Virat Kohli: ಅತಿ ಹೆಚ್ಚು ವೇತನ ಪಡೆಯುವ ಏಷ್ಯಾದ ಎರಡನೇ ಕ್ರೀಡಾಪಟು ವಿರಾಟ್ ಕೊಹ್ಲಿ; ಜಪಾನ್ನ ಟೆನಿಸ್ ಆಟಗಾರ್ತಿಗೆ ಮೊದಲ ಸ್ಥಾನ
Jul 28, 2023 07:00 AM IST
ನವಾಮೊ ಒಸಾಕಾ ಮತ್ತು ವಿರಾಟ್ ಕೊಹ್ಲಿ
- Virat Kohli 2nd Richest Sportsperson: ಅಧಿಕ ಸಂಭಾವನೆ ಗಿಟ್ಟಿಸಿಕೊಳ್ಳುವ ಏಷ್ಯಾದ ಕ್ರೀಡಾಪಟುಗಳ ಪಟ್ಟಿಯಲ್ಲಿ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) 2ನೇ ಸ್ಥಾನದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಮೊದಲ ಸ್ಥಾನದಲ್ಲಿ ಮಹಿಳಾ ಆಟಗಾರ್ತಿ ಇದ್ದಾರೆ.
ಟೀಮ್ ಇಂಡಿಯಾದ (Team India) ಮಾಜಿ ನಾಯಕ, ಸೂಪರ್ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ (Virat Kohli), ಮತ್ತೊಂದು ಮಹೋನ್ನತ ಸಾಧನೆ ಮಾಡಿದ್ದಾರೆ. ಮೈದಾನದಲ್ಲಿ ಹಲವು ದಾಖಲೆಗಳ ಸರದಾರನಾಗಿರುವ ಕಿಂಗ್ ಕೊಹ್ಲಿ, ಮೈದಾನದಾಚೆಗೂ ಅಮೋಘ ಸಾಧನೆಯೊಂದನ್ನು ಮಾಡಿದ್ದಾರೆ. ಸದ್ಯ ಅವರು ಅತಿ ಹೆಚ್ಚು ವೇತನ ಪಡೆಯುವ ಏಷ್ಯಾದ ಕ್ರೀಡಾಪಟುಗಳ ಸಾಲಿನಲ್ಲಿ 2ನೇ ಸ್ಥಾನ (Virat Kohli 2nd Richest Sportsperson) ಪಡೆದಿದ್ದಾರೆ. ಹಾಗೆಯೇ 100 ಆಟಗಾರರ ಫೋರ್ಬ್ಸ್ (Forbes) ಪಟ್ಟಿಯಲ್ಲೂ ಸ್ಥಾನ ಪಡೆದ ಏಕೈಕ ಭಾರತದ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ವಿಶ್ವದ 100 ಶ್ರೀಮಂತ ಅಥ್ಲೀಟ್‌ಗಳ (Athlete) ಪೈಕಿ ಏಷ್ಯಾದ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಕೊಹ್ಲಿ, 2ನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಮಹಿಳಾ ಆಟಗಾರ್ತಿ ಇದ್ದಾರೆ. ಸದ್ಯ ಕೊಹ್ಲಿ ಅವರ ನಿವ್ವಳ ಮೌಲ್ಯ 1040 ಕೋಟಿಗೂ ಹೆಚ್ಚಿದೆ. ಸ್ಪೋರ್ಟಿಕೋ (2022) ನಡೆಸಿದ ಸರ್ವೇ ಪ್ರಕಾರ, ವಿಶ್ವದ ಶ್ರೀಮಂತ ಕ್ರೀಡಾಪಟುಗಳ (Highest paid athlete) ಪೈಕಿ ವಾರ್ಷಿಕ 277 ಕೋಟಿ ಗಳಿಸುವ ಕೊಹ್ಲಿ, 61ನೇ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ.
ಏಷ್ಯಾಗೆ ಮೊದಲ ಸ್ಥಾನ ಒಸಾಕಾಗೆ
2021ರ ಫೋರ್ಬ್ಸ್ ಪಟ್ಟಿಯಲ್ಲಿ ಜಗತ್ತಿನ ಅತಿ ಹೆಚ್ಚು ವೇತನ ಪಡೆಯುವ ಟಾಪ್ 100 ಅಥ್ಲೀಟ್‌ಗಳ ಪಟ್ಟಿಯಲ್ಲಿ 59ನೇ ಸ್ಥಾನದಲ್ಲಿದ್ದ ಕೊಹ್ಲಿ, ಈ ಬಾರಿ 61ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇನ್ನು ಅಧಿಕ ಸಂಭಾವನೆಯನ್ನು ಜೇಬಿಗಿಳಿಸಿಕೊಳ್ಳುವ ಏಷ್ಯಾದ ಅಥ್ಲೀಟ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ 4 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳ ಒಡತಿ ಜಪಾನಿನ ನವೋಮಿ ಒಸಾಕಾ (Naomi Osaka) ಕಾಣಿಸಿಕೊಂಡಿದ್ದಾರೆ. ಫೋರ್ಬ್ಸ್ ಪಟ್ಟಿಯಲ್ಲಿ ಒಸಾಕ 20ನೇ ಸ್ಥಾನದಲ್ಲಿರುವುದು ವಿಶೇಷ. ಆಕೆಯ ಆದಾಯ 53.2 ಮಿಲಿಯನ್ ಡಾಲರ್ ಎಂದು ಹೇಳಲಾಗಿದೆ. 1.2 ಮಿಲಿಯನ್ ಡಾಲರ್ ಆಟದಿಂದ ಬಂದರೆ, 52 ಮಿಲಿಯನ್ ಡಾಲರ್ ಜಾಹೀರಾತಿನಿಂದ ಬರುತ್ತದೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (Indian Premier League) ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವನ್ನು ಪ್ರತಿನಿಧಿಸುತ್ತಿರುವ ವಿರಾಟ್, 3 ಮಾದರಿಯಲ್ಲೂ ಭಾರತ ರಾಷ್ಟ್ರೀಯ ತಂಡದಲ್ಲಿ (Indian Cricket Team) ಕಾಣಿಸಿಕೊಳ್ಳುತ್ತಿದ್ದಾರೆ. ವೇತನ ಹಾಗೂ ಬಹುಮಾನ ರೂಪದಲ್ಲಿ ವಾರ್ಷಿಕ 2.9 ಮಿಲಿಯನ್ ಡಾಲರ್ ಹಣ ಸಂಪಾದನೆ ಮಾಡುತ್ತಿದ್ದಾರೆ. ಜಾಹೀರಾತು ರೂಪದಲ್ಲೂ ಕೊಹ್ಲಿ 31 ಮಿಲಿಯನ್ ಡಾಲರ್ ಹಣವನ್ನು ತನ್ನ ಖಾತೆಗೆ ಸೇರಿಸಿಕೊಳ್ಳತ್ತಿದ್ದಾರೆ.
ಅಗ್ರ 100ರಲ್ಲಿ ಮೊದಲ ಸ್ಥಾನ ಯಾರಿಗೆ?
ಅಮೆರಿಕಾದ ಖ್ಯಾತ ಬಾಸ್ಕೆಟ್ ಬಾಲ್ ಆಟಗಾರ ಲೆಬ್ರಾನ್ ಜೇಮ್ಸ್ (LeBron James) ಅವರು ಫೋರ್ಬ್ಸ್ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಲಿಯೋನೆಲ್ ಮೆಸ್ಸಿ (Lionel Messi) 2ನೇ ಸ್ಥಾನ, ಪೊರ್ಚುಗಲ್ನ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ (Cristiano ronaldo) 3ನೇ ಸ್ಥಾನದಲ್ಲಿದ್ದಾರೆ.
ಕೊಹ್ಲಿ ದುಬಾರಿ ಮನೆ
ಮೊದಲು ಸಚಿನ್ ತೆಂಡೂಲ್ಕರ್ (Sachin Tendulkar), ಎಂಎಸ್ ಧೋನಿ (MS Dhoni) ಅವರ ಮನೆಗಳನ್ನು ದುಬಾರಿ ಎಂದು ಕರೆಯಲಾಗುತ್ತಿತ್ತು. ಆದರೀಗ ಕೊಹ್ಲಿ ಮನೆ ಅತ್ಯಂತ ದುಬಾರಿ ಎನಿಸಿದೆ. ವಿರಾಟ್ 80 ಕೋಟಿ ರೂಪಾಯಿ ಮೌಲ್ಯದ ಅತ್ಯಂತ ದುಬಾರಿ ಮನೆಗೆ ಒಡೆಯನಾಗಿದ್ದಾರೆ. ಆ ಮೂಲಕ ಭಾರತ ಕ್ರಿಕೆಟ್ನ ಅತಿ ಹೆಚ್ಚು ಮೌಲ್ಯದ ಮನೆ ಹೊಂದಿರುವ ಕ್ರಿಕೆಟಿಗ ಎನಿಸಿದ್ದಾರೆ. ಈ ಐಷಾರಾಮಿ ಮನೆಯು ಹರಿಯಾಣದ ಗುರುಗ್ರಾಮ್‌ನಲ್ಲಿ ಇದೆ.