Year in Review: 2024ರಲ್ಲಿ ಭಾರತೀಯ ಕ್ರೀಡಾ ಕ್ಷೇತ್ರದಲ್ಲಿ ಘಟಿಸಿದ 6 ಅಚ್ಚರಿಯ ವಿವಾದಗಳು
Dec 12, 2024 11:16 AM IST
2024ರಲ್ಲಿ ಭಾರತೀಯ ಕ್ರೀಡಾ ಕ್ಷೇತ್ರದಲ್ಲಿ ಘಟಿಸಿದ 6 ಅಚ್ಚರಿಯ ವಿವಾದಗಳು
- Year in Review 2024: ಕ್ರೀಡಾ ವಲಯದಲ್ಲಿ ವಿವಾದಗಳು ಹೊಸದಲ್ಲ. ವಿವಿಧ ಕ್ರೀಡಾಕೂಟಗಳಲ್ಲಿ ವಿವಾದಗಳು ಸಂಭವಿಸುತ್ತವೆ. 2024ರಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಹಲವು ವಿವಾದಗಳು ಬೆಳಕಿಗೆ ಬಂದಿವೆ. ಅವುಗಳನ್ನು ಮೆಲುಗು ಹಾಕೋಣ.
2024 ಮುಗಿದು ಹೊಸ ವರ್ಷ 2025 ಸಮೀಪಿಸುತ್ತಿದೆ. ಕ್ಯಾಲೆಂಡರ್ ತಿರುವಿ ಹಾಕುತ್ತಿದ್ದಂತೆಯೇ ಹಲವು ಹಳೆಯ ನೆನಪುಗಳನ್ನು ಕೂಡಾ ಮರೆತು ಬಿಡುತ್ತೇವೆ. ಈ ಒಂದು ವರ್ಷದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಹಲವು ಪ್ರಮುಖ ವಿದ್ಯಮಾನಗಳು ಘಟಿಸಿವೆ. ಅದರಲ್ಲಿ ಕ್ರೀಡಾಕ್ಷೇತ್ರದಲ್ಲಿ ಸದಾ ನೆನಪಿನಲ್ಲಿ ಇಟ್ಟುಕೊಳ್ಳಬಹುದಾದ ಅನೇಕ ವಿದ್ಯಮಾನಗಳು ಇವೆ. ಇನ್ನೂ ಕೆಲವು ವಿವಾದಗಳನ್ನು ಕ್ರೀಡಾಲೋಕ ಮರೆಯಲು ಬಯಸುತ್ತದೆ. ಹೀಗಾಗಿ ಭಾರತೀಯ ಕ್ರೀಡಾ ಕ್ಷೇತ್ರದಲ್ಲಿ ಈ ಒಂದು ವರ್ಷದಲ್ಲಿ ನಡೆದ ಪ್ರಮುಖ ಐದು ವಿವಾದಗಳು ಯಾವುವು ಎಂಬುದನ್ನು ನೋಡೋಣ.
ವಿನೇಶ್ ಫೋಗಟ್ ಒಲಿಂಪಿಕ್ಸ್ ಅನರ್ಹತೆ
ಮಹಿಳೆಯರ 57 ಕೆಜಿ ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ಅಮೋಘ ಪ್ರದರ್ಶನ ನೀಡಿ ಫೈನಲ್ ಪ್ರವೇಶಿಸಿದರು. ಜಪಾನ್‌ನ ಬಲಿಷ್ಠ ಆಟಗಾರ್ತಿಯನ್ನು ಸೋಲಿಸಿದ ಅವರ ಕೆಚ್ಚೆದೆಯ ಹೋರಾಟ ಭಾರತೀಯರಿಗೆ ಹೆಮ್ಮೆ ತಂದಿತು. ಆದರೆ, 100 ಗ್ರಾಂ ಅಧಿಕ ತೂಕದ ಕಾರಣದಿಂದ ಕಾರಣ ಅವರ ಆಸೆ-ಕನಸು ನುಚ್ಚುನೂರಾಯ್ತು.
ಫೈನಲ್ ಪಂದ್ಯದಿಂದ ಅವರನ್ನು ಅನರ್ಹಗೊಳಿಸಲಾಯ್ತು. ಫೈನಲ್‌ನಲ್ಲಿ ಆಡಲು ಅನುಮತಿ ಸಿಗಲಿಲ್ಲ. ಒಂದು ವೇಳೆ ಅವರು ಅನರ್ಹ ಆಗುತ್ತಿಲ್ಲವಾಗಿದ್ದರ, ಫೈನಲ್‌ನಲ್ಲಿ ಸೋತರೂ ಬೆಳ್ಳಿ ಪದಕ ಖಚಿತವಾಗಿತ್ತು. ಹೀಗಾಗಿ ವಿನೇಶ್ ಕ್ರೀಡಾ ನ್ಯಾಯ ಮಂಡಳಿಗೆ ಮೇಲ್ಮನವಿ ಸಲ್ಲಿಸಿ ಕನಿಷ್ಠ ಬೆಳ್ಳಿ ಪದಕ ನೀಡುವಂತೆ ಕೇಳಿಕೊಂಡರು. ಆ ಮನವಿಯೂ ತಿರಸ್ಕಾರಗೊಂಡಿತು.
ಅಂತಿಮ್ ಪಂಘಲ್ ಪ್ಯಾರಿಸ್ ಗೇಮ್ಸ್‌ನಿಂದ ಹೊರಕ್ಕೆ
ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದ ಸಮಯದಲ್ಲಿ ಭಾರತೀಯ ಕುಸ್ತಿಪಟು ಅಂತಿಮ್ ಫಂಗಲ್, ತಮ್ಮ ಅಕ್ರೆಡಿಟೇಶನ್ ಕಾರ್ಡ್ ಬಳಸಿ ಕ್ರೀಡಾ ಗ್ರಾಮಕ್ಕೆ ತಮ್ಮ ಸಹೋದರಿ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟರು. ಇದು ಜಾಗತಿಕ ಮಟ್ಟದಲ್ಲಿ ದೊಡ್ಡ ವಿವಾದವನ್ನು ಹುಟ್ಟುಹಾಕಿತು. ನಿಯಮಗಳ ಪ್ರಕಾರ ಕ್ರೀಡಾಗ್ರಾಮಕ್ಕೆ ಕ್ರೀಡಾಪಟುಗಳ ಹೊರತಾಗಿ ಅವರ ಸಂಬಂಧಿಕರು ಬರುವಂತಿಲ್ಲ. ಆದರೆ, ನಿಯಮ ಮೀರಿದ ಪಂಘಲ್ ಅವರನ್ನು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (IOA) ಭಾರತಕ್ಕೆ ಮರಳಿ ಕರೆಸಿಕೊಂಡಿತು.
ಬಜರಂಗ್ ಪೂನಿಯಾ ನಾಲ್ಕು ವರ್ಷ ಅಮಾನತು
ಭಾರತದ ಕುಸ್ತಿಪಟು ಬಜರಂಗ್ ಪೂನಿಯಾ ಅವರು ಡೋಪ್ ಟೆಸ್ಟ್‌ಗೆ ತಮ್ಮ ಮಾದರಿಯನ್ನು ನೀಡಲು ವಿಫಲರಾದ ಕಾರಣದಿಂದಾಗಿ, ರಾಷ್ಟ್ರೀಯ ಡೋಪಿಂಗ್ ವಿರೋಧಿ ಸಂಸ್ಥೆ ನಾಲ್ಕು ವರ್ಷಗಳ ಕಾಲ ಅಮಾನತುಗೊಳಿಸಿತು. “ಆರ್ಟಿಕಲ್ 10.3.1 ರ ಅಡಿಯಲ್ಲಿ ನಿರ್ಬಂಧಗಳಿಗೆ ಅಥ್ಲೀಟ್ ಜವಾಬ್ದಾರನಾಗಿರುತ್ತಾರೆ. ಹಾಗಾಗಿ 4 ವರ್ಷಗಳ ಅವಧಿಗೆ ಅನರ್ಹತೆಗೆ ಹೊಣೆಗಾರನಾಗಿರುತ್ತಾನೆ ಎಂದು ಸಮಿತಿಯು ಹೇಳುತ್ತದೆ,” ಎಂದು ಎಡಿಡಿಪಿ ತನ್ನ ಆದೇಶದಲ್ಲಿ ತಿಳಿಸಿದೆ.
ಅನ್ವರ್ ಅಲಿ ಐಎಸ್‌ಎಲ್ ವಿವಾದ
ಫುಟ್ಬಾಲ್ ಡಿಫೆಂಡರ್ ಅನ್ವರ್ ಅಲಿಯನ್ನು ಎಐಎಫ್‌ಎಫ್ (ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ -AIFF) ಇಂಡಿಯನ್ ಸೂಪರ್ ಲೀಗ್‌ನಿಂದ ನಾಲ್ಕು ತಿಂಗಳ ಅಮಾನತುಗೊಳಿಸಿದ್ದು, ಭಾರತೀಯ ಫುಟ್‌ಬಾಲ್ ಅಭಿಮಾನಿಗಳನ್ನು ಅಚ್ಚರಿಗೊಳಿಸಿತು. ಈಸ್ಟ್ ಬಂಗಾಳ ಸೇರಿಕೊಂಡ ನಂತರ ಮೋಹನ್ ಬಗಾನ್ ಸೂಪರ್ ಜೈಂಟ್ ಜೊತೆಗಿನ ನಾಲ್ಕು ವರ್ಷಗಳ ಸಾಲದ ಒಪ್ಪಂದವನ್ನು ಮುರಿದ ಅನ್ವರ್ ಅವರನ್ನು ತಪ್ಪಿತಸ್ಥರೆಂದು ಎಐಎಫ್‌ಎಫ್ ಘೋಷಿಸಿತು. ಹೀಗಾಗಿ ಅಮಾನತು ಶಿಕ್ಷೆ ನೀಡಲಾಯ್ತು.
ಚಾಂಪಿಯನ್ಸ್ ಟ್ರೋಫಿ ವಿವಾದ
ಈ ವಿವಾದ ನೇರವಾಗಿ ಭಾರತಕ್ಕೆ ಸಂಬಂಧಿಸಿದ್ದಲ್ಲ. 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಆತಿಥ್ಯ ವಹಿಸಬೇಕಿದೆ. ಆದರೆ, ಭದ್ರತಾ ಕಾರಣಗಳಿಂದಾಗಿ ಪಾಕಿಸ್ತಾನಕ್ಕೆ ಭಾರತ ಕ್ರಿಕೆಟ್ ತಂಡ ಪ್ರಯಾಣಿಸಲು ಸಾಧ್ಯವಿಲ್ಲ ಎಂದು ಬಿಸಿಸಿಐ ಖಡಾಖಂಡಿತವಾಗಿ ಹೇಳಿದೆ. ಇದು ಪಿಸಿಬಿ ನಿದ್ದೆಗೆಡಿಸಿದೆ. ಭಾರತ ತಂಡ ಪಾಕ್‌ಗೆ ಬರದಿದ್ದರೆ ಟೂರ್ನಿಯನ್ನು ಬಹಿಷ್ಕರಿಸುವುದಾಗಿ ಪಾಕ್ ಹೇಳಿದೆ. ಆದರೆ, ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸುವಂತೆ ಐಸಿಸಿ ಹೇಳಿದೆ. ಸದ್ಯ ಈ ವಿವಾದ ಇನ್ನೂ ಸುಖಾಂತ್ಯ ಕಂಡಿಲ್ಲ.
ಕೆಎಲ್ ರಾಹುಲ್-ಸಂಜೀವ್ ಗೋಯೆಂಕಾ ವಾಗ್ವಾದ
ಐಪಿಎಲ್ 2024ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಸೋತ ನಂತರ, ಲಕ್ನೋ ಸೂಪರ್ ಜೈಂಟ್ಸ್ ಮಾಲೀಕ ಸಂಜೀವ್ ರಾಹುಲ್ ಜೊತೆಗೆ ಏರುಧ್ವನಿಯಲ್ಲಿ ಮಾತನಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯ್ತು. ಈ ಘಟನೆಯು ದೊಡ್ಡ ವಿವಾದವನ್ನು ಹುಟ್ಟುಹಾಕಿತು. ರಾಹುಲ್ ಅವರನ್ನು ಸಾರ್ವಜನಿಕವಾಗಿ ಅವಮಾನಿಸಿದ್ದಕ್ಕಾಗಿ ಲಕ್ನೋ ಮಾಲೀಕರನ್ನು ಅಭಿಮಾನಿಗಳು ಹಾಗೂ ಹಲವು ಮಾಜಿ ಕ್ರಿಕೆಟಿಗರು ತರಾಟೆಗೆ ತೆಗೆದುಕೊಂಡರು.