಯೋಜನಗಳೂ ಇವೇ ಎಂಬುದು ಹಲವರಿಗೆ ತಿಳಿದಿಲ್ಲ. ಇತ್ತೀಚಿನ ವರದಿಗಳ ಪ್ರಕಾರ ಋತುಬಂಧದಿಂದ ಮಹಿಳೆಯರಿಗೆ ಕೆಲವು ಪ್ರಯೋಜನಗಳು ಇವೇ ಎಂಬುದನ್ನು ಹೇಳುತ್ತಿದೆ. ಮುಟ್ಟು ನಿಲ್ಲುವುದರಿಂದ ಮಹಿಳೆಯರಿಗೆ ಪ್ರಮುಖವಾಗಿ 4 ಪ್ರಯೋಜನಗಳಿವೆ. ಅದೇನು ಎಂಬುದನ್ನು ನೋಡೋಣ.

ಪ್ರತಿ ತಿಂಗಳು ಮುಟ್ಟಾಗುವುದು, ಮುಟ್ಟಿಗೆ ಸಂಬಂಧಿತ ಸಮಸ್ಯೆಗಳಿರುವುದಿಲ್ಲ

ಋತುಬಂಧ ಎಂದರೆ ಕೊನೆಯ ಬಾರಿ ಮುಟ್ಟಾಗಿದಾಗಿನಿಂದ ಮುಂದಿನ 12 ತಿಂಗಳವರೆಗೆ ಒಮ್ಮೆಯೂ ಮುಟ್ಟಾಗದೇ ಇದ್ದರೆ ಮುಟ್ಟು ಸಂಪೂರ್ಣವಾಗಿ ನಿಂತಿದೆ ಅಥವಾ ನೀವು ಋತುಬಂಧದ ಹಂತಕ್ಕೆ ತಲುಪಿದ್ದೀರಿ ಎಂದರ್ಥ. ಒಮ್ಮೆ ಮುಟ್ಟು ನಿಂತರೆ ಅನಿಯಮಿತ ಮುಟ್ಟಿನ ದಿನಗಳು, ಅನಿರೀಕ್ಷಿತ ಮುಟ್ಟು ಹಾಗೂ ಅಧಿಕರಕ್ತಸ್ರಾವ ಇಂತಹ ಸಮಸ್ಯೆಗಳನ್ನು ನೀವು ಎದುರಿಸಿದ್ದರೆ, ಮುಟ್ಟು ನಿಲ್ಲುವುದು ನಿಮಗೆ ಖುಷಿ ಕೊಡುವ ವಿಚಾರವಾಗಿರುತ್ತದೆ. ಪ್ರತಿ ಬಾರಿ ಮುಟ್ಟಾದಾಗಲೂ ಕಾಡುವ ಅಧಿಕ ರಕ್ತಸ್ರಾವ, ಹೊಟ್ಟೆ ನೋವು, ಕಿರಿಕಿರಿ, ಆಯಾಸ ಈ ಎಲ್ಲವೂ ಇನ್ನು ಮುಂದೆ ಇರುವುದಿಲ್ಲ. ಪ್ರತಿ ಬಾರಿ ಎಲ್ಲಿಯಾದರೂ ಹೋಗುವಾಗ ಮುಟ್ಟಾಗಬಹುದು ಎಂಬ ಭಯ ಕಾಡುವುದಿಲ್ಲ. ನಿಮ್ಮ ಬ್ಯಾಗ್‌ನಲ್ಲಿ ಸ್ಯಾನಿಟರಿ ಪ್ಯಾಡ್ ಇಲ್ಲದೇ ಹೊರ ಹೋದಾಗ ಅನುಭವಿಸುವ ಭಯ ಇರುವುದಿಲ್ಲ. ಪ್ಯಾಡ್ ಖರೀದಿಯ ಹಣ ಉಳಿಯುತ್ತದೆ.‌

ಫೈಬ್ರಾಯ್ಡ್‌ಗಳಿಂದಾಗಿ ಭಾರೀ ರಕ್ತಸ್ರಾವವನ್ನು ಹೊಂದಿರುವ ಮಹಿಳೆಯರಿಗೆ ಮುಟ್ಟು ನಿಲ್ಲುವುದು ಖಂಡಿತ ಒಳ್ಳೆಯ ಸುದ್ದಿ. ಫೈಬ್ರಾಯ್ಡ್‌ ಖಂಡಿತ ಗಾಬರಿ ಪಡುವ ವಿಚಾರವಲ್ಲ. ಆದರೆ ಇದರಿಂದ ಅಧಿಕ ರಕ್ತಸ್ರಾವದ ಸಮಸ್ಯೆ ಎದುರಾಗಬಹುದು. ಮುಟ್ಟಿನ ಮೈಗ್ರೇನ್‌ನಿಂದ ಬಳಲುತ್ತಿರುವ ಮಹಿಳೆಯರು ಋತುಬಂಧದ ನಂತರ ಮೈಗ್ರೇನ್‌ನಲ್ಲಿ ಸುಧಾರಣೆಯನ್ನು ಅನುಭವಿಸಬಹುದು, ಏಕೆಂದರೆ ಅವರ ಹಾರ್ಮೋನುಗಳ ಏರಿಳಿತಗಳು ನೆಲೆಗೊಳ್ಳಲು ಪ್ರಾರಂಭಿಸುತ್ತವೆ. ಆದರೆ ಇದು ಯಾವ ಹಂತದಲ್ಲಿ ಸಮಸ್ಯೆ ನೀಡುವುದನ್ನು ನಿಲ್ಲಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವೊಂದು ಸಂಸ್ಕೃತಿಯಲ್ಲಿ ಮುಟ್ಟಿನ ಕಾರಣಕ್ಕೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ ಇರುವುದಿಲ್ಲ, ಆದರೆ ಒಮ್ಮೆ ಮುಟ್ಟು ನಿಂತರೆ ಈ ಬಗ್ಗೆ ಚಿಂತಿಸುವ ಅಗತ್ಯ ಇರುವುದಿಲ್ಲ.  ಮುಟ್ಟಾದರೆ ಹೊರಗಡೆ ಹೋಗುವುದು, ತಿರುಗಾಡುವುದು ಹಿಂಸೆ ಎನ್ನಿಸುತ್ತದೆ, ಇನ್ನು ಮುಂದೆ ಅಂತಹ ತೊಂದರೆಗಳು ಇರುವುದಿಲ್ಲ. 

ದೇಹ ಸಹಜ ಸ್ಥಿತಿಗೆ ಮರಳುತ್ತದೆ

ಮುಟ್ಟಾಗುವ ಪ್ರಕ್ರಿಯೆಯು ಹೆಣ್ಣುಮಕ್ಕಳಿಗೆ ಸಂತಾನೋತ್ಪತ್ತಿ ಕಾರ್ಯಗಳ ಉತ್ತಮ ಬೆಳವಣಿಗೆಯನ್ನು ಸೂಚಿಸುತ್ತದೆ. ಪ್ರತಿ ತಿಂಗಳ ಸರಿಯಾಗಿ ಮುಟ್ಟಾಗುವ ಮಹಿಳೆಯರಲ್ಲಿ ಫಲವಂತಿಕೆ ಸರಿಯಾಗಿದೆ ಎಂದರ್ಥ. ಈ ಸಂದರ್ಭದಲ್ಲಿ ಮಹಿಳೆಯರು ಅನ್ಯಲಿಂಗಿಯೊಂದಿಗೆ ಸಂಧಿಸಿದಾಗ ಮಕ್ಕಳಾಗುವ ಸಾಧ್ಯತೆ ಹೆಚ್ಚು. ಅದಕ್ಕಾಗಿ ಪ್ರತಿ ಬಾರಿಯೂ ಸುರಕ್ಷತೆಯ ಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ. ಕೆಲವು ಋತುಬಂಧಕ್ಕೊಳಗಾದ ಮಹಿಳೆಯರು ತಮ್ಮ ಲೈಂಗಿಕತೆಯ ಮರು-ಹೊರಹೊಮ್ಮುವಿಕೆಯನ್ನು ಮತ್ತು ಅವರು ಹಿಂದೆ ಅನುಭವಿಸದ ಲೈಂಗಿಕ ಸ್ವಾತಂತ್ರ್ಯದ ಅರ್ಥವನ್ನು ವಿವರಿಸುತ್ತಾರೆ ಎಂದು ಈ ಅಧ್ಯಯನವು ತಿಳಿಸಿದೆ. 

ಋತುಬಂಧದ ಮಹಿಳೆಯರ ಅನುಭವಗಳ ಕುರಿತಾದ ಸಂಶೋಧನೆಯಲ್ಲಿ ಭಾಗವಹಿಸಿದವರು ಇನ್ನು ಮುಂದೆ ಸಂಧಿಸಿದರೆ ಎಲ್ಲಿ ಮಗುವಾಗುವುದೋ ಎಂಬ ಭಯದಲ್ಲೇ ಬದುಕಬೇಕಾಗಿಲ್ಲ. ಅಂದರೆ ಮಕ್ಕಳಾಗುವುದು ಕೆಟ್ಟದ್ದು ಎಂದಲ್ಲ, ಆದರೆ ಮಕ್ಕಳಾಗುತ್ತದೆ ಎಂಬ ಭಯದಲ್ಲೇ ಸುರಕ್ಷತಾ ಮಾರ್ಗ ಅನುಸರಿಸುವುದು ತಪ್ಪುತ್ತದೆ ಎಂಬರ್ಥದಲ್ಲಿ ಮಾತನಾಡಿದ್ದಾರಂತೆ.

ಬದುಕಿನ ಮತ್ತೊಂದು ಅಧ್ಯಾಯ

ಋತುಬಂಧದ ನಂತರ ಬದುಕು ಮಹಿಳೆಯರ ಪಾಲಿಗೆ ಹೊಸ ಅಧ್ಯಾಯ ಎನ್ನುವುದು ಸುಳ್ಳಲ್ಲ. ಇದರಿಂದ ಅವರ ಬದುಕು ಬದಲಾಗುತ್ತದೆ. ಹಿಂದೆ ಇರುವ ದಿನಗಳಿಗಿಂತ ಇದು ಉತ್ತಮ ದಿನಗಳನ್ನು ಕಳೆಯುವಂತೆ ಮಾಡುತ್ತದೆ. ಅವರಿಗಾಗಿ ಅವರು ಸಮಯ ಕೊಡಲು ಈ ದಿನಗಳನ್ನು ಮೀಸಲಿರಿಸಬಹುದು. ಒಂದರ್ಥದಲ್ಲಿ ಹೇಳಬೇಕು ಎಂದರೆ ಋತುಬಂಧದ ನಂತರ ದಿನಗಳು ಮಹಿಳೆಯರಿಗೆ ಒಂದು ರೀತಿಯ ಸ್ವಾತಂತ್ರ್ಯದ ದಿನಗಳು ಎಂದರೂ ತಪ್ಪಲ್ಲ.

ಆತ್ಮವಿಶ್ವಾಸ ಹೆಚ್ಚುತ್ತದೆ

ಈ ವರದಿಗೆ ಅನುಗುಣವಾಗಿ ಹಲವು ಮಹಿಳೆಯರನ್ನು ಸಂದರ್ಶನ ಮಾಡಿದಾಗ ಅವರು ಋತುಬಂಧದ ನಂತರ ದಿನಗಳು ಆತ್ಮವಿಶ್ವಾಸವನ್ನು ಹೆಚ್ಚಿಸಿವೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಆತ್ಮವಿಶ್ವಾಸದ ವರ್ಧನೆಯು ವೃತ್ತಿಯಲ್ಲಿನ ಬದಲಾವಣೆಗಳೊಂದಿಗೆ ಮತ್ತು ಕೆಲವೊಮ್ಮೆ ಸಂಬಂಧಗಳಲ್ಲಿ ಆದ್ಯತೆಗಳು ಮತ್ತು ಸ್ವಯಂ-ವಕಾಲತ್ತು ರೂಪಾಂತರದೊಂದಿಗೆ ಹೊಂದಿಕೆಯಾಗಬಹುದು. ಒಟ್ಟಾರೆ ಇದು ಬದುಕನ್ನು ಬದಲಿಸಿದ್ದು ಸುಳ್ಳಲ್ಲ ಎಂದು ಶೇ 60 ಮಂದಿ ಹೇಳಿಕೊಂಡಿದ್ದಾರೆ.

ಒಟ್ಟಾರೆ ಋತುಬಂಧದ ಆರಂಭದ ದಿನಗಳಲ್ಲಿ ಮಹಿಳೆಯರು ಕೆಲವೊಂದು ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸಿದರೂ ಕೂಡ ನಂತರ ದಿನಗಳಲ್ಲಿ ಧನಾತ್ಮಕ ಬದಲಾವಣೆಗಳನ್ನೇ ಕಾಣುತ್ತಾರೆ. ಈ ಮೇಲಿನ ಹೇಳಿದ ಅಂಶಗಳು ವರದಿ ಆಧಾರಿತವಾಗಿದ್ದರು, ಮುಟ್ಟು ನಿಂತ ಮೇಲೆ ವಿವಿಧ ರೀತಿ ಪ್ರಯೋಜನಗಳಿರುವುದಂತೂ ಸುಳ್ಳಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ