Rohit Sharma: ವೆಸ್ಟ್ ಇಂಡೀಸ್ನಲ್ಲಿ ಮೊದಲ ಶತಕ, ಆರಂಭಿಕನಾಗಿ ಹಲವು ದಾಖಲೆ; ಸೆಹ್ವಾಗ್, ಗವಾಸ್ಕರ್ರನ್ನು ಹಿಂದಿಕ್ಕಿದ ರೋಹಿತ್ ಶರ್ಮಾ
Jul 14, 2023 02:20 PM IST
ಶತಕ ಸಿಡಿಸಿ ಹಲವು ದಾಖಲೆ ಬರೆದ ರೋಹಿತ್ ಶರ್ಮಾ
- Rohit Sharma: ವೆಸ್ಟ್ ಇಂಡೀಸ್ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ಔಟಾಗಿರುವ ಭಾರತದ ಕ್ಯಾಪ್ಟನ್ ರೋಹಿತ್ ಶರ್ಮಾ ಹಲವು ದಾಖಲೆಗಳ ಒಡೆಯನಾಗಿದ್ದಾರೆ. ಹಾಗಾದರೆ ಆ ದಾಖಲೆಗಳು ಯಾವುವು ಬನ್ನಿ ನೋಡೋಣ.
ಅತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ಭಾರತವು (India vs West Indies) ಭರ್ಜರಿ ಬೇಟೆಗಿಳಿದಿದೆ. ಬೌಲಿಂಗ್ನಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿದ ಭಾರತೀಯರು, ನಂತರ ಬ್ಯಾಟಿಂಗ್ನಲ್ಲೂ ದರ್ಬಾರ್ ನಡೆಸುತ್ತಿದ್ದಾರೆ. ನಿರೀಕ್ಷೆಯಂತೆ ಅದ್ಭುತ ಪ್ರದರ್ಶನ ತೋರುತ್ತಿದ್ದು, ಡೊಮಿನಿಕಾದ ವಿಂಡ್ಸನ್ ಪಾರ್ಕ್ನಲ್ಲಿ ಮೊದಲ ಟೆಸ್ಟ್ನ 2ನೇ ದಿನದಾಟದಲ್ಲಿ ಯಶಸ್ವಿ ಜೈಸ್ವಾಲ್ (Yashasvi Jaiswal) ಮತ್ತು ನಾಯಕ ರೋಹಿತ್ ಶರ್ಮಾ (Rohit Sharma) ಅವರು ತಲಾ ಭರ್ಜರಿ ಶತಕ ಗಳಿಸಿ, ತಂಡಕ್ಕೆ ಮೇಲುಗೈ ತಂದುಕೊಟ್ಟರು.
ಆರಂಭಿಕರಾಗಿ ಕಣಕ್ಕಿಳಿದ ರೋಹಿತ್-ಜೈಸ್ವಾಲ್ ಅವರು 2ನೇ ದಿನದಾಟದಲ್ಲೂ ಉತ್ತಮ ಆರಂಭ ಒದಗಿಸಿಕೊಟ್ಟರು. ಈ ಜೋಡಿ ಮೊದಲ ವಿಕೆಟ್ಗೆ 229 ರನ್ಗಳ ದಾಖಲೆಯ ಜೊತೆಯಾಟವಾಡಿತು. ಸದ್ಯ 162 ರನ್ಗಳ ಮುನ್ನಡೆ ಪಡೆದಿರುವ ಭಾರತ, ಬೃಹತ್ ಮೊತ್ತ ಕಲೆ ಹಾಕುವ ಮುನ್ಸೂಚನೆ ನೀಡಿದೆ. ಸದ್ಯ ರೋಹಿತ್ ಶರ್ಮಾ ಅವರು 221 ಎಸೆತಗಳನ್ನು ಎದುರಿ 103 ರನ್ ಸಿಡಿಸಿದ್ದಾರೆ. ಶತಕ ಸಿಡಿಸಿ ಔಟಾಗಿರುವ ರೋಹಿತ್ ಶರ್ಮಾ ಕೆರಿಬಿಯನ್ನರ ನಾಡಿನಲ್ಲಿ ಹೊಸ ಸಾಧನೆ ಮಾಡಿದ್ದಾರೆ.
ವಿಂಡೀಸ್ನಲ್ಲಿ ಮೊದಲ ಶತಕ
ರೋಹಿತ್ ಶರ್ಮಾಗೆ ಕೆರಿಬಿಯನ್ನರ ನಾಡಿನಲ್ಲಿ ಇದು ಮೊದಲ ಶತಕವಾಗಿದೆ. ಇದೇ ಮೊದಲ ಬಾರಿಗೆ ವೆಸ್ಟ್ ಇಂಡೀಸ್ನಲ್ಲಿ ಸೆಂಚುರಿ ಬಾರಿಸಿದ್ದಾರೆ. ಅಲ್ಲದೆ, 2023ರ ವರ್ಷದಲ್ಲಿ ಇದು ಎರಡನೇ ಶತಕವೂ ಆಗಿದೆ. ಫೆಬ್ರವರಿಯಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೂರಂಕಿ ದಾಟಿದ್ದರು. ಶತಕದ ಮೂಲಕ ಹಲವು ದಾಖಲೆ ಬರೆದ ನಾಯಕ ರೋಹಿತ್ಗೆ ಈ ಶತಕವು ತುಂಬಾ ವಿಶೇಷವಾಗಿದೆ.
ಏಕೆಂದರೆ ಅವರಿಗೆ ವಿದೇಶಿ ನೆಲದಲ್ಲಿ 2ನೇ ಟೆಸ್ಟ್ ಶತಕವಾಗಿದೆ. ಅಲ್ಲದೆ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆವೃತ್ತಿಯಲ್ಲಿ ಟೀಮ್ ಇಂಡಿಯಾ ಪರ ಅಧಿಕ (7) ಸೆಂಚುರಿ ಬಾರಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾಗಿದ್ದಾರೆ. ಓಪನರ್ ಆಗಿಯೇ ಈ ಏಳೂ ಶತಕಗಳನ್ನು ಬಾರಿಸಿರುವುದು ವಿಶೇಷ. ಜೊತೆಗೆ ಆರಂಭಿಕನಾಗಿ ವಿದೇಶಿ ನೆಲದಲ್ಲಿ ಮೂರು ಫಾರ್ಮೆಟ್ನಲ್ಲೂ ಅಧಿಕ 100 ಬಾರಿಸಿದ ದಾಖಲೆಯೂ ರೋಹಿತ್ ಹೆಸರಿಗೆ ದಾಖಲಾಗಿರುವುದು ವಿಶೇಷ.
2013ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ಅದು ಕೂಡ ವೆಸ್ಟ್ ಇಂಡೀಸ್ ವಿರುದ್ಧವೇ ಎಂಬುದು ವಿಶೇಷ. ಅಂದು ಡೆಬ್ಯೂ ಪಂದ್ಯದಲ್ಲೇ ಶತಕ ಸಿಡಿಸಿ ದಾಖಲೆ ಬರೆದಿದ್ದರು. ಆ ಸಿರೀಸ್ನ 2ನೇ ಪಂದ್ಯದಲ್ಲೂ ಮೂರಂಕಿ ದಾಟಿದರು. ಇದೀಗ 10 ವರ್ಷಗಳ ಬಳಿಕ ವಿಂಡೀಸ್ ವಿರುದ್ಧ 3ನೇ ಶತಕ ದಾಖಲಿಸಿದ್ದಾರೆ. ಈ 10 ವರ್ಷಗಳ ಟೆಸ್ಟ್ ಕರಿಯರ್ನಲ್ಲಿ ಹಿಟ್ಮ್ಯಾನ್ಗೆ 10ನೇ ಟೆಸ್ಟ್ ಸೆಂಚುರಿಯಾಗಿದೆ.
ಸೆಹ್ವಾಗ್, ಗವಾಸ್ಕರ್ ದಾಖಲೆ ಮುರಿದ ರೋಹಿತ್
ರೋಹಿತ್ ಆರಂಭಿಕನಾಗಿ ಮತ್ತೊಂದು ದಾಖಲೆ ಬರೆದಿದ್ದಾರೆ. ಅತಿ ಹೆಚ್ಚು ಬಾರಿ 50+ ರನ್ ಗಳಿಸಿದ ಟೀಮ್ ಇಂಡಿಯಾ ಎರಡನೇ ಆಟಗಾರ ಎಂಬ ಸಾಧನೆಗೂ ರೋಹಿತ್ ಪಾತ್ರರಾಗಿದ್ದಾರೆ. ಆ ಮೂಲಕ ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ ದಾಖಲೆಯನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಆರಂಭಿಕರಾಗಿ 308 ಇನ್ನಿಂಗ್ಸ್ಗಳಲ್ಲಿ 102 ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.
ಮೊದಲ ಸ್ಥಾನದಲ್ಲಿರುವ ಸಚಿನ್ ತೆಂಡ 342 ಇನ್ನಿಂಗ್ಸ್ಗಳಲ್ಲಿ 120 ಬಾರಿ ಐವತ್ತರ ಗಡಿ ದಾಟಿದ್ದಾರೆ. ಇನ್ನು ಸುನಿಲ್ ಗವಾಸ್ಕರ್ 286 ಇನ್ನಿಂಗ್ಸ್ಗಳಲ್ಲಿ 101 ಸಲ, 4ನೇ ಸ್ಥಾನದಲ್ಲಿರುವ ಸೆಹ್ವಾಗ್ ಕೂಡ 101 ಬಾರಿ 50ಕ್ಕೂ ಅಧಿಕ ಸಿಡಿಸಿದ್ದು, ಅದಕ್ಕಾಗಿ 388 ಇನ್ನಿಂಗ್ಸ್ಗಳನ್ನು ತೆಗೆದುಕೊಂಡಿದ್ದಾರೆ.