logo
ಕನ್ನಡ ಸುದ್ದಿ  /  ಕ್ರೀಡೆ  /  Dilip Vengsarkar: ನಿಮಗೆ ದೂರದೃಷ್ಟಿಯೇ ಇಲ್ಲ, ಐಪಿಎಲ್ ಆಯೋಜಿಸಿ ಕೋಟಿ ಗಳಿಸುವುದೇ ಸಾಧನೆಯಲ್ಲ; ಬಿಸಿಸಿಐಗೆ ದಿಗ್ಗಜನ ಛಾಟಿಯೇಟು

Dilip Vengsarkar: ನಿಮಗೆ ದೂರದೃಷ್ಟಿಯೇ ಇಲ್ಲ, ಐಪಿಎಲ್ ಆಯೋಜಿಸಿ ಕೋಟಿ ಗಳಿಸುವುದೇ ಸಾಧನೆಯಲ್ಲ; ಬಿಸಿಸಿಐಗೆ ದಿಗ್ಗಜನ ಛಾಟಿಯೇಟು

Jayaraj HT Kannada

Jan 09, 2024 08:11 PM IST

google News

ಐಪಿಎಲ್ ಟ್ರೋಫಿಯೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು

  • Tam India: ಭಾರತದ ಮಾಜಿ ಕ್ರಿಕೆಟಿಗ ದಿಲೀಪ್ ವೆಂಗ್‌ಸರ್ಕರ್, ಬಿಸಿಸಿಐ ಆಯ್ಕೆ ಸಮಿತಿಯಲ್ಲಿ ದೂರದೃಷ್ಟಿಯ ಕೊರತೆ ಬಗ್ಗೆ ಟೀಕಿಸಿದ್ದಾರೆ.

ಐಪಿಎಲ್ ಟ್ರೋಫಿಯೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು
ಐಪಿಎಲ್ ಟ್ರೋಫಿಯೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು (AFP)

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ಪಂದ್ಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತವು 209 ರನ್‌ಗಳ ಅಂತರದಿಂದ ಸೋತ ಬಳಿಕ, ಟೀಮ್‌ ಇಂಡಿಯಾದಲ್ಲಿ ಬದಲಾವಣೆಯ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಅಲ್ಲದೆ ರೋಹಿತ್ ಶರ್ಮಾ ಅವರ ನಾಯಕತ್ವದ ವಿಚಾರವಾಗಿಯೂ ಪ್ರಶ್ನೆಗಳು ಎದ್ದಿವೆ. ನಾಯಕನನ್ನು ಬದಲಾಯಿಸಬೇಕೆಂದು ಹಲವರು ಧ್ವನಿ ಎತ್ತಿದ್ದಾರೆ. ಆದರೆ, ಸದ್ಯದಲ್ಲೇ ಈ ಬದಲಾವಣೆಯ ಸಾಧ್ಯತೆ ಕಡಿಮೆ.

ಸತತ ಎರಡು ಟೆಸ್ಟ್‌ ಚಾಂಪಿಯನ್‌ಶಿಪ್‌ ಸೋಲನ್ನು ಅನುಭವಿಸಿರುವ ಭಾರತ, ಮುಂದೆ ಈ ವರ್ಷ ಭಾರತದಲ್ಲೇ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಕಣಕ್ಕಿಳಿಯುತ್ತಿದೆ. ಇದು ನಾಯಕ ರೋಹಿತ್ ಶರ್ಮಾ ಅವರ ಮುಂದಿರುವ ಬಲು ದೊಡ್ಡ ಅವಕಾಶ ಹಾಗೂ ಸವಾಲು. ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಮತ್ತು ಟೀಕಾಕಾರರ ಬಾಯಿ ಮುಚ್ಚಿಸಲು ಭಾರತಕ್ಕೆ ಐಸಿಸಿ ಟ್ರೋಫಿ ಗೆದ್ದು ಕೊಡುವುದೇ ಅವರ ಮುಂದಿರುವ ದಾರಿ.

ಭಾರತದ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಆಯ್ಕೆಗಾರ ದಿಲೀಪ್ ವೆಂಗ್‌ಸರ್ಕರ್, ಈ ವಿಷಯದ ಬಗ್ಗೆ ಧ್ವನಿ ಎತ್ತಿದ್ದಾರೆ. ಭಾರತ ಆಗಾಗ ವಿಫಲವಾಗುತ್ತಿರುವುದಕ್ಕೆ ಬಿಸಿಸಿಐ ಆಯ್ಕೆ ಸಮಿತಿಯಲ್ಲಿನ ದೂರದೃಷ್ಟಿಯ ಕೊರತೆಯೇ ಪ್ರಮುಖ ಕಾರಣ ಎಂದು ಅವರು ಹೇಳಿದ್ದಾರೆ.

ಭಾರತದ ಅನೇಕ ಮಾಜಿ ಕ್ರಿಕೆಟಿಗರು ಪ್ರಸ್ತುತ ಭಾರತ ತಂಡದ ಪ್ರದರ್ಶನ ಹಾಗೂ ಆಯ್ಕೆ ಸಮಿತಿಯ ಕುರಿತಾಗಿ ಅಸಮಾಧಾನ ಹೊರ ಹಾಕಿದ್ದಾರೆ. ಅವರ ಪಟ್ಟಿಗೆ ವೆಂಗ್‌ಸರ್ಕರ್ ಕೂಡಾ ಸೇರಿಕೊಂಡಿದ್ದಾರೆ. ಈ ಕುರಿತು ಹಿಂದೂಸ್ತಾನ್ ಟೈಮ್ಸ್‌ನೊಂದಿಗಿನ ಸಂವಾದದಲ್ಲಿ ಮಾನಾಡಿದ 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ, ಹಿಂದಿನ ಆಯ್ಕೆಗಾರರ ಮೇಲೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಭಾರತ ಬಿಸಿಸಿಐ ಆಯ್ಕೆ ಸಮಿತಿಯಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಿದ ಅನೇಕರಿಗೆ, ದೂರದೃಷ್ಟಿಯೇ ಇಲ್ಲ ಎಂದು ಅವರು ಆರೋಪಿಸಿದ್ದಾರೆ. ರೋಹಿತ್ ಉತ್ತರಾಧಿಕಾರಿಯಾಗಿ ಉತ್ತಮ ಆಯ್ಕೆಯ ಆಟಗಾರನನ್ನು ರೂಪಿಸುವಲ್ಲಿ ಆಯ್ಕೆ ಸಮಿತಿ ವಿಫಲವಾಗಿದೆ ಎಂದು ಅವರು ಹೇಳಿದರು.

"ದುರದೃಷ್ಟಕರ ಅಂಶವೆಂದರೆ, ಕಳೆದ ಆರರಿಂದ ಏಳು ವರ್ಷಗಳಿಂದ ನಾನು ನೋಡಿದ ಆಯ್ಕೆದಾರರಿಗೆ ದೂರದೃಷ್ಟಿಯೇ ಇಲ್ಲ. ಅಷ್ಟೇ ಅಲ್ಲ ಆಟದ ಬಗ್ಗೆ ಆಳವಾದ ಜ್ಞಾನ ಅಥವಾ ಕ್ರಿಕೆಟ್ ಕುರಿತ ಸಾಮಾನ್ಯ ಪ್ರಜ್ಞೆಯೇ ಇಲ್ಲ. ಅವರು ಶಿಖರ್ ಧವನ್ ಅವರನ್ನು ಭಾರತ ತಂಡದ ನಾಯಕರನ್ನಾಗಿ ಮಾಡಿದರು (ಪ್ರವಾಸಗಳ ಸಂದರ್ಭ ಮತ್ತು ಪ್ರಮುಖ ಆಟಗಾರರು ಅಲಭ್ಯರಿದ್ದಾಗ). ಅಲ್ಲಿ ಭವಿಷ್ಯದ ನಾಯಕನನ್ನು ಹುಡುಕಬಹುದಿತ್ತು,” ಎಂದು ವೆಂಗ್‌ಸರ್ಕರ್ ಹೇಳಿದ್ದಾರೆ.

ಈ ಬಗ್ಗೆ ಮ್ಯಾನೇಜ್‌ಮೆಂಟ್‌ ಅನ್ನು ತೀವ್ರ ತರಾಟೆಗೆ ತೆಗೆದುಕೊಂಡ ಅವರು, “ನೀವು ನಾಯಕನ ಸ್ಥಾನಕ್ಕೆ ಯಾರನ್ನೂ ರೂಪಿಸಿಲ್ಲ. ನೀವು ಸಂದರ್ಭಕ್ಕೆ ತಕ್ಕಾನಾಗಿ ಆಡುತ್ತೀರಿ ಅಷ್ಟೇ. ಜಗತ್ತಿನ ಶ್ರೀಮಂತ ಕ್ರಿಕೆಟ್ ಮಂಡಳಿ ಎಂದು ಮಾತನಾಡುತ್ತೀರಿ. ಹಾಗಿದ್ರೆ ಬೆಂಚ್ ಬಲ ಏನಾಯ್ತು? ಕೇವಲ ಐಪಿಎಲ್ ಆಯೋಜಿಸುವುದು, ಮಾಧ್ಯಮ ಹಕ್ಕುಗಳ ಮೂಲಕ ಕೋಟ್ಯಂತರ ರೂಪಾಯಿ ಗಳಿಸುವುದು ಮಾತ್ರ ಸಾಧನೆಯಾಗಬಾರದು,” ಎಂದು ವೆಂಗ್‌ಸರ್ಕರ್‌ ಕಠಿಣ ಮಾತುಗಳನ್ನಾಡಿದ್ದಾರೆ.

ಐಸಿಸಿ ವಿಶ್ವ ಟೆಸ್ಟ್‌ ಚಾಂಪಿ​ಯ​ನ್‌​ಶಿಪ್‌ ಫೈನ​ಲ್‌ ಸೋತ ಬೆನ್ನಲ್ಲೇ ಪತ್ನಿ ಜೊತೆಗೆ ಮಾಲ್ಡೀವ್ಸ್​ಗೆ ಹಾರಿರುವ ಟೀಮ್​ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾ ಅವರಿಗೆ, ಮುಂದಿನ ತಿಂಗಳು ನಡೆಯಲಿರುವ ವೆಸ್ಟ್‌ ​ಇಂಡೀಸ್‌ ವಿರುದ್ಧ ಪ್ರವಾಸಕ್ಕೆ ವಿಶ್ರಾಂತಿ ಸಿಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಆದರೆ ಇದೇ ವಿಚಾರವಾಗಿ ಹಿಟ್​ಮ್ಯಾನ್​ ಟ್ರೋಲ್​ ಆಗುತ್ತಿದ್ದಾರೆ. ರೋಹಿತ್​ ಜೊತೆಗೆ ಪ್ರಮುಖ ಆಟಗಾರರಿಗೂ ವಿಂಡೀಸ್​ ಪ್ರವಾಸಕ್ಕೆ ವಿರಾಮ ನೀಡುವ ಸಾಧ್ಯತೆ ಇದೆ. ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ