Curtly Ambrose: ಸಚಿನ್ಗೂ ವಿರಾಟ್ಗೂ ಹೋಲಿಕೆ ಏನು; ಕೊಹ್ಲಿ ಒಬ್ಬ ಶ್ರೇಷ್ಠ ಆಟಗಾರ, ಆದರೆ..; ಚರ್ಚೆಗೆ ಅಂತ್ಯ ಹಾಡಿದ ವಿಂಡೀಸ್ ದಿಗ್ಗಜ
Jul 27, 2023 07:56 AM IST
ವಿರಾಟ್ ಕೊಹ್ಲಿ, ಕರ್ಟ್ಲಿ ಆಂಬ್ರೋಸ್, ಸಚಿನ್ ತೆಂಡೂಲ್ಕರ್
- Virat Kohli vs Sachin Tendulkar: ಸಚಿನ್ ತೆಂಡೂಲ್ಕರ್ vs ವಿರಾಟ್ ಕೊಹ್ಲಿ ಯಾರು ಶ್ರೇಷ್ಠ ಆಟಗಾರ ಎಂಬುದಕ್ಕೆ ವೆಸ್ಟ್ ಇಂಡೀಸ್ ದಿಗ್ಗಜ ಕರ್ಟ್ಲಿ ಆಂಬ್ರೋಸ್ (Curtly Ambrose) ಉತ್ತರ ನೀಡಿದ್ದು, ಚರ್ಚೆಗೆ ತೆರೆ ಎಳೆದಿದ್ದಾರೆ.
ಸಚಿನ್ ತೆಂಡೂಲ್ಕರ್ vs ವಿರಾಟ್ ಕೊಹ್ಲಿ (Sachin Tendulkar vs Virat Kohli).. ಈ ಇಬ್ಬರಲ್ಲಿ ಯಾರು ಶ್ರೇಷ್ಠ ಆಟಗಾರ? ಈ ಚರ್ಚೆ ಈಗಿನದ್ದಲ್ಲ, ಹಲವು ವರ್ಷಗಳದ್ದು. ಆದರೆ ಸರಿಯಾದ ಉತ್ತರ ಸಿಕ್ಕಿರಲಿಲ್ಲ. ಹಾಲಿ-ಮಾಜಿ ಕ್ರಿಕೆಟರ್ಸ್, ಕ್ರಿಕೆಟ್ ಎಕ್ಸ್ಫರ್ಟ್ಸ್, ವಿಶ್ಲೇಷಕರು, ಅಭಿಮಾನಿಗಳು.. ಹೀಗೆ ಒಬ್ಬರು ಸಚಿನ್ ಎಂದರೆ, ಇನ್ನೊಬ್ಬರು ವಿರಾಟ್ ಎನ್ನುತ್ತಾರೆ. ಆದರೆ, ಸೂಕ್ತ ಉತ್ತರ ಸಿಕ್ಕಿಲ್ಲ. ಆದರೀಗ ಈ ಎಲ್ಲದಕ್ಕೂ ವೆಸ್ಟ್ ಇಂಡೀಸ್ ದಿಗ್ಗಜ ಕರ್ಟ್ಲಿ ಆಂಬ್ರೋಸ್ (Curtly Ambrose) ಉತ್ತರ ನೀಡಿದ್ದು, ಚರ್ಚೆಗೆ ತೆರೆ ಎಳೆದಿದ್ದಾರೆ.
ಇತ್ತೀಚೆಗೆ ಕೊಹ್ಲಿ 500ನೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದರು. ಆದರೆ ಇದು ದಂತಕಥೆ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಹೋಲಿಕೆಯನ್ನು ಮುನ್ನಲೆಗೆ ತಂದಿತು. ಇದೇ ವೇಳೆ ಇಬ್ಬರ ಮೊದಲ 500 ಪಂದ್ಯಗಳಿಗೆ ರನ್ಗಳ ತಾಳೆ ಹಾಕಿ ಚರ್ಚೆ ನಡೆಸಲಾಯಿತು. ಕೊಹ್ಲಿ 500 ಪಂದ್ಯಗಳಲ್ಲಿ 25,461 ರನ್, 53.48ರ ಸರಾಸರಿ, 76 ಶತಕ ಮತ್ತು 131 ಅರ್ಧಶತಕ ಸಿಡಿಸಿದ್ದಾರೆ. ಆದರೆ ತನ್ನ 500 ಪಂದ್ಯಗಳಲ್ಲಿ ಸಚಿನ್ 24,839 ರನ್, 48.51ರ ಸರಾಸರಿ, 75 ಶತಕ, 114 ಅರ್ಧಶತಕ ಸಿಡಿಸಿದ್ದರು.
ಹೋಲಿಕೆ ಸರಿಯಲ್ಲ ಎಂದ ಆಂಬ್ರೋಸ್
ಈ ಅಂಕಿ-ಅಂಶಗಳ ಪ್ರಕಾರ ಎಲ್ಲದರಲ್ಲೂ ಕೊಹ್ಲಿಯೇ ಮುಂದಿರುವುದು ಸಚಿನ್ ಜೊತೆಗಿನ ಹೋಲಿಕೆಗೆ ಮತ್ತೊಮ್ಮೆ ಕಾರಣವಾಯಿತು. ಇಬ್ಬರೂ ವಿಭಿನ್ನ ತಲೆಮಾರುಗಳಿಗೆ ಸೇರಿದ್ದಾರೆ. ವಿಶಿಷ್ಟ ಸನ್ನಿವೇಶಗಳನ್ನು ಎದುರಿಸಿದ್ದಾರೆ. ಹಾಗಂತ ನೇರವಾಗಿ ಹೋಲಿಸುವುದು ನ್ಯಾಯೋಚಿತ ಅಥವಾ ನಿಖರವಾಗಿರುವುದಿಲ್ಲ. ಆದರೆ ಸಚಿನ್ ಜೊತೆಗೆ ಆಡಿದ್ದ ಮತ್ತು ಪ್ರಸ್ತುತ ಕೊಹ್ಲಿ ಬೆಳವಣಿಗೆಗೆ ಸಾಕ್ಷಿಯಾಗುತ್ತಿರುವ ವಿಂಡೀಸ್ ದಂತಕಥೆ ಕರ್ಟ್ಲಿ ಆಂಬ್ರೋಸ್, ಇಬ್ಬರ ನಡುವೆ ಹೋಲಿಸುವುದು ಸೂಕ್ತವಲ್ಲ ಎಂದಿದ್ದಾರೆ.
ಕೊಹ್ಲಿಯ ಕ್ಷಿಪ್ರ ಬೆಳವಣಿಗೆ ಪ್ರಾರಂಭವಾಗುತ್ತಿದ್ದಂತೆ ಸಚಿನ್ರ ವೃತ್ತಿಜೀವನದ ಮುಸ್ಸಂಜೆಯನ್ನು ಸಮೀಪಿಸುವಂತೆ ಮಾಡಿತು. ಅವರ ಹಾದಿ ಅಲ್ಪಾವಧಿಗೆ ದಾಟಿತು. ಕೊಹ್ಲಿಯ ಬೆಳವಣಿಗೆ ವೇಗವು ತೆಂಡೂಲ್ಕರ್ ನಿವೃತ್ತಿಯ ಶೂನ್ಯವನ್ನು ತುಂಬಲು ಸಹಾಯ ಮಾಡಿತು. ಆದರೆ, ಸಚಿನ್ರ ಅಪ್ರತಿಮ ಪರಂಪರೆಯನ್ನು ಭಾರತೀಯ ಕ್ರಿಕೆಟ್‌ನ ಮೊದಲ ಜಾಗತಿಕ ಸೂಪರ್‌ಸ್ಟಾರ್ ಎಂದು ಒಪ್ಪಿಕೊಳ್ಳುವುದು ಅತ್ಯಗತ್ಯ. ಈ ಬಗ್ಗೆ ಮಾತನಾಡಿರುವ ಆಂಬ್ರೋಸ್, ಯಾರು ಶ್ರೇಷ್ಠ ಆಟಗಾರ ಎಂಬುದನ್ನು ವಿವರಿಸಿದ್ದಾರೆ.
‘ಸಚಿನ್ಗೆ ಹೋಲಿಕೆ ಸಲ್ಲದು’
ಸಚಿನ್ ತೆಂಡೂಲ್ಕರ್ ಒಬ್ಬ ಶ್ರೇಷ್ಠ ಆಟಗಾರ. ಕ್ರಿಕೆಟ್‌ನಲ್ಲಿ ಎಲ್ಲವನ್ನೂ ಸಾಧಿಸಿದ್ದಾರೆ. ಅವರ ಕ್ರಿಕೆಟ್ ಜ್ಞಾನ, ಅವರು ಆಡಿದ ರೀತಿಯನ್ನು ನೀವು ಕಸಿಯಲು ಸಾಧ್ಯವಿಲ್ಲ. ನಾನು ಹೋಲಿಸಲು ಇಷ್ಟಪಡುವ ರೀತಿಯ ವ್ಯಕ್ತಿ ಅವರಲ್ಲ. ಅಂತಹ ವ್ಯಕ್ತಿಗೆ ಯಾವುದೇ ಆಟಗಾರನನ್ನು ಹೋಲಿಸಬಾರದು. ಕ್ರಿಕೆಟ್‌ನಿಂದಾಗಿ ಅನೇಕರು ಮನ್ನಣೆ ಪಡೆದರು. ಆದರೆ ಸಚಿನ್‌ನಿಂದಾಗಿ ಕ್ರಿಕೆಟ್‌ಗೆ ವಿಪರೀತ ಕ್ರೇಜ್ ಸಿಕ್ಕಿತು. ವಿರಾಟ್ ಕೊಹ್ಲಿ ನಿಜಕ್ಕೂ ಶ್ರೇಷ್ಠ ಕ್ರಿಕೆಟಿಗ. ಅದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಇದೇ ವೇಳೆ ಹೇಳಿದ್ದಾರೆ.
‘ಕೊಹ್ಲಿ ಇನ್ನೂ ಸಾಧಿಸಬೇಕು’
ಕೊಹ್ಲಿ 3 ವರ್ಷಗಳ ಕಾಲ ಶತಕ ಸಿಡಿಸದೇ ಇದ್ದಾಗ ಭಾರೀ ಟೀಕೆಗೆ ಗುರಿಯಾಗಿದ್ದರು. ಕೊಹ್ಲಿ ಕಥೆ ಮುಗಿಯಿತು. ವಿದೇಶದಲ್ಲೂ ಶತಕ ಸಿಡಿಸಿ 5 ವರ್ಷವಾಯಿತೆಂದು ಮತ್ತೆ ಟೀಕಿಸಿದರು. ಇದೀಗ ಬ್ಯಾಕ್ ಟು ಬ್ಯಾಕ್ ಶತಕಗಳ ಮೂಲಕ ತಿರುಗೇಟು ನೀಡಿದ್ದಾರೆ. ಆದರೆ, ಈ ರೀತಿಯ ಕಠಿಣ ಸಮಯವನ್ನು ದಾಟಿ ಬಂದವರೇ ಶ್ರೇಷ್ಠ ಆಟಗಾರನಾಗುತ್ತಾನೆ. ವಿರಾಟ್ ಗುಣಮಟ್ಟದ ಆಟಗಾರ. ಸೆಂಚುರಿ ಸಿಡಿಸಿದ್ದು, ತುಂಬಾ ಖುಷಿಯಾಯಿತು. ಆದರೆ ಆತನಿನ್ನೂ ಭಾರತ-ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇನ್ನೂ ಸಾಕಷ್ಟು ಕೊಡುಗೆ ನೀಡಬೇಕು ಎಂದು ಹೇಳುವ ಮೂಲಕ ಇಬ್ಬರು ಶ್ರೇಷ್ಠರೇ ಆದರೂ, ಅದರಲ್ಲಿ ಸಚಿನ್ ಮುಂದಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ.
13 ಸಾವಿರ ರನ್ಗೆ 102 ರನ್ ಬೇಕಿದೆ
274 ಏಕದಿನ ಪಂದ್ಯಗಳಲ್ಲಿ 12,898 ರನ್ ಗಳಿಸಿರುವ ವಿರಾಟ್ ಕೊಹ್ಲಿ ಈಗಾಗಲೇ 46 ಶತಕಗಳನ್ನು ಗಳಿಸಿದ್ದಾರೆ. ಇನ್ನು 102 ರನ್ ಗಳಿಸಿದರೆ ವಿರಾಟ್ ಕೊಹ್ಲಿ ಏಕದಿನದಲ್ಲಿ 13 ಸಾವಿರ ರನ್ ಪೂರೈಸಲಿದ್ದಾರೆ. ಈ ಸಾಧನೆ ಮಾಡಿದ ವೇಗದ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಆಗಲಿದ್ದಾರೆ. ಕೊಹ್ಲಿಗಿಂತ ಮೊದಲು ಸಚಿನ್ 18,426 ಏಕದಿನ ರನ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಕುಮಾರ್ ಸಂಗಕ್ಕಾರ 14234, ರಿಕಿ ಪಾಂಟಿಂಗ್ 13704, ಸನತ್ ಜಯಸೂರ್ಯ 13430 ರನ್ ಗಳಿಸಿದ್ದಾರೆ.
ಆದರೆ ರಿಕಿ ಪಾಂಟಿಂಗ್ ಹೊರತುಪಡಿಸಿ ಉಳಿದೆಲ್ಲಾ ಬ್ಯಾಟ್ಸ್‌ಮನ್‌ಗಳು 400ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ. 463 ಏಕದಿನ ಪಂದ್ಯಗಳನ್ನಾಡಿರುವ ಸಚಿನ್ 49 ಶತಕ ಸಿಡಿಸಿದ್ದು, ಅತಿ ಹೆಚ್ಚು ಶತಕ ಸಿಡಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೊಹ್ಲಿ ಇನ್ನೂ 3 ಶತಕ ಬಾರಿಸಿದರೆ, ಸಚಿನ್ ದಾಖಲೆ ಸರಿಗಟ್ಟಲಿದ್ದಾರೆ. 4 ಬಾರಿಸಿದರೆ ಏಕದಿನದಲ್ಲಿ 50 ಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೊಸ ಇತಿಹಾಸ ಬರೆಯಲಿದ್ದಾರೆ.