World Hemophilia Day 2023: ತೀವ್ರ ರಕ್ತಸ್ರಾವವಷ್ಟೇ ಅಲ್ಲ; ಈ ಸಂಕೇತಗಳು ಹಿಮೋಫಿಲಿಯಾ ಲಕ್ಷಣಗಳಾಗಿರಬಹುದು; ಗಮನವಿರಲಿ
Apr 17, 2023 10:04 AM IST
ಹಿಮೋಫಿಲಿಯಾ ಲಕ್ಷಣಗಳು
- World Hemophilia Day 2023: ಪ್ರತಿವರ್ಷ ಏಪ್ರಿಲ್ 17 ರಂದು ವಿಶ್ವ ಹಿಮೋಫಿಲಿಯಾ ದಿನವನ್ನು ಆಚರಿಸಲಾಗುತ್ತದೆ. ಹಿಮೋಫಿಲಿಯಾಕ್ಕೆ ಕನ್ನಡದಲ್ಲಿ ʼಕುಸುಮರೋಗʼವೆಂದೂ ಕರೆಯುತ್ತಾರೆ. ರಕ್ತ ಹೆಪ್ಪುಗಟ್ಟದೇ ಇರುವುದು ಹಿಮೋಫಿಲಿಯಾದ ಪ್ರಮುಖ ಲಕ್ಷಣವಾಗಿದೆ. ಇದರೊಂದಿಗೆ ಇನ್ನೂ ಕೆಲವು ರೋಗಲಕ್ಷಣಗಳಿವೆ. ಇವುಗಳ ಕುರಿತ ವಿವರ ಇಲ್ಲಿದೆ.
ಹಿಮೋಫಿಲಿಯಾ ಒಂದು ಅನುವಂಶಿಕ ಕಾಯಿಲೆಯಾಗಿದ್ದು, ಅದು ದೇಹದಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ ಮತ್ತು ಸಣ್ಣಪುಟ್ಟ ಗಾಯವಾದಾಗಲೂ ಅಧಿಕ ರಕ್ತಸಾವ್ರಕ್ಕೆ ಕಾರಣವಾಗಬಹುದು. ರಕ್ತಸ್ರಾವದ ಅಸ್ವಸ್ಥತೆಯು ದೇಹದಲ್ಲಿನ ಕೆಲವು ಹೆಪ್ಪುಗಟ್ಟುವಿಕೆ ಅಂಶಗಳ ಕೊರತೆಯಿಂದ ಉಂಟಾಗುತ್ತದೆ.
ಕುಟುಂಬದ ಇತಿಹಾಸದಲ್ಲಿ ಹಿಮೋಫಿಲಿಯಾ ಸಮಸ್ಯೆ ಇರುವವರಲ್ಲಿ ಈ ಇದರ ಅಪಾಯ ಹೆಚ್ಚುವ ಸಾಧ್ಯತೆ ಇದೆ. 19 ಮತ್ತು 20ನೇ ಶತಮಾನದಲ್ಲಿ ಇಂಗ್ಲೆಂಡ್, ಜರ್ಮನಿ, ರಷ್ಯಾ ಮತ್ತು ಸ್ಪೇನ್‌ನ ರಾಜಮನೆತನದ ಮೇಲೆ ಪರಿಣಾಮ ಬೀರಿದ ಹಿಮೋಫಿಲಿಯಾವನ್ನು ʼರಾಯಲ್ ಕಾಯಿಲೆʼ ಎಂದೂ ಕರೆಯಲಾಗುತ್ತದೆ. ಇಂಗ್ಲೆಂಡಿನ ರಾಣಿ ವಿಕ್ಟೋರಿಯಾ ಅವರ ಒಂಬತ್ತು ಮಕ್ಕಳಲ್ಲಿ ಮೂವರಿಗೆ ಈ ರೋಗ ಹರಡಿತ್ತು ಎಂದು ಹೇಳಲಾಗುತ್ತದೆ.
ರಕ್ತ ಹೆಪ್ಪುಗಟ್ಟಲು ನೆರವಾಗುವ 13 ಘಟಕಗಳಲ್ಲಿ (ಫ್ಯಾಕ್ಟರ್‌ಗಳಲ್ಲಿ) 8ನೇ ಘಟಕ ಕಡಿಮೆ ಇದ್ದರೆ ಅದನ್ನು ʼಟೈಪ್ ಎʼ ಎಂದು, 9ನೇ ಘಟಕ ಕಡಿಮೆ ಇದ್ದರೆ ʼಟೈಪ್ ಬಿʼ ಎಂದು ಕರೆಯಲಾಗುತ್ತದೆ.
ಹಿಮೋಫಿಲಿಯಾದ ಸಂಕೇತಗಳು ಹಾಗೂ ರೋಗಲಕ್ಷಣಗಳು
ದೆಹಲಿಯ ಆಕಾಶ್ ಹೆಲ್ತ್‌ಕೇರ್‌ನ ಹೆಮಟಾಲಜಿ ವಿಭಾಗದ ವೈದ್ಯರಾದ ಡಾ. ರೋಶನ್ ದೀಕ್ಷಿತ್ ಹಿಮೋಫಿಲಿಯಾದ ರೋಗಲಕ್ಷಣಗಳು ಹಾಗೂ ಸಂಕೇತಗಳ ಬಗ್ಗೆ ಇಲ್ಲಿ ವಿವರಿಸಿದ್ದಾರೆ.
ಅತಿಯಾದ ರಕ್ತಸ್ರಾವ, ಮೂಗೇಟುಗಳಲ್ಲಿನ ರಕ್ತಸ್ರಾವದ ಹೊರತಾಗಿಯೂ ಹಿಮೋಫಿಲಿಯಾದ ಇತರ ಚಿಹ್ನೆಗಳು ಮತ್ತು ಲಕ್ಷಣಗಳು ಹೀಗಿವೆ;
ದೀರ್ಘಕಾಲದ ರಕ್ತಸ್ರಾವ: ಹಿಮೋಫಿಲಿಯಾ ಸಮಸ್ಯೆ ಇರುವವರಲ್ಲಿ ಶಸ್ತ್ರಚಿಕಿತ್ಸೆ, ಹಲ್ಲಿಗೆ ಸಂಬಂಧಿಸಿದ ಚಿಕಿತ್ಸೆ, ಸಣ್ಣ ಗಾಯ ಹಾಗೂ ಗೀರು ಉಂಟಾದರೂ ದೀರ್ಘಕಾಲದವರೆಗೆ ರಕ್ತಸ್ರಾವವಿರುತ್ತದೆ.
ಕೀಲು ನೋವು ಮತ್ತು ಊತ: ಕೀಲುಗಳಲ್ಲಿ ಪದೇ ಪದೇ ರಕ್ತಸ್ರಾವ ಉಂಟಾಗುವುದು ನೋವು, ಊತ ಹಾಗೂ ಬಿಗಿ ಹಿಡಿದಂತಹ ಅನುಭವ ಇದರ ರೋಲಕ್ಷಣಗಳಾಗಿರಬಹುದು. ವಿಶೇಷವಾಗಿ ಮೊಣಕಾಲು, ಮೊಣಕೈ ಹಾಗೂ ಕಣಕಾಲಿನಲ್ಲಿ ಈ ತೊಂದರೆಗಳು ಕಾಣಿಸಬಹುದು.
ಮೂಗಿನಲ್ಲಿ ರಕ್ತಸ್ರಾವ: ಆಗಾಗ್ಗೆ ಅಥವಾ ದೀರ್ಘಕಾಲದ ಮೂಗಿನ ರಕ್ತಸ್ರಾವವು ಹಿಮೋಫಿಲಿಯಾದ ಚಿಹ್ನೆಯಾಗಿರಬಹುದು. ವಿಶೇಷವಾಗಿ ಇದು ಮಕ್ಕಳಲ್ಲಿ ಹೆಚ್ಚು ಕಾಣಿಸುತ್ತದೆ.
ಮೂತ್ರ ಅಥವಾ ಮಲದಲ್ಲಿ ರಕ್ತ ಕಾಣಿಸುವುದು: ಹಿಮೋಫಿಲಿಯಾ ಹೊಂದಿರುವ ವ್ಯಕ್ತಿಗಳಲ್ಲಿ ಜಠರಗರುಳು ಅಥವಾ ಮೂತ್ರನಾಳದಲ್ಲಿ ರಕ್ತಸ್ರಾವವು ಕಾಣಿಸಬಹುದು. ಇದರಿಂದ ಮಲ, ಮೂತ್ರ ವಿಸರ್ಜನೆಯ ವೇಳೆ ರಕ್ತ ಕಾಣಿಸಬಹುದು.
ಮೂಗೇಟು: ಆಳವಾದ ಮೂಗೇಟಿನಿಂದ ಅತಿಯಾದ ರಕ್ತಸ್ರಾವ ಉಂಟಾದರೆ ಇದು ಹಿಮೋಫಿಲಿಯಾದ ಹಾಲ್‌ಮಾರ್ಕ್ ಅಥವಾ ಪ್ರಮುಖ ಲಕ್ಷಣವಾಗಿದೆ. ಈ ಸ್ಥಿತಿಯನ್ನು ಹೊಂದಿರುವ ವ್ಯಕ್ತಿಗಳು ಸುಲಭವಾಗಿ ಅಥವಾ ಆಗಾಗ್ಗೆ ಮೂಗೇಟಿಗೆ ಒಳಗಾಗಬಹುದು.
ʼಹಿಮೋಫಿಲಿಯಾದ ತೀವ್ರತೆಯು ಒಂದೇ ರೀತಿಯ ಅಸ್ವಸ್ಥತೆಯನ್ನು ಹೊಂದಿರುವ ವ್ಯಕ್ತಿಗಳಲ್ಲಿಯೂ ಸಹ ವ್ಯಾಪಕವಾಗಿ ಬದಲಾಗಬಹುದು ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. ಕೆಲವರಲ್ಲಿ ಸೌಮ್ಯರೋಗಲಕ್ಷಣಗಳು ಕಾಣಿಸಬಹುದು ಮತ್ತು ಇದನ್ನು ಕಂಡುಹಿಡಿಯುವುದು ಕಷ್ಟವಾಗಬಹುದು. ತೀವ್ರವಾದ ರಕ್ತಸ್ರಾವದ ಸಮಸ್ಯೆ ಇರುವವರು ತಕ್ಷಣ ವೈದ್ಯರ ಬಳಿ ಚಿಕಿತ್ಸೆ ಪಡೆಯುವುದು ಉತ್ತಮʼ.
ರೋಗನಿರ್ಣಯ ಮತ್ತು ಚಿಕಿತ್ಸೆ
ಯಾವುದೇ ವ್ಯಕ್ತಿಯಲ್ಲಿ ಈ ಮೇಲೆ ತಿಳಿಸಿರುವ ರೋಗಲಕ್ಷಣಗಳು ಕಂಡುಬಂದರೆ ತಕ್ಷಣಕ್ಕೆ ವೈದ್ಯಕೀಯ ಸಲಹೆ ಪಡೆಯುವುದು ಉತ್ತಮ. ಸಾಮಾನ್ಯವಾಗಿ ರಕ್ತದ ಹೆಪ್ಪುಗಟ್ಟುವಿಕೆಯ ಅಂಶದ ಮಟ್ಟವನ್ನು ಅಳೆಯಲು ರಕ್ತಪರೀಕ್ಷೆಗಳನ್ನು ಮಾಡಿಸಬೇಕಾಗಬಹುದು.
ಹೆಪ್ಪುಗಟ್ಟುವಿಕೆಯ ಕೊರತೆಯ ಅಂಶಗಳನ್ನು ಪುನಃಸ್ಥಾಪಿಸುವುದು ಇದರ ಪ್ರಮುಖ ಚಿಕಿತ್ಸಾವಿಧಾನವಾಗಿದೆ.
ʼಆಳವಾದ ಮೂಗೇಟುಗಳಿಂದ ಅತಿಯಾದ ರಕ್ತಸ್ರಾವ ಉಂಟಾಗುವುದು ಹಿಮೋಫಿಲಿಯಾದ ಸಾಮಾನ್ಯ ಲಕ್ಷಣವಾಗಿದ್ದರೂ, ವ್ಯಕ್ತಿಗಳು ತಿಳಿದಿರಬೇಕಾದ ಇತರ ಚಿಹ್ನೆಗಳು ಮತ್ತು ರೋಗಲಕ್ಷಣಗಳು ಇವೆ. ಆರಂಭಿಕ ರೋಗನಿರ್ಣಯ ಮತ್ತು ಚಿಕಿತ್ಸೆಯು ಈ ಸಮಸ್ಯೆಯನ್ನು ನಿರ್ವಹಿಸುವಲ್ಲಿ ಮತ್ತು ಗಂಭೀರ ರಕ್ತಸ್ರಾವದ ಕಂತುಗಳನ್ನು ತಡೆಗಟ್ಟುವಲ್ಲಿ ನಿರ್ಣಾಯಕವಾಗಿದೆ. ನೀವು ಅಥವಾ ನಿಮ್ಮ ಪ್ರೀತಿಪಾತ್ರರಲ್ಲಿ ಈ ಸಮಸ್ಯೆ ಕಾಣಿಸಿದರೆ ತಕ್ಷಣಕ್ಕೆ ವೈದ್ಯರ ಬಳಿ ತೋರಿಸಿ, ಚಿಕಿತ್ಸೆ ಪಡೆಯುವುದು ಉತ್ತಮʼ ಎನ್ನುತ್ತಾರೆ ಡಾ. ರೋಶನ್ ದೀಕ್ಷಿತ್.
ವಿಭಾಗ