ಕನ್ನಡ ಸುದ್ದಿ  /  Sports  /  Cricket News How Many More Years Will They Be Humiliated Like This David Warner Slams Ca Over Leadership Ban Row Prs

David Warner: ದೊಡ್ಡ ತಪ್ಪೇನು ಮಾಡಿದ್ದೇನೆ, ಇನ್ನೆಷ್ಟು ವರ್ಷ ಈ ಅಪಮಾನ; ನಾಯಕತ್ವ ನಿಷೇಧ ತೆರವುಗೊಳಿಸಲು ಡೇವಿಡ್​ ವಾರ್ನರ್ ಮತ್ತೆ​ ಮನವಿ

ಚೆಂಡು ವಿರೂಪ ಪ್ರಕರಣದಿಂದ (Ball Tampering Scandal) ಅಜೀವ ನಾಯಕತ್ವದ ನಿಷೇಧವನ್ನು ತೆರವುಗೊಳಿಸುವಂತೆ ಡೇವಿಡ್​ ವಾರ್ನರ್ (David Warner), ಕ್ರಿಕೆಟ್​ ಆಸ್ಟ್ರೇಲಿಯಾಗೆ (Cricket Australia) ಮತ್ತೆ ಮನವಿ ಮಾಡಿದ್ದಾರೆ.

ನಾಯಕತ್ವ ನಿಷೇಧ ತೆರವುಗೊಳಿಸಲು ಡೇವಿಡ್​ ವಾರ್ನರ್ ಮತ್ತೆ​ ಮನವಿ
ನಾಯಕತ್ವ ನಿಷೇಧ ತೆರವುಗೊಳಿಸಲು ಡೇವಿಡ್​ ವಾರ್ನರ್ ಮತ್ತೆ​ ಮನವಿ

ಸೌತ್​ ಆಫ್ರಿಕಾ ಟೆಸ್ಟ್​ ಸರಣಿಯಲ್ಲಿ ಚೆಂಡು ವಿರೂಪಗೊಳಿಸಿದ್ದ (2018 Australian ball tampering scandal) ಕಾರಣ ಅಂದಿನ ಟೆಸ್ಟ್​ ಕ್ಯಾಪ್ಟನ್ ಸ್ಟೀವ್​ ಸ್ಮಿತ್​ (Steve smith) ಮತ್ತು ಉಪನಾಯಕ ಡೇವಿಡ್​ ವಾರ್ನರ್ (David Warner)​ ಅವರನ್ನು ಕ್ರಿಕೆಟ್​​​ ಆಸ್ಟ್ರೇಲಿಯಾ ಒಂದು ವರ್ಷ ನಿಷೇದ ಮಾಡಿತ್ತು. ಜೊತೆಗೆ ಇಬ್ಬರಿಗೂ ನಾಯಕತ್ವದಿಂದ ಅಜೀವ ನಿಷೇಧ ಹೇರಿತ್ತು. ಈ ಘಟನೆಯ 4 ವರ್ಷಗಳ ನಂತರ ಸ್ಮಿತ್ ಮತ್ತೆ ಟೆಸ್ಟ್ ಉಪನಾಯಕರಾಗಿದ್ದಾರೆ. ಜೊತೆಗೆ ಹಂಗಾಮಿ ನಾಯಕನಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಕ್ರಿಕೆಟ್​ ಆಸ್ಟ್ರೇಲಿಯಾ ವಿರುದ್ಧ ಸಿಡಿದೆದ್ದ ವಾರ್ನರ್

ಆದರೆ, ಡೇವಿಡ್​ ವಾರ್ನರ್​ಗೆ ಮಾತ್ರ ಯಾವುದೇ ಸ್ಥಾನಮಾನ ನೀಡುತ್ತಿಲ್ಲ. ತನ್ನ ಮೇಲಿರುವ ನಾಯಕತ್ವ ನಿಷೇಧವನ್ನು ತೆರವುಗೊಳಿಸಬೇಕು ಎಂದು ವಾರ್ನರ್​ ಕಳೆದ 9 ತಿಂಗಳಿಂದಲೂ ಕ್ರಿಕೆಟ್​ಗೆ ಆಸ್ಟ್ರೇಲಿಯಾಗೆ (Cricket Australia) ಕೋರುತ್ತಿದ್ದಾರೆ. ಆದರೆ, ಎಡಗೈ ಆಟಗಾರನ ಮನವಿಗೆ ಕ್ರಿಕೆಟ್​ ಆಸ್ಟ್ರೇಲಿಯಾ ಕಿಮ್ಮತ್ತು ಕೊಡುತ್ತಿಲ್ಲ. ಈಗ ಮತ್ತೊಮ್ಮೆ ತಮ್ಮ ಕ್ರಿಕೆಟ್​ ಮಂಡಳಿ ವಿರುದ್ಧ ಸಿಡಿದೆದ್ದಿದ್ದಾರೆ. ಇನ್ನೆಷ್ಟು ದಿನ ಈ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏಕೆ ತೆರವುಗೊಳಿಸುತ್ತಿಲ್ಲ?

ನನ್ನ ಮೇಲೆ ಹೇರಲಾಗಿರುವ ಆಜೀವ ನಾಯಕತ್ವದ ನಿಷೇಧವನ್ನು ಹಿಂಪಡೆಯಲು ಕ್ರಿಕೆಟ್ ಆಸ್ಟ್ರೇಲಿಯಾ ಮೀನಾಮೇಷ ಎಣಿಸುತ್ತಿದೆ. ಇದೊಂದು ಅತಿರೇಕದ ಸಂಗತಿ. ಆ ಘಟನೆಯನ್ನು ಇಲ್ಲಿಗೆ ಮುಗಿಸಲು ಬಯಸುತ್ತಿದ್ದೇನೆ. ಆದರೆ ಅವರು ಮಾತ್ರ ಈ ವಿಷಯವನ್ನೂ ಮತ್ತಷ್ಟು ಎಳೆಯುತ್ತಲೇ ಇದ್ದಾರೆ. ನನ್ನ ಮೇಲಿರುವ ನಾಯಕತ್ವ ನಿಷೇಧವನ್ನು ಏಕೆ ತೆರವುಗೊಳಿಸಲಾಗುತ್ತಿಲ್ಲ ಎಂಬುದರ ಬಗ್ಗೆ ತುಟಿ ಬಿಚ್ಚುತ್ತಿಲ್ಲ ಎಂದು ವಾರ್ನರ್​ ಬೇಸರ ವ್ಯಕ್ತಪಡಿಸಿದ್ದಾರೆ.

ಆಡುತ್ತಿದ್ದಾಗ ವಕೀಲರು ಕರೆ ಮಾಡುತ್ತಾರೆ!

ಯಾರೊಬ್ಬರೂ ಈ ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ. ಯಾರೂ ನಿರ್ಧಾರ ತೆಗೆದುಕೊಳ್ಳಲು ಬಯಸುತ್ತಿಲ್ಲ. ಆಡಳಿತ ಮಂಡಳಿಯಲ್ಲೇ ಸರಿಯಾದ ನಾಯಕತ್ವ ಇಲ್ಲದಂತಾಗಿದೆ. ಇದು ನನಗೆ ಕಿರಿಕಿರಿ ಉಂಟು ಮಾಡುತ್ತಿದೆ. ಇನ್ನೆಷ್ಟು ವರ್ಷ ಹೀಗೆ ಅವಮಾನ ಮಾಡುತ್ತಾರೆ. ಅವರಿಗೆ ಏನು ಬೇಕು ಎಂಬುದನ್ನು ನೇರವಾಗಿ ಕೇಳಲಿ. ಪಂದ್ಯಗಳು ನಡೆಯುತ್ತಿರುವಾಗ, ನಾನು ಪಂದ್ಯಗಳಲ್ಲಿ ನಿರತನಾಗಿದ್ದಾಗ ವಕೀಲರು ಕರೆ ಮಾಡುತ್ತಾರೆ. ಅವರು ಏನೇನೋ ಹೇಳುತ್ತಾರೆ. ಇದು ನನ್ನ ಏಕಾಗ್ರತೆಗೆ ಸಂಪೂರ್ಣವಾಗಿ ಅಡ್ಡಿಪಡಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

9 ತಿಂಗಳ ಹಿಂದೆ ನಾಯಕತ್ವ ಬ್ಯಾನ್​ ಅನ್ನು ತೆರವುಗೊಳಿಸುವಂತೆ ಕೋರಿದ್ದೆ. ಆದರೆ ಅದಿನ್ನೂ ಈಗಲೂ ಮುಂದುವರೆಯುತ್ತಿದೆ. ಇದು ತುಂಬಾ ನಿರಾಸೆ ತಂದಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಪ್ರತಿಕ್ರಿಯಿಸಿದ್ದಾರೆ.

ಜೂನ್ 7ರಿಂದ ಡಬ್ಲುಟಿಸಿ ಫೈನಲ್​

ಟೀಮ್​ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವೆ ಜೂ 7ರಿಂದ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​ ಫೈನಲ್​ ಪಂದ್ಯ ನಡೆಯಲಿದೆ. ಇಂಗ್ಲೆಂಡ್​ನ ಓವಲ್​ ಮೈದಾನದಲ್ಲಿ ಪ್ರಶಸ್ತಿಗಾಗಿ ಉಭಯ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯಕ್ಕೆ ಡೇವಿಡ್​ ವಾರ್ನರ್​ ಆಯ್ಕೆಯಾಗಿದ್ದು, ನಿರೀಕ್ಷೆ ಹೆಚ್ಚಾಗಿದೆ. ಈ ಫೈನಲ್​ ಪಂದ್ಯದ ಬೆನ್ನಲ್ಲೇ ಇಂಗ್ಲೆಂಡ್​ ವಿರುದ್ಧ ಆ್ಯಷಸ್​ ಸರಣಿಯಲ್ಲಿ ಕಣಕ್ಕಿಳಿಯಲಿದ್ದಾರೆ.

ಏನಿದು ಬಾಲ್​ ಟ್ಯಾಂಪರಿಂಗ್ ಪ್ರಕರಣ?

2018ರ ಆಸ್ಟ್ರೇಲಿಯನ್ ಬಾಲ್-ಟ್ಯಾಂಪರಿಂಗ್ ಹಗರಣವನ್ನು (ಚೆಂಡು ವಿರೂಪ ಪ್ರಕರಣ) ಸ್ಯಾಂಡ್‌ ಪೇಪರ್‌ ಗೇಟ್ ಹಗರಣ (Sandpapergate Scandal) ಎಂದೂ ಕರೆಯುತ್ತಾರೆ. ಇದು ಮೋಸದಾಟ. 2018ರ ಮಾರ್ಚ್​​​ನಲ್ಲಿ ಕೇಪ್​​ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟೆಸ್ಟ್ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಕ್ಯಾಮರೂನ್ ಬೆನ್​ಕ್ರಾಫ್ಟ್​ ಸ್ವಿಂಗ್ ಮಾಡಲು ಸ್ಯಾಂಡ್‌ ಪೇಪರ್‌ನೊಂದಿಗೆ ಚೆಂಡನ್ನು ಒರಟು ಮಾಡಲು ಯತ್ನಿಸಿದ್ದರು. ಇದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ನಾಯಕ ಸ್ಟೀವ್ ಸ್ಮಿತ್ ಮತ್ತು ಉಪನಾಯಕ ಡೇವಿಡ್ ವಾರ್ನರ್​ ಈ ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡು ಬಂದಿತ್ತು. ಹಾಗಾಗಿ ಮೂವರಲ್ಲಿ ಇಬ್ಬರನ್ನು ಒಂದು ವರ್ಷ ಬ್ಯಾನ್​ ಮಾಡಲಾಗಿತ್ತು. ಬೆನ್​ಕ್ರಾಪ್ಟ್​ಗೆ 9 ತಿಂಗಳ ಕಾಲ ಬ್ಯಾನ್​ ಮಾಡಲಾಗಿತ್ತು. ಆಸ್ಟ್ರೇಲಿಯಾದ ಕೋಚ್ ಡ್ಯಾರೆನ್ ಲೆಹ್ಮನ್ ಹಗರಣದ ನಂತರ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದರು. ಟಿಮ್ ಪೇನ್ ಅವರನ್ನು ನಾಯಕನನ್ನಾಗಿ ಘೋಷಿಸಲಾಗಿತ್ತು.