logo
ಕನ್ನಡ ಸುದ್ದಿ  /  Sports  /  Cricket News Australia Opener David Warner Stuns By Announcing Test Retirement Date Ahead Of Wtc Final Vs India Prs

David Warner: ಟೆಸ್ಟ್​ಗೆ​ ನಿವೃತ್ತಿ ದಿನಾಂಕ ಘೋಷಿಸಿದ ಡೇವಿಡ್​ ವಾರ್ನರ್​; ಈ ಸರಣಿಯೇ ನನ್ನ ಪಾಲಿಗೆ ಕೊನೆ ಎಂದ ಎಡಗೈ ಬ್ಯಾಟ್ಸ್​​ಮನ್

Prasanna Kumar P N HT Kannada

Jun 04, 2023 10:45 AM IST

ಟೆಸ್ಟ್​ ಕ್ರಿಕೆಟ್​ಗೆ​ ನಿವೃತ್ತಿ ದಿನಾಂಕ ಘೋಷಿಸಿದ ಡೇವಿಡ್​ ವಾರ್ನರ್

    • ಇಂಗ್ಲೆಂಡ್​​ನ ಓವಲ್​ ಮೈದಾನದಲ್ಲಿ ನಡೆಯಲಿರುವ ಡಬ್ಲ್ಯಟಿಸಿ ಫೈನಲ್ (WTC final)​​​​​​ ಪಂದ್ಯಕ್ಕೂ ಮುನ್ನ ಮಾತನಾಡಿದ ಡೇವಿಡ್​ ವಾರ್ನರ್ (David Warner)​, ಮುಂಬರುವ ಬೇಸಿಗೆಯ ಕೊನೆಯಲ್ಲಿ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಲು ನಿರ್ಧರಿಸಿರುವುದಾಗಿ ಬಹಿರಂಗಪಡಿಸಿದ್ದಾರೆ.
ಟೆಸ್ಟ್​ ಕ್ರಿಕೆಟ್​ಗೆ​ ನಿವೃತ್ತಿ ದಿನಾಂಕ ಘೋಷಿಸಿದ ಡೇವಿಡ್​ ವಾರ್ನರ್
ಟೆಸ್ಟ್​ ಕ್ರಿಕೆಟ್​ಗೆ​ ನಿವೃತ್ತಿ ದಿನಾಂಕ ಘೋಷಿಸಿದ ಡೇವಿಡ್​ ವಾರ್ನರ್

ಭಾರತ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೆ (WTC Final) ಕೇವಲ ನಾಲ್ಕು ದಿನಗಳು ಬಾಕಿ ಇರುವಾಗ ಆಸ್ಟ್ರೇಲಿಯಾದ ಅನುಭವಿ ಆಟಗಾರ ಡೇವಿಡ್​ ವಾರ್ನರ್ (David Warner)​​ ಟೆಸ್ಟ್​ ಕ್ರಿಕೆಟ್ ನಿವೃತ್ತಿಯ ಕುರಿತು ತುಟಿಬಿಚ್ಚಿದ್ದಾರೆ. ಇಂಗ್ಲೆಂಡ್​​ನ ಓವಲ್​ ಮೈದಾನದಲ್ಲಿ ನಡೆಯಲಿರುವ ಫೈನಲ್​​​​​​ ಪಂದ್ಯಕ್ಕೂ ಮುನ್ನ ಮಾತನಾಡಿದ 36 ವರ್ಷದ ಆಟಗಾರ, ಮುಂಬರುವ ಬೇಸಿಗೆಯ ಕೊನೆಯಲ್ಲಿ ಸುದೀರ್ಘ ಟೆಸ್ಟ್ ವೃತ್ತಿಜೀವನಕ್ಕೆ ಅಂತ್ಯ ಹಾಡಲು ನಿರ್ಧರಿಸಿರುವುದಾಗಿ ಬಹಿರಂಗಪಡಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ದೇಶಕ್ಕಾಗಿ ಪದಕ ಗೆಲ್ಲುವುದೇ ನನ್ನ ಗುರಿ; ಅದಕ್ಕಾಗಿ ತೂಕ ಕಾಪಾಡಿಕೊಳ್ಳಬೇಕು ಎಂದ ವಿನೇಶ್ ಫೋಗಟ್

ಪ್ಯಾರಿಸ್ ಒಲಿಂಪಿಕ್ಸ್​ಗೆ ಅರ್ಹತೆ ಗಳಿಸಿದ ಭಾರತದ 7 ಷಟ್ಲರ್​​ಗಳು; ಅರ್ಹತೆ; ಕನ್ನಡತಿ ಅಶ್ವಿನಿ ಪೊನ್ನಪ್ಪ, ಪಿವಿ ಸಿಂಧುಗೆ ಅವಕಾಶ

1900 ರಿಂದ 2020ರ ತನಕ; 120 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಗೆದ್ದಿರುವ ಪದಕಗಳೆಷ್ಟು? ವರ್ಷವಾರು ಒಂದು ನೋಟ

ಟೀಮ್​ ಇಂಡಿಯಾ ಎದುರಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ತಯಾರಿ ನಡೆಸುತ್ತಿರುವ ಡೇವಿಡ್ ವಾರ್ನರ್, ಮುಂದಿನ ಬೇಸಿಗೆ ಋತುವಿನೊಂದಿಗೆ ಟೆಸ್ಟ್ ಸ್ವರೂಪವನ್ನು (David Warner Retire) ತೊರೆಯಲಿದ್ದಾರೆ. 2024ರ ಜನವರಿಯಲ್ಲಿ ಸಿಡ್ನಿಯಲ್ಲಿ ನಡೆಯಲಿರುವ ಪಾಕಿಸ್ತಾನ (Pakistan) ವಿರುದ್ಧದ ಟೆಸ್ಟ್ ಪಂದ್ಯವೇ ತಮ್ಮ ವೃತ್ತಿಜೀವನದ ಕೊನೆಯ ಟೆಸ್ಟ್ ಆಗಿರಬಹುದು ಎಂದು ಸುಳಿವು ಕೊಟ್ಟಿದ್ದಾರೆ. ಆದರೆ ಅನುಭವಿ ಆಟಗಾರ, 2024ರ ಟಿ20 ವಿಶ್ವಕಪ್‌ (T20 World Cup) ಆಡುವುದಾಗಿಯೂ ಹೇಳಿದ್ದಾರೆ.

ಆದರೆ 2024ರ ಟಿ20 ವಿಶ್ವಕಪ್ ಟೂರ್ನಿಯ ನಂತರ ಚುಟುಕು ಕ್ರಿಕೆಟ್​​ ಕರಿಯರ್ ಕೂಡ ಕೊನೆಗೊಳ್ಳಲಿದೆ. ನಾನು ಡಬ್ಲ್ಯುಟಿಸಿ ಫೈನಲ್, ಆ್ಯಶಸ್ ಸರಣಿಯಲ್ಲಿ ಉತ್ತಮ ರನ್ ಗಳಿಸಿದರೆ, ಖಂಡಿತವಾಗಿಯೂ ಆಸ್ಟ್ರೇಲಿಯಾದಲ್ಲಿ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿ ಆಡುತ್ತೇನೆ. ಅದರ ನಂತರ ನಾನು ವೆಸ್ಟ್ ಇಂಡೀಸ್ ಸರಣಿಯನ್ನು ಆಡುವುದಿಲ್ಲ. ಒಂದು ವೇಳೆ ಫೈನಲ್‌ನಲ್ಲಿ ವಿಫಲವಾದರೆ, ಪಾಕಿಸ್ತಾನದ ಸರಣಿಯಲ್ಲಿ ಇರುತ್ತೇನೆಯೇ ಅಥವಾ ಇಲ್ಲವೇ ಎಂದು ಹೇಳಲು ಸಾಧ್ಯವಿಲ್ಲ ಎಂದು ವಾರ್ನರ್ ಪ್ರತಿಕ್ರಿಯಿಸಿದ್ದಾರೆ.

ವಾರ್ನರ್ ತಮ್ಮ ವೃತ್ತಿ ಜೀವನದಲ್ಲಿ 103 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 45.58ರ ಸರಾಸರಿಯಲ್ಲಿ 8158 ರನ್ ಗಳಿಸಿದ್ದಾರೆ. 25 ಶತಕ, 34 ಅರ್ಧಶತಕಗಳನ್ನೂ ಗಳಿಸಿದ್ದಾರೆ. ಇದರಲ್ಲಿ 3 ದ್ವಿಶತಕ ಹಾಗೂ ತ್ರಿಶತಕ ಕೂಡ ಇದೆ. ಬೌಲಿಂಗ್​ನಲ್ಲೂ 4 ವಿಕೆಟ್ ಕಬಳಿಸಿದ್ದಾರೆ. ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾ ನಾಯಕನಾಗಿದ್ದ ಸಂದರ್ಭದಲ್ಲಿ ಡೇವಿಡ್ ವಾರ್ನರ್ ಉಪನಾಯಕರಾಗಿದ್ದರು.

ಆದರೆ, 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸ್ಯಾಂಡ್‌ಪೇಪರ್ ಬಾಲ್ ಟ್ಯಾಂಪರಿಂಗ್ (Ball Tampering) ವಿವಾದದಿಂದಾಗಿ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್​​ ಇಬ್ಬರಿಗೂ ಕ್ರಿಕೆಟ್ ಆಸ್ಟ್ರೇಲಿಯಾ (Cricket Australia) ಒಂದು ವರ್ಷ ನಿಷೇಧ ಹೇರಿತ್ತು. ವಾರ್ನರ್​ಗೆ ಆಜೀವ ನಾಯಕತ್ವದ ನಿಷೇಧ ಹೇರಲಾಗಿದೆ. 9 ತಿಂಗಳಿಂದ ಈ ನಿಷೇಧವನ್ನು ತೆಗೆದುಹಾಕುವಂತೆ ಕ್ರಿಕೆಟ್ ಆಸ್ಟ್ರೇಲಿಯಾಗೆ ಕೋರುತ್ತಿದ್ದಾರೆ. ಆದರೆ ಸರಿಯಾಗಿ ಸ್ಪಂದಿಸುತ್ತಿಲ್ಲ.

2011ರಲ್ಲಿ ಶೇನ್ ವ್ಯಾಟ್ಸನ್ (Shane Watson) ಗಾಯಗೊಂಡಿದ್ದಾಗ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದ ಡೇವಿಡ್ ವಾರ್ನರ್, ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 3 ರನ್‌ಗಳಿಗೆ ಔಟಾದರು. 2ನೇ ಇನ್ನಿಂಗ್ಸ್‌ನಲ್ಲಿ 12 ರನ್ ಗಳಿಸಿ ಔಟಾಗದೆ ಉಳಿದಿದ್ದರು. 2ನೇ ಟೆಸ್ಟ್‌ನಲ್ಲಿ ಶತಕ ಬಾರಿಸುವ ಮೂಲಕ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು. ಸದ್ಯ ಡಬ್ಲ್ಯುಟಿಸಿ ಫೈನಲ್​ ನಂತರ ಇಂಗ್ಲೆಂಡ್​ ವಿರುದ್ಧ ಆ್ಯಷಸ್​ ಸರಣಿ ಆಡಲಿದ್ದಾರೆ.

ಐಪಿಎಲ್ 2023ರ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಪರ ಟಾಪ್ ಸ್ಕೋರರ್ ಆಗಿದ್ದ ಡೇವಿಡ್ ವಾರ್ನರ್, 14 ಪಂದ್ಯಗಳಲ್ಲಿ 516 ರನ್ ​ಗಳಿಸಿದರು. ಐಪಿಎಲ್‌ನಲ್ಲಿ ಹೆಚ್ಚಿನ ಸೀಸನ್‌ಗಳಲ್ಲಿ 500+ ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಈ ಋತುವಿನಲ್ಲಿ 6 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಹೆಸರಿಗೆ ಆಸ್ಟ್ರೇಲಿಯಾ ಕ್ರಿಕೆಟಿಗರಾಗಿದ್ದರೂ ಡೇವಿಡ್ ವಾರ್ನರ್ ಭಾರತದಲ್ಲಿ ಅಪಾರ ಅಭಿಮಾನಿಗಳು ಮತ್ತು ಕ್ರೇಜ್ ಹೊಂದಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು