BCCI: ಚೇತನ್ ಶರ್ಮಾ ವಜಾಗೊಳಿಸಿದ ತಿಂಗಳುಗಳ ಬಳಿಕ ರಾಷ್ಟ್ರೀಯ ಆಯ್ಕೆಗಾರರ ಹುದ್ದೆಗೆ ಅರ್ಜಿ ಆಹ್ವಾನಿಸಿದ ಬಿಸಿಸಿಐ
Jan 09, 2024 08:08 PM IST
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರೊಂದಿಗೆ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ
- BCCI National Selectors: ಖಾಲಿ ಇರುವ ರಾಷ್ಟ್ರೀಯ ಆಯ್ಕೆಗಾರರ ಹುದ್ದೆಗೆ ಬಿಸಿಸಿಐ ಹೊಸ ಅರ್ಜಿಗಳನ್ನು ಆಹ್ವಾನಿಸಿದೆ. ಈ ಸ್ಥಾನದಿಂದ ಚೇತನ್ ಶರ್ಮಾ ಪದಚ್ಯುತಗೊಂಡ ನಂತರ ಈ ಹುದ್ದೆ ಖಾಲಿ ಇದೆ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (WTC) ಹೊಸ ಆವೃತ್ತಿಗೆ ಟೀಮ್ ಇಂಡಿಯಾ (Team India) ಸಿದ್ಧವಾಗಿದೆ. ವೆಸ್ಟ್ ಇಂಡೀಸ್ ಪ್ರವಾಸದೊಂದಿಗೆ ಭಾರತದ ಹೊಸ ಸರಣಿ ಆರಂಭಿಸಲಿದೆ. ಈ ನಡುವೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI)ಯು ಇಂದು (ಬುಧವಾರ) ರಾಷ್ಟ್ರೀಯ ಆಯ್ಕೆಗಾರರ ಹುದ್ದೆಗೆ ಹೊಸ ಅರ್ಜಿಗಳನ್ನು ಆಹ್ವಾನಿಸಿದೆ.
ಖಾಸಗಿ ವಾಹಿನಿಯೊಂದು ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಭಾರತೀಯ ಕ್ರಿಕೆಟ್‌ನ ಆಂತರಿಕ ವಿಚಾರಗಳನ್ನು ಬಹಿರಂಗಪಡಿಸಿ ವಿವಾದಕ್ಕೆ ಗುರಿಯಾಗಿ, ತಮ್ಮ ಸ್ಥಾನಕ್ಕೆ ಆಯ್ಕೆ ಸಮಿತಿಯ ಮಾಜಿ ಮುಖ್ಯಸ್ಥ ಚೇತನ್ ಶರ್ಮಾ ರಾಜೀನಾಮೆ ಸಲ್ಲಿಸಿದ್ದರು. ಅವರ ನಿರ್ಗಮನದ ನಾಲ್ಕು ತಿಂಗಳ ಬಳಿಕ, ವೆಸ್ಟ್ ಇಂಡೀಸ್ ಸರಣಿಗೂ ಮುನ್ನ ಭಾರತ ಪುರುಷರ ಆಯ್ಕೆ ಸಮಿತಿಯ ಒಬ್ಬ ಸದಸ್ಯನ ಸ್ಥಾನಕ್ಕೆ ಕ್ರಿಕೆಟ್ ಮಂಡಳಿಯು ಅರ್ಜಿ ಆಹ್ವಾನಿಸಿದೆ.
ಕಳೆದ ವರ್ಷ ನಡೆದ ಐಸಿಸಿ T20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸೋತ ಬಳಿಕ ಚೇತನ್ ಶರ್ಮಾರನ್ನು ಆಯ್ಕೆ ಸಮಿತಿಯ ಮುಖ್ಯಸ್ಥನ ಸ್ಥಾನದಿಂದ ವಜಾಗೊಳಿಸಲಾಗಿತ್ತು. ಆದರೆ, ಮುಂದಿನ ಆಯ್ಕೆದಾರರ ನೇಮಕ ಪ್ರಕ್ರಿಯೆ ತಡವಾದ ಹಿನ್ನೆಲೆಯಲ್ಲಿ ಅವರನ್ನೇ ಮತ್ತೆ ಆಯ್ಕೆ ಸಮಿತಿ ಮುಖ್ಯಸ್ಥರನ್ನಾಗಿ ತಾತ್ಕಾಲಿಕವಾಗಿ ಮರುನೇಮಕ ಮಾಡಲಾಗಿತ್ತು. ಆಯ್ಕೆ ಸಮಿತಿ ಅಧ್ಯಕ್ಷರಾಗಿ ಶರ್ಮಾ ಅವರ ಎರಡನೇ ಅವಧಿಯು ಎರಡು ತಿಂಗಳಿಗಿಂತಲೂ ಕಡಿಮೆ ಅವಧಿಗೆ ಮುಕ್ತಾಯಗೊಂಡಿದ್ದು, ಅವರ ರಾಜೀನಾಮೆಯನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಅಂಗೀಕರಿಸಿದ್ದಾರೆ ಎಂದು ವರದಿಯಾಗಿದೆ.
ಸದ್ಯ ಈ ಕುರಿತಾಗಿ ಬುಧವಾರ ಟ್ವೀಟ್ ಮಾಡಿರುವ ಬಿಸಿಸಿಐ, ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಆಯ್ಕೆ ಸಮಿತಿಯ ಉನ್ನತ ಸ್ಥಾನಕ್ಕಾಗಿ ಅರ್ಜಿ ಸಲ್ಲಿಸುವ ಮಾನದಂಡವನ್ನು ಕ್ರಿಕೆಟ್ ಮಂಡಳಿ ಉಲ್ಲೇಖಿಸಿದೆ. ಪುರುಷರ ಆಯ್ಕೆ ಸಮಿತಿಯ ಸದಸ್ಯರ ಸ್ಥಾನಕ್ಕೆ ಆಯ್ಕೆಯಾಗುವವರು, ಭಾರತ ರಾಷ್ಟ್ರೀಯ ತಂಡವನ್ನು ಟೆಸ್ಟ್, ಏಕದಿನ ಮತ್ತು ಟಿ20 ಸೇರಿದಂತೆ ಇತರ ಯಾವುದೇ ಸ್ವರೂಪಕ್ಕೆ ಭಾರತ ತಂಡವನ್ನು ಆಯ್ಕೆ ಮಾಡುತ್ತಾರೆ. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸಲ್ಲಿಸುವ ಮೊದಲು ಕೆಲವೊಂದು ಮಾನದಂಡಗಳನ್ನು ಪೂರೈಸಬೇಕಾಗುತ್ತದೆ.
- ಅರ್ಜಿ ಸಲ್ಲಿಸಲು ಬಯಸುವವರು ಕನಿಷ್ಠ 7 ಟೆಸ್ಟ್ ಪಂದ್ಯಗಳು ಅಥವಾ 30 ಪ್ರಥಮ ದರ್ಜೆ ಪಂದ್ಯಗಳು 10 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಮತ್ತು 20 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರಬೇಕು.
- ಕನಿಷ್ಠ 5 ವರ್ಷಗಳ ಹಿಂದೆ ಆಟದಿಂದ ನಿವೃತ್ತಿ ಪಡೆದಿರಬೇಕು.
- ಒಟ್ಟು 5 ವರ್ಷಗಳ ಕಾಲ ಯಾವುದೇ ಕ್ರಿಕೆಟ್ ಸಮಿತಿಯ ಸದಸ್ಯರಾಗಿರುವ ಯಾವುದೇ ವ್ಯಕ್ತಿಯು ಪುರುಷರ ಆಯ್ಕೆ ಸಮಿತಿಯ ಸದಸ್ಯರಾಗಿರಲು ಅರ್ಹರಾಗಿರುವುದಿಲ್ಲ.
ಈ ಮಾನದಂಡಗಳ ಮೇಲೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಪೈಕಿ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯುವ ಅಭ್ಯರ್ಥಿಗಳನ್ನು ಹೆಚ್ಚಿನ ಮೌಲ್ಯಮಾಪನಕ್ಕಾಗಿ ವೈಯಕ್ತಿಕ ಸಂದರ್ಶನಗಳಿಗಾಗಿ ಬಿಸಿಸಿಐ ಆಹ್ವಾನಿಸುತ್ತದೆ. ಕಳೆದ ಫೆಬ್ರವರಿಯಿಂದ ರಾಷ್ಟ್ರೀಯ ಆಯ್ಕೆಗಾರರ ಹುದ್ದೆ ಖಾಲಿ ಇದೆ. ಸದ್ಯ ಭಾರತದ ಮಾಜಿ ಕ್ರಿಕೆಟಿಗ ಶಿವಸುಂದರ್ ದಾಸ್ ಅವರು ಅಖಿಲ ಭಾರತ ಹಿರಿಯ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಸಮಿತಿಯಲ್ಲಿ ಸುಬ್ರೋತೊ ಬ್ಯಾನರ್ಜಿ, ಸಲೀಲ್ ಅಂಕೋಲಾ ಮತ್ತು ಶ್ರೀಧರನ್ ಶರತ್ ಕೂಡ ಇದ್ದಾರೆ.
ರಹಸ್ಯ ಕಾರ್ಯಾಚರಣೆಯಲ್ಲಿ ಚೇತನ್ ಶರ್ಮಾ ಏನು ಹೇಳಿದ್ದರು?
ಟೀಮ್ ಇಂಡಿಯಾದ ಕೆಲ ಆಟಗಾರರು ತಮ್ಮ ಫಿಟ್ನೆಸ್ ಸಾಬೀತುಪಡಿಸಲು ಇಂಜೆಕ್ಷನ್ ಪಡೆಯುತ್ತಾರೆ ಎಂದಿದ್ದ ಚೇತನ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಸೌರವ್ ಗಂಗೂಲಿ ವಿರುದ್ಧವೂ ಗಂಭೀರ ಆರೋಪ ಮಾಡಿದ್ದರು. ಟೀಮ್ ಇಂಡಿಯಾದೊಳಗಿನ ಕೆಲ ವಿಚಾರಗಳನ್ನು ರಹಸ್ಯ ಕಾರ್ಯಚರಣೆ ಸಂದರ್ಭದಲ್ಲಿ ಚೇತನ್ ಶರ್ಮಾ ಬಹಿರಂಗಪಡಿಸಿದ್ರು. ಪಂದ್ಯಕ್ಕೂ ಮುನ್ನ ಚುಚ್ಚುಮದ್ದುಗಳನ್ನು ಬಳಸುತ್ತಾರೆ. ಅದರಲ್ಲಿ ಡ್ರಗ್ಸ್ ಕೂಡ ಇರುತ್ತದೆ. ಆದರೆ ಡೋಪಿಂಗ್ ಪರೀಕ್ಷೆಯಲ್ಲೂ ಪತ್ತೆಯಾಗುವುದಿಲ್ಲ. ಶೇಕಡಾ 80 - 85ರಷ್ಟು ಫಿಟ್ನೆಸ್ ಇದ್ದರೂ, ಇಂಜೆಕ್ಷನ್ ನೆರವಿನಿಂದ ಆಟವಾಡುತ್ತಿದ್ದಾರೆ ಎಂದು ಅಚ್ಚರಿಯ ಹೇಳಿಕೆ ನೀಡುವ ಮೂಲಕ ಬಿಸಿಸಿಐ ಹಾಗೂ ಭಾರತ ಕ್ರಿಕೆಟ್ ತಲೆ ತಗ್ಗಿಸುವಂತೆ ಮಾಡಿದ್ದರು.