ಬಿಜೆಪಿ-ಕಾಂಗ್ರೆಸ್ ಅಲ್ಲ, ಬರ್ತಿದೆ ಆರ್‌ಸಿಬಿ ಸರ್ಕಾರ; ಲೋಕಸಭೆ ಫಲಿತಾಂಶದ ನಡುವೆ RCB ಟ್ರೆಂಡಿಂಗ್, ಕಾರಣ ಹೀಗಿದೆ
ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಎಕ್ಸ್‌ನಿಂದ ಹಿಡಿದು ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಎಲ್ಲಾ ಕಡೆ ಆರ್‌ಸಿಬಿ ಕೂಗು ಕೇಳಿಬರುತ್ತಿದೆ. ಲೋಕಸಭಾ ಚುನಾವಣೆ 2024ರ ಫಲಿತಾಂಶಗಳ ನಡುವೆ ಜನರು RCB ಹೆಸರನ್ನು ಎಲ್ಲಾ ಕಡೆ ಪೋಸ್ಟ್ ಮಾಡುತ್ತಿದ್ದಾರೆ.
ವಿಶ್ವದ ಅತಿದೊಡ್ಡ ಚುನಾವಣೆ ಎಂದೇ ಬಿಂಬಿತವಾಗಿರುವ ಭಾರತ ಲೋಕಸಭಾ ಚುನಾವಣೆಯ ಮತ ಎಣಿಕೆ ಅಂತಿಮ ಹಂತದತ್ತ ಬರುತ್ತಿದೆ. ಮಂಗಳವಾರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಯಿತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಮೈತ್ರಿಕೂಟ ಸತತ ಮೂರನೇ ಬಾರಿಗೆ ದೇಶದಲ್ಲಿ ಅಧಿಕಾರದ ಚುಕ್ಕಾಣಿಗೆ ಸಜ್ಜಾಗುತ್ತಿದೆ. ಈ ನಡುವೆ, ಕಳೆದ ಬಾರಿಯ ಚುನಾವಣೆಗೆ ಹೋಲಿಸಿದರೆ ಬಿಜೆಪಿಯು ಕೆಲವು ಕ್ಷೇತ್ರಗಳನ್ನು ಕಳೆದುಕೊಂಡಿದೆ. ಅತ್ತ ಕಾಂಗ್ರೆಸ್ ಪಕ್ಷವು ಕೆಲವು ಸ್ಥಾನಗಳನ್ನು ಹೆಚ್ಚಿಸಿಕೊಂಡಿದೆ. ದೇಶದಲ್ಲಿ ರಾಜಕೀಯ ಪೈಪೋಟಿಯು ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಇದ್ದರೂ, ಸೋಷಿಯಲ್ ಮೀಡಿಯಾದಲ್ಲಿ ಮತ್ತೊಂದು ಪಕ್ಷ ಟ್ರೆಂಡಿಂಗ್‌ನಲ್ಲಿದೆ. ಅದು ರಾಜಕೀಯ ಪಕ್ಷವಂತೂ ಅಲ್ಲ. ಬದಲಿಗೆ ಐಪಿಎಲ್‌ನ ಜನಪ್ರಿಯ ತಂಡ ಆರ್‌ಸಿಬಿ.
ಮತ ಎಣಿಕೆ ನಡೆಯುತ್ತಿರುವಾಗ, ಜನಸಾಮಾನ್ಯರು ತಮ್ಮ ಪ್ರತಿಕ್ರಿಯೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದರಲ್ಲಿ ಪಕ್ಷಗಳಿಗೆ ಬೆಂಬಲಿಸುವ ಬದಲಿಗೆ ಕೆಲವೊಬ್ಬರು ಐಪಿಎಲ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರನ್ನು ಕಾಮೆಂಟ್ ಮಾಡಿದ್ದಾರೆ. ಆರ್‌ಸಿಬಿ ಆರ್‌ಸಿಬಿ ಎಂಬ ಕಾಮೆಂಟ್‌ಗಳು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಕಾಣಿಸಿಕೊಂಡಿದೆ. ಇದು ಜನರನ್ನು ಗೊಂದಲಕ್ಕೀಡು ಮಾಡಿದೆ.
ಪ್ರತಿಪಕ್ಷ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟವನ್ನು ಕೆಣಕಿ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ ಎಂದು ಕೆಲವು ಎಕ್ಸ್ ಬಳಕೆದಾರರು ಉಲ್ಲೇಖಿಸಿದ್ದಾರೆ. ಐಪಿಎಲ್‌ನಲ್ಲಿ ಕಪ್ ಗೆಲ್ಲಲು ಆರ್‌ಸಿಬಿ ತಂಡ ವಿಫಲವಾಗಿದೆ. ಇಲ್ಲಿ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷ ಕೂಡಾ ಆರ್‌ಬಿಯಂತೆಯೇ ಹೆಣಗಾಡುತ್ತಿದೆ ಎಂಬುದು ನೆಟ್ಟಿಗರ ಕಾಮೆಂಟ್ ಅರ್ಥ ಎಂದು ಊಹಿಸಲಾಗಿದೆ.
ಪ್ರತಿಪಕ್ಷಗಳು ಮತ ಎಣಿಕೆಯ ಆರಂಭಿಕ ಹಂತದಲ್ಲಿ ಮೇಲುಗೈ ಸಾಧಿಸುವ ಸೂಚನೆ ಕೊಟ್ಟಿತ್ತು. ಆದರೆ ಟ್ರೆಂಡ್ ಮುಂದುವರೆಯುತ್ತಿದ್ದಂತೆಯೇ ಹಿನ್ನಡೆ ಕಂಡಿದೆ. ಆರ್‌ಸಿಬಿ ತಂಡ ಕೂಡಾ ಪ್ರತಿ ಬಾರಿಯೂ ಕಠಿಣ ಪೈಪೋಟಿ ನೀಡಿ ಕೊನೆಯ ಕ್ಷಣದಲ್ಲಿ ನಿರಂತರವಾಗಿ ಸೋಲುತ್ತದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಆರ್‌ಸಿಬಿ ಐಪಿಎಲ್ ಟ್ರೋಫಿ ಗೆಲ್ಲದಂತೆಯೇ, ಇಂಡಿಯಾ ಕೂಡಾ ಗೆಲ್ಲಲ್ಲ ಎಂಬುದು ನೆಟ್ಟಿಗರ ಕಾಮೆಂಟ್ ಹಿಂದಿನ ಔಚಿತ್ಯವಾಗಿದೆ.
ಆರ್‌ಸಿಬಿ ಜೆರ್ಸಿಯಲ್ಲಿ ಕಾಣಿಸಿಕೊಂಡ ಅಭ್ಯರ್ಥಿ
ಅತ್ತ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಆರ್‌ಸಿಬಿ ಜೆರ್ಸಿ ಧರಿಸಿದ್ದ ಅಭ್ಯರ್ಥಿಯೊಬ್ಬರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದ ಅಭ್ಯರ್ಥಿ ಬಂಡಿ ಎಂಬವರು ಆರ್‌ಸಿಬಿ ಜೆರ್ಸಿ ಧರಿಸಿದ್ದಾರೆ, ಈ ಫೋಟೋ ಆಯೋಗದ ವೆಬ್‌ಸೈಟ್‌ನಲ್ಲಿದೆ. ಇದು ನೆಟ್ಟಿಗರ ಗಮನಕ್ಕೆ ಬಂದಿದೆ. ಹೀಗಾಗಿ ಆರ್‌ಸಿಬಿ ಟ್ರೆಂಡಿಂಗ್‌ನಲ್ಲಿದೆ ಎಂದು ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ
ಚುನಾವಣಾ ಫಲಿತಾಂಶಗಳನ್ನು ಇಂದು ವಿವಿಧ ಸುದ್ದಿವಾಹಿನಿಗಳು ನೇರಪ್ರಸಾರದಲ್ಲಿ ಬಿತ್ತರಿಸುತ್ತಿವೆ. ವಿವಿಧ ಸುದ್ದಿ ಸಂಸ್ಥೆಗಳ ಅಧಿಕೃತ ಯೂಟ್ಯೂಬ್ ಚಾನೆಲ್‌ಗಳ ಕಾಮೆಂಟ್ ವಿಭಾಗದಲ್ಲಿ ಹಲವರು ಲೈವ್ ಚಾಟ್ ವಿಭಾಗದಲ್ಲಿ ಆರ್‌ಸಿಬಿ ಎಂದು ಬರೆದು ಕಾಮೆಂಟ್ ಹಾಕುತ್ತಿದ್ದಾರೆ.
ಲೋಕಸಭಾ ಚುನಾವಣೆ 2024ರ ಇನ್ನಿತರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಲೋಕಸಭಾ ಚುನಾವಣೆ 2024; ಪ್ರಧಾನಿ ಮೋದಿ ಮತ್ತು ಬಿಜೆಪಿ ಪರವಾಗಿ ಕೆಲಸ ಮಾಡದ 5 ಚುನಾವಣಾ ತಂತ್ರಗಳು