Menopause: ಋತುಬಂಧದ ನಂತರ ಕಾಡುವ ಮೂಳೆ ಸಮಸ್ಯೆ; ಮೂಳೆಗಳ ಸಾಂದ್ರತೆ ಹೆಚ್ಚಲು ಹೀಗಿರಲಿ ಮಹಿಳೆಯರ ಜೀವನಕ್ರಮ
ಕನ್ನಡ ಸುದ್ದಿ  /  ಜೀವನಶೈಲಿ  /  Menopause: ಋತುಬಂಧದ ನಂತರ ಕಾಡುವ ಮೂಳೆ ಸಮಸ್ಯೆ; ಮೂಳೆಗಳ ಸಾಂದ್ರತೆ ಹೆಚ್ಚಲು ಹೀಗಿರಲಿ ಮಹಿಳೆಯರ ಜೀವನಕ್ರಮ

Menopause: ಋತುಬಂಧದ ನಂತರ ಕಾಡುವ ಮೂಳೆ ಸಮಸ್ಯೆ; ಮೂಳೆಗಳ ಸಾಂದ್ರತೆ ಹೆಚ್ಚಲು ಹೀಗಿರಲಿ ಮಹಿಳೆಯರ ಜೀವನಕ್ರಮ

Bone Density After Menopause: ಋತುಬಂಧದ ಸಮಯದಲ್ಲಿ ಹಾಗೂ ಋತುಬಂಧದ ನಂತರ ಮಹಿಳೆಯರಲ್ಲಿ ಮೂಳೆ ಸಮಸ್ಯೆ ಕಾಡುವುದು ಸಹಜ. ಆದರೆ ಅದಕ್ಕೆ ಜೀವನಕ್ರಮದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳುವ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಹಾಗಾದರೆ ಋತುಬಂಧದ ಸಮಯದಲ್ಲಿ ಹೇಗಿರಬೇಕು ಮಹಿಳೆಯರ ಜೀವನಶೈಲಿ, ಇಲ್ಲಿದೆ ಉತ್ತರ.

ಋತುಬಂಧದ ನಂತರದ ದಿನಗಳಲ್ಲಿ ಮೂಳೆಗಳ ಸಾಂದ್ರತೆ ಹೆಚ್ಚಿಸಿಕೊಳ್ಳುವುದು ಅವಶ್ಯ
ಋತುಬಂಧದ ನಂತರದ ದಿನಗಳಲ್ಲಿ ಮೂಳೆಗಳ ಸಾಂದ್ರತೆ ಹೆಚ್ಚಿಸಿಕೊಳ್ಳುವುದು ಅವಶ್ಯ

ಋತುಬಂಧವು ಮಹಿಳೆಯರ ಜೀವನದ ಒಂದು ಘಟ್ಟ. ಈ ಹಂತವು ಋತುಚಕ್ರ ನಿಂತು ಹೋಗುವ ಸಮಯ. ಅಲ್ಲದೆ ಆಕೆಯ ಸಂತಾನೋತ್ಪತ್ತಿ ವರ್ಷಗಳ ಅಂತ್ಯವನ್ನು ಇದು ಸೂಚಿಸುತ್ತದೆ. ಇದು ಸಾಮಾನ್ಯವಾಗಿ ಮಹಿಳೆಯರಲ್ಲಿ 45 ರಿಂದ 55 ವಯಸ್ಸಿನ ನಡುವೆ ಸಂಭವಿಸುವ ನೈಸರ್ಗಿಕ ಕ್ರಿಯೆಯಾಗಿದೆ. ಕೆಲವೊಂದು ಸಂದರ್ಭಗಳಲ್ಲಿ ಅದಕ್ಕೂ ಮೊದಲು ಅಥವಾ ಅದಕ್ಕೂ ನಂತರ ಉಂಟಾಗಬಹುದು.

ಋತುಬಂಧದ ಸಮಯದಲ್ಲಿ ಮೂಳೆಯ ಸಾಂಧ್ರತೆಯು ಕಡಿಮೆಯಾಗುತ್ತದೆ. ಇದು ಆಸ್ಟಿಯೊಪೊರೋಸಿಸ್‌ ಮತ್ತು ಮೂಳೆ ಮುರಿತಗಳ ಅಪಾಯವನ್ನು ಹೆಚ್ಚಿಸಬಹುದು. ಆದರೆ ಕೆಲವೊಂದು ಜೀವನಕ್ರಮವನ್ನು ಅನುಸರಿಸುವ ಮೂಲಕ ಮೂಳೆಯ ಸಾಂದ್ರತೆಯನ್ನು ಹೆಚ್ಚಿಸಿಕೊಳ್ಳಬಹುದು. ಋತುಬಂಧದ ಸಮಯ ಹಾಗೂ ನಂತರದ ದಿನಗಳಲ್ಲಿ ಮೂಳೆಯ ಸಾಂದ್ರತೆಯ ಅಪಾಯವನ್ನು ಕಡಿಮೆ ಮಾಡಲು ನೆರವಾಗುವ ಕೆಲವು ಪರಿಣಾಮಕಾರಿ ಸಲಹೆಗಳು ಹೀಗಿವೆ.

ಮೂಳೆಯ ಸಾಂದ್ರತೆಯ ನಷ್ಟದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುವ ಹತ್ತು ಸಲಹೆಗಳು ಇಲ್ಲಿವೆ.

ಕ್ಯಾಲ್ಸಿಯಂ ಸೇವನೆಗೆ ಒತ್ತು ನೀಡಿ

ಮೂಳೆಗಳ ಸಾಂದ್ರತೆ ಹೆಚ್ಚಲು ಕ್ಯಾಲ್ಸಿಯಂ ಬಹಳ ಅಗತ್ಯ. ಆ ಕಾರಣಕ್ಕೆ ಮಹಿಳೆಯರು ಋತುಬಂಧದ ಸಮಯ ಹಾಗೂ ಋತುಬಂಧದ ನಂತರದ ದಿನಗಳಲ್ಲಿ ಹೆಚ್ಚು ಹೆಚ್ಚು ಕ್ಯಾಲ್ಸಿಯಂ ಸೇವನೆಗೆ ಒತ್ತು ನೀಡಬೇಕು. ಋತುಬಂಧದ ನಂತರ ಮಹಿಳೆಯರು ಪ್ರತಿದಿನ 1000 ರಿಂದ 1200 ಮಿಲಿಗ್ರಾಂನಷ್ಟು ಕ್ಯಾಲ್ಸಿಯಂ ಸೇವನೆ ಮಾಡಬೇಕು. ಆಹಾರ ಪದಾರ್ಥಗಳು ಹಾಗೂ ಪೂರಕ ವಸ್ತುಗಳ ಸೇವನೆಯು ಮೂಲಕ ಕ್ಯಾಲ್ಸಿಯಂ ಹೆಚ್ಚಿಸಿಕೊಳ್ಳಿ.

ಸಾಕಷ್ಟು ವಿಟಮಿನ್‌ ಡಿ ಪಡೆಯಿರಿ

ವಿಟಮಿನ್‌ ಡಿ ದೇಹವು ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಮೂಳೆಗಳ ಸಾಂದ್ರತೆ ಹೆಚ್ಚಲು ಸಹಾಯ ಮಾಡುತ್ತದೆ. ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು, ಆಹಾರಕ್ರಮ ಮತ್ತು ಕ್ಯಾಲ್ಸಿಯಂ ಪೂರಕ ವಸ್ತುಗಳ ಸೇವನೆಯು ಮೂಲಕ ಪ್ರತಿದಿನ ಕನಿಷ್ಠ 600 ರಿಂದ 800 ಇಂಟರ್‌ನ್ಯಾಷನಲ್‌ ಯುನಿಟ್‌ ವಿಟಮಿನ್‌ ಡಿ ಸೇವನೆ ಅವಶ್ಯ.

ಭಾರ ಎತ್ತುವ ವ್ಯಾಯಾಮಗಳಲ್ಲಿ ತೊಡಗಿಕೊಳ್ಳಿ

ವಾಕಿಂಗ್‌, ಜಾಗಿಂಗ್‌, ಡಾನ್ಸ್‌ ಮತ್ತು ಭಾರ ಎತ್ತುವಂತಹ ತೂಕ ಹೊರುವ ವ್ಯಾಯಾಮಗಳು ಮೂಳೆಗಳನ್ನು ಬಲಪಡಿಸಲು ಮತ್ತು ಋತುಬಂಧದ ಸಮಯದಲ್ಲಿ ಮೂಳೆ ಸಾಂದ್ರತೆಯ ನಷ್ಟವನ್ನು ತಡೆಯಲು ಸಹಾಯ ಮಾಡುತ್ತದೆ.

ಧೂಮಪಾನ ತ್ಯಜಿಸಿ

ಧೂಮಪಾನವು ಮೂಳೆಯ ಸಾಂದ್ರತೆಯನ್ನು ಕಡಿಮೆ ಮಾಡಲು ಮತ್ತು ಮುರಿತದ ಅಪಾಯವನ್ನು ಹೆಚ್ಚಿಸಬಹುದು. ಆ ಕಾರಣಕ್ಕೆ ಧೂಮಪಾನ ಮಾಡುವುದು ಹಾಗೂ ಧೂಮಪಾನದ ಹೊಗೆಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಬೇಕು.

ಆಲ್ಕೊಹಾಲ್‌ ಸೇವನೆಯನ್ನು ಮಿತಿಗೊಳಿಸಿ

ಅತಿಯಾದ ಪ್ರಮಾಣದಲ್ಲಿ ಆಲ್ಕೋಹಾಲ್‌ ಸೇವನೆಯು ಮೂಳೆಯ ಸಾಂದ್ರತೆಯ ನಷ್ಟ ಹಾಗೂ ಮೂಳೆ ಮುರಿತದ ಅಪಾಯವನ್ನು ಹೆಚ್ಚಿಸುತ್ತದೆ. ಆ ಕಾರಣಕ್ಕೆ ಮಹಿಳೆಯರು ಆಲ್ಕೋಹಾಲ್‌ ಸೇವನೆಯನ್ನು ಮಿತಿಗೊಳಿಸುವುದು ಅವಶ್ಯ.

ಆರೋಗ್ಯಕರ ಆಹಾರ ಸೇವನೆ

ಸಾಕಷ್ಟು ಹಣ್ಣುಗಳು, ತರಕಾರಿ, ಧಾನ್ಯಗಳು, ಲೀನ್‌ ಪ್ರೊಟೀನ್‌ಗಳನ್ನು ಒಳಗೊಂಡಿರುವ ಆರೋಗ್ಯಕರ ಆಹಾರವು ಋತುಬಂಧದ ಸಮಯದಲ್ಲಿ ಮೂಳೆಗಳ ಸಾಂದ್ರತೆಯ ನಷ್ಟದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಹಾರ್ಮೋನ್‌ ಚಿಕಿತ್ಸೆ ತೆಗೆದುಕೊಳ್ಳಿ

ಋತುಬಂಧದ ಸಮಯದಲ್ಲಿ ಮಹಿಳೆಯರಲ್ಲಿ ಮೂಳೆಯ ಸಾಂದ್ರತೆಯ ನಷ್ಟ ಮತ್ತು ಮುರಿತದ ಅಪಾಯವನ್ನು ಕಡಿಮೆ ಮಾಡಲು ಹಾರ್ಮೋನ್‌ ಚಿಕಿತ್ಸೆಯು ಸಹಾಯ ಮಾಡುತ್ತದೆ. ಆದರೆ ಇದು ಎಲ್ಲಾ ಮಹಿಳೆಯರಿಗೂ ಅನ್ವಯವಾಗುವುದಿಲ್ಲ. ಹಾರ್ಮೋನ್‌ ಚಿಕಿತ್ಸೆ ಪಡೆಯುವ ಮೊದಲು ತಜ್ಞರೊಂದಿಗೆ ಚರ್ಚಿಸುವುದು ಅವಶ್ಯ.

ಕ್ಯಾಲ್ಸಿಯಂ ಪೂರಕಗಳ ಸೇವನೆ

ಮಹಿಳೆಯರು ತನ್ನ ದೈನಂದಿನ ಆಹಾರದ ಮೂಲಕ ಸಾಕಷ್ಟು ಕ್ಯಾಲ್ಸಿಯಂ ಪಡೆಯಲು ಸಾಧ್ಯವಾಗದೇ ಇದ್ದರೆ, ಕ್ಯಾಲ್ಸಿಯಂ ಪೂರಕಗಳ ಸೇವನೆಗೆ ಒತ್ತು ನೀಡಬೇಕು.

ಮೂಳೆಗಳ ಸಾಂದ್ರತೆ ಪರೀಕ್ಷೆ ಮಾಡಿಸಿಕೊಳ್ಳಿ

ಆಸ್ಟಿಯೊಪೊರೋಸಿಸ್‌ ಮತ್ತು ಮೂಳೆ ಮುರಿತದ ಅಪಾಯವನ್ನು ನಿರ್ಧರಿಸಲು ಮಹಿಳೆಯರು ಋತುಬಂಧದ ನಂತರ ಮೂಳೆ ಸಾಂದ್ರತೆಯ ಪರೀಕ್ಷೆಗೆ ಒಳಪಡಬೇಕು. ಪರೀಕ್ಷೆಯ ಫಲಿತಾಂಶವನ್ನು ಅವಲಂಬಿಸಿ, ಮೂಳೆಗಳ ರಕ್ಷಣೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು.

ಸಾಕಷ್ಟು ನಿದ್ದೆ ಅವಶ್ಯ

ಒಟ್ಟಾರೆ ಆರೋಗ್ಯ ಸುಧಾರಿಸಲು ಸಾಕಷ್ಟು ನಿದ್ರೆ ಮಾಡುವುದು ಅಗತ್ಯ. ಅಲ್ಲದೆ ಸಮರ್ಪಕ ನಿದ್ದೆಯು ಋತುಬಂಧದ ಸಮಯದಲ್ಲಿ ಮೂಳೆ ಸಾಂದ್ರತೆಯ ನಷ್ಟದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಹಿಳೆಯರು ರಾತ್ರಿ 7 ರಿಂದ 8 ಗಂಟೆಗಳ ಕಾಲ ನಿದ್ದೆ ಮಾಡಬೇಕು.

 ಈ ಎಲ್ಲಾ ಕ್ರಮಗಳನ್ನು ಅನುಸರಿಸುವ ಜೊತೆಗೆ ಆರೋಗ್ಯಕರ ಜೀವನಶೈಲಿಯನ್ನು ಪಾಲಿಸುವ ಮೂಲಕ ಋತುಬಂಧದ ಸಮಯ ಹಾಗೂ ಋತುಬಂಧದ ನಂತರ ಉಂಟಾಗುವ ಮೂಳೆಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. 

Whats_app_banner