logo
ಕನ್ನಡ ಸುದ್ದಿ  /  ಜೀವನಶೈಲಿ  /  World Copd Day: ಜೀವಕ್ಕೆ ಮಾರಕವಾಗಬಹುದು ದೀರ್ಘಕಾಲದ ಶ್ವಾಸಕೋಶದ ಸಮಸ್ಯೆ; ವಿಶ್ವ ಸಿಒಪಿಡಿ ದಿನದ ಇತಿಹಾಸ, ಮಹತ್ವ ತಿಳಿಯಿರಿ

World COPD Day: ಜೀವಕ್ಕೆ ಮಾರಕವಾಗಬಹುದು ದೀರ್ಘಕಾಲದ ಶ್ವಾಸಕೋಶದ ಸಮಸ್ಯೆ; ವಿಶ್ವ ಸಿಒಪಿಡಿ ದಿನದ ಇತಿಹಾಸ, ಮಹತ್ವ ತಿಳಿಯಿರಿ

Reshma HT Kannada

Nov 20, 2024 08:47 AM IST

google News

ವಿಶ್ವ ಸಿಒಪಿಡಿ ದಿನ

    • ಬದಲಾಗುತ್ತಿರುವ ವಾತಾವರಣವು ಮನುಷ್ಯನ ಆರೋಗ್ಯದ ಮೇಲೆ, ಅದರಲ್ಲೂ ಉಸಿರಾಟದ ಮೇಲೆ ಭಾರಿ ಕೆಟ್ಟ ಪರಿಣಾಮ ಬೀರುತ್ತಿದೆ. ಇದರಿಂದ ದೀರ್ಘಕಾಲದ ಉಸಿರಾಟ ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುತ್ತಿವೆ. ದೀರ್ಘಕಾಲದ ಶ್ವಾಸಕೋಶ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ನವೆಂಬರ್ 20ರಂದು COPD ದಿನವನ್ನು ಆಚರಿಸಲಾಗುತ್ತದೆ. 
ವಿಶ್ವ ಸಿಒಪಿಡಿ ದಿನ
ವಿಶ್ವ ಸಿಒಪಿಡಿ ದಿನ (PC: Canva)

ಪ್ರಪಂಚದಾದ್ಯಂತ ಹಲವರ ಸಾವಿಗೆ ಕಾರಣವಾಗುತ್ತಿರುವ ಪ್ರಮುಖ ಕಾಯಿಲೆಗಳಲ್ಲಿ ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ (COPD) ಕೂಡ ಒಂದು. ಈ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ನವೆಂಬರ್ 20 ರಂದು COPD ದಿನವನ್ನು ಆಚರಿಸಲಾಗುತ್ತದೆ. ಗ್ಲೋಬಲ್ ಇನಿಶಿಯೇಟಿವ್ ಫಾರ್ ಕ್ರೋನಿಕ್ ಅಬ್ಸ್ಟ್ರಕ್ಟಿವ್ ಲಂಗ್ ಡಿಸೀಸ್ ಈ ದಿನವನ್ನು ಆಯೋಜಿಸುತ್ತದೆ. ಜನರಲ್ಲಿ ಶ್ವಾಸಕೋಶದ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನು ಈ ದಿನ ಹೊಂದಿದೆ. 

ಶ್ವಾಸಕೋಶದ ಕಾಯಿಲೆಗಳಲ್ಲಿ ಸಿಒಪಿಡಿ ಅತ್ಯಂತ ಅಪಾಯಕಾರಿ ಎಂದರೂ ತಪ್ಪಲ್ಲ. ಇದು ಅಸ್ತಮಾಗಿಂತ ಭಿನ್ನವಾದ ಸಮಸ್ಯೆಯಾಗಿದೆ. ಸಾಮಾನ್ಯವಾಗಿ ಈ ಕಾಯಿಲೆಯ ಲಕ್ಷಣಗಳು ಅಸ್ತಮಾದಂತೆ ಕಂಡುಬಂದರೂ ರೋಗಲಕ್ಷಣಗಳು ಅದಕ್ಕಿಂತ ಭಿನ್ನವಾಗಿರುತ್ತದೆ. ಪದೇ ಪದೇ ಸುಸ್ತಾಗುವುದು, ಬೇಗ ಕಫ, ಕೆಮ್ಮು ಕಾಣಿಸುವುದು, ಮೆಟ್ಟಿಲು ಅಥವಾ ಎತ್ತರದ ಪ್ರದೇಶಗಳನ್ನು ಹತ್ತಲು ಕಷ್ಟಪಡುವುದು, ಉಸಿರಾಡುವಾಗ ಶಬ್ದ ಬರುವುದು ಇಂತಹ ಸಮಸ್ಯೆಗಳು ಸಿಒಪಿಡಿಯ ಪ್ರಮುಖ ಲಕ್ಷಣಗಳಾಗಿವೆ. 

ಸಿಒಪಿಡಿಗೆ ಕಾರಣ 

ಸಿಒಪಿಡಿ ಸಾಮಾನ್ಯವಾಗಿ 40 ವರ್ಷ ನಂತರ ಕಾಣಿಸುವ ಆರೋಗ್ಯ ಸಮಸ್ಯೆಯಾಗಿದೆ. ಇದು ಧೂಳು, ಹೊಗೆ, ಕಲುಷಿತ ವಾತಾವರಣಕ್ಕೆ ಒಡ್ಡಿಕೊಳ್ಳುವುದು, ಶ್ವಾಸಕೋಶದ ಸೋಂಕು, ರೋಗನಿರೋಧಕ ಶಕ್ತಿ ಕಡಿಮೆಯಾಗುವುದು ಈ ಕಾರಣದಿಂದ ಕಾಣಿಸಬಹುದು. ದೀರ್ಘಕಾಲದ ಅಸ್ತಮಾ ರೋಗಿಗಳು ಕೂಡ ಸಿಒಪಿಡಿ ಸಮಸ್ಯೆಯನ್ನು ಎದುರಿಸುವಂತಾಗಬಹುದು. ಧೂಳು ತುಂಬಿದ, ರಾಸಾಯನಿಕ ಕಾರ್ಖಾನೆಗಳಲ್ಲಿ ಕೆಲಸ ಮಾಡುವವರಿಗೆ ಈ ಸಮಸ್ಯೆ ಕಾಣಿಸಬಹುದು. ಯಾವುದೇ ಮೂಲಗಳಿಂದ ಬೀಡಿ, ಸಿಗರೇಟು ಸೇರಿದಂತೆ ರಾಸಾಯನಿಕ ಅಂಶ ಇರುವ ಹೊಗೆ ನಿಮ್ಮ ದೇಹ ಸೇರಿದರೆ ಸಿಒಪಿಡಿ ಸಮಸ್ಯೆ ಎದುರಾಗಬಹುದು. 

ಸಿಒಪಿಡಿ ದಿನ 2024ರ ಥೀಮ್ 

‘ನಿಮ್ಮ ಶ್ವಾಸಕೋಶದ ಕಾರ್ಯವನ್ನು ತಿಳಿಯಿರಿ‘ ಎಂಬುದು ಈ ವರ್ಷದ COPD ದಿನದ ಥೀಮ್ ಆಗಿದೆ. ಸಿಒಪಿಡಿ ರೋಗನಿರ್ಣಯ ಮತ್ತು ಒಟ್ಟಾರೆ ಶ್ವಾಸಕೋಶದ ಆರೋಗ್ಯವನ್ನು ನಿರ್ಣಯಿಸುವಲ್ಲಿ ಸ್ಪಿರೋಮೆಟ್ರಿಯ ನಿರ್ಣಾಯಕ ಪಾತ್ರವನ್ನು ಇದು ಒತ್ತಿಹೇಳುತ್ತದೆ. ಶ್ವಾಸಕೋಶದ ಕಾರ್ಯಚಟುವಟಿಕೆಯನ್ನು ಅಳೆಯಲು ಸರಳವಾದ ಪರೀಕ್ಷೆಯಾದ ಸ್ಪಿರೋಮೆಟ್ರಿಯು ಸಿಒಪಿಡಿಯನ್ನು ಮೊದಲೇ ಗುರುತಿಸಲು ಸಹಾಯ ಮಾಡುತ್ತದೆ. ವಾಯು ಮಾಲಿನ್ಯ, ಉಸಿರಾಟದ ಸೋಂಕುಗಳು ಮತ್ತು ಶ್ವಾಸಕೋಶದ ಆರೋಗ್ಯದ ಮೇಲೆ ವಯಸ್ಸಾದಂತಹ ಅಂಶಗಳ ಪ್ರಭಾವವನ್ನು ಅರ್ಥಮಾಡಿಕೊಳ್ಳಲು ಈ ಸಾಧನ ಸಹಾಯ ಮಾಡುತ್ತದೆ.

ಆರಂಭಿಕ ಪತ್ತೆಗೆ ನೀಡಿ ಆದ್ಯತೆ 

COPD ಒಂದು ತಡೆಗಟ್ಟಬಹುದಾದ ಮತ್ತು ಚಿಕಿತ್ಸೆ ನೀಡಬಹುದಾದ ಸ್ಥಿತಿಯಾಗಿದ್ದು ಅದು ಉಸಿರಾಟದ ತೊಂದರೆ, ದೀರ್ಘಕಾಲದ ಕೆಮ್ಮು ಮತ್ತು ಕಫಕ್ಕೆ ಕಾರಣವಾಗುತ್ತದೆ. ನಿರ್ವಹಿಸಬಹುದಾದ ಹೊರತಾಗಿಯೂ, ಇದು ಗಮನಾರ್ಹವಾದ ಜಾಗತಿಕ ಆರೋಗ್ಯ ಸವಾಲಾಗಿ ಉಳಿದಿದೆ. ಪ್ರತಿ ವರ್ಷ ಅಂದಾಜು ಮೂರು ಮಿಲಿಯನ್ ಜನರು ಈ ಸಮಸ್ಯೆಯಿಂದ ಸಾವನ್ನಪ್ಪುತ್ತಿದ್ದಾರೆ. ತಂಬಾಕು ಹೊಗೆ ಮತ್ತು ಮಾಲಿನ್ಯದಂತಹ ಅಪಾಯಕಾರಿ ಅಂಶಗಳಿಗೆ ಒಡ್ಡಿಕೊಳ್ಳುವಿಕೆಯು ಶ್ವಾಸಕೋಸದ ಸಮಸ್ಯೆಗೆ ಪ್ರಮುಖ ಕಾರಣವಾಗುತ್ತಿದೆ.

2002ರಲ್ಲಿ ಮೊದಲ ಬಾರಿಗೆ ನಡೆದ ವಿಶ್ವ COPD ದಿನವನ್ನು ಆಚರಿಸಲಾಗಿತ್ತು. ಆ ವರ್ಷ 50 ಕ್ಕೂ ಹೆಚ್ಚು ದೇಶಗಳಲ್ಲಿ ಈ ದಿನವನ್ನು ಆಚರಿಸಲಾಯಿತು. ಈ ಉಪಕ್ರಮವು ಸಾರ್ವಜನಿಕರಿಗೆ ಶಿಕ್ಷಣ ನೀಡುವುದಲ್ಲದೆ ಆರಂಭಿಕ ರೋಗನಿರ್ಣಯ ಮತ್ತು ನವೀನ ಚಿಕಿತ್ಸೆಗಳ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ.  ಶ್ವಾಸಕೋಶದ ಸಮಸ್ಯೆಗೆ ಮಾಲಿನ್ಯವು ಪ್ರಮುಖ ಕಾರಣವಾಗಿದ್ದು, ಮಾಲಿನ್ಯದಿಂದ ನಮ್ಮ ದೇಹ, ಶ್ವಾಸಕೋಶವನ್ನು ರಕ್ಷಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ. 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ