Cricket News:2011ರ ವಿಶ್ವಕಪ್ ಸೆಮೀಸ್‌ನಲ್ಲಿ ಸಚಿನ್ ವಿಕೆಟ್ ಉಳಿಸಲು 2 ಫ್ರೇಮ್ ಕಟ್; ಡಿಆರ್‌ಎಸ್‌ನಿಂದ ಬಚಾವ್ ಎಂದ ಪಾಕ್ ಮಾಜಿ ಕ್ರಿಕೆಟರ್
Jul 02, 2023 10:05 AM IST
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಸಚಿನ್ ಬ್ಯಾಟಿಂಗ್ ವೈಖರಿ (File)
2011ರ ಏಕದಿನ ವಿಶ್ವಕಪ್ ಸೆಮಿ ಫೈನಲ್ ಪಂದ್ಯದಲ್ಲಿ ಸಚಿನ್ ಬ್ಯಾಟಿಂಗ್ ವೇಳೆ ಅವರನ್ನು ಉಳಿಸಲು ಎರಡು ಫ್ರೇಮ್‌ಗಳನ್ನು ಕತ್ತರಿಸಲಾಗಿತ್ತು ಅಂತ ಪಾಕಿಸ್ತಾನದ ಸ್ಪಿನ್ನರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ದೆಹಲಿ: ಹುಟ್ಟುಗುಣ ಸುಟ್ಟರೂ ಹೋಗುವುದಿಲ್ಲ ಎನ್ನುವಂತೆ ಪಾಕಿಸ್ತಾನದ ಕ್ರಿಕೆಟ್ ಆಟಗಾರರು (Pakistan Cricketers) ಹೀನಾಯವಾಗಿ ಸೋತರೂ ಕಾಲೆಳೆಯೋ ಬುದ್ದಿ ಮಾತ್ರ ಬಿಡೋದಿಲ್ಲ ಅನಿಸುತ್ತೆ.
ಸುಮಾರು 12 ವರ್ಷಗಳ ಹಿಂದಿನ ಏಕದಿನ ವಿಶ್ವಕಪ್ ಕ್ರಿಕೆಟ್ (World Cup) ಪಂದ್ಯದಲ್ಲಿ ಸಚಿನ್ ತೆಂಡ್ಯೂಲ್ಕರ್ (Sachin Tendulkar) ಅವರ ಬ್ಯಾಟಿಂಗ್ ಬಗ್ಗೆ ಇದೀಗ ಪಾಕ್ ಮಾಜಿ ಆಟಗಾರನೊಬ್ಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನದ ಮಾಜಿ ಸ್ಪಿನ್ನರ್ ಸಯೀದ್ ಅಜ್ಮಲ್ (Saeed Ajmal) ಮೊಹಾಲಿಯಲ್ಲಿ ನಡೆದಿದ್ದ 2011ರ ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ಸಚಿನ್ ತೆಂಡ್ಯೂಲ್ಕರ್ ಅವರ ವಿಕೆಟ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದು, ಭಾರಿ ಚರ್ಚೆಗೆ ಗ್ರಾಸವಾಗುತ್ತಿದೆ.
23 ರನ್ ಗಳಿಸಿ ಸಚಿನ್ ಬ್ಯಾಟಿಂಗ್ ಮಾಡುತ್ತಿದ್ದಾಗ ಅಜ್ಮಲ್ ಎಸೆತವೊಂದು ಸ್ಟಂಪ್ ಎದುರಿನ ಪ್ಯಾಡ್‌ಗೆ ಬಡಿದಿತ್ತು. ಅಂಪೈರ್ ಅಯಾನ್ ಗೌಲ್ಡ್ ಪಾಕ್ ಆಟಗಾರರ ಮನವಿಗೆ ಔಟ್ ನೀಡಿದ್ರು. ಆದರೆ ಡಿಆರ್‌ಎಸ್‌ನಲ್ಲಿ ಚೆಂಡು ಲೆಗ್ ಸ್ಟಂಪ್‌ಗೆ ಕಟ್ ಆಗಿಲ್ಲ ಅಂತ ತೋರಿಸಿತ್ತು. ಆಗ ಸಚಿನ್ ಬ್ಯಾಟಿಂಗ್ ಮುಂದುವರೆಸಿದ್ರು.
ತೆಂಡ್ಯೂಲ್ಕರ್ ಅವರನ್ನ ಉಳಿಸಲು ರಿಪ್ಲೇನಲ್ಲಿ ಕೊನೆಯ ಎರಡು ಫ್ರೇಮ್‌ಗಳನ್ನು ಕತ್ತರಿಸಲಾಗಿದೆ ಎಂದು 12 ವರ್ಷಗಳ ಬಳಿಕ ಅಜ್ಮಲ್ ಆರೋಪಿಸಿದ್ದಾರೆ. ನಾನು ಭಾರತದಲ್ಲಿ 2011ರ ವಿಶ್ವಕಪ್‌ನಲ್ಲಿ ಆಡಿದ್ದೇನೆ. ಸಚಿನ್ ತೆಂಡ್ಯೂಲ್ಕರ್ ಅವರ ವಿಕೆಟ್‌ನ ವಿವಾದಾತ್ಮಕ ಕರೆಯನ್ನು ನೆನಪಿಸಿಕೊಂಡರೆ, ಅಂಪೈರ್ ಮತ್ತು ನಾನು ಸಚಿನ್ ಔಟಾಗಿದ್ದರು ಎಂದು ಈಗಲೂ ಹೇಳುತ್ತೇವೆ ಎಂದಿದ್ದಾರೆ.
ಸಚಿನ್ ಎದುರಿಸಿದ್ದ ಚೆಂಡು ಸ್ಟಂಪ್‌ಗಳನ್ನು ಮಿಸ್ ಮಾಡಲು ಕೊನೆಯ ಎರಡು ಫ್ರೇಮ್‌ಗಳನ್ನು ಕತ್ತರಿಸಿದ್ದಾರೆ ಎಂದು ಪಾಡ್‌ಕಾಸ್ಟ್‌ನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಜ್ಮಲ್ ಹೇಳಿಕೆಗೆ ಟೀಂ ಇಂಡಿಯಾದ ಆಟಗಾರರು ತಿರುಗೇಟು ನೀಡಿದ್ದಾರೆ.
ಮೊಹಾಲಿಯಲ್ಲಿ ನಡೆದಿದ್ದ 2011ರ ಏಕದಿನ ವಿಶ್ವಕಪ್ ಸೆಮಿ ಫೈನಲ್‌ನ ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡ್ಯೂಲ್ಕರ್ 115 ಎಸೆತಗಳಿಂದ 85 ರನ್ ಗಳ ಉಪಯುಕ್ತ ಕಾಣಿಕೆ ನೀಡಿದ್ರು. ಇದರಿಂದಾಗಿ ಟೀಂ ಇಂಡಿಯಾ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 260 ರನ್ ಗಳಿಸಲು ಸಾಧ್ಯವಾಗಿತ್ತು. ಇದಕ್ಕೆ ಉತ್ತರವಾಗಿ ಪಾಕ್ ತಂಡ 231 ರನ್ ಸರ್ವ ಪತನ ಕಾಣುವ ಮೂಲಕ ಸೋಲೊಪ್ಪಿಕೊಂಡಿತ್ತು. 29 ರನ್ ಗಳಿಂದ ಭರ್ಜರಿ ಗೆಲುವು ಸಾಧಿಸಿದ್ದ ಧೋನಿ ಪಡೆ ಫೈನಲ್ ಪ್ರವೇಶಿ ಲಂಕಾ ವಿರುದ್ಧ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಪಾಕಿಸ್ತಾನದ ಮಾಜಿ ಸ್ಪಿನ್ನರ್ ಸಯೀದ್ ಅಜ್ಮಲ್ 2011ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಮಿಂಚಿದ್ದರು. 2015ರ ಏಪ್ರಿಲ್ 19 ರಂದು ಮಿರ್ಪುರದ ಶೇರ್ ಎ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶದ ವಿರುದ್ದ ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು. 113 ಏಕದಿನ ಪಂದ್ಯಗಳಲ್ಲಿ 4.18ರ ಬೌಲಿಂಗ್ ಎಕಾನಮಿಯಲ್ಲಿ 184 ವಿಕೆಟ್‌ಗಳನ್ನು ಬೀಳಿಸಿದ್ದಾರೆ. 2014ರಲ್ಲಿ ಶ್ರೀಲಂಕಾದ ಕೊಲಂಬೊದಲ್ಲಿ ನಡೆದ್ದ ಪಂದ್ಯದಲ್ಲಿ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ್ದರು. ಅಜ್ಮಲ್ 35 ಟೆಸ್ಟ್ ಪಂದ್ಯಗಳಲ್ಲಿ 178 ವಿಕೆಟ್ ಗಳಿಸಿದ್ದಾರೆ.