Bareddy Anusha: ಕೃಷಿ ಕೂಲಿ ಕಾರ್ಮಿಕನ ಮಗಳು ಭಾರತ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ; ಅನಂತಪುರಂನ ಅನುಷಾಗೆ ರವೀಂದ್ರ ಜಡೇಜಾ ರೋಲ್ ಮಾಡೆಲ್
Jul 09, 2023 06:33 PM IST
ಕೃಷಿ ಕೂಲಿ ಕಾರ್ಮಿಕನ ಮಗಳು ಬಾರೆಡ್ಡಿ ಅನುಷಾ ಭಾರತ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ.
- Bareddy Anusha: ಕೃಷಿ ಕೂಲಿ ಕಾರ್ಮಿಕನ ಮಗಳು ಬಾರೆಡ್ಡಿ ಅನುಷಾ ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಅನಂತಪುರಂ ಜಿಲ್ಲೆಯ ಸ್ಪಿನ್ನರ್ ಅನುಷಾಗೆ ರವೀಂದ್ರ ಜಡೇಜಾ ಅವರೇ ಸ್ಫೂರ್ತಿಯಂತೆ.
ಸುಮಾರು ನಾಲ್ಕು ತಿಂಗಳ ವಿರಾಮದ ನಂತರ ಮೈದಾನಕ್ಕೆ ಮರಳಿದ ಭಾರತ ಮಹಿಳಾ ಕ್ರಿಕೆಟ್ ತಂಡ, ಬಾಂಗ್ಲಾದೇಶ (BAN W vs IND W) ವಿರುದ್ಧ ಮೊದಲ ಟಿ20 ಪಂದ್ಯದಲ್ಲೇ ಅಮೋಘ ಗೆಲುವು ದಾಖಲಿಸಿದೆ. ನಾಯಕಿ ಹರ್ಮನ್ಪ್ರೀತ್ ಕೌರ್ ಆರ್ಭಟಕ್ಕೆ ಬೆದರಿದ ಬಾಂಗ್ಲಾ ಮಹಿಳೆಯರು, 7 ವಿಕೆಟ್ಗಳಿಂದ ಸೋಲನ್ನು ಒಪ್ಪಿಕೊಂಡರು. ಇದರೊಂದಿಗೆ 3 ಪಂದ್ಯಗಳ ಚುಟುಕು ಸರಣಿಯಲ್ಲಿ 1-0 ಅಂತರದಲ್ಲಿ ಭಾರತ ಮುನ್ನಡೆ ಪಡೆದಿದೆ.
ಮೀರ್ಪುರ್ ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಅನಂತಪುರ ಜಿಲ್ಲೆಯ ಬಾರೆಡ್ಡಿ ಅನುಷಾ (Bareddy Anusha) ಪದಾರ್ಪಣೆ ಮಾಡಿದ್ದಾರೆ. ನಾಯಕಿ ಹರ್ಮನ್ ಪ್ರೀತ್ ಕೌರ್ ಕೈಯಿಂದ ಅನುಷಾ ಟೀಮ್ ಇಂಡಿಯಾ ಕ್ಯಾಪ್ ಸ್ವೀಕರಿಸಿದರು. ಚೊಚ್ಚಲ ಪಂದ್ಯದಲ್ಲೇ 4 ಓವರ್ ಬೌಲ್ ಮಾಡಿದ ಅನುಷಾ, ವಿಕೆಟ್ ಪಡೆಯದಿದ್ದರೂ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ಕೇವಲ 24 ರನ್ ಬಿಟ್ಟುಕೊಟ್ಟರು.
ಅನುಷಾ ಯಾರು?
ಅನಂತಪುರಂ ಜಿಲ್ಲೆಯ ನಾರಪಾಲ ಮಂಡಳದ ಬಂಡ್ಲಪಲ್ಲಿ ಅನುಷಾ ಅವರು ಹುಟ್ಟೂರು. ತಾಯಿ ಲಕ್ಷ್ಮೀದೇವಿ ಮತ್ತು ತಂಡದೆ ಮಲ್ಲಿರೆಡ್ಡಿ. ಇವರಿಬ್ಬರೂ ಕೃಷಿ ಕೂಲಿ ಕಾರ್ಮಿಕರು. ಕೆಲಸಕ್ಕೆ ಹೋಗದಿದ್ದರೆ ಒಂದೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಅವರದ್ದು. ಅಪ್ಪ-ಅಪ್ಪನ ಆಸರೆಗಾಗಿ ಅನುಷಾ ಕೂಡ ಕೂಲಿ ಕೆಲಸಕ್ಕೆ ಹೋಗುತ್ತಿದ್ದದ್ದುಂಟು. ಆದರೆ ಇದೇ ಕ್ರಮದಲ್ಲಿ ಈ ಪ್ರತಿಭಾವಂತ ಆಟಗಾರ್ತಿಯನ್ನು ಸ್ಕೂಲ್ ಪಿಟಿ ಮಾಸ್ಟರ್ ರವೀಂದ್ರ ಅವರು ಗುರುತಿಸಿದ್ದರು.
ರವೀಂದ್ರ ಅವರು ಕ್ರಿಕೆಟ್ ಆಡುವುದನ್ನು ಕಲಿಸಿದರು. ಆದರೆ ಇದಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಮಗಳನ್ನು ಕ್ರಿಕೆಟ್ ಆಡಿಸಲು ಇಷ್ಟಪಡಲಿಲ್ಲ. ಆದರೆ ರವೀಂದ್ರ ಮನವೊಲಿಸಿದ್ದರು. ಬಳಿಕ ರೂರಲ್ ಡೆವಲಪ್ಮೆಂಟ್ ಟ್ರಸ್ಟ್ ಅಕಾಡೆಮಿಯ ನೆರವಿನಿಂದ ಜಿಲ್ಲಾ, ರಾಷ್ಟ್ರ ಮಟ್ಟದಲ್ಲಿ ಕ್ರಿಕೆಟ್ ಸ್ಪರ್ಧೆಗಳಲ್ಲಿ ಮಿಂಚಿನ ಪ್ರದರ್ಶನ ನೀಡಿದರು. ತನ್ನ ಸ್ಪಿನ್ ಬೌಲಿಂಗ್ನಿಂದಲೇ ಎದುರಾಳಿ ಬ್ಯಾಟರ್ಗಳಿಗೆ ನಡುಕ ಹುಟ್ಟಿಸುತ್ತಿದ್ದ ಅನುಷಾ, 2023ರಲ್ಲಿ ನಡೆದ ಅಂತರ ವಲುಯ ಟೂರ್ನಿಯಲ್ಲಿ ದಕ್ಷಿಣ ವಲಯದ ಪರ ಆಡಿ ಅದ್ಭುತ ಪ್ರದರ್ಶನ ತೋರಿದ್ದರು.
ಆ ಬಳಿಕ ಹಾಂಕಾಂಗ್ನಲ್ಲಿ ನಡೆದ ಮಹಿಳಾ ಉದಯೋನ್ಮುಖ ಕ್ರಿಕೆಟರ ಕಪ್ನಲ್ಲೂ ಮಿಂಚು ಹರಿಸಿದ್ದರು. ಅವರ ಅದ್ಭುತ ಆಟವೇ ಟೀಮ್ ಇಂಡಿಯಾಗೆ ಬರುವಂತೆ ಮಾಡಿದೆ. ಟೀಮ್ ಇಂಡಿಯಾದ ಅನುಭವಿ ಆಲ್ರೌಂಡರ್ ರವೀಂದ್ರ ಜಡೇಜಾ ಅವರನ್ನು ಆರಾಧಿಸುವ ಅನುಷಾ, ಅವರಷ್ಟೇ ತಂಡದಲ್ಲಿ ಅದ್ಭುತಗಳನ್ನು ಸೃಷ್ಟಿಸಬೇಕು ಎಂಬುದು ಎಲ್ಲರ ಆಶಯ.
ಸ್ಕೋರ್ ವಿವರ
ಟಾಸ್ ಗೆದ್ದ ಟೀಮ್ ಇಂಡಿಯಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶದ ತವರಿನ ಮೈದಾನದಲ್ಲೇ ರನ್ ಗಳಿಸಲು ಪರದಾಟ ನಡೆಸಿತು. ಯಾರೂ ಅದ್ಭುತ ಪ್ರದರ್ಶನ ತೋರಲಿಲ್ಲ. ಅಂತಿಮವಾಗಿ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 114 ರನ್ ಗಳಿಸಿತು. ಪೂಜಾ ವಸ್ತ್ರಾಕರ್, ಮಿನ್ನುಮಣಿ, ಶಫಾಲಿ ವರ್ಮಾ ತಲಾ 1 ವಿಕೆಟ್ ಪಡೆದರು.
ಈ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ವನಿತೆಯರು, 16.2 ಓವರ್ಗಳಲ್ಲೇ ಗೆಲುವಿನ ಗೆರೆ ದಾಟಿದರು. ಶಫಾಲಿ ವರ್ಮಾ ಡಕೌಟ್ ಆದರೆ, ಜಮೈಮಾ ರೋಡ್ರಿಗಸ್ 11 ರನ್ಗಳಿಗೆ ಸುಸ್ತಾದರು. ಬಳಿಕ ಸ್ಮೃತಿ ಮಂಧಾನ ಮತ್ತು ನಾಯಕಿ ಹರ್ಮನ್ ಪ್ರೀತ್ ಕೌರ್ ಭರ್ಜರಿ ಪ್ರದರ್ಶನ ನೀಡಿದರು. ಮಂಧಾನ 38 ರನ್ ಗಳಿಸಿದರೆ, ಹರ್ಮನ್ ಅಜೇಯ 54 ರನ್ ಗಳಿಸಿ ಗೆಲುವಿಗೆ ಕಾರಣರಾದರು. 7 ವಿಕೆಟ್ಗಳಿಂದ ಭಾರತ ಗೆದ್ದು ಬೀಗಿತು. 2ನೇ ಟಿ20 ಪಂದ್ಯವು ಜುಲೈ 11ರಂದು ನಡೆಯಲಿದೆ.