logo
ಕನ್ನಡ ಸುದ್ದಿ  /  ಕ್ರೀಡೆ  /  ಫ್ರೆಂಚ್ ಓಪನ್​ನಿಂದ ಹಿಂದೆ ಸರಿದ ನೊವಾಕ್ ಜೊಕೊವಿಕ್; ಹಾಲಿ ಚಾಂಪಿಯನ್ ಜೊತೆಗೆ ನಂ.1 ಪಟ್ಟವನ್ನೂ ಕಳ್ಕೊಂಡ ದಿಗ್ಗಜ

ಫ್ರೆಂಚ್ ಓಪನ್​ನಿಂದ ಹಿಂದೆ ಸರಿದ ನೊವಾಕ್ ಜೊಕೊವಿಕ್; ಹಾಲಿ ಚಾಂಪಿಯನ್ ಜೊತೆಗೆ ನಂ.1 ಪಟ್ಟವನ್ನೂ ಕಳ್ಕೊಂಡ ದಿಗ್ಗಜ

Prasanna Kumar P N HT Kannada

Jun 04, 2024 11:03 PM IST

google News

ಫ್ರೆಂಚ್ ಓಪನ್​ನಿಂದ ಹಿಂದೆ ಸರಿದ ನೊವಾಕ್ ಜೊಕೊವಿಕ್; ಹಾಲಿ ಚಾಂಪಿಯನ್ ಜೊತೆಗೆ ನಂ.1 ಪಟ್ಟವನ್ನೂ ಕಳ್ಕೊಂಡ ದಿಗ್ಗಜ

    • Novak Djokovics : ಮೊಣಕಾಲಿನ ಗಾಯದಿಂದ ಸರ್ಬಿಯಾದ ಟೆನಿಸ್ ದಿಗ್ಗಜ ನೊವಾಕ್ ಜೊಕೊವಿಕ್ ಅವರು ಪ್ರಸ್ತುತ ನಡೆಯುತ್ತಿರುವ ಫ್ರೆಂಚ್ ಓಪನ್​ನಿಂದ ಹಿಂದೆ ಸರಿದಿದ್ದಾರೆ.
ಫ್ರೆಂಚ್ ಓಪನ್​ನಿಂದ ಹಿಂದೆ ಸರಿದ ನೊವಾಕ್ ಜೊಕೊವಿಕ್; ಹಾಲಿ ಚಾಂಪಿಯನ್ ಜೊತೆಗೆ ನಂ.1 ಪಟ್ಟವನ್ನೂ ಕಳ್ಕೊಂಡ ದಿಗ್ಗಜ
ಫ್ರೆಂಚ್ ಓಪನ್​ನಿಂದ ಹಿಂದೆ ಸರಿದ ನೊವಾಕ್ ಜೊಕೊವಿಕ್; ಹಾಲಿ ಚಾಂಪಿಯನ್ ಜೊತೆಗೆ ನಂ.1 ಪಟ್ಟವನ್ನೂ ಕಳ್ಕೊಂಡ ದಿಗ್ಗಜ

ನಡೆಯುತ್ತಿರುವ ಫ್ರೆಂಚ್ ಓಪನ್​​-2024ರಲ್ಲಿ (French Open 2024) ಸೋಲಿನೊಂದಿಗೆ ರಾಫೆಲ್ ನಡಾಲ್ (Rafael Nadal) ಟೂರ್ನಿಯ ಆರಂಭದಲ್ಲೇ ಹೊರಬಿದ್ದ ನಂತರ ನೊವಾಕ್ ಜೊಕೊವಿಕ್​​ (Novak Djokovic) ಅವರಿಗೆ ಸವಾಲೊಡ್ಡುವ ಆಟಗಾರನೇ ಇರಲಿಲ್ಲ. ಆದರೀಗ ಅವರೇ ಟೂರ್ನಿಯಿಂದ ಹೊರಬಿದ್ದಿದ್ದಾರೆ. ವಿಶ್ವದ ನಂಬರ್ 1 ಟೆನಿಸ್ ತಾರೆ ರೊಲ್ಯಾಂಡ್ ಗ್ಯಾರೋಸ್​ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದರ ಹೊರತಾಗಿಯೂ ಫ್ರೆಂಚ್ ಓಪನ್​ನಿಂದ ಹಿಂದೆ ಸರಿದಿದ್ದಾರೆ.

ಹೌದು, ದಾಖಲೆಯ 24 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿರುವ ಸರ್ಬಿಯಾದ ಟೆನಿಸ್ ಸ್ಟಾರ್​ ಜೊಕೊವಿಕ್, ಗಾಯದ ಕಾರಣ ಟೂರ್ನಿಯ ಮಧ್ಯದಲ್ಲೇ ಹಿಂದೆ ಸರಿದಿದ್ದಾರೆ. ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಕ್ ಫ್ರೆಂಚ್ ಓಪನ್​​ ಕ್ವಾರ್ಟರ್ ಫೈನಲ್​​ನಲ್ಲಿ ಕ್ಯಾಸ್ಪರ್ ರುಡ್ ಅವರನ್ನು ಎದುರಿಸಬೇಕಿತ್ತು. ಈ ವರ್ಷವೂ ಮತ್ತೊಂದು ಪ್ರಶಸ್ತಿಯ ಕನಸಿನಲ್ಲಿದ್ದ ಜೊಕೊಗೆ ಮೊಣಕಾಲು ಗಾಯದ ಕಾರಣ ಆಡಲು ಸಾಧ್ಯವಾಗುತ್ತಿಲ್ಲ.

ಸೆಮಿಫೈನಲ್ ಪ್ರವೇಶಿಸಿದ ಕ್ಯಾಸ್ಪರ್​ ರುಡ್

ಜೊಕೊವಿಕ್ ಹಿಂದೆ ಸರಿದ ಹಿನ್ನೆಲೆ ಕ್ಯಾಸ್ಪರ್​ ರುಡ್ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಇದರೊಂದಿಗೆ ರೋಲ್ಯಾಂಡ್ ಗ್ಯಾರೋಸ್​ನಲ್ಲಿ 3 ಬಾರಿ ಫ್ರೆಂಚ್ ಓಪನ್ ಚಾಂಪಿಯನ್​​ ಆಗಿರುವ ಆಟಗಾರ ಪ್ರಯಾಣವು ಕೊನೆಗೊಂಡಿತು. ಇದು ಅಭಿಮಾನಿಗಳಿಗೂ ನಿರಾಸೆಯನ್ನುಂಟು ಮಾಡಿದೆ. ಜೂನ್ 4ರ ಮಂಗಳವಾರ ಟೂರ್ನಿಯ ಅಧಿಕಾರಿಗಳು ಜೊಕೊವಿಕ್ ಪಂದ್ಯಾವಳಿಯಿಂದ ಹಿಂದೆ ಸರಿಯುವುದಾಗಿ ಘೋಷಿಸಿರುವ ಬಗ್ಗೆ ಖಚಿತಪಡಿಸಿದ್ದಾರೆ.

ಹೀಗಾಗಿ ನೊವಾಕ್ ಕ್ವಾರ್ಟರ್ ಫೈನಲ್​ನಲ್ಲಿ ಸ್ಪರ್ಧಿಸುವುದಿಲ್ಲ. ಆದ್ದರಿಂದ ಕ್ಯಾಸ್ಪರ್ ರುಡ್ ಅಂಗಣಕ್ಕೆ ಇಳಿಯದೆ ಸೆಮಿಫೈನಲ್ ಟಿಕೆಟ್ ಪಡೆದರು. ನೊವಾಕ್ ಜೊಕೊವಿಕ್ ಕಳೆದ ವರ್ಷ ಫ್ರೆಂಚ್ ಓಪನ್ ಫೈನಲ್​​​ನಲ್ಲಿ ಕ್ಯಾಸ್ಪರ್ ರುಡ್ ಅವರನ್ನು ಸೋಲಿಸುವ ಮೂಲಕ ಟ್ರೋಫಿಯನ್ನು ಗೆದ್ದಿದ್ದರು. ತಮ್ಮ 25ನೇ ಗ್ರ್ಯಾಂಡ್ ಸ್ಲಾಮ್ ಗೆಲ್ಲುವ ಅವಕಾಶ ಗಾಯದಿಂದ ಕಳೆದುಕೊಂಡಿರುವ ಜೊಕೊವಿಕ್ ಅವರು ವಿಶ್ವ ಶ್ರೇಯಾಂಕದಲ್ಲಿ ಅಗ್ರಸ್ಥಾನ ಕಳೆದುಕೊಳ್ಳಬೇಕಾಗುತ್ತದೆ.

ನಂಬರ್​ 1 ಪಟ್ಟಕ್ಕೆ ಜಾನಿಕ್ ಸಿನ್ನರ್

ಮುಂದಿನ ಎಟಿಪಿ ರ್ಯಾಂಕಿಂಗ್ ನವೀಕರಣದಲ್ಲಿ ಜೊಕೊವಿಕ್ ಬದಲಿಗೆ ಇಟಲಿಯ ಜಾನಿಕ್ ಸಿನ್ನರ್ ವಿಶ್ವದ ನಂ.1 ಟೆನಿಸ್ ತಾರೆಯಾಗಿ ಹೊರಹೊಮ್ಮಲಿದ್ದಾರೆ. 2005ರಲ್ಲಿ ಪದಾರ್ಪಣೆ ಮಾಡಿದ ಬಳಿಕ ಇದೇ ಮೊದಲ ಬಾರಿಗೆ ಜೊಕೊವಿಕ್ ಗಾಯದ ಸಮಸ್ಯೆಯಿಂದಾಗಿ ಗ್ರ್ಯಾಂಡ್ ಸ್ಲಾಮ್ ಟೂರ್ನಿಯ ಅರ್ಧದಲ್ಲೇ ಟೂರ್ನಿಯಿಂದ ಹೊರಬಿದ್ದರು. ನೊವಾಕ್ ಜೊಕೊವಿಕ್ 24 ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದು, ಈ ಪೈಕಿ 10 ಸಲ ಆಸ್ಟ್ರೇಲಿಯನ್ ಓಪನ್ ಜಯಿಸಿದ್ದಾರೆ.

ಅಲ್ಲದೆ, 3 ಬಾರಿ ಫ್ರೆಂಚ್ ಓಪನ್, 7 ವಿಂಬಲ್ಡನ್ ಟ್ರೋಫಿ, 4 ಬಾರಿ ಯುಎಸ್ ಓಪನ್ ಜಯಿಸಿದ್ದಾರೆ. ನೊವಾಕ್ ಕಳೆದ ವರ್ಷ ನಾಲ್ಕು ಪ್ರಮುಖ ಸ್ಪರ್ಧೆಗಳಲ್ಲಿ ಮೂರನ್ನು ಜಯಿಸಿದ್ದಾರೆ. ಕಳೆದ ವರ್ಷ ವಿಂಬಲ್ಡನ್ ಫೈನಲ್, ಈ ವರ್ಷದ ಆಸ್ಟ್ರೇಲಿಯನ್ ಓಪನ್​​ ಸೆಮಿ ಫೈನಲ್​​ನಲ್ಲಿ ಸೋಲು ಕಂಡಿದ್ದರು. ಇದೀಗ ಕ್ವಾರ್ಟರ್ ಫೈನಲ್​ನಲ್ಲಿ ಹಿಂದೆ ಸರಿಯಬೇಕಾಯಿತು. ಗಾಯದಿಂದ ಚೇತರಿಸಿಕೊಂಡ ನಂತರ ವಿಂಬಲ್ಡನ್​ಗೆ ಮರಳುತ್ತಾರೆಯೇ ಎಂದು ನೋಡಬೇಕಾಗಿದೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ