Tilak Varma: ರಿತಿಕಾ ತುಂಬಾ ಸರಳ ಜೀವಿ, ನಮ್ಮ ಮನೆಯಲ್ಲಿ ಕೆಳಗೆ ಕೂತು ಊಟ ಮಾಡಿದರು; ರೋಹಿತ್ ಪತ್ನಿಯ ಸರಳತೆ ಕೊಂಡಾಡಿದ ತಿಲಕ್ ವರ್ಮಾ ತಂದೆ
Jul 27, 2023 04:22 PM IST
ರೋಹಿತ್ ಶರ್ಮಾ ಪತ್ನಿ ರಿತಿಕಾ ಸರಳತೆಯನ್ನು ಕೊಂಡಾಡಿದ ತಿಲಕ್ ವರ್ಮಾ ತಂದೆ
- ತಿಲಕ್ ವರ್ಮಾ ಅವರ ತಂದೆ ನಂಬೂರಿ ನಾಗರಾಜು (Namburi Nagaraju) ಅವರು ರೋಹಿತ್ ಶರ್ಮಾ ಮತ್ತು ರಿತಿಕಾ ಸಜ್ದೇಶ್ (Rohit Sharma and Ritika Sajdeh) ಕುರಿತು ಆಸಕ್ತಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ವೆಸ್ಟ್ ಇಂಡೀಸ್ ಎದುರಿನ ಟಿ20 ಸರಣಿಗೆ ಮುಂಬೈ ಇಂಡಿಯನ್ಸ್ (Mumbai Indians) ತಂಡದ ಎಡಗೈ ಬ್ಯಾಟ್ಸ್ಮನ್ ತಿಲಕ್ ವರ್ಮಾ (Tilak Varma) ಅವರಿಗೆ ಅವಕಾಶ ನೀಡಲಾಗಿದೆ. ಆ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ ಅವಕಾಶ ಪಡೆದು ಚೊಚ್ಚಲ ಪಂದ್ಯದಲ್ಲೇ ಯಶಸ್ವಿ ಜೈಸ್ವಾಲ್, ಮುಕೇಶ್ ಕುಮಾರ್ ಕೂಡ ವಿಂಡೀಸ್ ಟಿ20 ಸರಣಿಗೆ ಅವಕಾಶ ಕಲ್ಪಿಸಲಾಗಿದೆ.
ಐಪಿಎಲ್ನಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಆಡಿರುವ ತಿಲಕ್ ವರ್ಮಾ, 2022ರ ಸೀನಸ್ನಲ್ಲಿ 14 ಪಂದ್ಯಗಳಲ್ಲಿ 397 ರನ್ ಗಳಿಸಿ ಭರವಸೆ ನೀಡಿದ್ದರು. ಅದೇ ಭರವಸೆಯಂತೆ 2023ರ ಆವೃತ್ತಿಯಲ್ಲೂ 11 ಪಂದ್ಯಗಳಲ್ಲಿ 343 ರನ್ ಸಿಡಿಸಿದ್ದರು. ಆದರೆ ಗಾಯದಿಂದ 4 ಪಂದ್ಯಗಳಲ್ಲಿ ಕಣಕ್ಕಿಳಿದಿರಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸುವ ತಿಲಕ್, ಮುಂಬೈ ಇಂಡಿಯನ್ಸ್ಗೆ ಆಧಾರ ಸ್ಥಂಭವಾಗಿದ್ದಾರೆ.
ರೋಹಿತ್-ರಿತಿಕಾ ಕುರಿತ ಆಸಕ್ತಿಕರ ಸಂಗತಿ
ಈಗ ತಿಲಕ್ ವರ್ಮಾ ಅವರ ತಂದೆ ನಂಬೂರಿ ನಾಗರಾಜು (Namburi Nagaraju) ಅವರು ರೋಹಿತ್ ಶರ್ಮಾ ಮತ್ತು ರಿತಿಕಾ ಸಜ್ದೇಶ್ (Rohit Sharma and Ritika Sajdeh) ಕುರಿತು ಆಸಕ್ತಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ತಿಲಕ್ ವರ್ಮಾ, ಟೀಮ್ ಇಂಡಿಯಾಗೆ (Team India) ಆಯ್ಕೆಯಾಗುವುದಕ್ಕೂ ಮುನ್ನ ರೋಹಿತ್-ರಿತಿಕಾ ತಮ್ಮ ಮನೆಗೆ ಬಂದಿರುವುದಾಗಿ ಹೇಳಿದ್ದಾರೆ. ನಾನು ಒಬ್ಬ ಎಲೆಕ್ಟ್ರಿಷಿಯನ್. ಆರ್ಥಿಕವಾಗಿ ನಾವು ಸಬಲರಲ್ಲ. ಆದರೆ ಎಂತಹ ಪರಿಸ್ಥಿತಿಯಲ್ಲೂ ತಿಲಕ್ ವರ್ಮಾ ತನ್ನ ಗುರಿ, ಗಮನ ಕಳೆದುಕೊಂಡಿಲ್ಲ ಎಂದರು.
‘ಒತ್ತಡ ನಿಭಾಯಿಸುವ ಶಕ್ತಿ ಇದೆ’
ಆತನ ಯಶಸ್ಸಿಗೆ ಸಂಪೂರ್ಣವಾಗಿ ಆತನ ಪರಿಶ್ರಮವೇ ಕಾರಣ. ಕೋಚ್ ಸಲಾಂ ಭಯಾಸ್ ತಿಲಕ್ ವರ್ಮಾ ಅವರ ಪ್ರತಿಭೆ ಮೇಲೆ ಸಂಪೂರ್ಣ ನಂಬಿಕೆ ಇಟ್ಟಿದ್ದರು. ಆತನ ಜೀವನವನ್ನೇ ಬದಲಿಸಿದರು. ರೋಹಿತ್ ಶರ್ಮಾ ಕೂಡ ತಿಲಕ್ಗೆ ಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ಇದೇ ಕಾರಣಕ್ಕೆ ಎಂತಹ ಒತ್ತಡವನ್ನೂ ನಿಭಾಯಿಸುವ ಶಕ್ತಿ ಹೊಂದಿದ್ದಾನೆ ಎಂದು ತಿಲಕ್ ಕಠಿಣ ಪರಿಶ್ರಮದ ಕುರಿತು ನಾಗರಾಜು ಅವರು ವಿವರಿಸಿದ್ದಾರೆ.
ರಿತಿಕಾ ಸರಳತೆ ಕೊಂಡಾಡಿದ ನಾಗರಾಜು
ಇತ್ತೀಚೆಗೆ (ವೆಸ್ಟ್ ಇಂಡೀಸ್ ಪ್ರಯಾಣಕ್ಕೂ ಮುನ್ನ) ರೋಹಿತ್ ಶರ್ಮಾ ಮತ್ತು ರಿತಿಕಾ ಇಬ್ಬರೂ ನಮ್ಮ ಮನೆಗೆ ಬಂದಿದ್ದರು. ಟೀಮ್ ಇಂಡಿಯಾ ನಾಯಕನ ಪತ್ನಿಯಾಗಿದ್ದರೂ ರಿತಿಕಾ ತುಂಬಾ ಸರಳ. ನಮ್ಮ ಮನೆಯಲ್ಲಿ ನೆಲದ ಮೇಲೆ ಕೂತು ನಮ್ಮೊಂದಿಗೆ ಊಟ ಸೇವಿಸಿದರು. ಸೋಫಾ ಮೇಲೆ ಕೂರಲು ಹೇಳಿದರೂ ಆಕೆ ಕೇಳಲಿಲ್ಲ ಎಂದು ರಿತಿಕಾ ಸರಳತೆಯನ್ನು ಕೊಂಡಾಡಿದರು.
ಇದು ನಮ್ಮನೆ ಎಂದ ರಿತಿಕಾ
ನಾನು ಸೋಫಾದಲ್ಲಿ ಕುಳಿತರೆ ನಿಮ್ಮ ಮನೆಗೆ ಬಂದ ಅತಿಥಿ ಇದ್ದಂತೆ ಆಗುತ್ತದೆ. ಅದೇ ನೆಲದಲ್ಲಿ ಕುಳಿತರೆ ನಮ್ಮ ಮನೆಗೆ ಬಂದಂತೆ ಎಂಬ ಭಾವನೆ ಬರುತ್ತದೆ ಎಂದು ರಿತಿಕಾ ಹೇಳಿದ್ದರು. ಆದರೆ ಆ ಮಾತುಗಳನ್ನು ಕೇಳಿ ನನಗೆ ಆಶ್ಚರ್ಯವಾಯಿತು. ಈ ಕಾಲದಲ್ಲಿ ಅಷ್ಟು ಸರಳ ವ್ಯಕ್ತಿಗಳು ಸಿಗುವುದು ತುಂಬಾ ಅಪರೂಪ ಎಂದು ತಿಲಕ್ ವರ್ಮಾ ಅವರ ತಂದೆ ನಾಗರಾಜು ಪ್ರತಿಕ್ರಿಯಿಸಿದರು.
ಮುಂಬೈ ತಂಡಕ್ಕೆ ಔತಣಕೂಟ
ಆದರೆ, ಇದಕ್ಕೂ ಮೊದಲು ಐಪಿಎಲ್ 2023ರ ಸೀಸನ್ ಅಂಗವಾಗಿ ಸನ್ ರೈಸರ್ಸ್ ಹೈದರಾಬಾದ್ ಪಂದ್ಯಕ್ಕಾಗಿ ನಗರಕ್ಕೆ ಬಂದಿದ್ದ ಸಮಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಆಟಗಾರರಿಗಾಗಿ ತಿಲಕ್ ವರ್ಮಾ, ಔತಣ ಕೂಟ ಏರ್ಪಡಿಸಿದ್ದರು. ಈ ಔತಣಕೂಟಕ್ಕೆ ಕ್ಯಾಪ್ಟನ್ ರೋಹಿತ್ ಶರ್ಮಾ, ತಂಡದ ಮೆಂಟರ್ ಸಚಿನ್ ತೆಂಡೂಲ್ಕರ್ ಕೂಡ ಬಂದಿದ್ದರು.