ಜೀವನದ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡುವ ಫಿಶ್ ಟ್ಯಾಂಕ್; ಮನೆಗೆ ಅಕ್ವೇರಿಯಂ ತರುವ ಯೋಚನೆಯಿದ್ದರೆ ಈ ಮೀನುಗಳನ್ನೇ ಆಯ್ದುಕೊಳ್ಳಿ
ಸಾಮಾನ್ಯವಾಗಿ ಮನೆ ಮತ್ತು ಕಚೇರಿಗಳಲ್ಲಿ ನೀವು ಫಿಶ್ ಟ್ಯಾಂಕ್ ಇರುವುದನ್ನು ನೋಡಿರಬಹುದು. ಫಿಶ್ ಟ್ಯಾಂಕ್ ಕೇವಲ ಅಲಂಕಾರಕ್ಕೆ ಮಾತ್ರ ಇರುವುದು ಎಂದು ನೀವಂದು ಕೊಂಡಿರಬಹುದು. ಆದರೆ ಅದು ನಿಮ್ಮ ಜೀವನದಲ್ಲಿರುವ ಹಲವಾರು ಸಮಸ್ಯೆಗಳನ್ನು ಬಗೆಹರಿಸುತ್ತದೆ ಎಂದರೆ ಆಶ್ಚರ್ಯವಾಗುತ್ತದೆಯಲ್ಲವೇ? ಫೆಂಗ್ ಶೂಯಿ ವಾಸ್ತು ಅದನ್ನೇ ಹೇಳುತ್ತದೆ.
ನೀವು ಯಾವುದಾದರೂ ಆಫೀಸ್‌ಗೆ ಹೋದಾಗ ಅಥವಾ ಪರಿಚಿತರ ಮನೆಗೆ ಭೇಟಿ ನೀಡಿದಾಗ ಅಲ್ಲಿರುವ ಫಿಶ್ ಟ್ಯಾಂಕ್ (Fish Tank) ನಿಮ್ಮನ್ನು ಸೆಳೆಯದೇ ಇರದು. ಸುಂದರ ಗಾಜಿನ ಟ್ಯಾಂಕ್ (Aquarium) ನಲ್ಲಿನ ಪುಟ್ಟ ಪುಟ್ಟ ಕಲ್ಲು, ಗಿಡಗಳ ನಡುವೆ ಓಡಾಡುವ ಬಣ್ಣದ ಬಣ್ಣದ ಫಿಶ್‌ಗಳು ತಕ್ಷಣಕ್ಕೆ ಎಲ್ಲರನ್ನೂ ಆಕರ್ಷಿಸುತ್ತವೆ. ಸಮೀಪ ಹೋಗಿ ನೋಡಿದರೆ ತನ್ನನ್ನೇ ಯಾರೋ ಭೇಟಿಯಾಗಲು ಬಂದಿರಬಹುದೆಂಬಂತೆ ಗಾಜಿನ ಪೆಟ್ಟಿಗೆಯ ಅಂಚಿನವರೆಗೆ ಬಂದು ನೋಡುವ ಮೀನುಗಳು, ಕ್ಷಣಾರ್ಧದಲ್ಲಿ ಹಿಂದೆ ಸರಿಯುತ್ತವೆ. ಮಕ್ಕಳಿಗಂತೂ ಇದೊಂದು ಮೋಜಿನ ಆಟವೆನಿಸಿಬಿಡುತ್ತದೆ. ಆದರೆ ಫಿಶ್ ಟ್ಯಾಂಕ್‌ಗಳನ್ನು ಇಟ್ಟುಕೊಳ್ಳುವುದು ಬರೀ ಅಲಂಕಾರಕ್ಕೆ ಮಾತ್ರವಲ್ಲ, ಅದರಿಂದ ಅನೇಕ ಲಾಭಗಳಿವೆ ಎಂದರೆ ನಿಮಗೆ ತುಸು ಆಶ್ಚರ್ಯವಾಗಬಹುದು ಅಲ್ಲವೇ? ಹೌದು, ಫೆಂಗ್ ಶೂಯಿ ವಾಸ್ತು ಪ್ರಕಾರ, ಫಿಶ್ ಅನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಅನೇಕ ಲಾಭಗಳಿವೆ. ಒತ್ತಡ, ಆರೋಗ್ಯ ಸಮಸ್ಯೆಗಳಿಂದ ಹಿಡಿದು ವಾಸ್ತು ದೋಷಗಳನ್ನು ಸಹ ಅದು ನಿವಾರಿಸುತ್ತದೆ. ಕೆಲವು ಜಾತಿಗೆ ಸೇರಿದ ಫಿಶ್‌ಗಳನ್ನು ಇಟ್ಟುಕೊಳ್ಳುವುದರಿಂದ ಧನಾತ್ಮಕ ಶಕ್ತಿ ಮತ್ತು ಸಮೃದ್ಧಿಯನ್ನು ಪಡೆಯಬಹುದಾಗಿದೆ. ಹಾಗಾದರೆ ಫಿಶ್ ಟ್ಯಾಂಕ್ ಇಟ್ಟುಕೊಳ್ಳುವುದರಿಂದ ಸಿಗುವ ಲಾಭಗಳೇನು ಮತ್ತು ಯಾವ ಜಾತಿಯ ಫಿಶ್‌ಗಳನ್ನು ಇರಿಸಿಕೊಳ್ಳುವುದು ಒಳ್ಳೆಯದು ಅದರ ಬಗ್ಗೆ ತಿಳಿಯೋಣ.
ಇದನ್ನೂ ಓದಿ: ಪತಿಗೆ ದೀರ್ಘಾಯುಷ್ಯ ನೀಡುವ, ಅವಿವಾಹಿತರಿಗೆ ಕಂಕಣ ಭಾಗ್ಯ ಕೊಡುವ ಮಂಗಳ ಗೌರಿ ವ್ರತ ಆಚರಿಸುವುದು ಹೇಗೆ? -ದಿನ ವಿಶೇಷ
ಫೀಶ್ ಟ್ಯಾಂಕ್ ಇಟ್ಟುಕೊಳ್ಳುವುದರಿಂದ ಸಿಗುವ ಲಾಭಗಳು
1) ಮನಸ್ಸನ್ನು ಶಾಂತಗೊಳಿಸುತ್ತದೆ: ಫಿಶ್ ಟ್ಯಾಂಕ್ ನಲ್ಲಿರುವ ಮೀನುಗಳು ಅತ್ತಿಂದಿತ್ತ ಓಡಾಡುವುದನ್ನು ನೋಡುವುದರಿಂದ ನಿಮ್ಮ ಒತ್ತಡ, ಆತಂಕ ಕಡಿಮೆಯಾಗುವುದರ ಮೂಲಕ ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ.
2) ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ: ಮನೆಗೆ ಅಕ್ವೇರಿಯಂ ಸುಂದರವಾಗಿ ಕಾಣಿಸುವುದರ ಜೊತೆಗೆ ನೆಮ್ಮದಿಯ ಭಾವವನ್ನು ನೀಡುತ್ತದೆ.
3) ಫೆಂಗ್ ಶೂಯಿ ಲಾಭ: ಫೆಂಗ್ ಶೂಯಿ ವಾಸ್ತು ನಿಯಮದ ಪ್ರಕಾರ ಮೀನುಗಳು ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ. ಅದು ಸಮೃದ್ಧಿಯನ್ನು ತರುತ್ತದೆ. ಫಿಶ್‌ಗಳ ಚಲನೆಯು ಜೀವನ ಮತ್ತು ಹಣದ ಹರಿವನ್ನು ಪ್ರತಿನಿಧಿಸುತ್ತದೆ ಎಂದು ಹೇಳಲಾಗುತ್ತದೆ.
4) ಜೀವನ ಶಿಕ್ಷಣ: ಮನೆಯಲ್ಲಿ ಅಕ್ವೇರಿಯಂ ಇರುವುದು ಜವಾಬ್ದಾರಿಯನ್ನು ಕಲಿಸುತ್ತದೆ. ಜೀವಿಗಳ ಬಗ್ಗೆ ಕಾಳಜಿವಹಿಸುವುದು ಹೇಗೆ ಎಂದು ತಿಳಿದು ಬರುತ್ತದೆ. ಇದು ಮಕ್ಕಳಿಗೆ ಮತ್ತು ದೊಡ್ಡವರಿಗೆ ಉತ್ತಮ ಪಾಠವಾಗುತ್ತದೆ.
5) ಆರೋಗ್ಯ ಲಾಭಗಳು: ಫಿಶ್ ಟ್ಯಾಂಕ್, ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ಒಟ್ಟಾರೆ ದೇಹದ ಆರೋಗ್ಯ ಕಾಪಾಡುತ್ತದೆ.
6) ನೈಸರ್ಗಿಕ ತೇವಾಂಶ ಒದಗಿಸುತ್ತದೆ: ಅಕ್ವೇರಿಯಂ ಮನೆಯೊಳಗಿನ ತೇವಾಂಶದ ಪ್ರಮಾಣವನ್ನು ಹೆಚ್ಚಿಸುತ್ತದೆ. ಅದು ಒಣ ಹವಾಮಾನದ ದಿನಗಳಲ್ಲಿ ತ್ವಚೆಗೆ ಮತ್ತು ಶ್ವಾಸಕೋಶದ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ.
7) ನಿಸರ್ಗದೊಂದಿಗೆ ಸಂಪರ್ಕ: ಫಿಶ್ ಟ್ಯಾಂಕ್‌ನಲ್ಲಿರುವ ಬಣ್ಣದ ಮೀನುಗಳು, ಸುಂದರ ಪುಟ್ಟ ಪುಟ್ಟ ಕಲ್ಲು ಮುಂತಾದವುಗಳು ನಿಮಗೆ ನಿಸರ್ಗವನ್ನು ಜ್ಞಾಪಿಸುತ್ತದೆ. ಅದನ್ನು ನೋಡುತ್ತಿದ್ದರೆ ನಿಮಗೆ ಶಾಂತಿ ಮತ್ತು ನೆಮ್ಮದಿ ದೊರಕುತ್ತದೆ.
8) ಸಕಾರಾತ್ಮಕ ಶಕ್ತಿ ಸೆಳೆಯುತ್ತದೆ: ಫಿಶ್ ಟ್ಯಾಂಕ್ ಅನ್ನು ನೋಡುವುದರಿಂದ ಸಕಾರಾತ್ಮಕ ಶಕ್ತಿ ನಿಮ್ಮನ್ನು ಸೆಳೆಯುತ್ತದೆ. ಪ್ರತಿನಿತ್ಯದ ಒತ್ತಡವನ್ನು ದೂರಮಾಡಲು ಅದು ನಿಮಗೆ ಸಹಾಯ ಮಾಡುತ್ತದೆ. ಜೊತೆಗೆ ನೀವು ರಿಲ್ಯಾಕ್ಸ್ ಆಗುವಂತೆ ಮಾಡುತ್ತದೆ.
9) ಅದೃಷ್ಟ ತರುತ್ತದೆ: ಬಹಳಷ್ಟು ಸಂಪ್ರದಾಯಗಳಲ್ಲಿ ಮೀನು ಅದೃಷ್ಟ ತರುತ್ತದೆ ಎಂದು ನಂಬಲಾಗಿದೆ. ಅದರಲ್ಲೂ ಗೋಲ್ಡ್ ಫಿಶ್ ಮತ್ತು ಕೋಯಿ ಮೀನುಗಳು ಅದೃಷ್ಟದ ಜೊತೆಗೆ ಸಮೃದ್ಧಿಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ಮನೆಯಲ್ಲಿ ಬಿಲ್ವಪತ್ರೆ ಗಿಡ ಇದ್ದರೆ ಏನಿದೆ ಫಲ? ವಾಸ್ತುಶಾಸ್ತ್ರ ನೀಡುವ ಉತ್ತರ ಇದು
ನಿಮ್ಮ ಮನೆಯ ಅಕ್ವೇರಿಯಂನಲ್ಲಿ ಯಾವ ಫೀಶ್ ಇದ್ದರೆ ಒಳ್ಳೆಯದು?
1) ಗೋಲ್ಡ್ ಫಿಶ್: ಚಿನ್ನದ ಬಣ್ಣದಲ್ಲಿರುವ ಗೋಲ್ಡ್ ಫಿಶ್ ಸಂಪತ್ತು ಮತ್ತು ಸಮೃದ್ಧಿಯ ಸಂಕೇತವಾಗಿದೆ. ಗೋಲ್ಡ್ ಫಿಶ್ ಗಟ್ಟಿಮುಟ್ಟಾಗಿರುವುದರಿಂದ ಅವುಗಳ ಕಾಳಜಿ ಮಾಡುವುದು ಸುಲಭವಾಗಿದೆ.
2) ಡ್ರ್ಯಾಗನ್ ಫೀಶ್: ಡ್ರ್ಯಾಗನ್ ಹೋಲಿಕೆಯಿರುವ ಡ್ರ್ಯಾಗನ್ ಫೀಶ್ ಅಥವಾ ಅರೋವಾನಾ ಫಿಶ್ ಅದೃಷ್ಟ ಮತ್ತು ಐಶ್ವರ್ಯದ ತರುತ್ತದೆ ಎಂದು ನಂಬಲಾಗಿದೆ. ಇದನ್ನು ಶಕ್ತಿ ಮತ್ತು ಸಂಪತ್ತಿನ ಸಂಕೇತ ಎಂದು ಪರಿಗಣಿಸಲಾಗಿದೆ.
3) ಕೋಯಿ ಮೀನು: ಕೋಯಿ ಮೀನು ಪರಿಶ್ರಮ ಮತ್ತು ಯಶಸ್ಸಿನ ಸಂಕೇತವಾಗಿದೆ. ಇದು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವುದರ ಜೊತೆಗೆ ಅದೃಷ್ಟವನ್ನು ತರುತ್ತದೆ.
4) ಬೆಟ್ಟಾ ಫಿಶ್: ರೋಮಾಂಚಕ ಬಣ್ಣಗಳಿರುವ ಬೆಟ್ಟಾ ಫೀಶ್ ಹೋರಾಟದ ಮನೋಭಾವಕ್ಕೆ ಹೆಸರುವಾಸಿಯಾಗಿದೆ. ಇದು ಧನಾತ್ಮಕ ಶಕ್ತಿ ಮತ್ತು ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ.
5) ಗುಪ್ಪೀಸ್: ಗುಪ್ಪೀಸ್ ಮೀನುಗಳನ್ನು ಕಾಳಜಿವಹಿಸುವುದು ಬಹಳ ಸುಲಭ. ವಿವಿಧ ಬಣ್ಣಗಳಲ್ಲಿ ದೊರೆಯುವ ಈ ಮೀನು ಸಂಪತ್ತು ಮತ್ತು ಸಕಾರಾತ್ಮಕ ಶಕ್ತಿಯನ್ನು ಸೆಳೆಯುತ್ತದೆ ಎಂದು ನಂಬಲಾಗಿದೆ.
6) ಟೆಟ್ರಾಸ್ ಫಿಶ್: ಶಾಂತಿ ಮತ್ತು ಬಣ್ಣಗಳಿಂದ ಸುಂದರವಾಗಿರುವ ಟೆಟ್ರಾಸ್ ಮೀನು ಮನೆಯೊಳಗೆ ಸಕಾರಾತ್ಮಕ ಮತ್ತು ಸಮೃದ್ದಿಯನ್ನು ತರುತ್ತದೆ.
7) ಏಂಜಲ್ ಫೀಶ್: ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಏಂಜಲ್ ಫೀಶ್ ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.
8) ಕ್ಲಾನ್ ಫಿಶ್: ಗಾಢ ಬಣ್ಣಗಳಿಂದ ಕೂಡಿರುವ ಈ ಮೀನು ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಇದನ್ನು ನಿಮ್ಮ ಅಕ್ವೇರಿಯಂನಲ್ಲಿ ಇರಿಸಿಕೊಳ್ಳುವುದರಿಂದ ಅದರ ಆಕರ್ಷಣೆ ಹೆಚ್ಚುತ್ತದೆ.
9) ಫ್ಲವರ್‌ಹಾರ್ನ್ ಫಿಶ್: ವಿಶೇಷವಾಗಿ ಫೆಂಗ್ ಶೂಯಿ ವಾಸ್ತು ಪ್ರಕಾರ ಈ ಮೀನು ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.
10) ಡಿಸ್ಕಸ್ ಫಿಶ್: ದುಂಡಗಿನ ಆಕಾರಾದ ಈ ಮೀನುಗಳ ಸುಂದರವಾದ ಬಣ್ಣಗಳು ಸಾಮರಸ್ಯ ಮತ್ತು ಧನಾತ್ಮಕ ಶಕ್ತಿಯನ್ನು ತರುತ್ತವೆ ಎಂದು ನಂಬಲಾಗಿದೆ.
ನಿಮ್ಮ ಮನೆಯಲ್ಲೂ ಫಿಶ್ ಟ್ಯಾಂಕ್ ಇದ್ದರೆ ಇವುಗಳಲ್ಲಿ ನಿಮ್ಮ ಇಷ್ಟದ ಮೀನುಗಳನ್ನು ಆರಿಸಿಕೊಳ್ಳುವುದರ ಮೂಲಕ ಸಮೃದ್ಧಿ ಮತ್ತು ಶಾಂತಿ ನೆಲೆಸುವಂತೆ ಮಾಡಿಕೊಳ್ಳಬಹುದು.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)