Virat Kohli: ವಿರಾಟ್ ಅಂದ್ರೆ ಅಪಾರ ಗೌರವ; ಅವರಿಂದ ಸಲಹೆ ಕೇಳುತ್ತಿರುತ್ತೇನೆ ಎಂದ ಪಾಕ್ ಕ್ರಿಕೆಟಿಗ
Jun 22, 2023 07:05 PM IST
ವಿರಾಟ್ ಕೊಹ್ಲಿ, ಅಹ್ಮದ್ ಶೆಹಜಾದ್
- ಪಾಕಿಸ್ತಾನ ಕ್ರಿಕೆಟಿಗ ಅಹ್ಮದ್ ಶೆಹಜಾದ್, ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿಯ ಅಭಿಮಾನಿ. ಕಿಂಗ್ ಕೊಹ್ಲಿಯನ್ನು ಮುಕ್ತ ಕಂಠದಿಂದ ಹೊಗಳುವ ಶೆಹಜಾದ್, ಭಾರತದ ಟೆಸ್ಟ್ ತಂಡದ ಅದೃಷ್ಟವನ್ನು ಬದಲಾಯಿಸಿದ ಶ್ರೇಯಸ್ಸನ್ನು ಕೊಹ್ಲಿಗೆ ನೀಡಿದ್ದಾರೆ.
ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಗೆ (Virat Kohli) ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ಕೋಟಿಗಟ್ಟಲೆ ಅಭಿಮಾನಿಗಳಿದ್ದಾರೆ. ಇವರು ವಿಶ್ವದಲ್ಲೇ ಅತಿ ಹೆಚ್ಚು ಬೆಂಬಲಿಗರನ್ನು ಹೊಂದಿರುವ ಕ್ರೀಡಾಪಟುಗಳಲ್ಲಿ ಒಬ್ಬರು. ವಿರಾಟ್ ಆಟದ ವೈಖರಿ ಹಾಗೂ ಅವರ ಅಗ್ರೆಶನ್ ಅನ್ನು ಇಷ್ಟಪಡುವ ಅಭಿಮಾನಿಗಳು ಹಲವರು. ಇನ್ನೊಂದೆಡೆ ವಿರಾಟ್ ಆಟವನ್ನು ಅನುಸರಿಸುವ ಹಾಗೂ, ಅವರ ಸಲಹೆಯನ್ನು ಪಾಲಿಸುವ ಯುವ ಕ್ರಿಕೆಟಿಗರ ಸಂಖ್ಯೆ ಕೂಡಾ ದೊಡ್ಡದಿದೆ. ಅವರಲ್ಲಿ ಪಾಕ್ ಕ್ರಿಕೆಟಿಗರು ಕೂಡಾ ಇದ್ದಾರೆ ಎಂಬುದು ವಿಶೇಷ.
ವಿರಾಟ್ ಒಬ್ಬ ಬ್ಯಾಟರ್ ಆಗಿ ತಮ್ಮ ಸಾಮರ್ಥ್ಯವನ್ನು ಈಗಾಗಲೇ ಜಗತ್ತಿಗೆ ತೋರಿಸಿದ್ದಾರೆ. ಅದರೊಂದಿಗೆ ಫಿಟ್‌ನೆಸ್ ವಿಚಾರದಲ್ಲೂ ವಿರಾಟ್ ಯಾವತ್ತಿಗೂ ಮುಂದಿರುತ್ತಾರೆ. ಆಟದ ವೇಳೆ ಮೈದಾನ ಪೂರ್ತಿ ಓಡಾಡುತ್ತಾ ಸದಾ ಹುರುಪಿನಿಂದ ಆಡುವ ವಿರಾಟ್‌ಗೆ, ಅವರ ಫಿಟ್ನೆಸ್ ವಿಚಾರವಾಗಿ ಮತ್ತಷ್ಟು ಅಭಿಮಾನಿಗಳು ಸೇರಿಕೊಳ್ಳುತ್ತಾರೆ. ಅಲ್ಲದೆ ಅವರನ್ನು ದೇಶದ ಯುವ ಹಾಗೂ ಉದಯೋನ್ಮುಖ ಕ್ರಿಕೆಟಿಗರು ಅನುಸರಿಸುತ್ತಾರೆ.
ವಿರಾಟ್ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ದೇಶದ ಬೌಂಡರಿ ಲೈನ್ ಮೀರಿ ವಿದೇಶಗಳಲ್ಲೂ ಕೊಹ್ಲಿಯನ್ನು ಅಭಿಮಾನಿಸುವ ಕ್ರಿಕೆಟಿಗರಿದ್ದಾರೆ. ಸಾಮಾನ್ಯವಾಗಿ ಭಾರತ ಮತ್ತು ಪಾಕಿಸ್ತಾನದ ಆಟಗಾರರನ್ನು ಬದ್ಧ ವೈರಿಗಳೆಂಬಂತೆ ಬಿಂಬಿಸಲಾಗುತ್ತದೆ. ಆದರೆ, ಇದೇ ಪಾಕಿಸ್ತಾನದ ಹಲವು ಆಟಗಾರರು ವಿರಾಟ್ ಆಟ ಹಾಗೂ ಫಿಟ್‌ನೆಸ್‌ಗೆ ಫಿದಾ ಆಗಿದ್ದಾರೆ.
ಪಾಕಿಸ್ತಾನದ ಬ್ಯಾಟರ್ ಅಹ್ಮದ್ ಶೆಹಜಾದ್, ಭಾರತದ ಮಾಜಿ ನಾಯಕನ ದೊಡ್ಡ ಅಭಿಮಾನಿಯಾಗಿದ್ದಾರೆ. ಕಿಂಗ್ ಕೊಹ್ಲಿಯನ್ನು ಮುಕ್ತ ಕಂಠದಿಂದ ಹೊಗಳುವ ಶೆಹಜಾದ್, ಭಾರತದ ಟೆಸ್ಟ್ ತಂಡದ ಅದೃಷ್ಟವನ್ನು ಬದಲಾಯಿಸಿದ ಶ್ರೇಯಸ್ಸನ್ನು ಕೊಹ್ಲಿಗೆ ನೀಡಿದ್ದಾರೆ.
ಬ್ಯಾಟಿಂಗ್ ಮಾಂತ್ರಿಕ ಕೊಹ್ಲಿ ಮತ್ತೆ ಮೇಲೇರುತ್ತಾರೆ ಎಂದು ಶೆಹಜಾದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕೊಹ್ಲಿಯ "ಅತ್ಯುತ್ತಮ ಆಟ ಇನ್ನಷ್ಟೇ ಬರಬೇಕಿದೆ" ಎಂದು ಹೇಳಿದ್ದಾರೆ.
“ನಾವು ಒಬ್ಬರಿಗೊಬ್ಬರು ಪರಸ್ಪರ ಗೌರವಿಸುತ್ತೇವೆ. ನನಗೆ ಕ್ರಿಕೆಟ್‌ಗೆ ಸಂಬಂಧಿಸಿದಂತೆ ಯಾವುದೇ ಸಲಹೆ ಬೇಕಾದಾಗ ಅವರ ನೆರವು ಕೇಳುತ್ತೇನೆ. ನಾನು ಅವರನ್ನು ಆಟಗಾರನಾಗಿ ನಿಜಕ್ಕೂ ಗೌರವಿಸುತ್ತೇನೆ. ಅವರ ಅಚ್ಚರಿಯ ರೀತಿಯಲ್ಲಿ ಬದಲಾಗಿದ್ದಾರೆ. ಅಂಡರ್ 19 ವಿಶ್ವಕಪ್ ವೇಳೆ ಅವರು ಸ್ವಲ್ಪ ದಪ್ಪಗಿದ್ದರು. ಆ ಬಳಿಕ ಅವರು ಫಿಟ್ ಆಗಿ ಬದಲಾದ ರೀತಿ ಶ್ಲಾಘನೀಯ. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು ಭಾರತವನ್ನು ಉನ್ನತ ಶಿಖರಕ್ಕೆ ಕೊಂಡೊಯ್ದರು. ಅವರ ಬ್ಯಾಟ್‌ನಿಂದ ಬೆಸ್ಟ್ ಆಟ ಇನ್ನಷ್ಟೇ ಬರಬೇಕಿದೆ ಎಂದು ನಾನು ಭಾವಿಸುತ್ತೇನೆ” ಎಂದು ನಾದಿರ್ ಅಲಿ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಶೆಹಜಾದ್ ಹೇಳಿದ್ದಾರೆ.
ಶೆಹ್ಜಾದ್ ಅವರು ಕೊನೆಯ ಬಾರಿಗೆ ಪಾಕಿಸ್ತಾನದ ಪರ 2019ರಲ್ಲಿ ರಾಷ್ಟ್ರೀಯ ತಂಡದ ಪರ ಆಡಿದ್ದರು. ಆ ಬಳಿಕ ಅವರು ಪಾಕ್ ತಂಡದಲ್ಲಿ ಕಾಣಿಸಿಕೊಂಡಿಲ್ಲ.
ಭಾರತ ಟೆಸ್ಟ್ ತಂಡದ ನಾಯಕರಾಗಿದ್ದ ಸಂದರ್ಭದಲ್ಲಿ, ಕೊಹ್ಲಿ ಟೀಮ್ ಇಂಡಿಯಾವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ಮುನ್ನಡೆಸಿದ್ದರು. ಅಲ್ಲದೆ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಆಸ್ಟ್ರೇಲಿಯಾದಲ್ಲಿಯೇ ಆಸ್ಟ್ರೇಲಿಯಾವನ್ನು ಮಣಿಸಿ ಸರಣಿ ಗೆದ್ದ ಸಾಧನೆ ಮಾಡಿದರು.
2021ರ ಜೂನ್ ತಿಂಗಳಲ್ಲಿ ನಡೆದ ಚೊಚ್ಚಲ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದವರೆಗೆ ಭಾರತವನ್ನು ಮುನ್ನಡೆಸಿದ್ದರು. ಆದರೆ, ಲಾರ್ಡ್ಸ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ವಿರುದ್ಧ ಭಾರತ ಸೋತಿತು.