World Toilet Day 2024: ಭಾರತ ಬಯಲು ಶೌಚ ಮುಕ್ತ ದೇಶ ಆಗುವುದೆಂದು? ವಿಶ್ವ ಟಾಯ್ಲೆಟ್ ದಿನದ ಇತಿಹಾಸ, ಮಹತ್ವ, 2024ರ ಥೀಮ್ ತಿಳಿಯಿರಿ
Nov 19, 2024 06:00 AM IST
ವಿಶ್ವ ಟಾಯ್ಲೆಟ್ ದಿನ
- ಟಾಯ್ಲೆಟ್ ಎನ್ನುವುದು ಮನುಷ್ಯನ ಮೂಲಭೂತ ಸೌಕರ್ಯಗಳಲ್ಲಿ ಒಂದಾಗಿದೆ. ಆದರೆ ಬಹಳಷ್ಟು ಕಡೆ ಇಂದಿಗೂ ಶೌಚ ಮಾಡಲು ಬಯಲು ಪ್ರದೇಶಗಳಿಗೆ ತೆರಳುವ ಕ್ರಮವಿದೆ. ಜಗತ್ತಿನಲ್ಲಿ ಇನ್ನೂ ಸಾಕಷ್ಟು ಜನರು ಇಂತಹ ಮೂಲ ಸೌಕರ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂಬುದನ್ನು ತಿಳಿಸುವ ಉದ್ದೇಶದಿಂದ ವಿಶ್ವ ಟಾಯ್ಲೆಟ್ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಟಾಯ್ಲೆಟ್ ದಿನವನ್ನು ಮೊದಲ ಬಾರಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಘೋಷಿಸಲಾಯಿತು. ಯುಎನ್ ವಾಟರ್ ಹಾಗೂ ಪ್ರಪಂಚದಾದ್ಯಂತ ಸರ್ಕಾರಗಳ ನಡುವಿನ ಸಮನ್ವಯದಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಶೌಚಾಲಯ ದಿನದ ಉದ್ದೇಶವು ಜಗತ್ತಿನಲ್ಲಿ ಇನ್ನೂ ಎಷ್ಟು ಜನರಿಗೆ ಮೂಲಭೂತ ನೈರ್ಮಲ್ಯ ಸೌಲಭ್ಯಗಳ ಕೊರತೆಯಿದೆ ಎಂಬುದರ ಕುರಿತು ಜಾಗೃತಿ ಮೂಡಿಸುವುದಾಗಿದೆ.
ನೈರ್ಮಲ್ಯ ಮತ್ತು ನೀರಿನ ಹಕ್ಕಿನಿಂದ ವಂಚಿತವಾಗಿರುವ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶ ಭಾರತ ಎಂಬ ಆರೋಪ ಮೊದಲಿನಿಂದಲೂ ಇದೆ. 2019 ಅಕ್ಟೋಬರ್‌ನಲ್ಲಿ ಭಾರತವು ಬಯಲು ಶೌಚ ಮುಕ್ತ ದೇಶ ಎಂದು ಘೋಷಿಸಿಕೊಂಡಿತ್ತು. ಆದರೆ 2021ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುನಿಸೆಫ್ ಬಿಡುಗಡೆ ಮಾಡಿದ ವರದಿಯ ಪ್ರಕಾರ ಭಾರತದಲ್ಲಿ ಒಟ್ಟು ಜನಸಂಖ್ಯೆಯ ಕನಿಷ್ಠ 15 ಪ್ರತಿಶತದಷ್ಟು ಜನರು ಬಯಲಿನಲ್ಲಿ ಮಲವಿಸರ್ಜನೆ ಮಾಡುತ್ತಾರೆ. ದೇಶದಲ್ಲಿ ಶೇ ಒಂದು ನಗರ ಮತ್ತು ಶೇ 22ರಷ್ಟು ಗ್ರಾಮೀಣ ಜನಸಂಖ್ಯೆಯು ಬಯಲು ಶೌಚವನ್ನು ಅವಲಂಬಿಸಿವೆ.
ವಿಶ್ವ ಶೌಚಾಲಯ ದಿನ ಇತಿಹಾಸ
ಜ್ಯಾಕ್ ಸಿಮ್ ಸಿಂಗಾಪುರದಲ್ಲಿ ವರ್ಲ್ಡ್ ಟಾಯ್ಲೆಟ್ ಆರ್ಗನೈಜೇಷನ್ ಅನ್ನು ಸ್ಥಾಪಿಸುತ್ತಾರೆ. ಜಾಕ್ ಸಿಮ್ ಸಿಂಗಾಪುರದ ರೆಸ್ಟ್‌ರೂಮ್ ಅಸೋಸಿಯೇಷನ್, ವರ್ಲ್ಡ್ ಟಾಯ್ಲೆಟ್ ಆರ್ಗನೈಜೇಷನ್, ವಿಶ್ವ ಶೌಚಾಲಯ ದಿನದ ಉಪಕ್ರಮ ಮತ್ತು ಪಿರಮಿಡ್ ಬಾಟಮ್ (BoP) ಹಬ್‌ನ ಸ್ಥಾಪಕರು. ಉದ್ಯಮಿಯಾಗಿದ್ದ ಅವರು ತಮ್ಮ ಉಳಿತಾಯದ ಹಣವನ್ನು ಸಮಾಜ ಸೇವೆಗಾಗಿ ಮೀಸಲಿಡುತ್ತಾರೆ. ವರ್ಲ್ಡ್ ಟಾಯ್ಲೆಟ್ ಆರ್ಗನೈಜೇಷನ್ ವಿಶ್ವ ಶೌಚಾಲಯ ದಿನಕ್ಕಾಗಿ ಜಾಗತಿಕ ಮನ್ನಣೆಗಾಗಿ ಒತ್ತಾಯಿಸಲು ಪ್ರಾರಂಭಿಸಿತು ಮತ್ತು 2007ರಲ್ಲಿ, ಸುಸ್ಥಿರ ನೈರ್ಮಲ್ಯ ಒಕ್ಕೂಟ (SuSanA) ವಿಶ್ವ ಶೌಚಾಲಯ ದಿನವನ್ನು ಸಕ್ರಿಯವಾಗಿ ಬೆಂಬಲಿಸಲು ಪ್ರಾರಂಭಿಸಿತು. ವಿಶ್ವಸಂಸ್ಥೆ 2010ರ ಜುಲೈ 28 ರಂದು ನೀರು ಮತ್ತು ನೈರ್ಮಲ್ಯದ ಹಕ್ಕನ್ನು ಮಾನವ ಹಕ್ಕು ಎಂದು ಘೋಷಿಸಿತು.
ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ರಿಇನ್ವೆಂಟ್ ದ ಟಾಯ್ಲೆಟ್ ಚಾಲೆಂಜ್ ಅನ್ನು ಬಿಡುಗಡೆ ಮಾಡಿತು, ನಾವು ಹೇಗೆ ಫ್ಲಶ್ ಮಾಡುತ್ತೇವೆ ಎಂಬುದನ್ನು ಮರುಪರಿಶೀಲಿಸುವ ಸಲುವಾಗಿ ತ್ಯಾಜ್ಯ-ಮುಕ್ತ ಕಮೋಡ್ ಅನ್ನು ವಿನ್ಯಾಸಗೊಳಿಸಲು ನಾವೀನ್ಯಕಾರರನ್ನು ಕೇಳುತ್ತದೆ. ನೈರ್ಮಲ್ಯ ಮತ್ತು ಶೌಚಾಲಯಗಳ ಜಾಗತಿಕ ಸವಾಲಿನ ಬಗ್ಗೆ ಜಾಗೃತಿ ಮೂಡಿಸಲು ಸಿಂಗಾಪುರವು ಎಲ್ಲರಿಗೂ ನೈರ್ಮಲ್ಯ ಎಂಬ ನಿರ್ಣಯವನ್ನು ಮಂಡಿಸಿತ್ತು. ವಿಶ್ವಸಂಸ್ಥೆಯು 2013ರಲ್ಲಿ ವಿಶ್ವ ಶೌಚಾಲಯ ದಿನವನ್ನು ಅಧಿಕೃತ ದಿನವೆಂದು ಘೋಷಿಸಿತು.
ಇತ್ತೀಚಿನ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುನಿಸೆಫ್ ಜಂಟಿ ಮಾನಿಟರಿಂಗ್ ಪ್ರೋಗ್ರಾಂ (JMP) ವರದಿಯ ಪ್ರಕಾರ, ನೈರ್ಮಲ್ಯದ ಪ್ರಗತಿಯು ಅತ್ಯಂತ ಕೆಟ್ಟದಾಗಿದೆ. ಪ್ರಸ್ತುತ ನೈರ್ಮಲ್ಯವನ್ನು ಸುರಕ್ಷಿತವಾಗಿ ನಿರ್ವಹಿಸದ 3.6 ಶತಕೋಟಿ ಜನರಿಗೆ, ಶೌಚಾಲಯಗಳಿಲ್ಲದೆ ಸುಸ್ಥಿರ ಭವಿಷ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ. ಸರ್ಕಾರಗಳು ನಾಲ್ಕು ಪಟ್ಟು ವೇಗವಾಗಿ ಕೆಲಸ ಮಾಡಬೇಕು ಮತ್ತು 2030ರ ವೇಳೆಗೆ ಎಲ್ಲರಿಗೂ ಶೌಚಾಲಯಗಳನ್ನ ಕಟ್ಟಿಸಿಕೊಡಬೇಕು. WHO ಮತ್ತು UNICEF ಗಳು ಸರ್ಕಾರ ಮತ್ತು ಅವರ ಪಾಲುದಾರರನ್ನು ಉತ್ತಮ ಆರೋಗ್ಯ, ಪರಿಸರಗಳು, ಆರ್ಥಿಕತೆಗಳು ಮತ್ತು ಸಮಾಜಗಳಿಗೆ ತುರ್ತಾಗಿ ಪರಿವರ್ತಿಸಲು ಸರ್ಕಾರಕ್ಕೆ ಕರೆ ನೀಡುತ್ತಿವೆ.
2024ರ ವಿಶ್ವ ಶೌಚಾಲಯ ದಿನದ ಥೀಮ್ ‘ಶೌಚಾಲಯಗಳು - ಶಾಂತಿಗಾಗಿ ಒಂದು ಸ್ಥಳ‘ ಎಂಬುದಾಗಿದೆ. ವಿಶ್ವದಾದ್ಯಂತ ಶತಕೋಟಿ ಜನರಿಗೆ ಶಾಂತಿ, ಘನತೆ ಮತ್ತು ರಕ್ಷಣೆಯನ್ನು ಉತ್ತೇಜಿಸುವಲ್ಲಿ ಸುರಕ್ಷಿತ ನೈರ್ಮಲ್ಯದ ಪ್ರಾಮುಖ್ಯತೆಯನ್ನು ಈ ಥೀಮ್ ಒತ್ತಿ ಹೇಳುತ್ತದೆ. ಸುರಕ್ಷಿತ ಶೌಚಾಲಯಗಳ ಪ್ರವೇಶವು ಸಾರ್ವಜನಿಕ ಆರೋಗ್ಯ, ಪರಿಸರ ಆರೋಗ್ಯ ಮತ್ತು ಒಟ್ಟಾರೆ ಜೀವನದ ಗುಣಮಟ್ಟವನ್ನು ಹೇಗೆ ಸುಧಾರಿಸುತ್ತದೆ ಎಂಬುದನ್ನು ಇದು ಹೈಲೈಟ್ ಮಾಡುತ್ತದೆ.
ವಿಶ್ವ ಶೌಚಾಲಯದ ದಿನ ಮಹತ್ವ
ಪ್ರತಿವರ್ಷ ನವೆಂಬರ 19 ರಂದು ಜಾಗತಿಕ ಮಟ್ಟದಲ್ಲಿ ವಿಶ್ವ ಶೌಚಾಲಯ ದಿನವನ್ನು ಆಚರಿಸಲಾಗುತ್ತದೆ. ಇದು ಜಾಗತಿಕ ನೈರ್ಮಲ್ಯ ಬಿಕ್ಕಟ್ಟನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ಮಹತ್ವದ ಜಾಗತಿಕ ಉಪಕ್ರಮವಾಗಿದೆ. 2001 ರಲ್ಲಿ ಶೌಚಾಲಯ ಸಂಸ್ಥೆ ಈ ದಿನವನ್ನು ಘೋಷಿಸಿತು. 2013ರಲ್ಲಿ ವಿಶ್ವಸಂಸ್ಥೆಯು ಈ ದಿನಾಚರಣೆಯನ್ನು ಅಧಿಕೃತಗೊಳಿಸಿತು.
ವಿಶ್ವ ಶೌಚಾಯಲ ದಿನದ ಮಹತ್ವಗಳು
ಜಾಗೃತಿ ಮೂಡಿಸುವುದು: ಪ್ರಪಂಚದಾದ್ಯಂತ 3.5 ಶತಕೋಟಿ ಜನರಿಗೆ ಸುರಕ್ಷಿತವಾಗಿ ನಿರ್ವಹಿಸಲಾದ ಟಾಯ್ಲೆಟ್‌ಗಳಿಲ್ಲ. ಈ ನೈರ್ಮಲ್ಯದ ಕೊರತೆಯು ಕಾಲರಾ ಮತ್ತು ಅತಿಸಾರದಂತಹ ರೋಗಗಳ ಹರಡುವಿಕೆ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಕ್ರಿಯೆಯನ್ನ ಪ್ರತಿಕ್ರಿಯಿಸುವುದು: ನೈರ್ಮಲ್ಯ ಬಿಕ್ಕಟ್ಟನ್ನು ನಿಭಾಯಿಸಲು ಮತ್ತು 2030ರ ವೇಳೆಗೆ ‘ಎಲ್ಲರಿಗೂ ನೀರು ಮತ್ತು ನೈರ್ಮಲ್ಯ‘ ಗುರಿಯನ್ನು ಹೊಂದಿರುವ ಸುಸ್ಥಿರ ಅಭಿವೃದ್ಧಿ ಗುರಿ 6 ಅನ್ನು ಸಾಧಿಸಲು ಈ ದಿನವು ಕ್ರಮವನ್ನು ಪ್ರೋತ್ಸಾಹಿಸುತ್ತದೆ.
ದೌರ್ಬಲ್ಯಗಳನ್ನು ಎತ್ತಿ ತೋರಿಸುವುದು: ಸಂಘರ್ಷ, ಹವಾಮಾನ ಬದಲಾವಣೆ, ವಿಪತ್ತುಗಳು ಮತ್ತು ನಿರ್ಲಕ್ಷ್ಯವು ನೈರ್ಮಲ್ಯ ಸೇವೆಗಳಿಗೆ ಹೇಗೆ ಬೆದರಿಕೆ ಹಾಕುತ್ತದೆ ಎಂಬುದನ್ನು ಇದು ಒತ್ತಿಹೇಳುತ್ತದೆ.
ಶಾಂತಿ, ಘನತೆ ಪ್ರತಿಪಾದಿಸುವುದು: ಸಾರ್ವಜನಿಕ ಮತ್ತು ಪರಿಸರದ ಆರೋಗ್ಯಕ್ಕೆ ಸುರಕ್ಷಿತ ಶೌಚಾಲಯಗಳು ಅತ್ಯಗತ್ಯ, ಇದು ವಿಶೇಷವಾಗಿ ಸಂಘರ್ಷ-ಪೀಡಿತ ಮತ್ತು ದುರ್ಬಲ ಪ್ರದೇಶಗಳಲ್ಲಿ ಘನತೆ ಮತ್ತು ರಕ್ಷಣೆಯನ್ನು ಒದಗಿಸುತ್ತವೆ.
ವಿಶ್ವ ಶೌಚಾಲಯ ದಿನವು ವ್ಯಕ್ತಿಗಳು, ಸಂಸ್ಥೆಗಳು ಮತ್ತು ಸಮುದಾಯಗಳು ಒಟ್ಟಾಗಿ ಸೇರಲು, ಮಾಹಿತಿಯನ್ನು ಹಂಚಿಕೊಳ್ಳಲು ಮತ್ತು ಜಾಗತಿಕವಾಗಿ ಉತ್ತಮ ನೈರ್ಮಲ್ಯ ಅಭ್ಯಾಸಗಳಿಗಾಗಿ ಪ್ರತಿಪಾದಿಸಲು ಒಂದು ವೇದಿಕೆಯಾಗಿದೆ. ಈ ದಿನ ನೈರ್ಮಲ್ಯದ ಅಗತ್ಯವನ್ನು ನಾವು ಅರಿಯಲು ಜೊತೆಗೆ ಬೇರೆಯವರಿಗೆ ತಿಳಿಸುವ ಪ್ರಯತ್ನವನ್ನೂ ಮಾಡಬೇಕು. ಕನಿಷ್ಠ ನಾವಿದ್ದ ಊರನ್ನಾದರೂ ಬಯಲು ಮುಕ್ತ ಶೌಚಾಲಯ ಮಾಡುವ ಪ್ರಯತ್ನ ಮಾಡಬೇಕು. ಒಬ್ಬರು ಮಾಡಿದರೆ ಎಲ್ಲರೂ ಕೈಜೋಡಿಸುತ್ತಾರೆ ಎಂಬುದನ್ನು ಮರೆಯಬಾರದು.