ಟಾಯ್ಲೆಟ್‌ನಲ್ಲಿ ಮೊಬೈಲ್‌ ಬಳಕೆ ಮಾಡ್ತೀರಾ; ಮೂಲವ್ಯಾಧಿ ಸೇರಿದಂತೆ ಹಲವು ಸಮಸ್ಯೆಗಳು ಕಾಡಬಹುದು ಎಚ್ಚರ
ಕನ್ನಡ ಸುದ್ದಿ  /  ಜೀವನಶೈಲಿ  /  ಟಾಯ್ಲೆಟ್‌ನಲ್ಲಿ ಮೊಬೈಲ್‌ ಬಳಕೆ ಮಾಡ್ತೀರಾ; ಮೂಲವ್ಯಾಧಿ ಸೇರಿದಂತೆ ಹಲವು ಸಮಸ್ಯೆಗಳು ಕಾಡಬಹುದು ಎಚ್ಚರ

ಟಾಯ್ಲೆಟ್‌ನಲ್ಲಿ ಮೊಬೈಲ್‌ ಬಳಕೆ ಮಾಡ್ತೀರಾ; ಮೂಲವ್ಯಾಧಿ ಸೇರಿದಂತೆ ಹಲವು ಸಮಸ್ಯೆಗಳು ಕಾಡಬಹುದು ಎಚ್ಚರ

ಟಾಯ್ಲೆಟ್‌ ಮೊಬೈಲ್‌ ಬಳಕೆ ಮಾಡುವ ಅಭ್ಯಾಸ ಇದ್ದರೆ, ಈಗಲೇ ನಿಲ್ಲಿಸಿ. ಇದರಿಂದ ಮೂಲವ್ಯಾಧಿ ಸಮಸ್ಯೆ ಉಲ್ಬಣ ಆಗುತ್ತೆ, ಮಾತ್ರವಲ್ಲ ಇದು ಕರುಳಿಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆ ಕಾರಣಕ್ಕೆ ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ಟಾಯ್ಲೆಟ್‌ಗೆ ಯಾವುದೇ ಕಾರಣಕ್ಕೂ ತೆಗೆದುಕೊಂಡು ಹೋಗದಿರಿ ಎನ್ನುತ್ತಾರೆ ತಜ್ಞರು.

ಟಾಯ್ಲೆಟ್‌ನಲ್ಲಿ ಮೊಬೈಲ್‌ ಬಳಕೆ ಮಾಡ್ತೀರಾ; ಮೂಲವ್ಯಾಧಿ ಸೇರಿದಂತೆ ಹಲವು ಸಮಸ್ಯೆಗಳು ಕಾಡಬಹುದು ಎಚ್ಚರ
ಟಾಯ್ಲೆಟ್‌ನಲ್ಲಿ ಮೊಬೈಲ್‌ ಬಳಕೆ ಮಾಡ್ತೀರಾ; ಮೂಲವ್ಯಾಧಿ ಸೇರಿದಂತೆ ಹಲವು ಸಮಸ್ಯೆಗಳು ಕಾಡಬಹುದು ಎಚ್ಚರ

ಇತ್ತೀಚೆಗೆ ಹಲವರಿಗೆ ಟಾಯ್ಲೆಟ್‌ನಲ್ಲಿ ಮೊಬೈಲ್‌ ಬಳಕೆ ಮಾಡುವ ಅಭ್ಯಾಸ ರೂಢಿಯಾಗಿದೆ. ಹೀಗಾಗಿ ಗಂಟೆಗಟ್ಟಲೆ ಟಾಯ್ಲೆಟ್‌ನಲ್ಲಿ ಕುಳಿತಿರುತ್ತಾರೆ. ಮೊಬೈಲ್‌ನಲ್ಲಿ ಸ್ಕ್ರೋಲ್‌ ಮಾಡುತ್ತಾ ಸಾಮಾಜಿಕ ಜಾಲತಾಣ ಸೇರಿದಂತೆ ರೀಲ್ಸ್‌ಗಳನ್ನು ನೋಡುತ್ತಾ ಟಾಯ್ಲೆಟ್‌ನಲ್ಲಿ ಸಮಯ ಕಳೆಯುತ್ತಾರೆ. ಇದು ಆ ಕ್ಷಣಕ್ಕೆ ಖುಷಿ ನೀಡಬಹುದು. ಆದರೆ ಈ ಅಭ್ಯಾಸ ಖಂಡಿತ ಅಷ್ಟು ಉತ್ತಮವಲ್ಲ ಎನ್ನುತ್ತವೆ ಅಧ್ಯಯನಗಳು.

ಇತ್ತೀಚೆಗೆ ಸ್ಟ್ಯಾನ್‌ಫೋರ್ಡ್‌ ಮತ್ತು ಹಾರ್ವರ್ಡ್‌ನಲ್ಲಿ ತರಬೇತಿ ಪಡೆದ ಗ್ಯಾಸ್ಟ್ರೋಎಂಟರಾಲಜಿಸ್ಟ್ ಪ್ರಕಾರ ಟಾಯ್ಲೆಟ್‌ನಲ್ಲಿ ಸ್ಮಾರ್ಟ್‌ಫೋನ್‌ ಬಳಕೆ ಮಾಡುವುದು ಅಷ್ಟೊಂದು ಉತ್ತಮವಲ್ಲ.

ಡಾ. ಸೌರಬ್‌ ಸೇಥಿ ಎನ್ನುವವರು ಟಿಕ್‌ಟಾಕ್‌ (ಭಾರತದಲ್ಲಿ ಬಳಕೆಯಲ್ಲಿಲ್ಲ) ವಿಡಿಯೊದಲ್ಲಿ ಟಾಯ್ಲೆಟ್‌ನಲ್ಲಿ ಮೊಬೈಲ್‌ ಫೋನ್‌ ಬಳಕೆ ಮಾಡುವುದರಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ತಿಳಿಸಿದ್ದಾರೆ. ಅವರ ಪ್ರಕಾರ ಇದರಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗಬಹುದು ಮಾತ್ರವಲ್ಲ ಇದು ಮೂಲವ್ಯಾಧಿಗೂ ಕಾರಣವಾಗಬಹುದು.

ಕೇರ್‌ ಆಸ್ಪತ್ರೆಯ ಬಾರಿಯಾಟ್ರಿಕ್‌ ಮತ್ತು ಜಿಐ ಶಸ್ತ್ರಚಿಕಿತ್ಸೆಯ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣಮೋಹನ್‌ ವೈ. ಅವರ ಪ್ರಕಾರ ಶೌಚಾಲಯದಲ್ಲಿ ಮೊಬೈಲ್‌ ಬಳಸುವುದರಿಂದ ಮೂಲವ್ಯಾಧಿಯ ಮೇಲೆ ನೇರ ಪರಿಣಾಮ ಬೀರುವುದಿಲ್ಲ. ಆದರೆ ಇದು ಪರೋಕ್ಷವಾಗಿ ಮೂಲವ್ಯಾಧಿಗೆ ಕಾರಣವಾಗಬಹುದು. ದೀರ್ಘಕಾಲ ಟಾಯ್ಲೆಟ್‌ನಲ್ಲಿ ಕುಳಿತೇ ಇರುವುದು ಈಗಾಗಲೇ ಅಸ್ತಿತ್ವದಲ್ಲಿರುವ ಮೂಲವ್ಯಾಧಿ ಸಮಸ್ಯೆಯನ್ನು ಉಲ್ಬಣಗೊಳಿಸಬಹುದು.

ಮೂಲ ವ್ಯಾಧಿ ಎಂದರೇನು?

ಮೂಲವ್ಯಾಧಿ ಅಥವಾ ಫೈಲ್ಸ್‌ ಎಂದು ಕರೆಯಲ್ಪಡುವ ಈ ಸಮಸ್ಯೆಯು ಗುದನಾಳದ ಕೆಳಭಾಗ ಮತ್ತು ಗುದದ್ವಾರದ ಬಳಿ ಊದಿಕೊಂಡು ಅಸ್ವಸ್ಥತೆ ಮತ್ತು ರಕ್ತಸ್ರಾವವನ್ನು ಉಂಟು ಮಾಡಬಹುದು. ಇದು ಗುದನಾಳದ ಗಾತ್ರವನ್ನು ಚಿಕ್ಕದಾಗಿಸುತ್ತದೆ. ಇದರಿಂದ ಗುದನಾಳದ ಮೇಲೆ ಒತ್ತಡ ಉಂಟಾಗುತ್ತದೆ. ಇದರಿಂದ ಸರಾಗ ಮಲ ವಿರ್ಸಜನೆಗೆ ತೊಂದರೆ ಉಂಟಾಗಬಹುದು. ಅಲ್ಲದೆ ಮಲ ವಿರ್ಸಜನೆಯ ಸಮಯದಲ್ಲಿ ಆಯಾಸವಾಗುವುದು, ದೀರ್ಘಕಾಲದ ಮಲಬದ್ಧತೆ, ಅತಿಸಾರ, ತೂಕ ಹೆಚ್ಚಳ ಮುಂತಾದ ತೊಂದರೆಗಳು ಎದುರಾಗಬಹುದು.

ಟಾಯ್ಲೆಟ್‌ನಲ್ಲಿ ಫೋನ್‌ ಬಳಸುವುದರಿಂದ ಪೈಲ್ಸ್‌ ಬರಲು ಕಾರಣ ಏನು ಎಂಬುದನ್ನು ವಿವರಿಸಿದ್ದಾರೆ ಡಾ. ಕೃಷ್ಣ ಮೋಹನ್‌. ಇವರು ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ದೀರ್ಘಕಾಲ ಕುಳಿತುಕೊಳ್ಳುವುದು

ಟಾಯ್ಲೆಟ್‌ನಲ್ಲಿ ಫೋನ್‌ ಬಳಸುವುದರಿಂದ ದೀರ್ಘಕಾಲ ಅಲ್ಲೇ ಕುಳಿತುಕೊಂಡಿರುತ್ತೇವೆ. ಇದು ಗುದುನಾಳದ ಪ್ರದೇಶದಲ್ಲಿ ಸಿರೆಗಳ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ. ದೀರ್ಘಕಾಲ ಟಾಯ್ಲೆಟ್‌ನಲ್ಲಿ ಕುಳಿತುಕೊಳ್ಳುವುದರಿಂದ ಮೂಲವ್ಯಾಧಿ ಸಮಸ್ಯೆ ಹೆಚ್ಚುತ್ತದೆ. ಅಲ್ಲದೆ ಮೂಲವ್ಯಾಧಿ ಸಮಸ್ಯೆ ಹೆಚ್ಚಲು ಇದು ಪರೋಕ್ಷವಾಗಿ ಕಾರಣವಾಗುತ್ತದೆ. ಜಡಜೀವನಶೈಲಿಗೆ ಇದು ಕೊಡುಗೆ ನೀಡಬಹುದು. ಅಲ್ಲದೆ ವಿವಿಧ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಇದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆ ಮತ್ತು ಕರುಳಿನ ಆರೋಗ್ಯಕ್ಕೆ ಸಂಬಂಧಿಸಿದ ತೊಂದರೆಗಳು ಎದುರಾಗಬಹುದು.

ಆಯಾಸ

ಫೋನ್‌ನಲ್ಲಿ ಹೆಚ್ಚು ಹೊತ್ತು ಮುಳುಗಿರುವುದು ಮಾನಸಿಕ ವ್ಯಾಕುಲತೆಗೂ ಕಾರಣವಾಗಬಹುದು. ಇದು ದೀರ್ಘಕಾಲದ ಮತ್ತು ಒತ್ತಡದ ಕರುಳಿನ ಚಲನೆಗೆ ಕಾರಣವಾಗಬಹುದು. ಮಲವಿರ್ಸಜನೆಯ ಸಮಯದಲ್ಲಿ ಆಯಾಸಗೊಳ್ಳುವುದು ಮೂಲವ್ಯಾಧಿಗೆ ಸಂಬಂಧಿಸಿದ ಪ್ರಮುಖ ಅಪಾಯಗಳಲ್ಲಿ ಒಂದು. ಸಾವಧಾನತೆಯ ಕೊರತೆಯು ಅನಿಯಮಿತ ಕರುಳಿನ ಅಭ್ಯಾಸಗಳಿಗೆ ಕಾರಣವಾಗಬಹುದು. ಇದು ಮಲಬದ್ಧತೆ ಮತ್ತು ಅತಿಸಾರಕ್ಕೆ ಸಂಭಾವ್ಯ ಕಾರಣವಾಗಬಹುದು. ಅಲ್ಲದೆ ಇವೆರಡೂ ಕಾಯಿಲೆಯೊಂದಿಗೆ ನೇರ ಸಂಪರ್ಕ ಹೊಂದಿವೆ.

ಕಳಪೆ ಭಂಗಿ

ಫೋನ್‌ ಬಳಸಲು ಬಾಗುವುದು ಶೌಚಾಲಯದ ಕಳಪೆ ಭಂಗಿಗೆ ಕಾರಣವಾಗುತ್ತದೆ. ಇದು ಗುದನಾಳದ ಪ್ರದೇಶವನ್ನು ಮತ್ತಷ್ಟು ತಗ್ಗಿಸಬಹುದು ಮತ್ತು ಮೂಲವ್ಯಾಧಿ ಹೆಚ್ಚಳಕ್ಕೆ ಕೊಡುಗೆ ನೀಡುತ್ತದೆ.

ಉತ್ತಮ ಜೀರ್ಣಕಾರಿ ಆರೋಗ್ಯವನ್ನು ಉತ್ತೇಜಿಸಲು ಮತ್ತು ಮೂಲವ್ಯಾಧಿ ಅಪಾಯವನ್ನು ಕಡಿಮೆ ಮಾಡಲು ಶೌಚಾಲಯದಲ್ಲಿ ಉತ್ತಮ ಭಂಗಿಯಲ್ಲಿ ಕುಳಿತುಕೊಳ್ಳುವುದು, ಶೌಚಾಲಯದಲ್ಲಿ ಕಳೆಯುವ ಸಮಯವನ್ನು ಮಿತಿಗೊಳಿಸುವುದು, ಕರುಳಿನ ಚಲನೆಯ ಸಮಯದಲ್ಲಿ ಆಯಾಸಗೊಳ್ಳುವುದನ್ನು ತಪ್ಪಿಸುವುದು, ಸಾಕಷ್ಟು ನಾರಿನಾಂಶ ಹಾಗೂ ನೀರಿನಾಂಶ ಇರುವ ಸಮತೋಲಿತ ಆಹಾರವನ್ನು ಸೇವಿಸುವುದು ಮುಖ್ಯವಾಗುತ್ತದೆ.

Whats_app_banner