logo
ಕನ್ನಡ ಸುದ್ದಿ  /  ಕ್ರೀಡೆ  /  Sunil Gavaskar: ಸಚಿನ್, ದ್ರಾವಿಡ್, ಲಕ್ಷ್ಮಣ್ ನಿರಂತರ ಸಲಹೆ ಪಡೀತಿದ್ರು; ಆದರೆ ಈಗಿನ ಕ್ರಿಕೆಟಿಗರಿಗೆ ಅಹಂ; ಸುನಿಲ್ ಗವಾಸ್ಕರ್ ಕಿಡಿ

Sunil Gavaskar: ಸಚಿನ್, ದ್ರಾವಿಡ್, ಲಕ್ಷ್ಮಣ್ ನಿರಂತರ ಸಲಹೆ ಪಡೀತಿದ್ರು; ಆದರೆ ಈಗಿನ ಕ್ರಿಕೆಟಿಗರಿಗೆ ಅಹಂ; ಸುನಿಲ್ ಗವಾಸ್ಕರ್ ಕಿಡಿ

Prasanna Kumar P N HT Kannada

Jul 13, 2023 03:29 PM IST

google News

ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್

    • Sunil Gavaskar: ಸಚಿನ್, ದ್ರಾವಿಡ್, ಲಕ್ಷ್ಮಣ್ ಅವರು ತಮ್ಮ ಬ್ಯಾಟಿಂಗ್​ ವಿಧಾನ, ತಂತ್ರಗಳಲ್ಲಿ ತಪ್ಪಿದ್ದರೆ ತಿಳಿಸಿ ಎಂದು ಕೇಳುತ್ತಿದ್ದರು. ಅವರು ಹಿರಿಯರಿಗೆ ತುಂಬಾ ಗೌರವವಿದೆ. ಆದರೆ, ಇಂದಿನ ಪೀಳಿಗೆ ಆಟಗಾರರಿಂದ ಹಿರಿಯರಿಗೆ ಅಂತಹ ಗೌರವವೇ ಇಲ್ಲವಾಗಿದೆ ಎಂದು ಸುನಿಲ್ ಗವಾಸ್ಕರ್ ಬೇಸರ ವ್ಯಕ್ತಪಡಿಸಿದ್ದಾರೆ.
ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್
ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023 ಫೈನಲ್​ ಪಂದ್ಯದಲ್ಲಿ (WTC Final 2023) ಹೀನಾಯ ಸೋಲಿನ ಬಳಿಕ ರೋಹಿತ್​ ಶರ್ಮಾ (Rohit Sharma) ನೇತೃತ್ವದ ಭಾರತ ತಂಡವನ್ನು (Team India) ಟೀಕಿಸಿದ್ದ ಲೆಜೆಂಡರಿ ಆಟಗಾರ ಸುನಿಲ್ ಗವಾಸ್ಕರ್ (Sunil Gavaskar), ವೆಸ್ಟ್ ಇಂಡೀಸ್ (West Indies) ವಿರುದ್ಧದ ಟೆಸ್ಟ್ ಸರಣಿಯಿಂದ ಯಾವುದೇ ಪ್ರಯೋಜನ ಇಲ್ಲ ಎಂದ ಹೇಳಿದ್ದರು. ರಣಜಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಆಟಗಾರರಿಗೆ ಅವಕಾಶ ನೀಡದೇ ಹೋದರೆ, ಸರಣಿ ಏಕೆ ನಡೆಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

‘ಪ್ರಮುಖರೇ ಸಲಹೆ ಪಡೆಯುತ್ತಿದ್ದರು’

ಈಗ ಮತ್ತೊಮ್ಮೆ ಟೀಮ್​ ಇಂಡಿಯಾ ಆಟಗಾರರ ವಿರುದ್ಧ ಬ್ಯಾಟಿಂಗ್ ದಿಗ್ಗಜ ಗವಾಸ್ಕರ್​ ಕಿಡಿಕಾರಿದ್ದಾರೆ. ಪ್ರಸ್ತುತ ಪೀಳಿಗೆಯ ಆಟಗಾರರು, ಹಿರಿಯ ಹಾಗೂ ಅನುಭವಿ ಆಟಗಾರರ ಸಲಹೆ ಪಡೆಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸಚಿನ್ ತೆಂಡೂಲ್ಕರ್, ರಾಹುಲ್​ ದ್ರಾವಿಡ್, ವಿವಿಎಸ್​ ಲಕ್ಷ್ಮಣ್​ ಅವರಂತಹ ದಿಗ್ಗಜರು ಆಟಗಾರರೇ, ಅವರು ಆಡುವ ಸಂದರ್ಭದಲ್ಲಿ ಬ್ಯಾಟಿಂಗ್ ತಂತ್ರಗಳು, ನ್ಯೂನತೆಗಳಿಗೆ ಸಂಬಂಧಿಸಿ ನಿರಂತರ ಸಲಹೆ ಪಡೆಯುತ್ತಿದ್ದರು. ಆದರೀಗ ಭಾರತದ ಸಕ್ರಿಯ ಕ್ರಿಕೆಟಿಗರು, ಸಲಹೆ ಕೇಳದ ಕುರಿತು ಕೆಂಡಕಾರಿದ್ದಾರೆ.

‘ಯಾರೂ ಸಲಹೆ ಕೇಳಿಲ್ಲ’

ಸಚಿನ್, ದ್ರಾವಿಡ್, ಲಕ್ಷ್ಮಣ್ ಅವರು ತಮ್ಮ ಬ್ಯಾಟಿಂಗ್​ ವಿಧಾನ, ತಂತ್ರಗಳಲ್ಲಿ ತಪ್ಪಿದ್ದರೆ ತಿಳಿಸಿ ಎಂದು ಕೇಳುತ್ತಿದ್ದರು. ಅವರು ಹಿರಿಯರಿಗೆ ತುಂಬಾ ಗೌರವ ನೀಡುತ್ತಾರೆ. ಆದರೆ, ಇಂದಿನ ಪೀಳಿಗೆ ಆಟಗಾರರಿಂದ ಹಿರಿಯರಿಗೆ ಅಂತಹ ಗೌರವವೇ ಇಲ್ಲ. ಸದ್ಯ ಭಾರತ ತಂಡದಲ್ಲಿ ಇರುವ ಯಾವ ಕ್ರಿಕೆಟಿಗರೂ ನನ್ನ ಬಳಿ ಬಂದಿಲ್ಲ. ಯಾವುದೇ ರೀತಿಯ ಸಲಹೆ ಕೇಳಿಲ್ಲ. ಅವರಿಗೆ ಅಹಂ ಅಡ್ಡಿಯಾಗುತ್ತಿದೆ ಎಂದು ಸಕ್ರಿಯ ಟೀಮ್​ ಇಂಡಿಯಾ ಆಟಗಾರರ ವಿರುದ್ಧ ಕಿಡಿಕಾರಿದ್ದಾರೆ. ಇದರ ಜೊತೆಗೆ ಸೆಹ್ವಾಗ್​ ನೀಡಿದ್ದ ಸಲಹೆಯನ್ನೂ ಇಲ್ಲಿ ಉಲ್ಲೇಖಿಸಿದರು. ಈ ಬಗ್ಗೆ ದಿ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

‘ಸೆಹ್ವಾಗ್​ಗೆ ಸಲಹೆ ಕೊಟ್ಟಿದ್ದೆ’

ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್, ತಮ್ಮ ಫಾರ್ಮ್ ಕಳೆದುಕೊಂಡು ಭಾರತ ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಪರಿಸ್ಥಿತಿಗೆ ತಲುಪಿದ್ದರು. ಆ ಸಮಯದಲ್ಲಿ ನಾನು ವೀರೂ ಅವರನ್ನು ಭೇಟಿಯಾಗಿದ್ದೆ. ಆಫ್ ಸ್ಟಂಪ್ ಗಾರ್ಡ್ ಅನ್ನು ಪ್ರಯತ್ನಿಸಲು ಸಲಹೆ ನೀಡಿದ್ದೆ. ಅದಕ್ಕೆ ವೀರು 'ಯಾಕೆ ಸನ್ನಿ ಭಾಯ್' ಎಂದು ಕೇಳಿದ್ದರು. ಇದು ಪ್ರಯತ್ನಿಸು ಆ ಬಳಿಕ ನಿನ್ನ ಆಟ ನೋಡು ಎಂದಿದ್ದೆ ಎಂಬುದನ್ನು ಇಲ್ಲಿ ನೆನಪಿಸಿಕೊಂಡಿದ್ದಾರೆ.

‘ಟಿಪ್ಸ್ ಪಡೆದು ಗೇರ್ ಚೇಂಜ್ ಮಾಡಿದ್ರು’

ನಿನ್ನ ಫುಟ್​ವರ್ಕ್​ ಸ್ವಲ್ಪವೂ ಚೆನ್ನಾಗಿಲ್ಲ. ಹಾಗಾಗಿಯೇ ನೀನು ರನ್ ಗಳಿಸಲು ಪರದಾಟ ನಡೆಸುತ್ತಿರುವೆ. ಬೇಗವೇ ವಿಕೆಟ್​ ಒಪ್ಪಿಸುವೆ. ಹೀಗಾಗಿ ಆಫ್ ಸ್ಟಂಪ್ ಗಾರ್ಡ್ ಧರಿಸಲು ಪ್ರಯತ್ನಿಸಿ ನೋಡು, ಆಫ್ ಸ್ಟಂಪ್ ಆಚೆಗೆ ಹೋಗುವ ಚೆಂಡುಗಳ ಸ್ಪಷ್ಟ ಕಲ್ಪನೆ ನಿಮಗೆ ಸಿಗಲಿದೆ. ಇದರಿಂದ ಸೊಗಸಾಗಿ ಮತ್ತು ಸ್ಪಷ್ಟವಾಗಿ ಬ್ಯಾಟ್​ ಬೀಸಲು ನೆರವಾಗುತ್ತದೆ. ಈ ಸಲಹೆ ಪಡೆದ ಬಳಿಕ ವೀರೂ ತಮ್ಮ ಬ್ಯಾಟಿಂಗ್​ ಗೇರ್​ ಚೇಂಜ್​ ಮತ್ತೆ ಅಬ್ಬರಿಸಲು ಶುರುವಿಟ್ಟಿದ್ದರು ಎಂದು ಹೇಳಿದ್ದಾರೆ.

ಕೋಚ್​ಗೆ ತರಾಟೆ ತೆಗೆದುಕೊಂಡ ಸನ್ನಿ

ಬ್ಯಾಟರ್ ಒಂದು ತಪ್ಪನ್ನು ಪದೆಪದೇ ಪುನರಾವರ್ತಿಸಿದರೆ, ಆತನ ತಂತ್ರವನ್ನು ಸರಿಪಡಿಸುವುದೇ ಕೋಚ್‌ ಜವಾಬ್ದಾರಿ. ಆದರೆ, ಟೀಮ್​ ಇಂಡಿಯಾದಲ್ಲಿ ಹಾಗಾಗುತ್ತಿಲ್ಲ. ಕೋಚಿಂಗ್ ಸಿಬ್ಬಂದಿ ಬ್ಯಾಟರ್​​ಗಳ ಆಟದಲ್ಲಿ ಮತ್ತಷ್ಟು ಸುಧಾರಣೆ ತರಲು ಪ್ರಯತ್ನಿಸುತ್ತಿದ್ದಾರೆಯೇ? ಎಲ್ಲಿ ದೋಷವಿದೆ? ಎಲ್ಲಿ ತಪ್ಪಾಗುತ್ತಿದೆ? ಏನು ಸರಿಪಡಿಸಬೇಕೆಂದು ನೀವು ಹೇಳಿದ್ದೀರಾ? ಎಂದು ಭಾರತದ ಕೋಚ್​ಗಳನ್ನು ಪ್ರಶ್ನಿಸಿದ ಗವಾಸ್ಕರ್​, ಕೋಚ್​ ಯಾವಾಗಲೂ ಬ್ಯಾಟ್ಸ್​ಮನ್​​​ಗಿಂತ ಸ್ಪಷ್ಟವಾಗಿರಬೇಕು ಎಂದು ಸಲಹೆ ನೀಡಿದ್ದಾರೆ.

ಹೊಸತನ್ನು ಕಲಿಯುವಂತೆ ಸೂಚನೆ

ಸೀನಿಯರ್​-ಜೂನಿಯರ್ ಯಾರೇ ಆಗಲಿ ಪ್ರತಿಯೊಬ್ಬ ಆಟಗಾರ ಕೂಡ ಹೊಸ ಹೊಸ ವಿಷಯಗಳನ್ನು ಆವಿಷ್ಕರಿಸಬೇಕು. ಬ್ಯಾಟಿಂಗ್​ಗೆ ಸಂಬಂಧಿಸಿ ನೂತನ ತಂತ್ರಗಳಿಗೆ​ ಕಡೆ ಗಮನ ನೀಡಬೇಕು. ಬೌಲರ್​​ ಕೂಡ ಅಷ್ಟೇ ನೂತನ ಬೌಲಿಂಗ್ ಟೆಕ್ನಿಕ್ಸ್​ ಅನ್ನು ಕಲಿಯಬೇಕು. ನಿರಂತರ ಹೊಸತನ್ನೇ ಕಲಿಯುತ್ತಿರಬೇಕು. ಹಾಗಂತ ತರಬೇತುದಾರರು, ತಮ್ಮ ಬುದ್ದಿವಂತಿಕೆಯನ್ನು ಆಟಗಾರರ ಮೇಲೆ ಹೇರಲು ಪ್ರಯತ್ನಿಸಬಾರದು ಎಂದು​​ ಗವಾಸ್ಕರ್ ಸೂಚಿಸಿದ್ದಾರೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ