Shane Warne Biopic: ಶೇನ್ ವಾರ್ನ್ ಬಯೋಪಿಕ್; ಬೆಡ್ರೂಮ್ ಖಾಸಗಿ ದೃಶ್ಯದ ಶೂಟಿಂಗ್ ವೇಳೆ ಎಡವಟ್ಟು; ಮಂಚದಿಂದ ಬಿದ್ದ ನಟ-ನಟಿಗೆ ತೀವ್ರ ಗಾಯ
Jun 23, 2023 01:32 PM IST
ಶೇನ್ ವಾರ್ನ್ ಬಯೋಪಿಕ್ನಲ್ಲಿ ನಟಿಸುತ್ತಿದ್ದ ನಟಿ ನಟಿಗೆ ಗಾಯ
- ಆಸ್ಟ್ರೇಲಿಯನ್ ಲೆಜೆಂಡರಿ ಸ್ಪಿನ್ನರ್ ಶೇನ್ ವಾರ್ನ್ ಅವರ ಬಯೋಪಿಕ್ ಶೂಟಿಂಗ್ ಸಂದರ್ಭದಲ್ಲಿ ಅಲೆಕ್ಸ್ ವಿಲಿಯಮ್ಸ್ ಮತ್ತು ಮಾರ್ನಿ ಕೆನಡಿ ಮಂಚದಿಂದ ಬಿದ್ದು ಗಾಯಗೊಂಡಿದ್ದಾರೆ.
ದಶಕಗಳ ಕಾಲ ತನ್ನ ಸ್ಪಿನ್ ಮಾಂತ್ರಿಕತೆಯಿಂದ ಕ್ರಿಕೆಟ್ (cricket) ಲೋಕದ ರಾಜನಾಗಿ ಮೆರೆದಾಡಿದ್ದ ಆಸ್ಟ್ರೇಲಿಯಾದ ಮಾಜಿ ಲೆಗ್ ಸ್ಪಿನ್ನರ್ ಶೇನ್ ವಾರ್ನ್ (Shane Warne) ಅವರು ಕಳೆದ ವರ್ಷದ ಮಾರ್ಚ್ನಲ್ಲಿ ಹೃದಯಘಾತದಿಂದ ನಿಧನರಾಗಿದ್ದರು. ಶೇನ್ ವಾರ್ನ್ ಅವರ ಅಕಾಲಿಕ ಮರಣದಿಂದ ಇಡೀ ಕ್ರಿಕೆಟ್ ಜಗತ್ತೇ ಆಘಾತಕ್ಕೊಳಗಾಗಿತ್ತು. ಸದ್ಯ ಅವರ ಜೀವನ ಚಿತ್ರಣ ಸಿನಿಮಾ ರೂಪದಲ್ಲಿ ತಯಾರಾಗುತ್ತಿದೆ.
ಆದರೀಗ ಬಂದಿರುವ ಮಾಹಿತಿ ಪ್ರಕಾರ, ಶೇನ್ ವಾರ್ನ್ ಅವರ ಬಯೋಪಿಕ್ (Shane Warne Biopic) ಚಿತ್ರೀಕರಣ ಸ್ಥಗಿತವಾಗಿದೆ. ಶೂಟಿಂಗ್ ವೇಳೆ ನಡೆದ ಅಪಘಾತದಲ್ಲಿ ನಟ-ನಟಿ ಗಾಯಗೊಂಡು ಆಸ್ಪತ್ರೆಗೆ ದಾಖಲು ಆಗಿದ್ದಾರೆ. ಚಿತ್ರದಲ್ಲಿ ಶೇನ್ ವಾರ್ನ್ ತನ್ನ ಪತ್ನಿಯೊಂದಿಗೆ ಬೆಡ್ರೂಮ್ನಲ್ಲಿ ಲೈಂಗಿಕ ದೃಶ್ಯದಲ್ಲಿ ನಟಿಸುತ್ತಿದ್ದಾಗ ಎಡವಟ್ಟಾಗಿ ನಟ-ನಟಿ ಮಂಚದಿಂದ ಬಿದ್ದು ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಲೆಕ್ಸ್ ಮತ್ತು ಕೆನಡಿಗೆ ಗಾಯ
ಬಯೋಪಿಕ್ನಲ್ಲಿ ವಾರ್ನ್ ಪಾತ್ರದಲ್ಲಿ ಆಸ್ಟ್ರೇಲಿಯಾದ ನಟ ಅಲೆಕ್ಸ್ ವಿಲಿಯಮ್ಸ್ (Alex Williams), ವಾರ್ನ್ ಪತ್ನಿಯ ಸಿಮೊನ್ ಕ್ಯಾಲಹಾನ್ (Simone Callahan) ಪಾತ್ರದಲ್ಲಿ ಮಾರ್ನಿ ಕೆನಡಿ (Marnie Keneddy) ನಟಿಸುತ್ತಿದ್ದು, ಚಿತ್ರೀಕರಣದ ವೇಳೆ ಗಾಯಗೊಂಡಿದ್ದಾರೆ. ಇಬ್ಬರೂ ಬೆಡ್ರೂಮ್ ಖಾಸಗಿ ದೃಶ್ಯದ ವೇಳೆ ಆಯತಪ್ಪಿ ಬಿದ್ದಿದ್ದಾರೆ. ಕೆಳಗೆ ಬಿದ್ದ ಬೆನ್ನಲ್ಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿತ್ರೀಕರಣ ನಿಲ್ಲಿಸಿದ ಚಿತ್ರ ತಂಡ ನಟನನ್ನು ತುರ್ತು ವಿಭಾಗಕ್ಕೆ ಸೇರಿಸಿತು.
ಘಟನೆ ವಿವರಿಸಿದ ನಟಿ
ಈ ಘಟನೆಯ ಕುರಿತು ನಟಿ ಕೆನಡಿ ವಿವರಿಸಿದ್ದಾರೆ. ಆಯ ತಪ್ಪಿ ಬಿದ್ದ ಕಾರಣ ಒಟ್ಟಿಗೆ ನೆಲಕ್ಕೆ ಬಿದ್ದೆವು ಎಂದು ಹೇಳಿದ್ದಾರೆ. ಶೇನ್ ವಾರ್ನ್ ಮತ್ತು ಸಿಮೊನ್ ಕ್ಯಾಲಹಾನ್ ಅವರ ಲೈಂಗಿಕ ದೃಶ್ಯದ ಶೂಟಿಂಗ್ ಇದಾಗಿತ್ತು. ಇಬ್ಬರು ಹಾಸಿಗೆಯ ಮೇಲೆ ನಿಂತು ನಟಿಸುವಾಗ ಇದ್ದಕ್ಕಿದ್ದಂತೆ ಮಂಚದಿಂದ ಕೆಳಕ್ಕೆ ಬಿದ್ದೆವು. ಈ ದೃಶ್ಯದಲ್ಲಿ ಅಲೆಕ್ಸ್ ಮತ್ತು ನಾನು ಒಟ್ಟಿಗೆ ಮಂಚದ ಮೇಲೆ ಬೀಳಬೇಕಿತ್ತು. ಈ ಪ್ರಸಂಗದ ವೇಳೆ ಸಮತೋಲನ ಕಳೆದುಕೊಂಡು ಕೆಳಗೆ ಬಿದ್ದೆವು. ಇಬ್ಬರಿಗೂ ತುಂಬಾ ಗಾಯಗಳಾಗಿವೆ. ಅಲೆಕ್ಸ್ ಅವರ ತಲೆಗೆ ದೊಡ್ಡ ಪೆಟ್ಟು ಹಿನ್ನೆಲೆ ರಕ್ತವು ಹೆಚ್ಚು ಸೋರುತ್ತಿತ್ತು. ಬ್ಯಾಂಡೇಜ್ ಹಾಕಲಾಗಿದೆ. ನನ್ನ ಕೈ ಮಣಿಕಟ್ಟಿಗೂ ಗಾಯವಾಗಿದೆ ಎಂದು ಡೈಲಿ ಟೆಲಿಗ್ರಾಫ್ಗೆ ಮಾಹಿತಿ ನೀಡಿದ್ದಾರೆ.
ಆಸ್ಟ್ರೇಲಿಯನ್ ಲೆಜೆಂಡ್ ಶೇನ್ ವಾರ್ನ್ ಅವರ ಜೀವನದ ಕುರಿತ ಕಿರು ಸರಣಿಗೆ ‘ವಾರ್ನೆ’ ಎಂಬ ಹೆಸರನ್ನು ಇಡಲಾಗಿದೆ. ಈ ಬಯೋಪಿಕ್ ಎರಡು ಭಾಗಗಳಲ್ಲಿ ಟಿವಿಯಲ್ಲಿ ಪ್ರಸಾರವಾಗಲಿದೆ. 1969ರಲ್ಲಿ ಜನಿಸಿದ ಶೇನ್ ವಾರ್ನ್, ಮಾರ್ಚ್ 4, 2022 ರಂದು ಥೈಲ್ಯಾಂಡ್‌ನ ವಿಲ್ಲಾವೊಂದರಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದರು.
ಅವರ ವಿವಾದಗಳು
ಅತ್ಯಂತ ಯಶಸ್ವಿ ಕ್ರಿಕೆಟಿಗನಾಗಿ ಹಲವು ಪ್ರಶಸ್ತಿಗಳು, ದಾಖಲೆಗಳನ್ನು ಬರೆದಿರುವ ವಾರ್ನ್, ವಿವಾದಗಳಿಂದಲೇ ಹೆಚ್ಚು ಸುದ್ದಿಯಾದವರು. ಅದರಲ್ಲೂ ಲೈಂಗಿಕ ಹಗರಣಗಳೇ ಅಧಿಕ. 10 ವರ್ಷಗಳ ದಾಂಪತ್ಯದ ನಂತರ ಸಿಮೋನ್ ಕ್ಯಾಲಹಾನ್‌ಗೆ ವಿಚ್ಛೇದನ ನೀಡಿದ ಶೇನ್ ವಾರ್ನ್, ಹಲವು ಮಂದಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದರು. ಇದನ್ನು ಸ್ವತಃ ಶೇನ್ ವಾರ್ನ್ ಅವರೇ ಒಪ್ಪಿಕೊಂಡಿದ್ದರು.
ಹಾಲಿವುಡ್ ನಾಯಕಿ ಎಲಿಜಬೆತ್ ಹರ್ಲಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ವಾರ್ನ್ 2 ವರ್ಷಗಳ ನಂತರ ಆ ಸಂಬಂಧವನ್ನು ಮುರಿದುಕೊಂಡರು. ಅದರ ನಂತರ, ಮಾಡೆಲ್ ಡಿಜೆ ಎಮಿಲಿ ಸ್ಕಾಟ್ ಅವರೊಂದಿಗೆ ಸಹ ಸಂಬಂಧ ಹೊಂದಿದ್ದರು. 2019ರಲ್ಲಿ ಶೇನ್ ವಾರ್ನ್ ಲಂಡನ್‌ನಲ್ಲಿ ನಾಲ್ವರು ಲೈಂಗಿಕ ಕಾರ್ಯಕರ್ತೆಯರೊಂದಿಗೆ ಲೈಂಗಿಕ ಕ್ರಿಯೆ ನಡೆಸಿ ಸಿಕ್ಕಿಬಿದ್ದಿದ್ದರು. ವಾರ್ನ್ ತನ್ನ ಮನೆಯ ಕಿಟಕಿಗಳನ್ನು ತೆರೆದು ಸಂಭೋಗಿಸುವ ಮೂಲಕ ನೆರೆಮನೆಯವರಿಗೆ ತೊಂದರೆ ಕೊಟ್ಟಿದ್ದರು.
ಸದ್ಯ ಅವರ ಬಯೋಪಿಕ್ನಲ್ಲಿ ಜೀವನಚರಿತ್ರೆಯಲ್ಲಿ ಪ್ರಣಯ ಪ್ರಸಂಗಗಳ ಜೊತೆಗೆ ಅವರ ಅಕ್ರಮ ಸಂಬಂಧಗಳ ಕುರಿತು ಸಹ ತೋರಿಸಲಾಗುತ್ತಿದೆ. ಆಸ್ಟ್ರೇಲಿಯನ್ ಕ್ರಿಕೆಟ್ ದಂತಕಥೆ ಶೇನ್ ವಾರ್ನ್ ವಿಶ್ವ ಕ್ರಿಕೆಟ್‌ನಲ್ಲಿ 1000 ವಿಕೆಟ್ ಪಡೆದ ಮೊದಲ ಬೌಲರ್. ಐಪಿಎಲ್ನಲ್ಲಿ ಪ್ರಶಸ್ತಿ ಗೆದ್ದ ಮೊದಲ ನಾಯಕ ಮತ್ತು ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಆಗಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು.