ಕನ್ನಡ ಸುದ್ದಿ  /  ಕ್ರಿಕೆಟ್  /  ನನಗೆ ಟಿ20 ವಿಶ್ವಕಪ್ ನೋಡಲು ಇಷ್ಟವೇ ಇಲ್ಲ‌, ನಾನು ಭಾರತದ ಪರ ಆಡುವಾಗ ನೋಡೋಣ; ರಿಯಾನ್‌ ಪರಾಗ್

ನನಗೆ ಟಿ20 ವಿಶ್ವಕಪ್ ನೋಡಲು ಇಷ್ಟವೇ ಇಲ್ಲ‌, ನಾನು ಭಾರತದ ಪರ ಆಡುವಾಗ ನೋಡೋಣ; ರಿಯಾನ್‌ ಪರಾಗ್

ರಾಜಸ್ಥಾನ್ ರಾಯಲ್ಸ್ ತಂಡದದ ಸ್ಟಾರ್ ಆಟಗಾರ ರಿಯಾನ್ ಪರಾಗ್ ಈ ವರ್ಷ ಟಿ20 ವಿಶ್ವಕಪ್ ಪಂದ್ಯಾವಳಿ ವೀಕ್ಷಿಸಲು ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ. ತಾನು ಟೀಮ್‌ ಇಂಡಿಯಾ ಪರ ಆಡುವಾಗ ಯಾರು ಗೆಲ್ಲುತ್ತಾರೆ ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳುವುದಾಗಿ ಹೇಳಿದ್ದಾರೆ.

ಟಿ20 ವಿಶ್ವಕಪ್ ನೋಡಲು ಇಷ್ಟ ಇಲ್ಲ‌ ಎಂದ ರಿಯಾನ್‌ ಪರಾಗ್
ಟಿ20 ವಿಶ್ವಕಪ್ ನೋಡಲು ಇಷ್ಟ ಇಲ್ಲ‌ ಎಂದ ರಿಯಾನ್‌ ಪರಾಗ್

ಅಮೆರಿಕ ಹಾಗೂ ವೆಸ್ಟ್‌ ಇಂಡೀಸ್‌ನಲ್ಲಿ ಟಿ20 ವಿಶ್ವಕಪ್ ಪಂದ್ಯಾವಳಿ ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ಈ ಎರಡೂ ಆತಿಥೇಯ ತಂಡಗಳು ತಮ್ಮದೇ ತವರು ಮೈದಾನಗಳಲ್ಲಿ ಗೆಲುವು ಸಾಧಿಸಿವೆ. ಡಲ್ಲಾಸ್‌ನಲ್ಲಿ ನಡೆದ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಅಮೆರಿಕ ತಂಡವು ಕೆನಡಾವನ್ನು 7 ವಿಕೆಟ್‌ಗಳಿಂದ ಮಣಿಸಿತು. ಅತ್ತ ಪಪುವಾ ನ್ಯೂಗಿನಿಯಾ ವಿರುದ್ಧ ಗಯಾನಾದಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ಎದ್ದು ಬಿದ್ದು ಹೋರಾಡಿ ಗೆಲುವಿನ ನಗೆ ಬೀರಿತು. ಈ ನಡುವೆ ಟೂರ್ನಿಯ ಮೊದಲ ಸೂಪರ್‌ ಓವರ್‌ಗೆ ಒಮಾನ್‌ ಮತ್ತು ನಮೀಬಿಯಾ ಪಂದ್ಯ ಸಾಕ್ಷಿಯಾಯ್ತು. ಕೊನೆಗೆ ಡೇವಿಡ್‌ ವೈಸ್‌ ಅಬ್ಬರದಾಟದ ನೆರವಿಂದ ನಮೀಬಿಯಾ ಗೆದ್ದು ಬೀಗಿತು. ಟೂರ್ನಿಯು ರೋಚಕವಾಗಿ ಸಾಗುತ್ತಿದ್ದರೂ ನಾನು ಮಾತ್ರ ಪಂದ್ಯಾವಳಿಯನ್ನು ನೋಡಲ್ಲ ಎಂದು ಭಾರತದ ಆಟಗಾರನೊಬ್ಬ ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಐಪಿಎಲ್ 2024ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಅಮೋಘ ಪ್ರದರ್ಶನ ನೀಡಿದ್ದ ರಿಯಾನ್ ಪರಾಗ್, ತಾನು ವಿಶ್ವಕಪ್‌ ಪಂದ್ಯಗಳನ್ನು ನೋಡಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಐಪಿಎಲ್‌ ಪ್ರದರ್ಶನದ ಆಧಾರದಲ್ಲಿ ಪರಾಗ್‌ ವಿಶ್ವಕಪ್‌ ತಂಡಕ್ಕೆ ಆಯ್ಕೆಯಾಗುವ ನಿರೀಕ್ಷೆ ಇತ್ತು. ಆದರೆ ಭಾರತ ತಂಡಕ್ಕೆ ಅವರು ಆಯ್ಕೆಯಾಗುವುದು ಸಾಧ್ಯವಾಗಲಿಲ್ಲ. ಹೀಗಾಗಿ ಪರಾಗ್ ಹತಾಶೆಗೊಂಡಿದ್ದಾರೆ.

ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಬಲ್ಲ ನಾಲ್ಕು ತಂಡಗಳನ್ನು ಹೆಸರಿಸುವಂತೆ ಪರಾಗ್‌ ಅವರಲ್ಲಿ ಕೇಳಲಾಯಿತು. ಆದರೆ, ಟಿ20 ವಿಶ್ವಕಪ್ ಪಂದ್ಯಾವಳಿಯನ್ನು ವೀಕ್ಷಿಸಲು ತನಗೆ ಸ್ವಲ್ಪವೂ ಆಸಕ್ತಿ ಇಲ್ಲ ಎಂದು ಪರಾಗ್‌ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಆರ್‌ಆರ್‌ ಆಟಗಾರ, ತಾನು ಭಾರತ ತಂಡದ ಭಾಗವಾಗಿದ್ದರೆ ಸಂಭಾವ್ಯ ಅಗ್ರ ನಾಲ್ಕು ತಂಡಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿದ್ದೆ ಎಂದಿದ್ದಾರೆ.

ನಾನು ಭಾರತದ ಪರ ಆಡಿದ ಯೋಚಿಸುತ್ತೇನೆ

“ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನಗೆ ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸುವ ಆಸಕ್ತಿ ಇಲ್ಲ. ಕೊನೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ನೋಡಿ ಖುಷಿ ಪಡುತ್ತೇನೆ ಅಷ್ಟೇ. ಮುಂದೆ ನಾನು ವಿಶ್ವಕಪ್ ಆಡುವಾಗ ಅಗ್ರ ನಾಲ್ಕು ಸ್ಥಾನಿಗಳ ಬಗ್ಗೆ ಯೋಚಿಸುತ್ತೇನೆ” ಎಂದು ಪರಾಗ್ ಭಾರತ್ ಆರ್ಮಿಯೊಂದಿಗಿನ ಮಾತುಕತೆ ಸಮಯದಲ್ಲಿ ಹೇಳಿದ್ದಾರೆ.

ಐಪಿಎಲ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ ಪರ ಪರಾಗ್‌ ಉತ್ತಮ ಪ್ರದರ್ಶನ ನೀಡಿದ್ದರು. 52.09ರ ಸರಾಸರಿ ಹಾಗೂ 149.21ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್‌ ಬೀಸಿ 573 ರನ್ ಗಳಿಸಿದ್ದಾರೆ.

“ಮುಂದೆ ಒಂದು ಹಂತದಲ್ಲಿ ನೀವು ನನ್ನನ್ನು ಆಯ್ಕೆ ಮಾಡಲೇ ಬೇಕಾಗುತ್ತದೆ, ಅಲ್ಲವೇ? ನಾನು ಭಾರತಕ್ಕಾಗಿ ಒಂದಲ್ಲಾ ಒಂದು ದಿನ ಆಡಲಿದ್ದೇನೆ ಎಂಬುದು ನನ್ನ ನಂಬಿಕೆ.” ಎಂದು ಪರಾಗ್ ಪಿಟಿಐಗೆ ತಿಳಿಸಿದ್ದಾರೆ. “ಯಾವಾಗ ಎಂದು ನಾನು ನಿಜಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ. ನಾನು ರನ್ ಗಳಿಸದಿದ್ದಾಗ ಕೂಡಾ ಭಾರತಕ್ಕಾಗಿ ಆಡಲಿದ್ದೇನೆ ಎಂದು ಹೇಳುತ್ತಿದ್ದೆ. ಈಗಲೂ ಅದನ್ನೇ ಹೇಳುತ್ತೇನೆ. ಅದು ನನ್ನ ಮೇಲೆ ನಾನು ಇಟ್ಟಿರುವ ನಂಬಿಕೆ. ಅದು ನನ್ನ ಅಹಂಕಾರವಲ್ಲ. ನಾನು 10 ವರ್ಷದವನಿದ್ದಾಗ ಕ್ರಿಕೆಟ್ ಆಡಲು ಪ್ರಾರಂಭಿಸಿದಾಗ, ನನ್ನ ತಂದೆಯೊಂದಿಗೆ ನನ್ನ ಯೋಜನೆ ಹೀಗೆಯೇ ಇತ್ತು. ನಾವು ಯಾವುದನ್ನೂ ಲೆಕ್ಕಿಸದೆ ಭಾರತಕ್ಕಾಗಿ ಆಡಲಿದ್ದೇವೆ ಅಷ್ಟೇ” ಎಂದು ಪರಾಗ್‌ ಹೇಳಿದ್ದಾರೆ.

ಟಿ20 ವಿಶ್ವಕಪ್ ಪಂದ್ಯಾವಳಿ ಮುಗಿದ ನಂತರ ಭಾರತವು ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ. ಆಗ ಟೀಮ್‌ ಇಂಡಿಯಾದ ಹೆಚ್ಚಿನ ನಿಯಮಿತ ಆಟಗಾರರು ಚುಟುಕು ಸ್ವರೂಪದಿಂದ ವಿಶ್ರಾಂತಿ ಪಡೆಯುವ ನಿರೀಕ್ಷೆಯಿದೆ. ಆಯ್ಕೆದಾರರು ಯುವ ತಂಡವನ್ನು ಕಳುಹಿಸುವ ಯೋಜನೆಯಲ್ಲಿದ್ದು, ಪರಾಗ್ ಕೂಡಾ ಆಯ್ಕೆಯಾಗುವ ಸಾಧ್ಯತೆ ಇದೆ.

ಟಿ20 ವಿಶ್ವಕಪ್ 2024ರ ಇತರ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಟಿ20 ವರ್ಲ್ಡ್‌ಕಪ್ 2024

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ