Rohit Sharma: ವೆಸ್ಟ್ ಇಂಡೀಸ್ ಸರಣಿಗೆ ನಾಯಕ ರೋಹಿತ್ ಶರ್ಮಾಗೆ ವಿಶ್ರಾಂತಿ ಸಾಧ್ಯತೆ; ಕೋಟಿ ಕೋಟಿ ಪಡೆಯೋದು ಇದಕ್ಕೇನಾ ಎಂದ ನೆಟಿಜನ್ಸ್
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ (WTC Final 2023) ಮುಗಿಸಿದ ಟೀಮ್ ಇಂಡಿಯಾ, ಮುಂದಿನ ವೆಸ್ಟ್ ಇಂಡೀಸ್ ಸರಣಿಗೆ ಸಿದ್ಧತೆ ನಡೆಸಿದೆ. ಆದರೆ ಈ ಸರಣಿಗೆ ನಾಯಕ ರೋಹಿತ್ ಶರ್ಮಾಗೆ (Rohit Sharma) ವಿಶ್ರಾಂತಿ ನೀಡಲು ಬಿಸಿಸಿಐ ಚಿಂತಿಸಿದೆ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ (WTC Final 2023) ಸೋತ ಬೆನ್ನಲ್ಲೇ ಪತ್ನಿ ಜೊತೆಗೆ ಮಾಲ್ಡೀವ್ಸ್ಗೆ ಹಾರಿರುವ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ (Rohit Sharma) ಅವರಿಗೆ, ಮುಂದಿನ ತಿಂಗಳು ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧ (India vs West Indies) ಪ್ರವಾಸಕ್ಕೆ ವಿಶ್ರಾಂತಿ ಸಿಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಆದರೆ ಇದೇ ವಿಚಾರವಾಗಿ ಹಿಟ್ಮ್ಯಾನ್ ಟ್ರೋಲ್ ಆಗುತ್ತಿದ್ದಾರೆ. ರೋಹಿತ್ ಜೊತೆಗೆ ಪ್ರಮುಖ ಆಟಗಾರರಿಗೂ ವಿಂಡೀಸ್ ಪ್ರವಾಸಕ್ಕೆ ವಿರಾಮ ನೀಡುವ ಸಾಧ್ಯತೆ ಇದೆ.
ರೋಹಿತ್ ಶರ್ಮಾ ಐಪಿಎಲ್ (IPL) ಸೇರಿದಂತೆ ಕೆಲವು ತಿಂಗಳಿಂದ ತೀವ್ರ ವೈಫಲ್ಯ ಅನುಭವಿಸುತ್ತಿದ್ದಾರೆ. ಐಪಿಎಲ್ನಲ್ಲಿ ಆಡಿದ 16 ಪಂದ್ಯಗಳಲ್ಲಿ 20.75ರ ಸರಾಸರಿಯಲ್ಲಿ 332 ರನ್ ಗಳಿಸಿದ್ದರು. ಡಬ್ಲ್ಯುಟಿಸಿ ಫೈನಲ್ನಲ್ಲೂ 15 ಮತ್ತು 43 ರನ್ ಸಿಡಿಸಿ ಔಟಾಗಿದ್ದರು. ಬ್ಯಾಟಿಂಗ್ನಲ್ಲಿ ತೀವ್ರ ಕಳಪೆ ಪ್ರದರ್ಶನ ನೀಡುತ್ತಿರುವ ಹಿನ್ನೆಲೆ ವಿಂಡೀಸ್ ಪ್ರವಾಸಕ್ಕೆ ಬ್ರೇಕ್ ನೀಡಲಾಗುತ್ತಿದೆ.
ಆದರೆ, ಪೂರ್ಣ ಪ್ರವಾಸಕ್ಕೋ, ಟೆಸ್ಟ್ ಅಥವಾ ಏಕದಿನ ಸರಣಿಗೋ ಎಂಬುದು ಮಾಹಿತಿ ಇಲ್ಲ. ಸದ್ಯ ಮಾಲ್ಡೀವ್ಸ್ನಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿರುವ ರೋಹಿತ್, ಭಾರತಕ್ಕೆ ಬಂದ ಬಳಿಕ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ರೋಹಿತ್ ಶರ್ಮಾ ಒಪ್ಪಿ ಟೆಸ್ಟ್ ಸರಣಿಗೆ ಅಲಭ್ಯರಾದರೆ, ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸಲಿದ್ದಾರೆ.
ವಿರಾಟ್ ಕೊಹ್ಲಿಗೂ ರೆಸ್ಟ್
ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ (Virat Kohli) ಅವರಿಗೂ ವೆಸ್ಟ್ ಇಂಡೀಸ್ ಸರಣಿಗೂ ರೆಸ್ಟ್ ನೀಡಲು ಬಿಸಿಸಿಐ ಚಿಂತಿಸಿದೆ. ಅನುಭವಿ ಆಟಗಾರ ಚೇತೇಶ್ವರ್ ಪೂಜಾರಗೂ ವಿಶ್ರಾಂತಿ ಸಿಗುವ ಸಾಧ್ಯತೆ ಇದೆ. ಒಂದ್ವೇಳೆ ರೋಹಿತ್, ಕೊಹ್ಲಿ ಇಬ್ಬರಿಗೂ ರೆಸ್ಟ್ ನೀಡಿದರೆ, ಪೂಜಾರ ತಂಡಕ್ಕೆ ಸೆಲೆಕ್ಟ್ ಆಗುವ ಸಾಧ್ಯತೆ ಇದೆ. ಕೆಲಸದ ಹೊರೆ ಇಳಿದಲು ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್‌ಗೂ ವಿಶ್ರಾಂತಿ ನೀಡಬಹುದು.
ರೋಹಿತ್ಗೆ ಮತ್ಯಾಕೆ ರೆಸ್ಟ್?
ವೆಸ್ಟ್ ಇಂಡೀಸ್ ಸರಣಿಗೆ ಇನ್ನು ಒಂದು ತಿಂಗಳು ಕಾಲಾವಕಾಶ ಇದೆ. ಈ ಒಂದು ತಿಂಗಳು ವಿಶ್ರಾಂತಿ ಸಿಗಲಿದೆ. ಹೀಗಿದ್ದರೂ, ಮತ್ಯಾಕೆ ರೆಸ್ಟ್ ಎಂದು ನೆಟಿಜನ್ಸ್ ಟ್ರೋಲ್ ಮಾಡುತ್ತಿದ್ದಾರೆ. ಪಡೆಯುತ್ತಿರುವುದು ಕೋಟಿ ಕೋಟಿ. ಆದರೆ ವರ್ಷಕ್ಕೆ ನಾಲ್ಕೈದು ತಿಂಗಳು ರೆಸ್ಟ್ ಪಡೆಯುತ್ತಾರೆ. ಪದೇ ಪದೇ ರೆಸ್ಟ್ ನೀಡೋದು ಯಾಕೆ? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ತಂಡದ ಆಯ್ಕೆ ಯಾವಾಗ?
ಇಂಡೋ-ವಿಂಡೀಸ್ ಸಿರೀಸ್ ಜುಲೈ 12ರಿಂದ ಪ್ರಾರಂಭವಾಗಲಿದೆ. ಈ ಪ್ರವಾಸಕ್ಕೆ ಈ ತಿಂಗಳ 27ರಂದು ಬಿಸಿಸಿಐ ತಂಡ ಪ್ರಕಟಿಸುವ ಸಾಧ್ಯತೆ ಇದೆ. ಈ ಸರಣಿಗೆ ಯುವ ಆಟಗಾರರಿಗೆ ಅವಕಾಶ ನೀಡಲು ಬಿಸಿಸಿಐ ಮತ್ತು ಸೆಲೆಕ್ಟರ್ಗಳು ನಿರ್ಧರಿಸಿದ್ದಾರೆ. ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಋತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ಸಾಯಿ ಸುದರ್ಶನ್, ತಿಲಕ್ ವರ್ಮಾ ಸೇರಿ ಯುವ ಆಟಗಾರರಿಗೆ ಮಣೆ ಹಾಕುವ ನಿರೀಕ್ಷೆಯಿದೆ.
ವೇಳಾಪಟ್ಟಿ ಹೀಗಿದೆ
3ನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಭಾಗವಾಗಿರುವ 2 ಪಂದ್ಯಗಳ ಟೆಸ್ಟ್ ಸರಣಿಯು ಜುಲೈ 12ರಿಂದ ಡೊಮಿನಿಕಾದಲ್ಲಿ ಪ್ರಾರಂಭವಾಗಲಿದೆ. ಟ್ರಿನಿಡಾಡ್ನಲ್ಲಿ ಜುಲೈ 20ರಿಂದ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ. ಬಳಿಕ ಜುಲೈ 27, 29, ಆಗಸ್ಟ್ 1ರಂದು ಏಕದಿನ ಸರಣಿ, ಆಗಸ್ಟ್ 3ರಿಂದ ಐದು ಪಂದ್ಯಗಳ ಚುಟುಕು ಸರಣಿ ಶುರುವಾಗಲಿದೆ.