18 ವರ್ಷದ ಭಾರತೀಯ ಆಟಗಾರ ಚೆಸ್ ಲೋಕಕ್ಕೆ ಅಧಿಪತಿ; ವಿಶ್ವ ಚೆಸ್ ಚಾಂಪಿಯನ್ ಪ್ರಶಸ್ತಿ ಗೆದ್ದ ಗುಕೇಶ್ ದೊಮ್ಮರಾಜು
Dec 12, 2024 07:53 PM IST
ವಿಶ್ವ ಚೆಸ್ ಚಾಂಪಿಯನ್ ಪ್ರಶಸ್ತಿ ಗೆದ್ದ ನಂತರ ಕಣ್ಣೀರು ಹಾಕಿದ ಡಿ ಗುಕೇಶ್
- Gukesh dommaraju: ಗುರುವಾರ ನಡೆದ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನ ನಿರ್ಣಾಯಕ ಗೇಮ್ 14 ರಲ್ಲಿ ಗುಕೇಶ್ ದೊಮ್ಮರಾಜು, ಡಿಂಗ್ ಲಿರೆನ್ ಅವರನ್ನು ಸೋಲಿಸಿ 18 ವರ್ಷ ವಯಸ್ಸಿನಲ್ಲೇ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್ ಆದರು.
ಸಿಂಗಾಪುರದ ರೆಸಾರ್ಟ್ಸ್ ವರ್ಲ್ಡ್ ಸೆಂಟೋಸಾದಲ್ಲಿರುವ ಈಕ್ವೇರಿಯಸ್ ಹೋಟೆಲ್‌ನಲ್ಲಿ ಗುರುವಾರ (ಡಿಸೆಂಬರ್ 12) ನಡೆದ ವಿಶ್ವ ಚೆಸ್ ಚಾಂಪಿಯನ್‌ಶಿಪ್ 2024 ಫೈನಲ್ ಅಥವಾ 14ನೇ ಗೇಮ್ನಲ್ಲಿ ಚೀನಾದ ಡಿಂಗ್ ಲಿರೆನ್ ಅವರ ವಿರುದ್ದ ಗೆಲುವು ಸಾಧಿಸಿದ ಭಾರತದ 18 ವರ್ಷದ ಗ್ರ್ಯಾಂಡ್ ಮಾಸ್ಟರ್ ಗುಕೇಶ್ ದೊಮ್ಮರಾಜು ಅವರು ಚೆಸ್ ಲೋಕಕ್ಕೆ ಅಧಿಪತಿಯಾಗಿ ಹೊರಹೊಮ್ಮಿದ್ದಾರೆ. ವಿಶ್ವ ಚೆಸ್ ಚಾಂಪಿಯನ್ಶಿಪ್ನಲ್ಲಿ ಗೆದ್ದ ಡಿ ಗುಕೇಶ್ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಇದರೊಂದಿಗೆ ಗುಕೇಶ್ ಈ ಹಿಂದೆ ಗ್ಯಾರಿ ಕಾಸ್ಪರೋವ್ ಅವರ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಪುಡಿಗಟ್ಟಿ ಅತ್ಯಂತ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಂತಿಮ ಅಥವಾ 14ನೇ ಸುತ್ತಿನ ರೋಚಕ ಹಣಾಹಣಿಯಲ್ಲಿ ಡಿಂಗ್ ಲಿರೆನ್ ಅವರಿಗೆ ಆಘಾತ ನೀಡಿದ ಗುಕೇಶ್ ಇತಿಹಾಸದ ಪುಟಗಳಲ್ಲಿ ತನ್ನದೆಯಾದ ಪುಟವೊಂದನ್ನು ತೆರೆದಿದ್ದಾರೆ. ಡಿಂಗ್ ಲಿರೆನ್ ಕಳೆದ ಬಾರಿ ಚಾಂಪಿಯನ್ ಆಗಿದ್ದರು. ಇದೀಗ ಸತತ 2ನೇ ಬಾರಿಗೆ ಚಾಂಪಿಯನ್ ಆಗುವಲ್ಲಿ ವಿಫಲರಾಗಿದ್ದಾರೆ. ವಿಶ್ವನಾಥನ್ ಆನಂದ್ ಬಳಿಕ ವಿಶ್ವ ಚೆಸ್ ಚಾಂಪಿಯನ್ಶಿಪ್ಗೆ ಮುತ್ತಿಕ್ಕಿದ ಭಾರತದ ಎರಡನೇ 2ನೇ ಆಟಗಾರ ಎಂಬ ಹಿರಿಮೆಗೂ ಗುಕೇಶ್ ಪಾತ್ರರಾಗಿದ್ದಾರೆ. 18ನೇ ವಯಸ್ಸಿಗೆ ಚಾಂಪಿಯನ್ ಆಗಿರುವ ಗುಕೇಶ್, ವಿಶ್ವ ಚೆಸ್ನಲ್ಲಿ ಈ ಸಾಧನೆಗೈದ ಅತ್ಯಂತ ಕಿರಿಯ ಆಟಗಾರ ಎಂಬ ನೂತನ ವಿಶ್ವ ದಾಖಲೆಯನ್ನೂ ನಿರ್ಮಿಸಿದ್ದಾರೆ. ಗೆಲುವು ಸಾಧಿಸಿದ ನಂತರ ಕೂತಲೇ ಕಣ್ಣೀರು ಹಾಕಿದ್ದಾರೆ.
ಒಟ್ಟು 15 ದಿನಗಳಿಂದ ನಡೆಯುತ್ತಿದ್ದ ವಿಶ್ವ ಚೆಸ್ ಟೂರ್ನಿ ಅಂತ್ಯಗೊಂಡಿದೆ. ಈ 15 ದಿನವೂ ಗುಕೇಶ್ ಮತ್ತು ಲಿರೆನ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮ ಸುತ್ತಿಗೂ ಮುನ್ನ ಉಭಯ ಆಟಗಾರರು ತಲಾ 2 ಸುತ್ತುಗಳಲ್ಲಿ ಜಯಿಸಿದ್ದರು. ಉಳಿದ 9 ಸುತ್ತುಗಳು ಡ್ರಾಗೊಂಡಿದ್ದವು. 14ನೇ ಸುತ್ತಿಗೂ ಮುನ್ನ ತಲಾ 6.5 ಅಂಕ ಹೊಂದಿದ್ದರು. ಆದರೆ ಗುಕೇಶ್ 7.5 ಅಂಕ ಸಂಪಾದಿಸುವ ಮೂಲಕ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಒಂದು ವೇಳೆ ಡ್ರಾ ಆಗಿದ್ದರೆ ತಲಾ 7 ಅಂಕಗಳೊಂದಿಗೆ ಟೈ ಬ್ರೇಕರ್ ಪಂದ್ಯವಾಡಬೇಕಿತ್ತು.
ಕಿರಿಯ ವಿಶ್ವ ಚೆಸ್ ಚಾಂಪಿಯನ್
ಡಿ ಗುಕೇಶ್ - 18 ವರ್ಷ 8 ತಿಂಗಳು 14 ದಿನ - ಡಿಸೆಂಬರ್ 12, 2024
ಗ್ಯಾರಿ ಕಾಸ್ಪರೋವ್ - 22 ವರ್ಷ 6 ತಿಂಗಳು 27 ದಿನಗಳು - ನವೆಂಬರ್ 9, 1985
ಮ್ಯಾಗ್ನಸ್ ಕಾರ್ಲ್ಸೆನ್ - 22 ವರ್ಷಗಳು 11 ತಿಂಗಳುಗಳು 24 ದಿನಗಳು - ನವೆಂಬರ್ 23, 2013
ಮಿಖಾಯಿಲ್ ತಾಲ್ - 23 ವರ್ಷ 5 ತಿಂಗಳು 28 ದಿನಗಳು - ಮೇ 7, 1960
ಅನಾಟೊಲಿ ಕಾರ್ಪೋವ್ - 23 ವರ್ಷ 10 ತಿಂಗಳು 11 ದಿನಗಳು - ಏಪ್ರಿಲ್ 3, 1975
ವ್ಲಾಡಿಮಿರ್ ಕ್ರಾಮ್ನಿಕ್ - 25 ವರ್ಷ 4 ತಿಂಗಳು 10 ದಿನಗಳು - ನವೆಂಬರ್ 4, 2000
ಇಮ್ಯಾನುಯೆಲ್ ಲಾಸ್ಕರ್ - 25 ವರ್ಷ 5 ತಿಂಗಳು 2 ದಿನಗಳು - ಮೇ 26, 1894