logo
ಕನ್ನಡ ಸುದ್ದಿ  /  ಕ್ರೀಡೆ  /  Ms Dhoni Ipl 2023: ಇದು ನನ್ನ ಕ್ರಿಕೆಟ್​ ವೃತ್ತಿಜೀವನದ ಕೊನೆಯ ಹಂತ; ನಿವೃತ್ತಿಯ ಸುಳಿವು ನೀಡಿದ ಮಹೇಂದ್ರ ಸಿಂಗ್​​ ಧೋನಿ

MS Dhoni IPL 2023: ಇದು ನನ್ನ ಕ್ರಿಕೆಟ್​ ವೃತ್ತಿಜೀವನದ ಕೊನೆಯ ಹಂತ; ನಿವೃತ್ತಿಯ ಸುಳಿವು ನೀಡಿದ ಮಹೇಂದ್ರ ಸಿಂಗ್​​ ಧೋನಿ

Prasanna Kumar P N HT Kannada

Apr 22, 2023 03:29 PM IST

google News

ಎಂಎಸ್​ ಧೋನಿ

    • 16ನೇ ಆವೃತ್ತಿಯ ಐಪಿಎಲ್​​​ನ (IPL) 29ನೇ ಪಂದ್ಯದಲ್ಲಿ ಸನ್​​ರೈಸರ್ಸ್​ ಹೈದರಾಬಾದ್ (SRH)​ ವಿರುದ್ಧ ಗೆದ್ದ ಬಳಿಕ ಪೋಸ್ಟ್​ ಮ್ಯಾಚ್​ ಪ್ರೆಸೆಂಟೇಷನ್​ನಲ್ಲಿ ಮಾತನಾಡಿದ ಚೆನ್ನೈ ಸೂಪರ್​ ಕಿಂಗ್ಸ್​​ ನಾಯ ಎಂಎಸ್​​ ಧೋನಿ (CSK Captain MS Dhoni), ನಿವೃತ್ತಿ ಕುರಿತ ವದಂತಿಗಳಿಗೆ ಪುಷ್ಠಿ ನೀಡಿದ್ದಾರೆ. ಇದು ನನ್ನ ಕೊನೆಯ ಹಂತ ಎಂದು ಹೇಳಿಕೆ ನೀಡಿದ್ದಾರೆ.
ಎಂಎಸ್​ ಧೋನಿ
ಎಂಎಸ್​ ಧೋನಿ

ಮಹೇಂದ್ರ ಸಿಂಗ್ ಧೋನಿ (Mahendra Singh Dhoni) 16ನೇ ಆವೃತ್ತಿಯ ಐಪಿಎಲ್​-2023ರ (IPL 2023) ಬಳಿಕ ಸಂಪೂರ್ಣವಾಗಿ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲಿದ್ದಾೆ ಎಂಬ ಸುದ್ದಿ ಬಹಳ ದಿನಗಳಿಂದಲೂ ಹರಿದಾಡುತ್ತಿದೆ. ಧೋನಿ ಸಹ ಈ ಹಿಂದೆ ನನ್ನ ಕೊನೆಯ ಪಂದ್ಯ ಚೆನ್ನೈನಲ್ಲಿ (Chennai) ಆಗಿರಲಿದೆ ಎಂದು ಹೇಳಿದ್ದರು. ಇದಕ್ಕೆ ಪುಷ್ಟಿ ನೀಡುವಂತೆ ಧೋನಿಯೇ ಸ್ವತಃ ತಮ್ಮ ನಿವೃತ್ತಿ ಕುರಿತ ಅನುಮಾನಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಏಪ್ರಿಲ್​​ 21ರಂದು ನಡೆದ ಸನ್​ರೈಸರ್ಸ್​ ಹೈದರಾಬಾದ್ (Sunrisers Hyderabad)​ ಎದುರಿನ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ (Chennai Super Kings) 7 ವಿಕೆಟ್​ಗಳಿಂದ ಗೆದ್ದು ಬೀಗಿತು. ಎಂಎ ಚಿದಂಬರಂ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಸನ್​ರೈಸರ್ಸ್  20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 134 ರನ್​ ಗಳಿಸಿತ್ತು. ಈ ಗುರಿ ಬೆನ್ನತ್ತಿದ ಸಿಎಸ್​ಕೆ 3 ವಿಕೆಟ್​ ಕಳೆದುಕೊಂಡು 138 ರನ್​ ಗಳಿಸಿತು. ಗೆದ್ದ ಬಳಿಕ ಪೋಸ್ಟ್​ ಮ್ಯಾಚ್​ ಪ್ರೆಸೆಂಟೇಷನ್​ನಲ್ಲಿ ಮಾತನಾಡಿದ ಧೋನಿ, ನಿವೃತ್ತಿ ಕುರಿತ ವದಂತಿಗಳಿಗೆ ಪುಷ್ಠಿ ನೀಡಿದ್ದಾರೆ.

'ಪ್ರಸ್ತುತ ಆವೃತ್ತಿಯ ಮಧ್ಯದಲ್ಲಿ ಏನನ್ನೂ ಹೇಳುವುದು ಸರಿಯಲ್ಲ. ಒಂದು ವಿಷಯವೆಂದರೆ ಇದು ನನ್ನ ವೃತ್ತಿ ಜೀವನದ ಕೊನೆಯ ಹಂತ. ಹಾಗಾಗಿ ನಾನು ಪ್ರತಿ ಪಂದ್ಯವನ್ನು, ಪ್ರತಿ ಕ್ಷಣವನ್ನು ಎಂಜಾಯ್​​​ ಮಾಡಲು ಬಯಸುತ್ತೇನೆ. 3 ವರ್ಷಗಳ ನಂತರ ಚೆನ್ನೈನಲ್ಲಿ ಐಪಿಎಲ್​​ ಪಂದ್ಯಗಳು ನಡೆಯುತ್ತಿವೆ. ಅಭಿಮಾನಿಗಳು ಮೈದಾನಕ್ಕೆ ಬಂದು​ ಬೆಂಬಲ ನೀಡುತ್ತಿದ್ದಾರೆ. ಅವರ ಪ್ರೀತಿ ಮತ್ತು ಕಾಳಜಿಯನ್ನು ಎಂದಿಗೂ ಮರೆಯುವುದಿಲ್ಲ' ಎಂದು ನಿವೃತ್ತಿಯ ಕುರಿತು ಸುಳಿವು ನೀಡಿದ್ದಾರೆ.

15ನೇ ಆವೃತ್ತಿಯ ಐಪಿಎಲ್​​ನಲ್ಲಿ MS ಧೋನಿ ನಾಯಕತ್ವ ತ್ಯಜಿಸಿ ರವೀಂದ್ರ ಜಡೇಜಾಗೆ ವಹಿಸಿದ್ದಾಗಲೇ, ಇದೇ ಅವರ ಕೊನೆಯ ಐಪಿಎಲ್​ ಎಂಬ ಸುದ್ದಿ ಹರಿದಾಡಿತ್ತು. ಬಳಿಕ 2021ರಲ್ಲಿ ಟ್ರೋಫಿ ಗೆದ್ದ ಬಳಿಕ ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಧೋನಿ, ನಾನು ಕೊನೆಯ ಪಂದ್ಯವನ್ನು ಚೆನ್ನೈನಲ್ಲಿ ಆಡಲಿದ್ದೇನೆ. ಅದು ಮುಂದಿನ ವರ್ಷವೂ ಆಗಿರಬಹುದು ಅಥವಾ ಐದು ವರ್ಷಗಳ ನಂತರವೂ ಆಗಿರಬಹುದು ಎಂದು ತಿಳಿಸಿದ್ದರು.

ಮೇ 14ರಂದು ಧೋನಿಗೆ ಕೊನೆಯ ಪಂದ್ಯ?

ಇದೀಗ ಏಪ್ರಿಲ್​​​​ 21ರಂದು ಧೋನಿ ನೀಡಿರುವ ಹೇಳಿಕೆ, 16ನೇ ಆವೃತ್ತಿಯ ಐಪಿಎಲ್​ ಬಳಿಕ ಸಂಪೂರ್ಣವಾಗಿ ಮೈದಾನದಿಂದ ದೂರ ಸರಿಯಲಿದ್ದಾರೆ ಎಂಬುದಕ್ಕೆ ಸ್ಪಷ್ಟನೆ ನೀಡಿದೆ. ಕೆಲವು ವರದಿಗಳ ಪ್ರಕಾರ, ಮೇ 14ರಂದು ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ನಡೆಯುವ ಪಂದ್ಯವೇ ಧೋನಿಗೆ ಕೊನೆಯ ಪಂದ್ಯ ಎನ್ನಲಾಗುತ್ತಿದೆ. 

ಈ ಪಂದ್ಯದಲ್ಲಿ ಧೋನಿಗೆ ಅದ್ಧೂರಿ ಬೀಳ್ಕೊಡುಗೆ ನೀಡಲು ಸಿಎಸ್​ಕೆ ಫ್ರಾಂಚೈಸಿ ವ್ಯವಸ್ಥೆ ಮಾಡಲಾಗುತ್ತಿದೆ ಎನ್ನಲಾಗಿದೆ. ಒಂದು ವೇಳೆ ಸಿಎಸ್​ಕೆ ಪ್ಲೇ ಆಫ್​ಗೆ ಪ್ರವೇಶ ನೀಡಿದರೆ, ಚೆನ್ನೈನಲ್ಲೇ ನಡೆಯಲಿರುವ ಕ್ವಾಲಿಫೈಯರ್​​, ಎಲಿಮಿನೇಟರ್​ ಪಂದ್ಯದ ಧೋನಿ ವಿದಾಯ ಹೇಳುವ ಸಾಧ್ಯತೆ ಇದೆ (ಚೆನ್ನೈನಲ್ಲೇ ತಮ್ಮ ಕೊನೆಯ ಪಂದ್ಯ ಆಡುವುದಾಗಿ ಹೇಳಿದ್ದ ಧೋನಿ). ಅವರ ನಾಯಕತ್ವದಲ್ಲಿ ಸಿಎಸ್​ಕೆ 4 ಬಾರಿ ಟ್ರೋಫಿ ಗೆದ್ದಿದೆ.

2019ರ ಏಕದಿನ ವಿಶ್ವಕಪ್ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದಿರುವ MS ಧೋನಿ, 2020ರ ಆಗಸ್ಟ್ 15ರಂದು ನಿವೃತ್ತಿ ಘೋಷಿಸಿದ್ದರು. ಟೀಮ್​ ಇಂಡಿಯಾಗೆ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದುಕೊಟ್ಟ ಧೋನಿಗೆ ಕನಿಷ್ಠ ವಿದಾಯ ಪಂದ್ಯವೂ ಇಲ್ಲದೇ ನಿರ್ಗಮಿಸಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಹಾಗಾಗಿ ಸಿಎಸ್​ಕೆ ಫ್ರಾಂಚೈಸಿ ಧೋನಿಗೆ ಅದ್ಧೂರಿ ಬಿಳ್ಕೋಡುಗೆ ನೀಡಲು ಮುಂದಾಗಿದೆ. ಅಂದಿನಿಂದಲೂ ಧೋನಿ ಅವರ ಐಪಿಎಲ್ ನಿವೃತ್ತಿ ಬಗ್ಗೆ ಚರ್ಚೆ ನಡೆಯುತ್ತಿದೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ