RCB 2024: ದಿನೇಶ್ ಕಾರ್ತಿಕ್ ಸೇರಿ ಈ ಇಬ್ಬರನ್ನು ತಂಡದಿಂದ ಬಿಡುಗಡೆ ಮಾಡಲು ಆರ್‌ಸಿಬಿ ಚಿಂತನೆ; ಎಬಿಡಿಯಂಥ ಫಿನಿಷರ್ ಹುಟುಕಾಟದಲ್ಲಿ ಬೆಂಗಳೂರು
Jul 29, 2023 07:00 AM IST
ಹರ್ಷಲ್ ಪಟೇಲ್, ದಿನೇಶ್ ಕಾರ್ತಿಕ್, ವನಿಂದು ಹಸರಂಗ.
- RCB 2024: ಪ್ರಸಕ್ತ ಐಪಿಎಲ್ ಆವೃತ್ತಿಯಲ್ಲಿ ಪ್ರದರ್ಶನ ತೋರಲು ಸಂಪೂರ್ಣ ವಿಫಲವಾದ ಪ್ರಮುಖ ಮೂವರು ಆಟಗಾರರನ್ನು ಕೈ ಬಿಡಲು ರಾಯಲ್ ಚಾಲೆಂಜರ್ಸ್ ಬೆಂಗಲೂರು ಚಿಂತನೆ ನಡೆಸಿದೆ. ಅವರು ಯಾರು ಎಂಬುದನ್ನು ಈ ಮುಂದೆ ನೋಡೋಣ.
ಪ್ರತಿ ಐಪಿಎಲ್ (IPL) ಸೀಸನ್ ಆರಂಭಕ್ಕೂ ಮುನ್ನ ಈ ಸಲ ಕಪ್ ನಮ್ದೇ ಎಂದು ಅಭಿಮಾನಿಗಳು ಘೋಷವಾಕ್ಯ ಕೂಗುತ್ತಾರೆ. ಆದರೆ ಕೊನೆಗೆ ಮುಂದಿನ ಸಲ ಕಪ್ ನಮ್ದೆ ಎಂದು ರಾಜಿ ಮಾಡಿಕೊಂಡು ನಿರಾಸೆ ಅನುಭವಿಸುತ್ತಾರೆ. ಆ ಸೀಸನ್ ಮುಗಿದ ನಂತರ, ಆಟಗಾರರನ್ನು ಕೈ ಬಿಡುವುದು ಸರ್ವೇ ಸಾಮಾನ್ಯ. ಇದೀಗ ಡಿಸೆಂಬರ್ನಲ್ಲಿ ಜರುಗುವ ಮಿನಿ ಹರಾಜಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore), ಕೆಲ ಕಳಪೆ ಪ್ರದರ್ಶನ ನೀಡಿದ ಆಟಗಾರರನ್ನು ಬಿಡುಗಡೆಗೊಳಿಸಲು ನಿರ್ಧರಿಸಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ 2020ರಿಂದ (Indian Premier League) ಸತತ 3 ಸೀಸನ್‌ಗಳಲ್ಲಿ ಪ್ಲೇಆಫ್ ತಲುಪಿರುವ ಆರ್‌ಸಿಬಿ, 2020 ಮತ್ತು 2021 ಸೀಸನ್‌ಗಳಲ್ಲಿ ಎಲಿಮಿನೇಟರ್ ಪಂದ್ಯಗಳಲ್ಲಿ ಸೋತಿತ್ತು. 2022ರ ಋತುವು ಒಂದು ಹೆಜ್ಜೆ ಮುಂದೆ ಹೋಗಿ 2ನೇ ಕ್ವಾಲಿಫೈಯರ್ನಲ್ಲಿ ಮಕಾಡೆ ಮಲಗಿತು. ಆದರೆ, 16ನೇ ಆವೃತ್ತಿಯ ಋತುವಿನಲ್ಲಿ ಪ್ಲೇ ಆಫ್ಗೇರಲೂ ಸಾಧ್ಯವಾಗಲಿಲ್ಲ ಎಂಬುದು ಬೇಸರದ ಸಂಗತಿ. ಆದರೆ ಪ್ಲೇಆಫ್ಗೇರಲು ಇದ್ದ ಅವಕಾಶವನ್ನೂ ಕಳೆದುಕೊಂಡಿತು.
ಲೀಗ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಗೆದ್ದಿದ್ದರೆ, ಮುಂಬೈ ಇಂಡಿಯನ್ಸ್ (Mumbai Indians) ಬದಲಿಗೆ ಆರ್‌ಸಿಬಿ ಪ್ಲೇ ಆಫ್‌ಗೆ ಪ್ರವೇಶಿಸುತ್ತಿತ್ತು. ಇದರೊಂದಿಗೆ ಸತತ 4ನೇ ಬಾರಿಗೆ ಪ್ಲೇಆಫ್‌ಗೇರಿದ ದಾಖಲೆ ಬರೆಯುತ್ತಿತ್ತು. ಆದರೆ, ವಿರಾಟ್ ಕೊಹ್ಲಿ (Virat Kohli) ಶತಕದ ಹೊರತಾಗಿಯೂ ಪಂದ್ಯ ಸೋಲಿಗೆ ಶರಣಾಯಿತು. ಗುಜರಾತ್ ಟೈಟಾನ್ಸ್ ಪರ ಶುಭ್ಮನ್ ಗಿಲ್ (Shubman GIll) ಶತಕದ ಸಹಾಯದಿಂದ ಗುಜರಾತ್ ಆರ್‌ಸಿಬಿ ಗೆಲುವಿನ ಕನಸಿಗೆ ಅಡ್ಡಿಯಾಯಿತು. ಪ್ಲೇಆಫ್ನಿಂದಲೂ ದೂರ ಮಾಡಿತು.
ದಿನೇಶ್ ಕಾರ್ತಿಕ್
ಪ್ರಸಕ್ತ ಆವೃತ್ತಿಯಲ್ಲಿ ಸಂಪೂರ್ಣ ವಿಫಲವಾದ ಮೂವರು ಆಟಗಾರರನ್ನು ಆರ್‌ಸಿಬಿ, ಕೈ ಬಿಡಲು ಸಜ್ಜಾಗಿದೆ. ಅದರಲ್ಲಿ ಮೊದಲ ಆಟಗಾರ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ (Dinesh Karthik). ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ದಿನೇಶ್ ಕಾರ್ತಿಕ್ ಅವರನ್ನು 5.50 ಕೋಟಿಗೆ ಖರೀದಿಸಿತು. ಆದರೆ ಕಳೆದ ವರ್ಷದ ಐಪಿಎಲ್ನ ಆರಂಭಿಕ ಪಂದ್ಯಗಳಲ್ಲಿ ಅಬ್ಬರಿಸಿದರೂ ನಂತರ ಅದೇ ಪ್ರದರ್ಶನ ಮುಂದುವರೆಸಲು ವಿಫಲರಾದರು. ಇನ್ನು ವರ್ಷವಂತೂ ಅಟ್ಟರ್ ಫ್ಲಾಪ್ ಪ್ರದರ್ಶನ ನೀಡಿದರು.
ಐಪಿಎಲ್ 2022ರ ಋತುವಿನಲ್ಲಿ 16 ಪಂದ್ಯಗಳಲ್ಲಿ 330 ರನ್ ಗಳಿಸಿದ್ದ ದಿನೇಶ್ ಕಾರ್ತಿಕ್, ಐಪಿಎಲ್ 2023ರ ಋತುವಿನಲ್ಲಿ 13 ಪಂದ್ಯಗಳಲ್ಲಿ ಕೇವಲ 140 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಅವರ ಬ್ಯಾಟಿಂಗ್ ಸರಾಸರಿ ಕೇವಲ 11.67 ಮಾತ್ರ. ಇದರೊಂದಿಗೆ ಅಟ್ಟರ್ ಫ್ಲಾಪ್ ಪ್ರದರ್ಶನ ನೀಡಿದ ದಿನೇಶ್ ಕಾರ್ತಿಕ್ ಅವರನ್ನು ಆರ್‌ಸಿಬಿ ಹರಾಜಿಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ.
ಹರ್ಷಲ್ ಪಟೇಲ್
ಆರ್‌ಸಿಬಿ ಬಿಡುಗಡೆ ಮಾಡಲು ನಿರ್ಧರಿಸಿರುವ ಪಟ್ಟಿಯಲ್ಲಿ ವೇಗಿ ಹರ್ಷಲ್ ಪಟೇಲ್ (Harshal Patel) ಕೂಡ ಇದ್ದಾರೆ. ಐಪಿಎಲ್ 2021ರ ಸೀಸನ್‌ನಲ್ಲಿ 32 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಗೆದ್ದಿದ್ದ ಹರ್ಷಲ್ ಪಟೇಲ್ ಅವರನ್ನು 2022ರ ಮೆಗಾ ಹರಾಜಿನಲ್ಲಿ ಆರ್‌ಸಿಬಿ 10.75 ಕೋಟಿ ರೂ.ಗೆ ಖರೀದಿಸಿತ್ತು. 2022ರ ಋತುವಿನಲ್ಲಿ 19 ವಿಕೆಟ್ ಪಡೆದಿದ್ದ ಹರ್ಷಲ್ ಪಟೇಲ್ 13 ಪಂದ್ಯಗಳನ್ನು ಆಡಿದ್ದರು. 2023ರ ಋತುವಿನಲ್ಲಿ ಕೇವಲ 14 ವಿಕೆಟ್ ಪಡೆದಿದ್ದಾರೆ. ಹರ್ಷಲ್ ಈ ಋತುವಿನಲ್ಲಿಓವರ್ಗೆ 9.66 ಎಕಾನಮಿಯೊಂದಿಗೆ ರನ್ ಲೀಕ್ ಮಾಡಿದ್ದರು.
ವನಿಂದು ಹಸರಂಗ
ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ಯುಜ್ವೇಂದ್ರ ಚಹಲ್ರನ್ನು (Yuzvendra Chahal) ಕೈ ಬಿಟ್ಟು ಶ್ರೀಲಂಕಾದ ಆಲ್ರೌಂಡರ್ ವನಿಂದು ಹಸರಂಗ (Wanindu Hasaranga) ಅವರನ್ನು ಆರ್‌ಸಿಬಿ 10.75 ಕೋಟಿಗೆ ಖರೀದಿಸಿತ್ತು. ಇದು ಸಾಕಷ್ಟು ಅಚ್ಚರಿ ಮೂಡಿಸಿತ್ತು. ಚಹಾಲ್ಗೆ ಬದಲಿಗೆ ಹಸರಂಗಕ್ಕಾಗಿ ಇಷ್ಟು ಹಣ ನೀಡಿ ಎಲ್ಲರನ್ನೂ ಅಚ್ಚರಿಗೊಳಿಸಿತ್ತು. ಕಳೆದ ಋತುವಿನಲ್ಲಿ 26 ವಿಕೆಟ್ ಕಬಳಿಸುವ ಮೂಲಕ ಪ್ರಭಾವಿಯಾಗಿದ್ದ ಹಸರಂಗ, 2023ರ ಋತುವಿನಲ್ಲಿ 9 ವಿಕೆಟ್‌ಗಳನ್ನು ಪಡೆದಿದ್ದರು. ಇದಲ್ಲದೆ, ಅವರು ಓವರ್ಗೆ 8.9ರ ಎಕಾನಮಿಯೊಂದಿಗೆ ರನ್ ಬಿಟ್ಟುಕೊಟ್ಟಿದ್ದರು.
ಹೊಸ ತಂಡ ಕಟ್ಟಲು ಚಿಂತನೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಮೂವರನ್ನು ಹರಾಜಿಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಈ ಮೂವರನ್ನು ಹರಾಜಿಗೆ ಬಿಡುಗಡೆ ಮಾಡಿದರೆ 27 ಕೋಟಿ ರೂಪಾಯಿ ಆರ್‌ಸಿಬಿ ಪರ್ಸ್‌ಗೆ ಸೇರಲಿದೆ. ಯುವ ಆಟಗಾರರು ಹಾಗೂ ವಿದೇಶಿ ಆಟಗಾರರನ್ನು ಖರೀದಿಸಲು ಆರ್‌ಸಿಬಿ ತಂಡದ ಆಡಳಿತ ಮಂಡಳಿ ಚಿಂತನೆ ನಡೆಸಿದೆ. ಅದರಲ್ಲೂ ಗೇಮ್ ಫಿನಿಷರ್ಗೆ ಹುಡುಕಾಟ ನಡೆಸುತ್ತಿದೆ. ಇವರಲ್ಲದೆ, ಐಪಿಎಲ್ 2023ರ ಅಟ್ಟರ್ ಫ್ಲಾಪ್‌ಗಳಾದ ಶಹಬಾಜ್ ಅಹ್ಮದ್, ಮಹಿಪಾಲ್ ಲೊಮ್ರೋರ್, ಅನುಜ್ ರಾವತ್ ಮತ್ತು ಸುಯಶ್ ಪ್ರಭುದೇಸಾಯಿ ಕೂಡ ಹರಾಜಿಗೆ ಬಿಡುಗಡೆಯಾಗುವ ಸಾಧ್ಯತೆಯಿದೆ.