PKL 2024: ಪಿಕೆಎಲ್ 2024 ರಲ್ಲಿ ಕಳಪೆ ಪ್ರದರ್ಶನ ನೀಡಿದ ನಾಯಕರು ಇವರು, ಆದ್ರೆ ತಂಡದ ಪ್ರದರ್ಶನ ಮಾತ್ರ ಅದ್ಭುತ!
Nov 18, 2024 11:17 AM IST
ಪಿಕೆಎಲ್ 2024 ರಲ್ಲಿ ಕಳಪೆ ಪ್ರದರ್ಶನ ನೀಡಿದ ನಾಯಕರು, ಆದ್ರೆ ತಂಡದ ಪ್ರದರ್ಶನ ಮಾತ್ರ ಅದ್ಭುತ
- ಪ್ರಸಕ್ತ ಸಾಲಿನ ಪ್ರೊ ಕಬಡ್ಡಿ ಲೀಗ್ 11ನೇ ಸೀಸನ್ನಲ್ಲಿ ಮೂರು ತಂಡಗಳ ಪ್ರದರ್ಶನ ಅದ್ಭುತವಾಗಿದೆ. ಆದರೆ, ಈ ತಂಡಗಳ ನಾಯಕರು ಮಾತ್ರ ತುಂಬಾ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ.
ಪ್ರೊ ಕಬಡ್ಡಿ ಲೀಗ್ನ 11ನೇ ಸೀಸನ್ ಶುರುವಾಗಿ ಒಂದು ತಿಂಗಳಾಗಲಿದೆ. ಈ ಅವಧಿಯಲ್ಲಿ ಕೆಲ ತಂಡಗಳು ತಮ್ಮ ಆಟದ ಮೂಲಕ ಎಲ್ಲರ ಮನಗೆದ್ದಿದ್ದು, ಇನ್ನೂ ಕೆಲ ತಂಡಗಳನ್ನು ನೋಡಿದರೆ ಪ್ಲೇಆಫ್ ಗೆ ಹೋಗುವುದು ಕಷ್ಟ ಎನಿಸುತ್ತಿದೆ. ಮುಖ್ಯವಾಗಿ ಈ ಬಾರಿಯ ಸೀಸನ್ನಲ್ಲಿ ಈ ಮೂರು ತಂಡಗಳ ಪ್ರದರ್ಶನ ಅದ್ಭುತವಾಗಿದೆ. ಆದರೆ, ಈ ತಂಡಗಳ ನಾಯಕರು ಮಾತ್ರ ತುಂಬಾ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ.
ಈ ಋತುವಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ತಂಡಗಳು ಹಾಗೂ ಕಳಪೆ ಪ್ರದರ್ಶನ ತೋರುತ್ತಿರುವ ಆ ತಂಡಗಳ ನಾಯಕರ ಬಗ್ಗೆ ಮಾಹಿತಿ ಇಲ್ಲಿದೆ.
ಪಾಟ್ನಾ ಪೈರೇಟ್ಸ್
ಪಾಟ್ನಾ ಪೈರೇಟ್ಸ್ ಶುಭಂ ಶಿಂಧೆಯನ್ನು ನಾಯಕನನ್ನಾಗಿ ಮಾಡಿತ್ತು. ಆರಂಭದಲ್ಲಿ ತಂಡವು ಕೆಲವು ಪಂದ್ಯಗಳಲ್ಲಿ ಸೋತಿತು ಆದರೆ ನಂತರ ಪಾಟ್ನಾ ನಿರಂತರವಾಗಿ ಪಂದ್ಯಗಳನ್ನು ಗೆಲುತ್ತಾ ಸಾಗಿತು. ಆದರೆ, ತಂಡದ ನಾಯಕ ಶುಭಂ ಶಿಂಧೆ ಪ್ರದರ್ಶನ ಕಳಪೆ ಆಗುತ್ತಾ ಬಂತು. ಅವರು 10 ಪಂದ್ಯಗಳಲ್ಲಿ ಕೇವಲ 21 ಅಂಕಗಳನ್ನು ಗಳಿಸಲು ಸಾಧ್ಯವಾಯಿತು. ಈ ಕಾರಣಕ್ಕಾಗಿ, ಅವರನ್ನು ನಾಯಕತ್ವದಿಂದ ತೆಗೆದುಹಾಕಲಾಯಿತು ಮತ್ತು ಅಂಕಿತ್ ಜಗ್ಲಾನ್ ಅವರನ್ನು ನಾಯಕರನ್ನಾಗಿ ಮಾಡಲಾಯಿತು. ಅಂಕಿತ್ ಈಗ ರಕ್ಷಣಾ ವಿಭಾಗದಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ.
ಯು ಮುಂಬಾ
ಈ ಋತುವಿನಲ್ಲಿ ಯು ಮುಂಬಾ ತಂಡದ ನಾಯಕತ್ವವನ್ನು ಸುನೀಲ್ ಕುಮಾರ್ ವಹಿಸಿಕೊಂಡಿದ್ದಾರೆ. ಅವರ ನಾಯಕತ್ವದಲ್ಲಿ ತಂಡದ ಪ್ರದರ್ಶನ ಅದ್ಭುತವಾಗಿದೆ. ಯು ಮುಂಬಾ ಈ ಋತುವಿನಲ್ಲಿ ಇದುವರೆಗೆ 10 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 6 ಪಂದ್ಯಗಳನ್ನು ಗೆದ್ದು 3 ಪಂದ್ಯಗಳಲ್ಲಿ ಸೋತಿದೆ. ಇದರಲ್ಲಿ ತಂಡದ ಒಂದು ಪಂದ್ಯ ಟೈ ಆಗಿದೆ. ಪ್ರಸ್ತುತ ಅಂಕಪಟ್ಟಿಯಲ್ಲಿ ಯು ಮುಂಬಾ ತಂಡ ಎರಡನೇ ಸ್ಥಾನದಲ್ಲಿದೆ. ಆದರೆ, ನಾಯಕ ಸುನೀಲ್ ಕುಮಾರ್ ಅವರ ಪ್ರದರ್ಶನ ಅಷ್ಟೊಂದು ಚೆನ್ನಾಗಿಲ್ಲ ಎನ್ನಬಹುದು. ಈ ಋತುವಿನಲ್ಲಿ ಅವರು ಇಲ್ಲಿಯವರೆಗೆ 10 ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು ಕೇವಲ 20 ಟ್ಯಾಕಲ್ ಪಾಯಿಂಟ್‌ಗಳನ್ನು ಗಳಿಸಲು ಸಾಧ್ಯವಾಯಿತು.
ಹರಿಯಾಣ ಸ್ಟೀಲರ್ಸ್
ಹರಿಯಾಣ ಸ್ಟೀಲರ್ಸ್ ಪ್ರೊ ಕಬಟ್ಟಿ ಲೀಗ್ 2024 ರ ಮೊದಲ ಕೆಲವು ಪಂದ್ಯಗಳಲ್ಲಿ ರಾಹುಲ್ ಸೆಟ್ಪಾಲ್ ನಾಯಕತ್ವ ವಹಿಸಿದ್ದರು. ಆ ಬಳಿಕ ಜೈದೀಪ್ ದಹಿಯಾ ನಾಯಕರಾದರು. ಹರಿಯಾಣ ಸ್ಟೀಲರ್ಸ್ ಈ ಋತುವಿನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ತಂಡ ಇಲ್ಲಿಯವರೆಗೆ 9 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 7 ಪಂದ್ಯಗಳನ್ನು ಗೆದ್ದು 2 ಪಂದ್ಯಗಳಲ್ಲಿ ಸೋತಿದೆ. ಅಂಕಪಟ್ಟಿಯಲ್ಲಿ ತಂಡ ಮೊದಲ ಸ್ಥಾನದಲ್ಲಿದೆ. ಆದರೆ, ನಾಯಕ ಜೈದೀಪ್ ದಹಿಯಾ ಈ ಋತುವಿನಲ್ಲಿ 7 ಪಂದ್ಯಗಳಲ್ಲಿ ಕೇವಲ 14 ಅಂಕಗಳನ್ನು ಗಳಿಸಲು ಶಕ್ತರಾಗಿದ್ದಾರೆ.
ವರದಿ: ವಿನಯ್ ಭಟ್
ಇದನ್ನೂ ಓದಿ: ಜೇಮ್ಸ್ ಆಂಡರ್ಸನ್ ಟು ಫಾಫ್ ಡು ಪ್ಲೆಸಿಸ್; ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವ ಅತ್ಯಂತ ಹಿರಿಯ ಆಟಗಾರರ ಪಟ್ಟಿ ಇದು